Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ದಾನಿಯೇಲ 12:1-3

12 “ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು, ದಾನಿಯೇಲನೇ, ಆಗ ದೇವದೂತನಾದ ಮಿಕಾಯೇಲನು ಏಳುವನು. ಮಿಕಾಯೇಲನು ಯೆಹೂದ್ಯರಾದ ನಿಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುವನು. ಮಹಾಸಂಕಟದ ಕಾಲ ಬರುವದು. ಭೂಮಿಯ ಮೇಲೆ ರಾಷ್ಟ್ರಗಳು ಹುಟ್ಟಿದಂದಿನಿಂದ ಸಂಭವಿಸದಂತಹ ಸಂಕಟಗಳು ಸಂಭವಿಸುವವು. ಆದರೆ ದಾನಿಯೇಲನೇ, ನಿಮ್ಮ ಜನಗಳಲ್ಲಿ ಯಾರ ಹೆಸರುಗಳು ‘ಜೀವಬಾಧ್ಯರ ಗ್ರಂಥದಲ್ಲಿ’ ಬರೆಯಲ್ಪಟ್ಟಿದೆಯೋ ಅವರೆಲ್ಲರನ್ನು ರಕ್ಷಿಸಲಾಗುವುದು. ಮರಣಹೊಂದಿದ, ಸಮಾಧಿಗಳಲ್ಲಿ ದೀರ್ಘನಿದ್ರೆ ಮಾಡುತ್ತಿದ್ದವರಲ್ಲಿ ಅನೇಕರು ಎಚ್ಚೆತ್ತುಕೊಳ್ಳುವರು. ಕೆಲವರು ಎಚ್ಚೆತ್ತು ನಿತ್ಯಜೀವವನ್ನು ಅನುಭವಿಸುವರು. ಕೆಲವರು ಎಚ್ಚೆತ್ತು ನಿತ್ಯನಿಂದನೆಗಳನ್ನೂ ತಿರಸ್ಕಾರಗಳನ್ನೂ ಅನುಭವಿಸುವರು. ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ನೀತಿವಂತರಾಗಿ ಜೀವಿಸಲು ಅವರು ಅನೇಕರಿಗೆ ಉಪದೇಶಿಸುವರು. ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.

ಕೀರ್ತನೆಗಳು 16

ರಚನೆಗಾರ: ದಾವೀದ.

16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
    ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
    ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.

ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
    ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
    ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
    ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
ನನ್ನ ಪಾಲು[a] ರಮಣೀಯವಾಗಿದೆ.
    ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
    ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.

ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
    ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
    ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
    ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
    ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
    ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.

ಇಬ್ರಿಯರಿಗೆ 10:11-14

11 ಪ್ರತಿದಿನವೂ ಯಾಜಕರು ನಿಂತುಕೊಂಡು ತಮ್ಮ ಧಾರ್ಮಿಕ ಸೇವೆಯನ್ನು ಮಾಡುತ್ತಾರೆ. ಅವರು ಮತ್ತೆಮತ್ತೆ ಅದೇ ಯಜ್ಞಗಳನ್ನು ಅರ್ಪಿಸುತ್ತಾರೆ. ಆದರೆ ಅವರ ಪಾಪಗಳನ್ನು ತೆಗೆದುಹಾಕಲು ಯಜ್ಞಗಳಿಗೆ ಎಂದಿಗೂ ಸಾಧ್ಯವಿಲ್ಲ. 12 ಆದರೆ ಕ್ರಿಸ್ತನು ಪಾಪಗಳಿಗಾಗಿ ಶಾಶ್ವತವಾದ ಒಂದೇ ಯಜ್ಞವನ್ನು ಅರ್ಪಿಸಿದನು. ನಂತರ ಆತನು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 ಶತ್ರುಗಳನ್ನು ತನ್ನ ಪಾದಪೀಠವನ್ನಾಗಿ ಮಾಡುವ ತನಕ ಕ್ರಿಸ್ತನು ಕಾಯುತ್ತಿದ್ದಾನೆ. 14 ಒಂದೇ ಯಜ್ಞದ ಮೂಲಕ ಆತನು ತನ್ನ ಜನರನ್ನು ಎಂದೆಂದಿಗೂ ನಿಷ್ಕಳಂಕರನ್ನಾಗಿ ಮಾಡಿದನು. ಪರಿಶುದ್ಧರಾಗಿ ಮಾಡಲ್ಪಡುತ್ತಿರುವ ಜನರೇ ಇವರು.

ಇಬ್ರಿಯರಿಗೆ 10:15-18

15 ಪವಿತ್ರಾತ್ಮನು ನಮಗೆ ಇದರ ಬಗ್ಗೆ ತಿಳಿಸಿದ್ದಾನೆ. ಮೊದಲನೆಯದಾಗಿ ಆತನು ಹೇಳುವುದೇನೆಂದರೆ:

16 “ಮುಂದಿನ ಕಾಲದಲ್ಲಿ ನಾನು ನನ್ನ ಜನರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿದೆ ಎಂದು ಪ್ರಭುವು ಹೇಳುತ್ತಾನೆ:
ನಾನು ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು;
    ಅವರ ಮನಸ್ಸಿನ ಮೇಲೆ ಬರೆಯುವೆನು.”(A)

17 ನಂತರ ಆತನು ಹೇಳುವುದೇನೆಂದರೆ:

“ನಾನು ಅವರ ಪಾಪಗಳನ್ನು ಮತ್ತು ಅವರ ಕೆಟ್ಟಕಾರ್ಯಗಳನ್ನು ಕ್ಷಮಿಸುತ್ತೇನೆ.
    ಅವುಗಳನ್ನು ಮತ್ತೆಂದಿಗೂ ನೆನಪು ಮಾಡಿಕೊಳ್ಳುವುದಿಲ್ಲ.”(B)

18 ಈ ಪಾಪಗಳೆಲ್ಲಾ ಕ್ಷಮಿಸಲ್ಪಟ್ಟ ಮೇಲೆ, ಅವುಗಳಿಗಾಗಿ ಮತ್ತೆ ಯಜ್ಞಗಳನ್ನು ಅರ್ಪಿಸುವುದು ಅಗತ್ಯವಿಲ್ಲ.

ಇಬ್ರಿಯರಿಗೆ 10:19-25

ಸಮೀಪಕ್ಕೆ ಬನ್ನಿರಿ

19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.

ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ

24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.

ಮಾರ್ಕ 13:1-8

ದೇವಾಲಯದ ಮುಂದಿನ ವಿನಾಶ

(ಮತ್ತಾಯ 24:1-44; ಲೂಕ 21:5-33)

13 ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.

ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.

ನಂತರ ಯೇಸು ಆಲಿವ್ ಮರಗಳ ಗುಡ್ಡದ ಮೇಲೆ, ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರ ಸಂಗಡ ಕುಳಿತಿದ್ದನು. ಅವರೆಲ್ಲರಿಗೂ ಅಲ್ಲಿಂದ ದೇವಾಲಯ ಕಾಣುತಿತ್ತು. ಆ ಶಿಷ್ಯರು ಯೇಸುವಿಗೆ, “ಈ ಸಂಗತಿಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಅವುಗಳು ನಡೆಯುವ ಕಾಲಕ್ಕೆ ಸೂಚನೆಯೇನು?” ಎಂದು ಕೇಳಿದರು.

ಅದಕ್ಕೆ ಯೇಸು, “ಎಚ್ಚರಿಕೆಯಿಂದಿರಿ! ನಿಮಗೆ ಮೋಸ ಮಾಡಲು ಯಾರಿಗೂ ಆಸ್ಪದ ಕೊಡಬೇಡಿ. ಅನೇಕ ಜನರು ಬಂದು, ‘ನಾನೇ ಕ್ರಿಸ್ತನು; ನಾನೇ ಕ್ರಿಸ್ತನು’ ಎನ್ನುತ್ತಾ ಅನೇಕ ಜನರನ್ನು ಮೋಸಗೊಳಿಸುತ್ತಾರೆ. ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು. ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International