Revised Common Lectionary (Complementary)
ರಚನೆಗಾರ: ದಾವೀದ.
16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
2 ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
3 ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.
4 ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
5 ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
6 ನನ್ನ ಪಾಲು[a] ರಮಣೀಯವಾಗಿದೆ.
ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
7 ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.
8 ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
9 ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.
4 ನೆಬೂಕದ್ನೆಚ್ಚರನಾದ ನಾನು ಅರಮನೆಯಲ್ಲಿದ್ದೆ; ಸುಖಸಂತೋಷದಿಂದ ಇದ್ದೆ. 5 ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು. 6 ಅದಕ್ಕಾಗಿ ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕರೆತರಬೇಕೆಂದು ಆಜ್ಞೆಯನ್ನು ಕೊಟ್ಟೆ. ಅವರು ನನ್ನ ಕನಸಿನ ಅರ್ಥವನ್ನು ತಿಳಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು. 7 ಮಂತ್ರವಾದಿಗಳು, ಜೋಯಿಸರು ಮತ್ತು ವಿದ್ವಾಂಸರು ಬಂದ ಮೇಲೆ ನಾನು ಅವರಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಆದರೆ ಅವರಿಗೆ ಅರ್ಥವನ್ನು ತಿಳಿಸಲಾಗಲಿಲ್ಲ. 8 ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. 9 ನಾನು, “ಬೇಲ್ತೆಶಚ್ಚರನೇ, ಎಲ್ಲಾ ಮಂತ್ರವಾದಿಗಳಿಗಿಂತಲೂ ನೀನು ಬಹಳ ಶ್ರೇಷ್ಠನು. ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿದೆ ಎಂದು ನನಗೆ ಗೊತ್ತಿದೆ. ನಿನಗೆ ತಿಳಿದುಕೊಳ್ಳಲು ಕಷ್ಟವಾದ ಯಾವ ರಹಸ್ಯವೂ ಇಲ್ಲವೆಂದು ನಾನು ಬಲ್ಲೆನು. ನಾನು ಕನಸಿನಲ್ಲಿ ಕಂಡದ್ದು ಇಂತಿದೆ. ಅದರ ಅರ್ಥವನ್ನು ನನಗೆ ಹೇಳು. 10 ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡಾಗ ಕಂಡ ದೃಶ್ಯಗಳು ಇವು: ನನ್ನ ಎದುರಿಗೆ ಭೂಮಿಯ ಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವು ಇದ್ದುದನ್ನು ನಾನು ಕಂಡೆ. 11 ಆ ಮರವು ಬಹಳ ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಆ ಮರದ ತುದಿಯು ಆಕಾಶಕ್ಕೆ ಮುಟ್ಟಿತ್ತು. ಅದನ್ನು ಭೂಲೋಕದ ಯಾವ ಸ್ಥಳದಿಂದಲಾದರೂ ನೋಡಬಹುದಾಗಿತ್ತು. 12 ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು.
13 “ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ನನ್ನ ದರ್ಶನದಲ್ಲಿ ಅದೆಲ್ಲವನ್ನು ನೋಡುತ್ತಿದ್ದೆ. ಆಗ ಪವಿತ್ರ ದೇವದೂತನೊಬ್ಬನು ಆಕಾಶದಿಂದ ಕೆಳಗಿಳಿದು ಬರುವುದನ್ನು ಕಂಡೆ. 14 ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು. 15 ಆದರೆ ಅದರ ಬೇರುಗಳು ಮತ್ತು ಬುಡದ ಮೋಟು ಭೂಮಿಯಲ್ಲಿ ಉಳಿಯಲಿ. ಅದರ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಮೋಟು ಮತ್ತು ಬೇರುಗಳು ಹೊಲದಲ್ಲಿ ಉಳಿಯಲಿ. ಅದರ ಸುತ್ತ ಹುಲ್ಲು ಬೆಳೆದಿರಲಿ. ಅದು ಅಡವಿಯಲ್ಲಿ ಕಾಡುಪ್ರಾಣಿಗಳ ಮತ್ತು ಸಸಿಗಳ ಜೊತೆಯಲ್ಲಿ ಇರಲಿ; ಅದು ಇಬ್ಬನಿಯಿಂದ ನೆನೆಯಲಿ. 16 ಅದು ಮನುಷ್ಯನಂತೆ ವಿಚಾರ ಮಾಡುವುದನ್ನು ಬಿಟ್ಟು ಪ್ರಾಣಿಯಂತೆ ವಿಚಾರ ಮಾಡತೊಡಗಲಿ. ಅದು ಈ ಸ್ಥಿತಿಯಲ್ಲಿ ಏಳು ವರ್ಷವಿರಲಿ’ ಎಂದು ಹೇಳಿದನು.
17 “ಈ ಶಿಕ್ಷೆಯನ್ನು ದೇವದೂತನು ಸಾರಿದನು. ಮಾನವ ಸಾಮ್ರಾಜ್ಯಗಳ ಮೇಲೆ ಮಹೋನ್ನತನಾದ ದೇವರು ಆಳುವನು. ಅವನು ಆ ಸಾಮ್ರಾಜ್ಯಗಳನ್ನು ತನಗೆ ಬೇಕಾದವರಿಗೆ ಒಪ್ಪಿಸುವನು, ಕನಿಷ್ಠರನ್ನು ನೇಮಿಸುವನು ಎಂಬುದು ಲೋಕದ ಜನರಿಗೆಲ್ಲ ತಿಳಿದುಬರಲಿ ಎಂದೇ ಅವನು ಸಾರಿದನು.
18 “ಅರಸನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು. ಈಗ ನೀನು, ಬೇಲ್ತೆಶಚ್ಚರನೇ (ದಾನಿಯೇಲನೇ), ಇದರ ಅರ್ಥವನ್ನು ನನಗೆ ತಿಳಿಸು. ನನ್ನ ರಾಜ್ಯದಲ್ಲಿರುವ ವಿದ್ವಾಂಸರಲ್ಲಿ ಯಾರೂ ಇದರ ಅರ್ಥವನ್ನು ನನಗೆ ಹೇಳಲಾರರು. ಆದರೆ ನೀನು ಈ ಕನಸಿನ ಅರ್ಥವನ್ನು ತಿಳಿಸಬಲ್ಲೆ. ಏಕೆಂದರೆ ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದು ನನಗೆ ತಿಳಿದದೆ” ಎಂದೆನು.
ನೀವು ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು
11 ಆದರೆ ನೀನು ದೇವರ ಮನುಷ್ಯ. ಆದ್ದರಿಂದ ಈ ಎಲ್ಲಾ ಸಂಗತಿಗಳಿಂದ ದೂರವಾಗಿರು. ದೇವರ ಸೇವೆಯನ್ನು ಮಾಡುತ್ತಾ ಉತ್ತಮಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸು; ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತೆಗಳನ್ನು ಹೊಂದಿದವನಾಗಿರು. 12 ನಂಬಿಕೆಯಲ್ಲಿ ದೃಢವಾಗಿರುವುದು ಓಟದ ಸ್ಪರ್ಧೆಗೆ ಹೋಲಿಕೆಯಾಗಿದೆ. ಓಟದ ಸ್ಪರ್ಧೆಯಲ್ಲಿ ಗೆಲ್ಲಲು ನಿನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸು. ನಿತ್ಯಜೀವವನ್ನು ಪಡೆದುಕೊಳ್ಳಲು ಪ್ರಯಾಸಪಡು. ಅದನ್ನು ಹೊಂದಿಕೊಳ್ಳುವುದಕ್ಕಾಗಿ ನೀನು ಕರೆಯಲ್ಪಟ್ಟಿರುವೆ. ಕ್ರಿಸ್ತನಂಬಿಕೆಯ ಕುರಿತಾದ ಸತ್ಯವನ್ನು ನೀನು ಅನೇಕ ಜನರ ಎದುರಿನಲ್ಲಿ ಒಪ್ಪಿಕೊಂಡೆಯಲ್ಲಾ. 13 ಪೊಂತ್ಯ ಪಿಲಾತನ ಮುಂದೆ ಸಾಕ್ಷಿ ನೀಡಿದ ಕ್ರಿಸ್ತ ಯೇಸುವಿನ ಸನ್ನಿಧಿಯಲ್ಲಿಯೂ ಸರ್ವಸೃಷ್ಟಿಗೆ ಜೀವದಾಯಕನಾದ ದೇವರ ಸನ್ನಿಧಿಯಲ್ಲಿಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಪ್ರಭುವಾದ ಯೇಸುಕ್ರಿಸ್ತನು ಮತ್ತೆ ಪ್ರತ್ಯಕ್ಷನಾಗುವ ಕಾಲದವರೆಗೆ ನೀನು ಆ ಕಾರ್ಯಗಳನ್ನು ತಪ್ಪಿಲ್ಲದೆ, ನಿಂದಾರಹಿತನಾಗಿ ಮಾಡುತ್ತಿರು. 15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ. 16 ಸಾವಿಲ್ಲದವನು ಆತನೊಬ್ಬನೇ. ಆತನು ಉಜ್ವಲ ಬೆಳಕಿನಲ್ಲಿ ವಾಸವಾಗಿರುವುದರಿಂದ ಆತನ ಹತ್ತಿರಕ್ಕೆ ಜನರು ಹೋಗಲು ಸಾಧ್ಯವಿಲ್ಲ. ಆತನನ್ನು ಇದುವರೆಗೆ ಯಾರು ನೋಡಿಲ್ಲ; ನೋಡಲು ಸಾಧ್ಯವೂ ಇಲ್ಲ. ಆತನಿಗೆ ಗೌರವವೂ ಅಧಿಪತ್ಯವೂ ಸದಾಕಾಲವಿರಲಿ. ಆಮೆನ್.
17 ಇಹಲೋಕದ ವಿಷಯಗಳಲ್ಲಿ ಶ್ರೀಮಂತರಾಗಿರುವ ಜನರಿಗೆ ಈ ಆಜ್ಞೆಗಳನ್ನು ತಿಳಿಸು. ಗರ್ವಪಡದಂತೆಯೂ ಹಣವನ್ನು ಅವಲಂಬಿಸಿಕೊಳ್ಳದೆ ದೇವರಲ್ಲೇ ನಿರೀಕ್ಷೆಯಿಡುವಂತೆಯೂ ಅವರಿಗೆ ತಿಳಿಸು. ಹಣವು ಭರವಸೆಗೆ ಯೋಗ್ಯವಲ್ಲ. ದೇವರಾದರೋ ನಮ್ಮ ಸಂತೋಷಕ್ಕಾಗಿ ಸಮಸ್ತವನ್ನು ನಮಗೆ ಧಾರಾಳವಾಗಿ ದಯಪಾಲಿಸುತ್ತಾನೆ. 18 ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಶ್ರೀಮಂತರಿಗೆ ತಿಳಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲೇ ಶ್ರೀಮಂತರಾಗಿರಬೇಕೆಂದು ಅವರಿಗೆ ತಿಳಿಸು. ಪರೋಪಕಾರದಲ್ಲೂ ಹಂಚಿಕೊಳ್ಳುವುದರಲ್ಲೂ ಸಂತಸಪಡಲು ಅವರಿಗೆ ತಿಳಿಸು. 19 ಆಗ ಪರಲೋಕದಲ್ಲಿ ಒಂದು ನಿಧಿಯನ್ನು ಅವರು ಕೂಡಿಟ್ಟು ಕೊಂಡಂತಾಗುತ್ತದೆ. ಆ ನಿಧಿಯೇ ಅವರ ಮುಂದಿನ ಜೀವಿತಕ್ಕೆ ಭದ್ರವಾದ ಅಸ್ತಿವಾರವಾಗಿದೆ. ಹೀಗೆ ಅವರು ನಿಜವಾದ ಜೀವಿತವನ್ನು ಹೊಂದಿಕೊಳ್ಳುವರು.
20 ತಿಮೊಥೆಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡು. ಪ್ರಾಪಂಚಿಕವಾದ ಮೂರ್ಖ ಸಂಗತಿಗಳನ್ನು ಹೇಳುವ ಜನರಿಂದಲೂ ಸತ್ಯದ ವಿರುದ್ಧವಾಗಿ ವಾದ ಮಾಡುವ ಜನರಿಂದಲೂ ದೂರವಾಗಿರು. ಅವರು ಅದನ್ನು ಜ್ಞಾನವೆಂದು ಕರೆದರೂ ಅದು ನಿಜವಾದ ಜ್ಞಾನವಲ್ಲ. 21 ಕೆಲವರು ತಮಗೆ ಜ್ಞಾನ ಇದೆಯೆಂದು ಹೇಳಿ ಕೊಂಡರೂ ಸತ್ಯೋಪದೇಶವನ್ನು ತೊರೆದುಬಿಟ್ಟವರಾಗಿದ್ದಾರೆ.
ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International