Revised Common Lectionary (Complementary)
94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
2 ಇಡೀಲೋಕದ ನ್ಯಾಯಾಧಿಪತಿ ನೀನೇ.
ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
3 ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
4 ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
5 ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
6 ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
7 ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.
8 ದುಷ್ಟರೇ, ನೀವು ಮೂಢರಾಗಿದ್ದೀರಿ!
ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
9 ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.
12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.
16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.
20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.
7 (ಇಸ್ರೇಲರಲ್ಲಿ ಪೂರ್ವಕಾಲದ ಪದ್ಧತಿಯೇನೆಂದರೆ, ಯಾವುದಾದರೊಂದು ವಸ್ತುವನ್ನು ಕೊಂಡುಕೊಳ್ಳುವಾಗಲೂ ತೆಗೆದುಕೊಳ್ಳುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಒಬ್ಬನು ತನ್ನ ಕೆರವನ್ನು ಮತ್ತೊಬ್ಬನಿಗೆ ಕೊಡುತ್ತಿದ್ದನು.) 8 ಆದ್ದರಿಂದ ಆ ಸಮೀಪಬಂಧುವು, “ನೀನೇ ಹೊಲವನ್ನು ಕೊಂಡುಕೋ” ಎಂದು ಹೇಳಿ ತನ್ನ ಕೆರವನ್ನು ತೆಗೆದು ಬೋವಜನಿಗೆ ಕೊಟ್ಟನು.
9 ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ, “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಇವರೆಲ್ಲರ ಆಸ್ತಿಯನ್ನು ನೊವೊಮಿಯಿಂದ ಕೊಂಡುಕೊಳ್ಳುತ್ತಿದ್ದೇನೆ. ಇದಕ್ಕೆ ನೀವು ಸಾಕ್ಷಿಯಾಗಿದ್ದೀರಿ. 10 ಮೋವಾಬ್ಯಳೂ ಮಹ್ಲೋನನ ಹೆಂಡತಿಯೂ ಆಗಿದ್ದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳುತ್ತೇನೆ. ಸತ್ತುಹೋದ ಮನುಷ್ಯನ ಆಸ್ತಿಯು ಅವನ ಹೆಸರಿನಲ್ಲಿ ಉಳಿಯಲೆಂದು ನಾನು ಹೀಗೆ ಮಾಡುತ್ತಿದ್ದೇನೆ. ಹೀಗೆ ಮಾಡುವುದರಿಂದ ಸತ್ತವನ ಹೆಸರು ಅವನ ಕುಟುಂಬದಲ್ಲಿಯೂ ಅವನ ಆಸ್ತಿಯಲ್ಲಿಯೂ ಉಳಿಯುವುದು. ಇದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ” ಎಂದು ನುಡಿದನು.
11 ನಗರದ್ವಾರದಲ್ಲಿ ಸೇರಿದ್ದ ಜನರೆಲ್ಲರು ಮತ್ತು ಹಿರಿಯರು ಸಾಕ್ಷಿಗಳಾಗಿದ್ದರು. ಅವರು, “ಈ ಸ್ತ್ರೀಯು ನಿನ್ನ ಮನೆಗೆ ಬರುವಳು. ಯೆಹೋವನು ಅವಳನ್ನು ರಾಹೇಲಳಂತೆಯೂ ಲೇಯಾಳಂತೆಯೂ ಮಾಡಲಿ. ರಾಹೇಲಳು ಮತ್ತು ಲೇಯಾಳು ಇಸ್ರೇಲಿನ ಮನೆಯನ್ನು ಕಟ್ಟಿದರು. ಎಫ್ರಾತಿನಲ್ಲಿ ಪ್ರಭಾವ ಶಾಲಿಯಾಗು! ಬೆತ್ಲೆಹೇಮಿನಲ್ಲಿ ಸುಪ್ರಸಿದ್ಧನಾಗು! 12 ತಾಮಾರಳು ಯೆಹೂದನ ಮಗನಾದ ಪೆರೆಚನಿಗೆ ಜನ್ಮಕೊಟ್ಟಳು. ಅದರಿಂದ ಅವನ ಕುಟುಂಬವು ಅಭಿವೃದ್ಧಿ ಹೊಂದಿತು. ಹಾಗೆಯೇ ರೂತಳಿಂದ ಯೆಹೋವನು ನಿನಗೆ ಹಲವಾರು ಮಕ್ಕಳನ್ನು ಕೊಡಲಿ; ಅವನಂತೆಯೇ ನಿನ್ನ ಕುಟುಂಬವೂ ಅಭಿವೃದ್ಧಿ ಹೊಂದಲಿ” ಎಂದು ಆಶೀರ್ವದಿಸಿದರು.
13 ಬೋವಜನು ರೂತಳನ್ನು ಮದುವೆಯಾದನು. ಯೆಹೋವನ ಕೃಪೆಯಿಂದ ರೂತಳು ಗರ್ಭವತಿಯಾಗಿ ಗಂಡುಮಗುವಿಗೆ ಜನ್ಮಕೊಟ್ಟಳು. 14 ನಗರದ ಸ್ತ್ರೀಯರು ನೊವೊಮಿಗೆ, “ನಿನಗೆ ಈ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಇವನು ಇಸ್ರೇಲಿನಲ್ಲಿ ಸುಪ್ರಸಿದ್ಧನಾಗಲಿ. 15 ಅವನು ನಿನ್ನನ್ನು ಉಜ್ಜೀವಿಸಮಾಡುವನು. ವೃದ್ಧಾಪ್ಯದಲ್ಲಿ ನಿನ್ನ ಸಂರಕ್ಷಕನಾಗಿರಲಿ. ನಿನ್ನನ್ನು ಪ್ರೀತಿಸುವ ನಿನ್ನ ಸೊಸೆಯು ನಿನಗಾಗಿ ಈ ಮಗುವನ್ನು ಹೆತ್ತಿದ್ದಾಳೆ. ಅವಳು ನಿನಗೆ, ಏಳುಮಂದಿ ಗಂಡುಮಕ್ಕಳಿಗಿಂತಲೂ ಶ್ರೇಷ್ಠವಾಗಿದ್ದಾಳೆ” ಎಂದು ಹೇಳಿದರು.
16 ನೊವೊಮಿಯು ಆ ಮಗುವನ್ನು ತನ್ನ ಉಡಿಲಲ್ಲಿಟ್ಟುಕೊಂಡು ಸಾಕಿಸಲುಹಿದಳು. 17 ನೆರೆಹೊರೆಯವರು ಮಗುವಿಗೆ ಹೆಸರಿಟ್ಟರು. ಆ ಸ್ತ್ರೀಯರು, “ನೊವೊಮಿಗೆ ಗಂಡುಮಗು ಹುಟ್ಟಿದೆ” ಎಂದರು. ನೆರೆಯವರು ಓಬೇದನೆಂದು ಹೆಸರಿಟ್ಟರು. ಓಬೇದನು ಇಷಯನ ತಂದೆ, ಇಷಯನು ರಾಜನಾದ ದಾವೀದನ ತಂದೆ.
ರೂತ್ ಮತ್ತು ಬೋವಜನ ವಂಶವೃಕ್ಷ
18 ಪೆರೆಚನ ವಂಶಾವಳಿ ಹೀಗಿದೆ:
ಪೆರೆಚನು ಹೆಚ್ರೋನನ ತಂದೆ.
19 ಹೆಚ್ರೋನನು ರಾಮನ ತಂದೆ.
ರಾಮನು ಅಮ್ಮೀನಾದಾಬನ ತಂದೆ.
20 ಅಮ್ಮೀನಾದಾಬನು ನಹಶೋನನ ತಂದೆ.
ನಹಶೋನನು ಸಲ್ಮೋನನ ತಂದೆ.
21 ಸಲ್ಮೋನನು ಬೋವಜನ ತಂದೆ.
ಬೋವಜನು ಓಬೇದನ ತಂದೆ.
22 ಓಬೇದನು ಇಷಯನ ತಂದೆ.
ಇಷಯನು ದಾವೀದನ ತಂದೆ.
ಯೇಸು ಸ್ವಂತ ನಾಡಿಗೆ ಬಂದದ್ದು
(ಮತ್ತಾಯ 13:53-58; ಮಾರ್ಕ 6:1-6)
16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು. 17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:
18 “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ.
ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ.
ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ
ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ
ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ.
ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
19 ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.”(A)
20 ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. 21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.
22 ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.
23 ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.
25 “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.
27 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.
28 ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು 29 ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು. 30 ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International