Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 94

94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
    ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
ಇಡೀಲೋಕದ ನ್ಯಾಯಾಧಿಪತಿ ನೀನೇ.
    ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
    ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
    ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
    ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
    ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
    ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.

ದುಷ್ಟರೇ, ನೀವು ಮೂಢರಾಗಿದ್ದೀರಿ!
    ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
    ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
    ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
    ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
    ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.

12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
    ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
    ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
    ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
    ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.

16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
    ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
    ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
    ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
    ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.

20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
    ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
    ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
    ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
    ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
    ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.

ರೂತಳು 1

ಯೆಹೂದದಲ್ಲಿ ಬರಗಾಲ

ನ್ಯಾಯಾಧೀಶರು ಆಳುತ್ತಿದ್ದಾಗ ದೇಶದಲ್ಲಿ ಬರಗಾಲ ಬಂತು. ಆಗ ಎಲೀಮೆಲೆಕನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ಇಬ್ಬರು ಗಂಡುಮಕ್ಕಳೊಡನೆ ಯೆಹೂದಪ್ರಾಂತದ ಬೆತ್ಲೆಹೇಮ್ ನಗರವನ್ನು ಬಿಟ್ಟು ಮೋವಾಬ್ ಬೆಟ್ಟಪ್ರದೇಶಕ್ಕೆ ಹೋದನು. ಅವನ ಹೆಂಡತಿಯ ಹೆಸರು “ನೊವೊಮಿ.” ಅವನ ಇಬ್ಬರು ಗಂಡುಮಕ್ಕಳ ಹೆಸರುಗಳು: ಮಹ್ಲೋನ್ ಮತ್ತು ಕಿಲ್ಯೋನ್. ಅವರು ಯೆಹೂದಪ್ರಾಂತದ ಎಫ್ರಾತಿಗೆ ಸೇರಿದ ಬೆತ್ಲೆಹೇಮಿನ ನಿವಾಸಿಗಳು. ಇವರು ಮೋವಾಬ್ ಬೆಟ್ಟಪ್ರದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸಿದರು.

ಕೆಲವು ದಿನಗಳಾದ ಮೇಲೆ ನೊವೊಮಿಯ ಗಂಡನಾದ ಎಲೀಮೆಲೆಕನು ಮರಣಹೊಂದಿದನು. ನೊವೊಮಿ ಮತ್ತು ಆಕೆಯ ಇಬ್ಬರು ಗಂಡುಮಕ್ಕಳು ಅಲ್ಲಿ ತಮ್ಮ ಜೀವನವನ್ನು ಮುಂದುವರಿಸಿದರು. ಆಕೆಯ ಗಂಡುಮಕ್ಕಳು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಯಾದರು. ಒಬ್ಬನ ಹೆಂಡತಿಯ ಹೆಸರು ಒರ್ಫಾ, ಇನ್ನೊಬ್ಬನ ಹೆಂಡತಿಯ ಹೆಸರು ರೂತ್. ಅವರು ಮೋವಾಬ್‌ನಲ್ಲಿ ಸುಮಾರು ಹತ್ತು ವರ್ಷವಿದ್ದರು. ಬಳಿಕ ಮಹ್ಲೋನ್ ಮತ್ತು ಕಿಲ್ಯೋನ್ ಸಹ ಸತ್ತುಹೋದರು. ಹೀಗಾಗಿ ನೊವೊಮಿಯು ತನ್ನ ಗಂಡನನ್ನೂ ಇಬ್ಬರು ಗಂಡುಮಕ್ಕಳನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.

ಸ್ವದೇಶಕ್ಕೆ ನೊವೊಮಿಯ ಪ್ರಯಾಣ

ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಲ್ಲಿದ್ದಾಗ ಯೆಹೋವನು ತನ್ನ ಜನರಿಗೆ ಕರುಣೆತೋರಿ ಆಹಾರವನ್ನು ಒದಗಿಸಿರುವ ಸುದ್ದಿಯು ನೊವೊಮಿಗೆ ತಿಳಿಯಿತು. ಆದ್ದರಿಂದ ಆಕೆಯು ಮೋವಾಬ್ ಬೆಟ್ಟಪ್ರದೇಶವನ್ನು ಬಿಟ್ಟು ತನ್ನ ಊರಿಗೆ ಹೋಗಲು ನಿರ್ಧರಿಸಿದಳು. ಅವಳ ಸೊಸೆಯಂದಿರು ಸಹ ಅವಳ ಸಂಗಡ ಹೋಗಲು ತೀರ್ಮಾನಿಸಿದರು. ಅವಳು ಮತ್ತು ಅವಳ ಸೊಸೆಯಂದಿರು ತಾವು ಈವರೆಗೆ ಇದ್ದ ಸ್ಥಳವನ್ನು ಬಿಟ್ಟು ಯೆಹೂದ ಪ್ರಾಂತಕ್ಕೆ ಹೊರಟರು.

ಆಗ ನೊವೊಮಿ ತನ್ನ ಸೊಸೆಯಂದಿರಿಗೆ, “ನೀವಿಬ್ಬರೂ ನಿಮ್ಮ ತಂದೆತಾಯಿಗಳ ಮನೆಗೆ ಹೋಗಿ. ನೀವು ನನ್ನನ್ನೂ ಸತ್ತುಹೋದ ನನ್ನ ಇಬ್ಬರು ಮಕ್ಕಳನ್ನೂ ತುಂಬ ಪ್ರೀತಿಯಿಂದ ನೋಡಿಕೊಂಡಿದ್ದೀರಿ. ಯೆಹೋವನು ನಿಮಗೆ ಅಷ್ಟೇ ಕೃಪೆಯನ್ನೂ ಪ್ರೀತಿಯನ್ನೂ ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವಿಬ್ಬರೂ ಮದುವೆ ಮಾಡಿಕೊಂಡು ಒಳ್ಳೆಯ ಕುಟುಂಬವನ್ನು ಹೊಂದಿಕೊಳ್ಳಲು ಯೆಹೋವನು ನಿಮಗೆ ಸಹಾಯಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿ ತನ್ನ ಸೊಸೆಯಂದಿರಿಗೆ ಮುದ್ದಿಟ್ಟಳು. ಅವರೆಲ್ಲರೂ ಅಳತೊಡಗಿದರು.

10 ಅವಳ ಸೊಸೆಯಂದಿರು, “ನಾವು ನಿನ್ನ ಸಂಗಡ ಬಂದು ನಿನ್ನ ಜನರೊಡನೆ ಇರುತ್ತೇವೆ” ಎಂದರು.

11 ಆದರೆ ನೊವೊಮಿ, “ಬೇಡ ಮಕ್ಕಳೆ, ನಿಮ್ಮ ಮನೆಗಳಿಗೆ ಹಿಂತಿರುಗಿಹೋಗಿರಿ. ನನ್ನ ಸಂಗಡ ನೀವೇಕೆ ಬರಬೇಕು? ನಾನು ನಿಮಗೆ ಸಹಾಯ ಮಾಡಲಾರೆ. ನಿಮ್ಮನ್ನು ಮದುವೆಯಾಗುವಂಥ ಗಂಡುಮಕ್ಕಳು ನನ್ನಲ್ಲಿಲ್ಲ. 12 ನಿಮ್ಮ ತವರೂರಿಗೆ ಹೋಗಿರಿ! ನಾನು ಇನ್ನೊಂದು ಮದುವೆಯಾಗುವುದಕ್ಕೂ ಸಾಧ್ಯವಿಲ್ಲ. ನನಗೆ ತುಂಬಾ ವಯಸ್ಸಾಗಿದೆ. ನಾನು ನಿಮಗೆ ಸಹಾಯ ಮಾಡಲಾರೆ. ನಾನು ಇಂದು ರಾತ್ರಿಯೇ ಗರ್ಭಧರಿಸಿ ಇಬ್ಬರು ಗಂಡುಮಕ್ಕಳನ್ನು ಹೆತ್ತರೂ ನಿಮಗೆ ಅದರಿಂದ ಪ್ರಯೋಜನವಿಲ್ಲ. 13 ನೀವು ಅವರನ್ನು ಮದುವೆಯಾಗಬೇಕಾದರೆ ಅವರು ಬೆಳೆದು ಪ್ರಾಯಕ್ಕೆ ಬರುವವರೆಗೆ ಕಾದುಕೊಂಡಿರಬೇಕಾಗುತ್ತದೆ. ನೀವು ಗಂಡಂದಿರ ಸಲುವಾಗಿ ಅಷ್ಟುಕಾಲ ಕಾದುಕೊಂಡಿರುವುದು ನನಗಿಷ್ಟವಿಲ್ಲ. ಅದು ನನಗೆ ದುಃಖವನ್ನು ಉಂಟುಮಾಡುತ್ತದೆ. ನಿಮ್ಮ ಬಗ್ಗೆ ನಾನು ತುಂಬಾ ದುಃಖಪಡುತ್ತೇನೆ, ಯೆಹೋವನ ಹಸ್ತವು ನನಗೆ ವಿರುದ್ಧವಾಗಿದೆ” ಎಂದು ಹೇಳಿದಳು.

14 ಅವರೆಲ್ಲರೂ ಮತ್ತೊಮ್ಮೆ ಗಟ್ಟಿಯಾಗಿ ಅತ್ತರು. ಒರ್ಫಾಳು ನೊವೊಮಿಗೆ ಮುದ್ದಿಟ್ಟು ಹೊರಟುಹೋದಳು. ಆದರೆ ರೂತಳು ಅವಳನ್ನು ಮುದ್ದಿಟ್ಟು ಆಕೆಯೊಂದಿಗೆ ಉಳಿದುಕೊಂಡಳು.

15 ನೊವೊಮಿಯು ಆಕೆಗೆ, “ನೋಡು, ನಿನ್ನ ಓರಗಿತ್ತಿಯು ಮತ್ತೆ ತನ್ನ ಜನರ ಬಳಿಗೂ ತನ್ನ ದೇವತೆಗಳ ಬಳಿಗೂ ಹೋಗುತ್ತಿದ್ದಾಳೆ. ನೀನೂ ಹಾಗೆಯೇ ಮಾಡು” ಎಂದು ಹೇಳಿದಳು.

16 ಅದಕ್ಕೆ ರೂತಳು, “ನಿನ್ನನ್ನು ಬಿಟ್ಟು ಸ್ವಜನರ ಬಳಿಗೆ ಹಿಂದಿರುಗಿ ಹೋಗೆಂದು ನನಗೆ ಒತ್ತಾಯ ಮಾಡಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು. ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು. ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. 17 ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲಿಯೇ ನನಗೆ ಸಮಾಧಿಯಾಗಬೇಕು. ಈ ಪ್ರತಿಜ್ಞೆಯನ್ನು ನಾನು ಪೂರ್ಣಗೊಳಿಸದಿದ್ದರೆ ನನ್ನನ್ನು ಶಿಕ್ಷಿಸು ಎಂದು ನಾನು ಯೆಹೋವನಲ್ಲಿ ಕೇಳಿಕೊಳ್ಳುತ್ತೇನೆ. ಮರಣವು ಮಾತ್ರ ನಮ್ಮಿಬ್ಬರನ್ನು ಅಗಲಿಸಬಲ್ಲದು” ಎಂದು ದೃಢವಾಗಿ ಹೇಳಿದಳು.

ಸ್ವದೇಶಕ್ಕೆ ಆಗಮನ

18 ರೂತಳು ತನ್ನ ಜೊತೆಗೆ ಬರಲು ದೃಢನಿಶ್ಚಯ ಮಾಡಿರುವುದು ನೊವೊಮಿಗೆ ತಿಳಿಯಿತು. ಆದ್ದರಿಂದ ನೊವೊಮಿಯು ರೂತಳೊಡನೆ ವಾದಮಾಡಲಿಲ್ಲ. 19 ಅವರಿಬ್ಬರೂ ಪ್ರಯಾಣ ಮಾಡಿ ಬೆತ್ಲೆಹೇಮ್ ಊರಿಗೆ ತಲುಪಿದರು. ಅವರಿಬ್ಬರನ್ನು ಕಂಡಾಗ ಬೆತ್ಲೆಹೇಮ್ ಪಟ್ಟಣದ ಜನರಿಗೆ ಆಶ್ಚರ್ಯವಾಯಿತು. “ಇವಳು ನೊವೊಮಿಯೇ?” ಎಂದು ಅವರು ಕೇಳಿದರು.

20 ಆದರೆ ನೊವೊಮಿಯು ಜನರಿಗೆ, “ನನ್ನನ್ನು ನೊವೊಮಿ ಎಂದು ಕರೆಯದೆ, ನನ್ನನ್ನು ಮಾರಾ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತನಾದ ದೇವರು ನನ್ನ ಜೀವನವನ್ನು ದುಃಖಕರವನ್ನಾಗಿ ಮಾಡಿದ್ದಾನೆ. 21 ಇಲ್ಲಿಂದ ಹೋಗುವಾಗ ಭಾಗ್ಯವಂತಳಾಗಿ ಹೋದೆನು; ಆದರೆ ಈಗ ಯೆಹೋವನು ನನ್ನನ್ನು ಬರಿಗೈಯಲ್ಲಿ ಮನೆಗೆ ಕರೆತಂದಿದ್ದಾನೆ. ಯೆಹೋವನು ನನ್ನನ್ನು ದುಃಖಿತಳನ್ನಾಗಿ ಮಾಡಿದ್ದಾನೆ. ಹೀಗಿರುವಾಗ ನೀವೇಕೆ ನನ್ನನ್ನು ‘ನೊವೊಮಿ’ ಎಂದು ಕರೆಯಬೇಕು? ಸರ್ವಶಕ್ತನಾದ ದೇವರು ನನಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ” ಎಂದು ಹೇಳಿದಳು.

22 ಹೀಗೆ ನೊವೊಮಿ ಮತ್ತು ಅವಳ ಸೊಸೆ ಮೋವಾಬ್ಯಳಾದ ರೂತಳು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದರು. ಯೆಹೂದ ದೇಶದ ಬೆತ್ಲೆಹೇಮಿಗೆ ಇವರಿಬ್ಬರೂ ಜವೆಗೋಧಿಯ ಸುಗ್ಗಿಯ ಆರಂಭಕಾಲದಲ್ಲಿ ಬಂದರು.

1 ತಿಮೊಥೆಯನಿಗೆ 5:1-8

ವೃದ್ಧ ಪುರುಷರೊಂದಿಗೆ ಕೋಪದಿಂದ ಮಾತಾಡದೆ ಅವರನ್ನು ನಿನ್ನ ತಂದೆಯೆಂದು ಭಾವಿಸಿ ಅವರೊಂದಿಗೆ ಮಾತನಾಡು. ಯೌವನಸ್ಥರನ್ನು ಸಹೋದರರಂತೆಯೂ ವೃದ್ಧ ಸ್ತ್ರೀಯರನ್ನು ತಾಯಿಗಳಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸು. ಯಾವಾಗಲೂ ಅವರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊ.

ವಿಧವೆಯರನ್ನು ಹೇಗೆ ಪೋಷಿಸಬೇಕೆಂಬ ನಿಯಮಗಳು

ದಿಕ್ಕಿಲ್ಲದ ವಿಧವೆಯರನ್ನು ಪರಿಪಾಲಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು. ಒಬ್ಬ ವಿಧವೆಯು ನಿಜವಾಗಿಯೂ ಸಹಾಯಕರಿಲ್ಲದೆ ಒಬ್ಬಂಟಿಗಳಾಗಿದ್ದರೆ, ಆಗ ಆಕೆಯು ತನ್ನ ರಕ್ಷಣೆಗಾಗಿ ದೇವರ ಮೇಲೆ ಭರವಸೆ ಇಡುವಳು. ಆ ಸ್ತ್ರೀಯು ಹಗಲು ರಾತ್ರಿಯೆಲ್ಲ ಪ್ರಾರ್ಥಿಸುವಳು. ಅವಳು ದೇವರ ಸಹಾಯವನ್ನು ಬೇಡುವಳು. ಆದರೆ ವಿಧವೆಯಾದವಳು ತನ್ನ ಇಚ್ಛೆಪೂರೈಕೆಗಾಗಿ ತನ್ನ ಜೀವಿತವನ್ನು ಬಳಸಿಕೊಳ್ಳುವುದಾದರೆ ಅವಳು ಬದುಕಿದ್ದರೂ ಸತ್ತಂತೆಯೇ. ಜನರು ನಿಂದೆನೆಗೆ ಗುರಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸು. ಆಗ ಯಾರೂ ಅವರನ್ನು ನಿಂದಿಸಲು ಸಾಧ್ಯವಿಲ್ಲ. ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ಸ್ವಂತ ಕುಟುಂಬದವರನ್ನು ಪರಿಪಾಲಿಸದೆ ಹೋದರೆ ಅವನು ಸತ್ಯಬೋಧನೆಯನ್ನು ತಿರಸ್ಕರಿಸುವವನಾಗಿದ್ದಾನೆ. ಅವನು ನಂಬದವನಿಗಿಂತ ತುಂಬಾ ಕೀಳಾದವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International