Revised Common Lectionary (Complementary)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
ಸಾಲಗಳನ್ನು ವಜಾಮಾಡುವ ವಿಶೇಷ ವರ್ಷ
15 “ಪ್ರತೀ ಏಳು ವರ್ಷಗಳ ಅಂತ್ಯದಲ್ಲಿ ನೀವು ಕೊಟ್ಟ ಸಾಲಗಳನ್ನು ವಜಾಮಾಡಬೇಕು. 2 ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ಆ ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ. 3 ಸಾಲಗಾರನು ಪರದೇಶಿಯಾಗಿದ್ದರೆ ಅವನು ಸಾಲ ಹಿಂತಿರುಗಿಸಬೇಕು. ಆದರೆ ಇಸ್ರೇಲರಲ್ಲಿ ಯಾರಾದರೂ ನಿಮ್ಮಿಂದ ಸಾಲ ತೆಗೆದುಕೊಂಡಿದ್ದರೆ ಅದನ್ನು ವಜಾ ಮಾಡಬೇಕು. 4 ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕೆಂದರೆ ಯೆಹೋವನೇ ನಿಮಗೆ ಈ ದೇಶವನ್ನು ಕೊಡುತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ. 5 ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿದ್ದಲ್ಲಿ, ಆತನ ವಿಧಿಕ್ರಮಗಳಿಗೆ ವಿಧೇಯರಾಗಿದ್ದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವನು. 6 ಆತನು ಮಾಡಿದ ವಾಗ್ದಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಚ್ಛವಾಗಿ ಹಣವಿರುವುದು. ನಿಮಗೆ ಬೇರೆಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೀವು ಎಷ್ಟೋ ದೇಶಗಳನ್ನು ಆಳುವಿರಿ. ಆದರೆ ಆ ದೇಶಗಳು ನಿಮ್ಮನ್ನು ಆಳವು.
7 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ಒಂದುವೇಳೆ ನಿಮ್ಮ ಮಧ್ಯದಲ್ಲಿ ಒಬ್ಬ ಬಡವನಿರಬಹುದು. ನೀವು ಸ್ವಾರ್ಥರಾಗಿ, ಅವನಿಗೆ ಸಹಾಯಮಾಡಲು ನಿರಾಕರಿಸಬಾರದು. 8 ನಿಮ್ಮಲ್ಲಿರುವುದನ್ನು ನೀವು ಅವನೊಂದಿಗೆ ಹಂಚಿಕೊಳ್ಳಿ. ಅವನ ಅಗತ್ಯತೆಗೆ ತಕ್ಕಂತೆ ಸಾಲಕೊಡಿರಿ.
9 “ಸಾಲ ವಜಾಮಾಡುವ ಏಳನೆಯ ವರ್ಷ ಸಮೀಪವಾಯಿತೆಂದು ನೀವು ಯಾರಿಗೂ ಸಾಲ ಕೊಡದೇ ಸಹಾಯ ಮಾಡದೇ ಇರಬಾರದು. ಅಂಥಾ ದುಷ್ಟ ಆಲೋಚನೆ ನಿಮ್ಮ ಮನಸ್ಸಿನೊಳಗೆ ಹುಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಕೆಟ್ಟ ಆಲೋಚನೆಯೂ ಇರಬಾರದು. ನೀವು ಆ ಬಡ ವ್ಯಕ್ತಿಗೆ ಸಹಾಯ ಮಾಡದಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರು ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ.
10 “ಆ ಬಡ ಮನುಷ್ಯನಿಗೆ ನಿಮ್ಮಿಂದ ಎಷ್ಟು ಸಹಾಯ ಮಾಡಲು ಸಾಧ್ಯವಿದೆಯೋ ಅಷ್ಟು ಸಹಾಯಮಾಡಿ; ಕೊಡುವುದಕ್ಕೆ ಬೇಸರಪಡಬೇಡಿ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಒಳ್ಳೆಯ ಕಾರ್ಯಗಳಿಗಾಗಿ ನಿಮ್ಮನ್ನು ಆಶೀರ್ವದಿಸುವನು; ನಿಮ್ಮ ಕೆಲಸವನ್ನೆಲ್ಲಾ ಸಫಲಪಡಿಸುವನು. 11 ನಿಮ್ಮ ದೇಶದಲ್ಲಿ ಯಾವಾಗಲೂ ಬಡಜನರು ಇರುತ್ತಾರೆ. ಅದಕ್ಕಾಗಿಯೇ ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕೆಂದು ನಿಮಗೆ ಆಜ್ಞಾಪಿಸುತ್ತೇನೆ.
15 ದೇವರಿಂದ ಕರೆಯಲ್ಪಟ್ಟ ಜನರು ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಯನ್ನು ದೇವರಿಂದ ತಂದನು. ದೇವರ ಜನರು ಅವುಗಳನ್ನು ಶಾಶ್ವತವಾಗಿ ಹೊಂದಿಕೊಳ್ಳಲು ಸಾಧ್ಯ. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಜನರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.
16 ಒಬ್ಬನು ಸಾಯುವ ಮೊದಲೇ ಉಯಿಲನ್ನು[a] ಬರೆದಿಡುತ್ತಾನೆ. ಆದರೆ ಸತ್ತಿರುವಾತನೇ ಆ ಉಯಿಲನ್ನು ಬರೆದವನೆಂದು ಜನರು ಸಾಧಿಸಿ ತೋರಿಸಬೇಕು. 17 ಅದನ್ನು ಬರೆದವನು ಇನ್ನೂ ಬದುಕಿದ್ದರೆ ಅದಕ್ಕೆ ಬೆಲೆಯೇನೂ ಇಲ್ಲ. ಅದನ್ನು ಬರೆದಾತನು ಸತ್ತನಂತರ ಅದು ಉಪಯುಕ್ತವಾಗಿರುತ್ತದೆ. 18 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಮೊದಲನೆ ಒಡಂಬಡಿಕೆ ಇದಕ್ಕೆ ಹೋಲಿಕೆಯಾಗಿದೆ. ಮೊದಲನೆ ಒಡಂಬಡಿಕೆ ಉಪಯುಕ್ತಕ್ಕೆ ಬರಲು ರಕ್ತಾರ್ಪಣೆಯಾಗಬೇಕಿತ್ತು. 19 ಮೊದಲನೆಯದಾಗಿ, ಮೋಶೆಯು ಧರ್ಮಶಾಸ್ತ್ರದ ಪ್ರತಿಯೊಂದು ಆಜ್ಞೆಯನ್ನೂ ಜನರಿಗೆಲ್ಲ ತಿಳಿಸಿದನು. ನಂತರ ಅವನು ಕರುಗಳ ರಕ್ತವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿದನು. ಬಳಿಕ ನೀರು ಮತ್ತು ರಕ್ತವನ್ನು ಧರ್ಮಶಾಸ್ತ್ರದ ಮೇಲೆ ಮತ್ತು ಜನರೆಲ್ಲರ ಮೇಲೆ ಚಿಮುಕಿಸಲು ಕೆಂಪು ಉಣ್ಣೆಯನ್ನೂ ಹಿಸ್ಸೋಪ್ ಗಿಡದ[b] ಕವಲನ್ನು ಉಪಯೋಗಿಸಿದನು. 20 ಚಿಮುಕಿಸುವಾಗ, “ನೀವು ಅನುಸರಿಸಬೇಕೆಂದು ದೇವರು ಆಜ್ಞಾಪಿಸಿದ ಒಡಂಬಡಿಕೆಯನ್ನು ಈ ರಕ್ತ ದೃಢಪಡಿಸುತ್ತದೆ”(A) ಎಂದು ಹೇಳಿದನು. 21 ಅದೇರೀತಿ, ಮೋಶೆಯು ರಕ್ತವನ್ನು ಗುಡಾರದ ಮೇಲೆಯೂ ಆರಾಧನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಮೇಲೆಯೂ ಚಿಮುಕಿಸಿದನು. 22 ಬಹುಮಟ್ಟಿಗೆ ಪ್ರತಿಯೊಂದೂ ರಕ್ತದಿಂದ ಪರಿಶುದ್ಧವಾಗಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ರಕ್ತವಿಲ್ಲದೆ ಪಾಪಗಳನ್ನು ಕ್ಷಮಿಸಲು ಸಾಧ್ಯವಿಲ್ಲ.
ಕ್ರಿಸ್ತನ ಯಜ್ಞವು ಪಾಪಗಳನ್ನು ದೂರತಳ್ಳಿತು
23 ಈ ವಸ್ತುಗಳು ಪರಲೋಕದಲ್ಲಿರುವ ವಸ್ತುಗಳ ಪ್ರತಿರೂಪಗಳಾಗಿವೆ. ಇವುಗಳನ್ನು ಪ್ರಾಣಿಗಳ ಯಜ್ಞಗಳಿಂದ ಪರಿಶುದ್ಧಗೊಳಿಸಬೇಕಾಗಿದೆ. ಆದರೆ ಪರಲೋಕದಲ್ಲಿರುವ ನಿಜರೂಪಗಳಿಗಾಗಿ ಉತ್ತಮವಾದ ಯಜ್ಞಗಳನ್ನು ಅರ್ಪಿಸಬೇಕಾಗಿದೆ. 24 ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International