Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 146

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

ಅರಣ್ಯಕಾಂಡ 36

ಚಲ್ಪಹಾದನ ಹೆಣ್ಣುಮಕ್ಕಳ ಭೂಮಿ

36 ಒಂದು ದಿನ ಗಿಲ್ಯಾದ್ ಕುಲದ ಕುಟುಂಬಗಳ ನಾಯಕರು ಮೋಶೆಯೊಡನೆಯೂ ಇತರ ಇಸ್ರೇಲರ ಕುಟುಂಬಗಳ ನಾಯಕರೊಡನೆಯೂ ಮಾತಾಡುವುದಕ್ಕೆ ಬಂದರು. (ಗಿಲ್ಯಾದನು ಮಾಕೀರನ ಮಗ; ಮಾಕೀರನು ಮನಸ್ಸೆಯ ಮಗ; ಮನಸ್ಸೆಯು ಯೋಸೇಫನ ಮಗ.) ಅವರು, “ಸ್ವಾಮೀ, ಚೀಟುಹಾಕಿ ಇಸ್ರೇಲರಿಗೆ ದೇಶವನ್ನು ಹಂಚಿಕೊಡಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ್ದಾನೆ. ಅದಲ್ಲದೆ ನಮ್ಮ ಸಂಬಂಧಿಕನಾದ ಚಲ್ಪಹಾದನ ಭೂಮಿಯನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ. ಹೀಗಿರಲು ಅವರು ಇಸ್ರೇಲರ ಬೇರೆ ಯಾವ ಕುಲದವರನ್ನಾದರೂ ಮದುವೆಯಾದರೆ ಅವರ ಸ್ವಾಸ್ತ್ಯವು ನಮ್ಮ ಪೂರ್ವಿಕರ ಕುಲದಿಂದ ತೆಗೆಯಲ್ಪಟ್ಟು, ಅವರು ಮದುವೆಯ ಮೂಲಕ ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು. ಇಸ್ರೇಲರ ಜೂಬಿಲಿ ಸಂವತ್ಸರವು ಬಂದಾಗ ಅವರ ಸ್ವಾಸ್ತ್ಯವು ಅವರು ಸೇರಿಕೊಳ್ಳುವ ಕುಲದ ಸ್ವಾಸ್ತ್ಯಕ್ಕೆ ಕೂಡಿಕೊಳ್ಳುವುದರಿಂದ ನಮ್ಮ ಕುಲದಿಂದ ತೆಗೆಯಲ್ಪಡುವುದು” ಎಂದು ಹೇಳಿದರು.

ಆಗ ಮೋಶೆಯು ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರಿಗೆ, “ಯೋಸೇಫನ ಸಂತತಿಯವರು ಹೇಳುವುದು ನ್ಯಾಯ. ಆದಕಾರಣ ಚಲ್ಫಹಾದನ ಹೆಣ್ಣುಮಕ್ಕಳು ಮದುವೆಯಾಗುವುದಾದರೆ ತಮ್ಮ ತಂದೆಯ ಗೋತ್ರಕ್ಕೆ ಸಂಬಂಧಿಸಿದ ಯಾರನ್ನು ಬೇಕಾದರೂ ಮದುವೆಯಾಗಬಹುದೆಂದು ಯೆಹೋವನು ಆಜ್ಞಾಪಿಸಿದ್ದಾನೆ. ಇಸ್ರೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರೇಲರೆಲ್ಲರೂ ತಮ್ಮ ಪೂರ್ವಿಕರಿಂದ ಸ್ವಾಸ್ತ್ಯವಾಗಿ ಪಡೆದುಕೊಂಡ ತಮ್ಮ ಗೋತ್ರದ ಭೂಮಿಯನ್ನು ತಮ್ಮ ಸ್ವಾಧೀನದಲ್ಲೇ ಇಟ್ಟುಕೊಂಡಿರಬೇಕು. ಆದ್ದರಿಂದ ಇಸ್ರೇಲರ ಕುಲಗಳಲ್ಲಿ ಭೂಮಿಯನ್ನು ಸ್ವಾಸ್ತ್ಯವಾಗಿ ಹೊಂದುವ ಪ್ರತಿಯೊಬ್ಬ ಮಗಳು, ತನ್ನ ತಂದೆಯ ಗೋತ್ರದವನನ್ನೇ ಮದುವೆಯಾಗಬೇಕು. ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರೇಲರ ಪ್ರತಿಯೊಂದು ಕುಲವು ತನ್ನ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರುವುದು” ಎಂದು ಹೇಳಿದನು.

10 ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಚಲ್ಪಹಾದನ ಹೆಣ್ಣುಮಕ್ಕಳು ವಿಧೇಯರಾದರು. 11 ಆದ್ದರಿಂದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ಯೆಹೋವನ ಆಜ್ಞಾನುಸಾರವಾಗಿ ನಡೆದು ತಂದೆಯ ಅಣ್ಣತಮ್ಮಂದಿರ ಗಂಡುಮಕ್ಕಳನ್ನು ಮದುವೆಯಾದರು. 12 ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನೇ ಮದುವೆಯಾದದ್ದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು.

13 ಜೆರಿಕೊ ಪಟ್ಟಣದ ಎದುರಾಗಿರುವ ಜೋರ್ಡನ್ ನದಿಯ ಬಳಿಯಲ್ಲಿರುವ ಮೋವಾಬಿನ ಬಯಲಿನಲ್ಲಿ ಯೆಹೋವನು ಇಸ್ರೇಲರಿಗೆ ಮೋಶೆಯ ಮೂಲಕ ಕೊಟ್ಟ ಆಜ್ಞಾವಿಧಿಗಳು ಇವೇ.

ರೋಮ್ನಗರದವರಿಗೆ 5:6-11

ನಾವು ಬಲಹೀನರೂ ದೇವರಿಗೆ ವಿರೋಧವಾಗಿ ಜೀವಿಸುವವರೂ ಆಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ನಮಗೋಸ್ಕರ ಪ್ರಾಣಕೊಟ್ಟನು. ನೀತಿವಂತನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಒಬ್ಬನು ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಾಗಿರುವ ಒಬ್ಬನಿಗಾಗಿ ಪ್ರಾಣಕೊಡಲು ಒಬ್ಬನು ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ.

ನಾವು ಕ್ರಿಸ್ತನ ರಕ್ತದ ಮೂಲಕವಾಗಿ ನೀತಿವಂತರಾಗಿದ್ದೇವೆ. ಆದ್ದರಿಂದ ಆತನ ಮೂಲಕ ದೇವರ ಕೋಪದಿಂದ ಖಂಡಿತವಾಗಿ ತಪ್ಪಿಸಿಕೊಳ್ಳುತ್ತೇವೆ. 10 ಅಂದರೆ, ನಾವು ದೇವರ ಶತ್ರುಗಳಾಗಿದ್ದಾಗಲೇ, ದೇವರು ತನ್ನ ಮಗನ ಮರಣದ ಮೂಲಕವಾಗಿ ನಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೆ. ಈಗ ನಾವು ದೇವರ ಸ್ನೇಹಿತರಾಗಿರುವುದರಿಂದ ದೇವರು ತನ್ನ ಮಗನ ಪ್ರಾಣದ ಮೂಲಕ ನಮ್ಮನ್ನು ರಕ್ಷಿಸುವುದು ಮತ್ತಷ್ಟು ನಿಶ್ಚಯವಾಗಿದೆ. 11 ಇಷ್ಟು ಮಾತ್ರವಲ್ಲದೆ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಾವು ದೇವರಲ್ಲಿ ಹರ್ಷಿಸುತ್ತೇವೆ. ಈಗ ನಾವು ದೇವರ ಸ್ನೇಹಿತರಾಗಿರುವುದು ಯೇಸುವಿನಿಂದಲೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International