Revised Common Lectionary (Complementary)
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15 ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.
18 ಚೀಯೋನಿಗೆ ಕರುಣೆತೋರಿ
ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
ನಿನಗೆ ಸಂತೋಷವನ್ನು ಉಂಟು ಮಾಡುವರು.
ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.
ಯೆಹೋವನ ದೂರು
6 ಯೆಹೋವನು ಹೇಳುವುದನ್ನು ಕೇಳಿರಿ:
“ನಿನ್ನ ವ್ಯಾಜ್ಯವನ್ನು ಬೆಟ್ಟಗಳಿಗೆ ತಿಳಿಸು.
ಗುಡ್ಡಗಳು ನಿನ್ನ ಕಥೆಯನ್ನು ಕೇಳಲಿ.
2 ಯೆಹೋವನಿಗೆ ತನ್ನ ಜನರ ವಿರುದ್ಧವಾಗಿ ವ್ಯಾಜ್ಯವಿದೆ.
ಪರ್ವತಗಳೇ, ಭೂಮಿಯ ಅಸ್ತಿವಾರಗಳೇ
ಯೆಹೋವನ ದೂರುಗಳನ್ನು ಕೇಳಿರಿ.
ಇಸ್ರೇಲ್ ತಪ್ಪಿತಸ್ಥನೆಂದು ಆತನು ಧೃಡಪಡಿಸುವನು.”
3 ಯೆಹೋವನು ಹೇಳುವುದೇನೆಂದರೆ, “ನನ್ನ ಜನರೇ, ನಾನು ಮಾಡಿದ್ದೇನು ತಿಳಿಸಿರಿ.
ನಿಮಗೆ ವಿರೋಧವಾಗಿ ನಾನು ಏನಾದರೂ ಮಾಡಿದ್ದೇನೋ?
ನಿಮಗೆ ಜೀವಿಸಲು ಕಷ್ಟವಾಗುವಂತೆ ಮಾಡಿದ್ದೇನೋ?
4 ನಾನು ಮಾಡಿದ್ದನ್ನು ನಿಮಗೆ ಹೇಳುತ್ತೇನೆ,
ನಾನು ನಿಮ್ಮ ಬಳಿಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ಕಳುಹಿಸಿದೆನು.
ನಾನು ಈಜಿಪ್ಟ್ ದೇಶದಿಂದ ನಿಮ್ಮನ್ನು ಕರೆತಂದೆನು.
ಗುಲಾಮತನದಿಂದ ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದೆನು.
5 ನನ್ನ ಜನರೇ, ಮೋವಾಬ್ಯರ ಅರಸನಾದ ಬಾಲಾಕನ ದುಷ್ಟ ಯೋಜನೆಯನ್ನು ನೆನಪುಮಾಡಿರಿ.
ಬೆಯೋರನ ಮಗನಾದ ಬಿಳಾಮನು ಬಾಲಾಕನಿಗೆ ಏನು ಹೇಳಿದನೆಂದು ಜ್ಞಾಪಕಮಾಡಿರಿ.
ಶಿಟ್ಟೀಮಿನಿಂದ ಗಿಲ್ಗಾಲಿನ ತನಕ ನಡೆದ ಘಟನೆಗಳನ್ನು ನಿಮ್ಮ ನೆನಪಿಗೆ ತಂದುಕೊಳ್ಳಿರಿ.
ಅವೆಲ್ಲವನ್ನು ನೀವು ನೆನಪುಮಾಡಿದರೆ ಯೆಹೋವನು ನೀತಿವಂತನು ಎಂದು ನಿಮಗೆ ಗೊತ್ತಾಗುವದು.”
ನಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ?
6 ನಾನು ದೇವರಾದ ಯೆಹೋವನನ್ನು ಸಂಧಿಸಲು ಬರುವಾಗ ಏನನ್ನು ತೆಗೆದುಕೊಂಡು ಬರಲಿ?
ಪರಲೋಕದ ದೇವರಿಗೆ ನಾನು ಅಡ್ಡಬಿದ್ದು ಆರಾಧಿಸುವಾಗ ಏನು ಮಾಡಲಿ?
ನಾನು ಕರ್ತನ ಬಳಿಗೆ ಬರುವಾಗ ಸರ್ವಾಂಗಹೋಮದೊಡನೆ
ಒಂದು ವರ್ಷದ ಕರುವನ್ನು ತೆಗೆದುಕೊಂಡು ಬರಲೋ?
7 ದೇವರಾದ ಯೆಹೋವನು ಒಂದು ಸಾವಿರ ಟಗರು,
ಹತ್ತುಸಾವಿರ ಎಣ್ಣೆಯ ಹೊಳೆಗಳಲ್ಲಿ ಸಂತೋಷಿಸುವನೋ?
ನಾನು ಮಾಡಿದ ತಪ್ಪಿನ ಪರಿಹಾರಕ್ಕಾಗಿ ನನ್ನ ಚೊಚ್ಚಲ ಮಗನನ್ನು ಸಮರ್ಪಿಸಲೋ?
ನನ್ನ ಶರೀರದಿಂದ ಬಂದ ಮಗನನ್ನು ನನ್ನ ಪಾಪಗಳಿಗಾಗಿ ಸಮರ್ಪಿಸಲೋ?
8 ಮನುಷ್ಯನೇ, ಒಳ್ಳೆಯದು ಏನೆಂದು ಯೆಹೋವನು ನಿನಗೆ ತಿಳಿಸಿದ್ದಾನೆ.
ಯೆಹೋವನು ನಿನ್ನಿಂದ ಅಪೇಕ್ಷಿಸುವದೇನೆಂದರೆ,
ಇತರರಿಗೆ ನೀನು ಅನ್ಯಾಯ ಮಾಡದಿರು.
ದಯೆ ಮತ್ತು ನಂಬಿಗಸ್ತಿಕೆಗಳನ್ನು ಪ್ರೀತಿಸು.
ದೀನತೆಯಿಂದ ನಿನ್ನ ದೇವರಿಗೆ ವಿಧೇಯನಾಗಿರು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
31 ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32 ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.
33 ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.
34 “ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 35 ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ನೀವೂ ನನ್ನ ಶಿಷ್ಯರೆಂಬುದನ್ನು ಎಲ್ಲಾ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International