Revised Common Lectionary (Complementary)
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15 ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.
18 ಚೀಯೋನಿಗೆ ಕರುಣೆತೋರಿ
ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
ನಿನಗೆ ಸಂತೋಷವನ್ನು ಉಂಟು ಮಾಡುವರು.
ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.
58 “ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು. 59 ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ. 60 ನೀವು ಈಜಿಪ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು. 61 ಈ ಪುಸ್ತಕದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳೂ ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ. 62 ನೀವು ಆಕಾಶದ ನಕ್ಷತ್ರದಷ್ಟು ಅಸಂಖ್ಯಾತರಾಗಿದ್ದರೂ ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಕಿವಿಗೊಡಲಿಲ್ಲ.
63 “ಯೆಹೋವನು ನಿಮ್ಮ ಅಭಿವೃದ್ದಿಯಲ್ಲಿ ಸಂತೋಷಪಡುವಂತೆ ನಿಮ್ಮ ಅವನತಿಯಲ್ಲಿಯೂ ನಿಮ್ಮ ನಾಶನದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟ್ಟಿಬಿಡುವರು. 64 ಯೆಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆತನು ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲುಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಆ ಸುಳ್ಳುದೇವರುಗಳನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಎಂದೂ ಪೂಜಿಸಿರಲಿಲ್ಲ.
65 “ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯೆಹೋವನು ನಿಮಗೆ ಚಿಂತೆಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಣ್ಣುಗಳು ಆಯಾಸದಿಂದ ತುಂಬಿರುವವು; ನೀವು ಕಳವಳದಿಂದಿರುವಿರಿ. 66 ನೀವು ಹಗಲಿರುಳು ಭಯದಿಂದಿರುವಿರಿ ಮತ್ತು ಅಪಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಶ್ಚಯತ್ವವಿರುವುದಿಲ್ಲ. 67 ಮುಂಜಾನೆಯಲ್ಲಿ ನೀವು, ‘ಇದು ಸಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಾರೆ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ. 68 ಯೆಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಜಿಪ್ಟಿಗೆ ಕೊಂಡೊಯ್ಯುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೆನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಜಿಪ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವವರಿರುವುದಿಲ್ಲ.”
ಮೋವಾಬ್ಯರೊಂದಿಗೆ ಒಡಂಬಡಿಕೆ
29 ಇಸ್ರೇಲ್ ಜನಾಂಗದೊಂದಿಗೆ ಹೋರೇಬ್ ಬೆಟ್ಟದಲ್ಲಿ ಯೆಹೋವನು ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅಲ್ಲದೆ ಇಸ್ರೇಲರು ಮೋವಾಬ್ ಪ್ರಾಂತ್ಯದಲ್ಲಿದ್ದಾಗ ಯೆಹೋವನು ಮೋಶೆಗೆ ಅವರೊಡನೆ ಇನ್ನೊಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ಹೇಳಿದನು. ಅದು ಯಾವುದೆಂದರೆ:
17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.
20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.
23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.
26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’(A) ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
Kannada Holy Bible: Easy-to-Read Version. All rights reserved. © 1997 Bible League International