Revised Common Lectionary (Complementary)
ಯಾವಾಗಲೂ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿರಿ
6 “ನಿಮ್ಮದೇವರಾದ ಯೆಹೋವನು ನಿಮಗೆ ಉಪದೇಶಿಸಲೆಂದು ನನಗೆ ಕೊಟ್ಟ ಆಜ್ಞೆಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವುಗಳನ್ನು ಪಾಲಿಸಿರಿ. 2 ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ. 3 ಇಸ್ರೇಲಿನ ಜನರೇ, ಕಿವಿಗೊಟ್ಟು ಕೇಳಿರಿ. ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನಿಮಗೆ ಎಲ್ಲಾದರಲ್ಲಿ ಶುಭವಾಗುವುದು. ನಿಮಗೆ ಹೆಚ್ಚು ಮಕ್ಕಳಾಗುವವು. ನೀವು ನೆಲೆಸುವ ದೇಶವು ನಿಮ್ಮ ಪೂರ್ವಿಕರಿಗೆ ದೇವರು ವಾಗ್ದಾನ ಮಾಡಿದ ಪ್ರಕಾರ ಫಲಭರಿತವಾಗುವುದು.
4 “ಇಸ್ರೇಲಿನ ಜನರೇ, ಕಿವಿಗೊಡಿರಿ. ಯೆಹೋವನೇ ನಮ್ಮ ದೇವರು. ದೇವರು ಒಬ್ಬನೇ! 5 ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6 ನಾನೀಗ ಕೊಡುವ ಆಜ್ಞೆಗಳನ್ನು ಯಾವಾಗಲೂ ನಿಮ್ಮ ಜ್ಞಾಪದಲ್ಲಿಟ್ಟುಕೊಂಡಿರಿ. 7 ನಿಮ್ಮ ಮಕ್ಕಳಿಗೆ ಇದನ್ನು ಕಲಿಸಲು ಮರೆಯಬೇಡಿರಿ. ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ರಸ್ತೆಗಳಲ್ಲಿ ನಡೆಯುತ್ತಿರುವಾಗ, ನೀವು ಮಲಗಿರುವಾಗ, ಎದ್ದಾಗ ಈ ಆಜ್ಞೆಗಳ ಕುರಿತಾಗಿ ಮಾತಾಡಿಕೊಳ್ಳಿರಿ. 8 ಈ ಆಜ್ಞೆಗಳನ್ನು ಬರೆದು ನಿಮ್ಮ ಕೈಗಳಿಗೆ ಕಟ್ಟಿರಿ, ನಿಮ್ಮ ಹಣೆಗಳ ಮೇಲೆ ಕಟ್ಟಿರಿ. ಇವು ನನ್ನ ಬೋಧನೆಯ ವಿಚಾರವಾಗಿ ನಿಮಗೆ ಜ್ಞಾಪಕ ಹುಟ್ಟಿಸಲು ಸಹಾಯವಾಗುವುದು. 9 ಅವುಗಳನ್ನು ನಿಮ್ಮ ಬಾಗಿಲಿನ ಮೇಲೆಯೂ ನಿಲುವುಪಟ್ಟಿಗಳ ಮೇಲೆಯೂ ಬರೆಯಿರಿ.
119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
2 ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
ವಿಧೇಯರಾಗುವವರು ಧನ್ಯರು.
3 ಅವರು ಕೆಟ್ಟದ್ದನ್ನು ಮಾಡದೆ
ಆತನಿಗೆ ವಿಧೇಯರಾಗಿರುವರು.
4 ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
5 ನಿನ್ನ ಕಟ್ಟಳೆಗಳಿಗೆ
ನಾನು ಯಾವಾಗಲೂ ವಿಧೇಯನಾಗಿದ್ದರೆ,
6 ನಿನ್ನ ಆಜ್ಞೆಗಳನ್ನು ಕಲಿಯುವಾಗ
ನನಗೆ ನಾಚಿಕೆಯಾಗದು.
7 ನಾನು ನಿನ್ನ ನ್ಯಾಯವನ್ನೂ
ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
8 ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
ದಯವಿಟ್ಟು ನನ್ನನ್ನು ಕೈಬಿಡಬೇಡ!
ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ
11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.
13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.
ಅತ್ಯಂತ ಮುಖ್ಯ ಆಜ್ಞೆ ಯಾವುದು?
(ಮತ್ತಾಯ 22:34-40; ಲೂಕ 10:25-28)
28 ಈ ವಾದವಿವಾದವನ್ನು ಕೇಳುತ್ತಿದ್ದ ಧರ್ಮೋಪದೇಶಕರಲ್ಲಿ ಒಬ್ಬನು ಯೇಸು ಸದ್ದುಕಾಯರಿಗೆ ಹಾಗೂ ಫರಿಸಾಯರಿಗೆ ಒಳ್ಳೆಯ ಉತ್ತರ ಕೊಟ್ಟದ್ದನ್ನು ಗಮನಿಸಿ, ಆತನ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಅತ್ಯಂತ ಮುಖ್ಯವಾದ ಆಜ್ಞೆ ಯಾವುದು?” ಎಂದು ಕೇಳಿದನು.
29 ಅದಕ್ಕೆ ಯೇಸು, “ಇಸ್ರೇಲಿನ ಜನರೇ ಕೇಳಿರಿ, ‘ನಮ್ಮ ದೇವರಾದ ಪ್ರಭುವೊಬ್ಬನೇ ದೇವರು. 30 ನಿಮ್ಮ ದೇವರಾದ ಪ್ರಭುವನ್ನು ನೀವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.’(A) ಇದೇ ಅತ್ಯಂತ ಮುಖ್ಯವಾದ ಆಜ್ಞೆ. 31 ‘ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಯವರನ್ನು ಪ್ರೀತಿಸಬೇಕು’(B) ಎಂಬುದೇ ಅತ್ಯಂತ ಮುಖ್ಯವಾದ ಎರಡನೇ ಆಜ್ಞೆ. ಇವುಗಳೇ ಅತ್ಯಂತ ಮುಖ್ಯವಾದವು” ಎಂದು ಹೇಳಿದನು.
32 ಆಗ ಅವನು, “ಉಪದೇಶಕನೇ, ಅದು ಒಳ್ಳೆಯ ಉತ್ತರ. ನೀನು ಸರಿಯಾಗಿ ಹೇಳಿದೆ. ದೇವರೊಬ್ಬನೇ ಪ್ರಭು. 33 ಆತನಲ್ಲದೆ ಬೇರೆ ದೇವರಿಲ್ಲ. ದೇವರನ್ನು ಪೂರ್ಣಹೃದಯದಿಂದ, ಪೂರ್ಣಬುದ್ಧಿಯಿಂದ ಹಾಗೂ ಪೂರ್ಣಶಕ್ತಿಯಿಂದ ಪ್ರೀತಿಸಬೇಕು ಮತ್ತು ಒಬ್ಬ ವ್ಯಕ್ತಿಯು ತನ್ನನ್ನು ಪ್ರೀತಿಸುವಂತೆಯೇ ಇತರರನ್ನೂ ಪ್ರೀತಿಸಬೇಕು. ನಾವು ದೇವರಿಗೆ ಅರ್ಪಿಸುವ ಪಶುಯಜ್ಞಗಳಿಗಿಂತಲೂ ಈ ಆಜ್ಞೆಗಳು ಹೆಚ್ಚು ಮುಖ್ಯವಾಗಿವೆ” ಎಂದು ಉತ್ತರಿಸಿದನು.
34 ಅವನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿದ ಯೇಸು, “ನೀನು ದೇವರ ರಾಜ್ಯಕ್ಕೆ ಹತ್ತಿರವಾಗಿರುವೆ” ಎಂದನು. ಅಂದಿನಿಂದ, ಯೇಸುವಿಗೆ ಹೆಚ್ಚು ಪ್ರಶೆಗಳನ್ನು ಕೇಳಲು ಯಾರಿಗೂ ಸಾಕಷ್ಟು ಧೈರ್ಯ ಬರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International