Revised Common Lectionary (Complementary)
119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
2 ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
ವಿಧೇಯರಾಗುವವರು ಧನ್ಯರು.
3 ಅವರು ಕೆಟ್ಟದ್ದನ್ನು ಮಾಡದೆ
ಆತನಿಗೆ ವಿಧೇಯರಾಗಿರುವರು.
4 ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
5 ನಿನ್ನ ಕಟ್ಟಳೆಗಳಿಗೆ
ನಾನು ಯಾವಾಗಲೂ ವಿಧೇಯನಾಗಿದ್ದರೆ,
6 ನಿನ್ನ ಆಜ್ಞೆಗಳನ್ನು ಕಲಿಯುವಾಗ
ನನಗೆ ನಾಚಿಕೆಯಾಗದು.
7 ನಾನು ನಿನ್ನ ನ್ಯಾಯವನ್ನೂ
ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
8 ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
ದಯವಿಟ್ಟು ನನ್ನನ್ನು ಕೈಬಿಡಬೇಡ!
22 “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಅದನ್ನು ಕೊಯಿದರೆ ಅಥವಾ ಮಾರಿದರೆ, ಅವನು ತಾನು ಕದ್ದ ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನೂ ಅಥವಾ ತಾನು ಕದ್ದ ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನೂ ಕೊಡಬೇಕು. 2-4 ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ, ಅವನು ಗುಲಾಮನಾಗುವನು. ಆದರೆ ಆ ಕಳ್ಳನು ಪಶುವನ್ನು ಇನ್ನೂ ಇಟ್ಟುಕೊಂಡಿರುವುದು ನಿಮಗೆ ಗೊತ್ತಾದರೆ, ಅವನು ಕದ್ದ ಪಶುವಿಗೆ ಪ್ರತಿಯಾಗಿ ಎರಡು ಪಶುಗಳನ್ನು ಮಾಲೀಕನಿಗೆ ಕೊಡಿಸಬೇಕು. ಕದ್ದದ್ದು ಎತ್ತಾಗಿರಬಹುದು, ಕತ್ತೆಯಾಗಿರಬಹುದು ಅಥವಾ ಕುರಿಯಾಗಿರಬಹುದು.
“ಕಳ್ಳನು ರಾತ್ರಿಯಲ್ಲಿ ಮನೆಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಟ್ಟರೆ, ಅವನನ್ನು ಕೊಂದದ್ದಕ್ಕೆ ಯಾರೂ ತಪ್ಪಿತಸ್ಧರಾಗುವುದಿಲ್ಲ. ಆದರೆ ಇದು ಹಗಲಿನಲ್ಲಿ ನಡೆದರೆ ಕೊಂದವನು ಕೊಲೆಗಾರನಾಗುವನು.
5 “ಒಬ್ಬನು ತನ್ನ ಹೊಲದಲ್ಲಾಗಲಿ ದ್ರಾಕ್ಷಿತೋಟದಲ್ಲಾಗಲಿ ತನ್ನ ಪಶುವಿಗೆ ಮೇಯಲು ಬಿಡಬಹುದು. ಆದರೆ ಅದು ಅವನ ನೆರೆಯವನ ಹೊಲವನ್ನಾಗಲಿ, ದ್ರಾಕ್ಷಿತೋಟವನ್ನಾಗಲಿ ಹಾಳು ಮಾಡಿದರೆ, ಅವನು ತನ್ನ ನೆರೆಯವನಿಗೆ ಉಂಟಾದ ನಷ್ಟಕ್ಕೆ ಪ್ರತಿಯಾಗಿ ತನ್ನ ಉತ್ತಮ ಬೆಳೆಗಳನ್ನು ಕೊಡಬೇಕು.
6 “ಒಬ್ಬನು ತನ್ನ ಹೊಲದಲ್ಲಿರುವ ಮುಳ್ಳಿನ ಪೊದೆಗಳನ್ನು ಸುಟ್ಟುಹಾಕಲು ಬೆಂಕಿಯನ್ನು ಹೊತ್ತಿಸಬಹುದು. ಆದರೆ ಬೆಂಕಿಯು ಹೆಚ್ಚಾಗಿ ಅವನ ನೆರೆಯವನ ಬೆಳೆಯನ್ನಾಗಲಿ ಬೆಳೆಯುತ್ತಿರುವ ಧಾನ್ಯಗಳನ್ನಾಗಲಿ ಸುಟ್ಟುಹಾಕಿದರೆ ಬೆಂಕಿಯನ್ನು ಹೊತ್ತಿಸಿದವನು ತಾನು ಸುಟ್ಟುಹಾಕಿದ ವಸ್ತುಗಳಿಗೆ ಪ್ರತಿಯಾಗಿ ಈಡುಕೊಡಬೇಕು.
7 “ಒಬ್ಬನು ತನ್ನ ನೆರೆಯವನ ಮನೆಯಲ್ಲಿ ಸ್ವಲ್ಪ ಹಣವನ್ನಾಗಲಿ ವಸ್ತುಗಳನ್ನಾಗಲಿ ಇಟ್ಟಿದ್ದು, ಆ ಹಣವಾಗಲಿ ವಸ್ತುಗಳಾಗಲಿ ಕಳುವಾದರೆ ಕಳ್ಳನನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಬೇಕು. ನೀವು ಕಳ್ಳನನ್ನು ಕಂಡುಹಿಡಿದರೆ, ಆಗ ಅವನು ತಾನು ಕದ್ದವಸ್ತುಗಳ ಬೆಲೆಯ ಎರಡರಷ್ಟನ್ನು ಕೊಡಬೇಕು. 8 ಆದರೆ ನೀವು ಕಳ್ಳನನ್ನು ಕಂಡುಹಿಡಿಯಲಾಗದಿದ್ದರೆ, ಆ ಮನೆಯ ಮಾಲೀಕನು ತಪ್ಪಿತಸ್ಧನಾಗಿದ್ದಾನೋ ಇಲ್ಲವೋ ಎಂದು ದೇವರು[a] ನಿರ್ಣಯಿಸುವನು. ಮನೆಯ ಮಾಲೀಕನು ದೇವರ ಸನ್ನಿಧಿಗೆ ಹೋಗಬೇಕು. ಅವನು ಕದ್ದಿದ್ದಾನೋ ಇಲ್ಲವೋ ಎಂದು ದೇವರು ತೀರ್ಮಾನಿಸುವನು.
9 “ಕಳೆದುಹೋದ ಎತ್ತು, ಕತ್ತೆ, ಕುರಿ, ಬಟ್ಟೆಬರೆ, ಅಥವಾ ವಸ್ತುವಿನ ವಿಷಯದಲ್ಲಿ ಒಬ್ಬನು, ‘ಇದು ನನ್ನದು’ ಎಂದು ಹೇಳಿದರೆ ಮತ್ತು ಇನ್ನೊಬ್ಬನು, ‘ಇಲ್ಲ, ಇದು ನನ್ನದು’ ಎಂದು ಹೇಳಿದರೆ, ಇವರಿಬ್ಬರೂ ದೇವರ ಸನ್ನಿಧಿಗೆ ಹೋಗಬೇಕು. ತಪ್ಪಿತಸ್ಥನಾರೆಂದು ದೇವರು ತೀರ್ಮಾನಿಸುವನು. ತಪ್ಪಿತಸ್ಥನು ಇನ್ನೊಬ್ಬನಿಗೆ ಕಳೆದುಹೋದ ವಸ್ತುವಿನ ಬೆಲೆಯ ಎರಡರಷ್ಟನ್ನು ಕೊಡಬೇಕು.
10 “ಸ್ವಲ್ಪಕಾಲದವರೆಗೆ ತನ್ನ ಪಶುವನ್ನು ಪೋಷಿಸಬೇಕೆಂದು ತನ್ನ ನೆರೆಯವನನ್ನು ಕೇಳಿಕೊಳ್ಳಬಹುದು. ಈ ಪಶುವು ಕತ್ತೆಯಾಗಿರಬಹುದು, ಎತ್ತಾಗಿರಬಹುದು, ಕುರಿಯಾಗಿರಬಹುದು ಅಥವಾ ಯಾವುದೇ ಪಶುವಾಗಿರಬಹುದು. ಆದರೆ ಅದು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅಥವಾ ಕಳುವಾದರೆ, 11 ಆ ನೆರೆಯವನು ಆ ಪಶುವನ್ನು ಕದ್ದಿಲ್ಲದ್ದಿದ್ದರೆ ತಾನು ಕದ್ದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಬೇಕು. ಪಶುವಿನ ಮಾಲೀಕನು ಈ ಪ್ರಮಾಣವನ್ನು ಸ್ವೀಕರಿಸಬೇಕು. ನೆರೆಯವನು ಮಾಲೀಕನಿಗೆ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ. 12 ಆದರೆ ಪಶುವು ಕದಿಯಲ್ಪಟ್ಟಿದ್ದರೆ, ಅವನು ಅದಕ್ಕಾಗಿ ಈಡು ಕೊಡಬೇಕು. 13 ಕ್ರೂರಪ್ರಾಣಿಗಳು ಆ ಪಶುವನ್ನು ಕೊಂದುಹಾಕಿದ್ದರೆ, ನೆರೆಯವನು ಸತ್ತ ಪಶುವನ್ನು ಸಾಕ್ಷಿಯಾಗಿ ತರಬೇಕು. ನೆರೆಯವನು ಮಾಲೀಕನಿಗೆ ಸತ್ತ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ.
14 “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಸ್ವಲ್ಪಕಾಲಕ್ಕೆ ಸಾಲವಾಗಿ ತೆಗೆದುಕೊಂಡಿರುವಾಗ ಅದರ ಮಾಲೀಕನು ಅದರ ಸಮೀಪದಲ್ಲಿ ಇಲ್ಲದಿರುವ ಸಮಯದಲ್ಲಿ ಆ ಪಶುವಿಗೆ ಗಾಯವಾದರೆ ಅಥವಾ ಅದು ಸತ್ತುಹೋದರೆ, ಸಾಲ ತೆಗೆದುಕೊಂಡವನು ಆ ಪಶುವಿಗೆ ಈಡುಕೊಡಬೇಕು. 15 ಆದರೆ ಅದರ ಮಾಲೀಕನು ಪಶುವಿನೊಂದಿಗೆ ಅಲ್ಲಿದ್ದರೆ ಆಗ ನೆರೆಯವನು ಈಡುಕೊಡಬೇಕಾಗಿಲ್ಲ. ನೆರೆಯವನು ಪಶುವನ್ನು ಬಾಡಿಗೆಗೆ ತೆಗೆದುಕೊಂಡಿರುವಾಗ ಆ ಪಶು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅವನು ಈಡುಕೊಡಬೇಕಾಗಿಲ್ಲ. ಆ ಪಶುವನ್ನು ಉಪಯೋಗಿಸಲು ಅವನು ಕೊಟ್ಟ ಬಾಡಿಗೆಯೇ ಸಾಕು.
ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ
9 ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. 2 ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. 3 ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. 4 ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. 5 ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.
6 ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. 7 ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.
8 ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. 9 ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.
ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ
11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International