Revised Common Lectionary (Complementary)
17 ನಿನ್ನ ಸೇವಕನಾದ ನನಗೆ ದಯೆತೋರು.
ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
18 ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ;
ನೀನು ಮಾಡಿದ ಅದ್ಭುತಕಾರ್ಯಗಳ ಕುರಿತು ಓದುವೆ.
19 ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ.
ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು
ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ.
21 ನೀನು ಗರ್ವಿಷ್ಠರನ್ನು ಖಂಡಿಸುವೆ.
ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ.
22 ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ.
ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ.
23 ನಾಯಕರುಗಳು ಸಹ ನನ್ನನ್ನು ದೂಷಿಸಿದರು.
ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ.
24 ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ.
ಅದು ನನಗೆ ಬುದ್ಧಿಮಾತನ್ನು ಹೇಳಿಕೊಡುವುದು.
ಅರಾಮ್ಯರ ರಾಜನು ಇಸ್ರೇಲಿನ ರಾಜನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದನು
8 ಅರಾಮ್ಯರ ರಾಜನು ಇಸ್ರೇಲಿನ ವಿರುದ್ಧ ಯುದ್ಧಮಾಡಲು ಬಂದನು. ಅವನು ತನ್ನ ಸೇನಾಧಿಕಾರಿಗಳ ಸಭೆಸೇರಿಸಿ, “ನೀವು ಈ ಜಾಗದಲ್ಲಿ ಅಡಗಿಕೊಂಡಿದ್ದು, ಇಸ್ರೇಲರು ಇಲ್ಲಿಗೆ ಬಂದಾಗ ಅವರ ಮೇಲೆ ಆಕ್ರಮಣ ಮಾಡಿ” ಎಂದು ಹೇಳಿದನು.
9 ಆದರೆ ದೇವಮನುಷ್ಯನು (ಎಲೀಷನು) ಇಸ್ರೇಲಿನ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿ, “ನೀವು ಜಾಗರೂಕರಾಗಿರಿ! ನೀವು ಆ ಜಾಗದಲ್ಲಿ ತಿರುಗಾಡದಿರಿ! ಅರಾಮ್ಯರ ಸೈನಿಕರು ಅಲ್ಲಿ ಅಡಗಿದ್ದಾರೆ!” ಎಂದು ಹೇಳಿದನು.
10 ಇಸ್ರೇಲಿನ ರಾಜನು ತನ್ನ ಜನರಿಗೆ ಸಂದೇಶವೊಂದನ್ನು ಕಳುಹಿಸಿ, ದೇವಮನುಷ್ಯನು ಎಚ್ಚರವಾಗಿರಲು ತಿಳಿಸಿದ ಸ್ಥಳದಲ್ಲಿ ತಿರುಗಾಡದಿರುವಂತೆ ಸೂಚಿಸಿ ಕೆಲವು ಜನರನ್ನು[a] ರಕ್ಷಿಸಿದನು.
11 ಅರಾಮ್ಯರ ರಾಜನು ಇದರಿಂದ ಬಹಳ ತಳಮಳಗೊಂಡನು. ಅರಾಮ್ಯರ ರಾಜನು ತನ್ನ ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಇಸ್ರೇಲಿನ ರಾಜನಿಗಾಗಿ ಗೂಢಚರ್ಯ ನಡೆಸುತ್ತಿರುವವರು ಯಾರೆಂಬುದನ್ನು ಹೇಳಿ?” ಎಂದು ಕೇಳಿದನು.
12 ಅರಾಮ್ಯರ ರಾಜನ ಅಧಿಕಾರಿಗಳಲ್ಲೊಬ್ಬನು, “ನನ್ನ ಒಡೆಯನೇ, ರಾಜನೇ, ನಮ್ಮಲ್ಲಿ ಯಾರೊಬ್ಬರೂ ಗೂಢಚಾರರಲ್ಲ. ಇಸ್ರೇಲಿನ ಪ್ರವಾದಿಯಾದ ಎಲೀಷನು ಅನೇಕ ರಹಸ್ಯ ಸಂಗತಿಗಳನ್ನು ಅಂದರೆ ನೀವು ನಿಮ್ಮ ಮಲಗುವ ಕೊಠಡಿಯಲ್ಲಿ ಮಾತನಾಡುವುದನ್ನೂ ಸಹ ಇಸ್ರೇಲಿನ ರಾಜನಿಗೆ ತಿಳಿಸಬಲ್ಲವನಾಗಿದ್ದಾನೆ!” ಎಂದು ಹೇಳಿದನು.
13 ಅರಾಮ್ಯರ ರಾಜನು, “ಎಲೀಷನನ್ನು ಕಂಡುಹಿಡಿಯಿರಿ. ಅವನನ್ನು ಸೆರೆಹಿಡಿಯಲು ನಾನು ಸೈನಿಕರನ್ನು ಕಳುಹಿಸುತ್ತೇನೆ” ಎಂದನು.
ಸೇವಕರು ಅರಾಮ್ಯರ ರಾಜನಿಗೆ, “ಎಲೀಷನು ದೋತಾನಿನಲ್ಲಿದ್ದಾನೆ” ಎಂದು ಹೇಳಿದರು.
14 ಆಗ ಅರಾಮ್ಯರ ರಾಜನು ಕುದುರೆಗಳನ್ನು, ರಥಗಳನ್ನು ಮತ್ತು ದೊಡ್ಡ ಸೇನೆಯನ್ನು ದೋತಾನಿಗೆ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ನಗರವನ್ನು ಸುತ್ತುವರಿದರು. 15 ಎಲೀಷನ ಸೇವಕನು ಹೊತ್ತಾರೆ ನಸುಕಿನಲ್ಲಿಯೇ ಮೇಲಕ್ಕೆದ್ದನು. ಸೇವಕನು ಹೊರಕ್ಕೆ ಹೋದಾಗ ರಥಗಳಿಂದ ಮತ್ತು ಕುದುರೆಗಳಿಂದ ಕೂಡಿದ ಸೈನ್ಯವು ನಗರವನ್ನು ಸುತ್ತುವರಿದಿರುವುದನ್ನು ನೋಡಿದನು!
ಆ ಸೇವಕನು ಎಲೀಷನಿಗೆ, “ಅಯ್ಯೋ, ನನ್ನ ಒಡೆಯನೇ, ನಾವು ಈಗ ಏನು ಮಾಡೋಣ?” ಎಂದು ಕೇಳಿದನು.
16 ಎಲೀಷನು, “ನೀನು ಹೆದರದಿರು! ನಮಗಾಗಿ ಯುದ್ಧಮಾಡುವ ಸೇನೆಯು ಅರಾಮ್ಯರಿಗಾಗಿ ಯುದ್ಧಮಾಡುವ ಸೇನೆಗಿಂತ ಬಹಳ ಹೆಚ್ಚಿನದಾಗಿದೆ!” ಎಂದು ಹೇಳಿದನು.
17 ನಂತರ ಎಲೀಷನು ಪ್ರಾರ್ಥಿಸುತ್ತಾ, “ಯೆಹೋವನೇ, ನನ್ನ ಸೇವಕನ ಕಣ್ಣುಗಳನ್ನು ತೆರೆದು ಅವನು ನೋಡುವಂತೆ ಮಾಡೆಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು.
ಯೆಹೋವನು ಸೇವಕನ ಕಣ್ಣುಗಳನ್ನು ತೆರೆದನು. ಆ ಸೇವಕನು ಪರ್ವತವನ್ನು ತುಂಬಿರುವ ಬೆಂಕಿಯಂತಿರುವ ಕುದುರೆಗಳನ್ನು ಮತ್ತು ರಥಗಳನ್ನು ನೋಡಿದನು. ಅವರೆಲ್ಲ ಎಲೀಷನ ಸುತ್ತಲೂ ಇದ್ದರು!
18 ಆ ಬೆಂಕಿಯಂತಿರುವ ಕುದುರೆಗಳು ಮತ್ತು ರಥಗಳು ಎಲೀಷನ ಬಳಿಗೆ ಇಳಿದುಬಂದವು. ಎಲೀಷನು ಯೆಹೋವನನ್ನು ಪ್ರಾರ್ಥಿಸಿ, “ಈ ಜನರನ್ನು ಕುರುಡರನ್ನಾಗಿ ಮಾಡಬೇಕೆಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.
ಆಗ ಯೆಹೋವನು ಎಲೀಷನ ಪ್ರಾರ್ಥನೆಯಂತೆ ಅರಾಮ್ಯರ ಸೇನೆಯು ಕುರುಡರಾಗುವಂತೆ ಮಾಡಿದನು. 19 ಎಲೀಷನು ಅರಾಮ್ಯರ ಸೇನೆಗೆ, “ಇದು ಸರಿಯಾದ ಮಾರ್ಗವಲ್ಲ, ಇದು ಸರಿಯಾದ ನಗರವೂ ಅಲ್ಲ. ನನ್ನನ್ನು ಹಿಂಬಾಲಿಸಿ. ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ” ಎಂದು ಹೇಳಿದನು. ನಂತರ ಎಲೀಷನು ಅರಾಮ್ಯರ ಸೇನೆಯನ್ನು ಸಮಾರ್ಯಕ್ಕೆ ನಡೆಸಿಕೊಂಡು ಬಂದನು.
20 ಅವರು ಸಮಾರ್ಯಕ್ಕೆ ಬಂದು ಸೇರಿದಾಗ ಎಲೀಷನು, “ಯೆಹೋವನೇ, ಈ ಜನರ ಕಣ್ಣುಗಳನ್ನು ತೆರೆದುಬಿಡು, ಅವರು ನೋಡಲಿ” ಎಂದು ಹೇಳಿದನು.
ಆಗ ಯೆಹೋವನು ಅವರ ಕಣ್ಣುಗಳನ್ನು ತೆರೆದನು. ಅರಾಮ್ಯರ ಸೇನೆಗೆ ತಾವು ಸಮಾರ್ಯ ನಗರದಲ್ಲಿರುವುದು ತಿಳಿದುಬಂತು! 21 ಅರಾಮ್ಯರ ಸೇನೆಯನ್ನು ಇಸ್ರೇಲಿನ ರಾಜನು ನೋಡಿ ಎಲೀಷನಿಗೆ, “ನನ್ನ ತಂದೆಯೇ, ನಾನು ಅವರನ್ನು ಕೊಲ್ಲಲೇ? ಅವರನ್ನು ಕೊಂದುಹಾಕಿಬಿಡಲೇ?” ಎಂದು ಕೇಳಿದನು.
22 ಎಲೀಷನು, “ಬೇಡ, ಅವರನ್ನು ಕೊಲ್ಲಬೇಡ. ನೀನು ಯುದ್ಧದಲ್ಲಿ, ನಿನ್ನ ಖಡ್ಗದಿಂದ, ನಿನ್ನ ಬಿಲ್ಲುಬಾಣಗಳಿಂದ ಸೆರೆಹಿಡಿದ ಜನರನ್ನು ಕೊಲ್ಲಬಾರದು, ಅರಾಮ್ಯರ ಸೇನೆಗೆ ಸ್ವಲ್ಪ ನೀರನ್ನು ಮತ್ತು ರೊಟ್ಟಿಗಳನ್ನು ಕೊಡು. ಅವರು ತಿಂದು, ನೀರು ಕುಡಿಯಲಿ. ನಂತರ ಅವರು ತಮ್ಮ ಮನೆಗೆ, ಅವರ ಒಡೆಯನ ಬಳಿಗೆ ಹೋಗಲಿ” ಎಂದು ಉತ್ತರಿಸಿದನು.
23 ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ಆಹಾರವನ್ನು ಹೇರಳವಾಗಿ ಸಿದ್ಧಪಡಿಸಿದನು. ಅರಾಮ್ಯರ ಸೇನೆಯು ಊಟಮಾಡಿ, ನೀರನ್ನು ಕುಡಿದರು. ನಂತರ ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ತಮ್ಮ ಒಡೆಯನ ಬಳಿಗೆ ಹೋಗಲು ಆಜ್ಞಾಪಿಸಿದನು. ಅಂದಿನಿಂದ ಇಸ್ರೇಲ್ ದೇಶದ ಮೇಲೆ ಧಾಳಿಮಾಡಲು ಯಾವ ಸೈನಿಕರನ್ನೂ ಅರಾಮ್ಯರು ಕಳುಹಿಸಲಿಲ್ಲ.
ಲುದ್ದ ಮತ್ತು ಜೊಪ್ಪದಲ್ಲಿ ಪೇತ್ರನು
32 ಜೆರುಸಲೇಮಿನ ಸುತ್ತಮುತ್ತಲ್ಲಿದ್ದ ಊರುಗಳಲ್ಲೆಲ್ಲಾ ಪೇತ್ರನು ಪ್ರಯಾಣ ಮಾಡುತ್ತಿರುವಾಗ ಲುದ್ದ ಎಂಬ ಊರಲ್ಲಿ ವಾಸವಾಗಿರುವ ವಿಶ್ವಾಸಿಗಳನ್ನು ಭೇಟಿಯಾಗಲು ಅಲ್ಲಿಗೆ ಹೋದನು. 33 ಅವನು ಲುದ್ದದಲ್ಲಿ ಐನೇಯಾ ಎಂಬವನನ್ನು ಕಂಡನು. ಪಾರ್ಶ್ವವಾಯು ರೋಗಿಯಾಗಿದ್ದ ಅವನು ಎಂಟು ವರ್ಷಗಳಿಂದ ಹಾಸಿಗೆ ಮೇಲಿದ್ದನು. 34 ಪೇತ್ರನು ಅವನಿಗೆ, “ಐನೇಯಾ, ಯೇಸು ಕ್ರಿಸ್ತನು ನಿನ್ನನ್ನು ಗುಣಪಡಿಸುತ್ತಾನೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು!” ಎಂದು ಹೇಳಿದನು. ಆ ಕೂಡಲೇ ಐನೇಯನು ಎದ್ದುನಿಂತನು. 35 ಲುದ್ದದಲ್ಲಿ ಮತ್ತು ಸಾರೋನಿನ ಬಯಲಿನಲ್ಲಿ ವಾಸವಾಗಿದ್ದ ಜನರೆಲ್ಲರು ಅವನನ್ನು ಕಂಡು ಪ್ರಭು ಯೇಸುವಿನಲ್ಲಿ ನಂಬಿಕೆ ಇಟ್ಟರು.
Kannada Holy Bible: Easy-to-Read Version. All rights reserved. © 1997 Bible League International