Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:17-24

17 ನಿನ್ನ ಸೇವಕನಾದ ನನಗೆ ದಯೆತೋರು.
    ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
18 ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ;
    ನೀನು ಮಾಡಿದ ಅದ್ಭುತಕಾರ್ಯಗಳ ಕುರಿತು ಓದುವೆ.
19 ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ.
    ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು
    ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ.
21 ನೀನು ಗರ್ವಿಷ್ಠರನ್ನು ಖಂಡಿಸುವೆ.
    ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ.
22 ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ.
    ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ.
23 ನಾಯಕರುಗಳು ಸಹ ನನ್ನನ್ನು ದೂಷಿಸಿದರು.
    ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ.
24 ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ.
    ಅದು ನನಗೆ ಬುದ್ಧಿಮಾತನ್ನು ಹೇಳಿಕೊಡುವುದು.

ವಿಮೋಚನಕಾಂಡ 4:1-17

ಮೋಶೆಗೆ ಸಾಕ್ಷಿ

ಆಗ ಮೋಶೆಯು ಯೆಹೋವನಿಗೆ, “ಆದರೆ ನೀನು ನನ್ನನ್ನು ಕಳುಹಿಸಿರುವೆ ಎಂದು ಇಸ್ರೇಲರು ನಂಬುವುದೂ ಇಲ್ಲ; ಕೇಳುವುದೂ ಇಲ್ಲ. ಅವರು, ‘ಯೆಹೋವನು ನಿನಗೆ ಪ್ರತ್ಯಕ್ಷನಾಗಲಿಲ್ಲ’ ಎಂದು ಹೇಳುವರು” ಎಂದು ಹೇಳಿದನು.

ಯೆಹೋವನು ಮೋಶೆಗೆ, “ನಿನ್ನ ಕೈಯಲ್ಲಿರುವುದೇನು?” ಅಂದನು.

ಮೋಶೆ, “ಊರುಗೋಲು” ಎಂದು ಉತ್ತರಿಸಿದನು.

ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು.

ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು. ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿದುಕೊ” ಎಂದು ಹೇಳಿದನು.

ಮೋಶೆಯು ಕೈಚಾಚಿ ಹಾವಿನ ಬಾಲವನ್ನು ಹಿಡಿದನು. ಆಗ ಹಾವು ಕೋಲಾಯಿತು. ಆಗ ದೇವರು, “ನಿನ್ನ ಕೋಲನ್ನು ಈ ರೀತಿಯಲ್ಲಿ ಉಪಯೋಗಿಸು. ನಿನ್ನ ಪೂರ್ವಿಕರ, ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರು ನಿನಗೆ ಪ್ರತ್ಯಕ್ಷನಾದನೆಂದು ಆಗ ಅವರು ನಂಬುವರು” ಎಂದು ಹೇಳಿದನು.

ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಇನ್ನೊಂದು ಸಾಕ್ಷಿಯನ್ನು ಕೊಡುತ್ತೇನೆ. ನಿನ್ನ ಕೈಯನ್ನು ಉಡಿಯಲ್ಲಿ ಹಾಕು” ಅಂದನು.

ಮೋಶೆ ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದಕ್ಕೆ ತೊನ್ನು ಹಿಡಿದಿತ್ತು.

ಆಗ ದೇವರು, “ನಿನ್ನ ಕೈಯನ್ನು ತಿರಿಗಿ ಉಡಿಯಲ್ಲಿ ಹಾಕು” ಅಂದನು. ಅಂತೆಯೇ ಮೋಶೆಯು ತನ್ನ ಕೈಯನ್ನು ಮತ್ತೆ ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದು ಮೊದಲಿನಂತೆ ಆಗಿತ್ತು.

ಆಗ ಯೆಹೋವನು ಅವನಿಗೆ, “ನೀನು ನಿನ್ನ ಊರುಗೋಲಿನಿಂದ ಸೂಚಕಕಾರ್ಯ ಮಾಡುವಾಗ ಜನರು ನಿನ್ನನ್ನು ನಂಬುವರು; ನಿನ್ನ ಮಾತಿಗೆ ಲಕ್ಷ್ಯಕೊಡುವರು. ನೀನು ಈ ಎರಡು ಸೂಚಕಕಾರ್ಯಗಳನ್ನು ತೋರಿಸಿದ ನಂತರವೂ ಅವರು ನಂಬದಿದ್ದರೆ, ನೈಲ್ ನದಿಯಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ನೆಲದ ಮೇಲೆ ಸುರಿ; ನೀರು ನೆಲವನ್ನು ಮುಟ್ಟಿದ ಕೊಡಲೇ ರಕ್ತವಾಗುವುದು” ಎಂದು ಹೇಳಿದನು.

10 ಮೋಶೆಯು ಯೆಹೋವನಿಗೆ, “ಸ್ವಾಮೀ, ನಾನು ನಿನಗೆ ಸತ್ಯವಾಗಿ ಹೇಳುವುದೇನೆಂದರೆ ನನಗೆ ವಾಕ್ಚಾತುರ್ಯವಿಲ್ಲ. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.

11 ಆಗ ಯೆಹೋವನು ಅವನಿಗೆ, “ಮನುಷ್ಯನ ಬಾಯನ್ನು ಯಾರು ಮಾಡಿದರು? ಮನುಷ್ಯನನ್ನು ಕಿವುಡನನ್ನಾಗಿ ಅಥವಾ ಮೂಕನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನನ್ನು ಕುರುಡನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನಿಗೆ ದೃಷ್ಟಿಕೊಟ್ಟವನು ಯಾರು? ಯೆಹೋವನಾದ ನಾನಲ್ಲವೇ. 12 ಈಗ ಹೋಗು. ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು. ನೀನು ಹೇಳಬೇಕಾದ ಮಾತುಗಳನ್ನು ನಾನು ನಿನಗೆ ಕೊಡುವೆನು” ಎಂದು ಹೇಳಿದನು.

13 ಆದರೆ ಮೋಶೆ, “ನನ್ನ ಯೆಹೋವನೇ, ದಯಮಾಡಿ ನನ್ನ ಬದಲಾಗಿ ಬೇರೊಬ್ಬನನ್ನು ಕಳುಹಿಸು” ಎಂದು ಬೇಡಿಕೊಂಡನು.

14 ಯೆಹೋವನು ಮೋಶೆಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಣ್ಣನಾದ ಲೇವಿ ಕುಟುಂಬದ ಆರೋನನನ್ನು ನಾನು ಉಪಯೋಗಿಸುವೆನು. ಅವನಿಗೆ ವಾಕ್ಚಾತುರ್ಯವಿದೆ. ಈಗ ಅವನು ನಿನ್ನ ಬಳಿಗೆ ಬರುತ್ತಿದ್ದಾನೆ. ನಿನ್ನನ್ನು ಕಂಡು ಅವನಿಗೆ ಸಂತೋಷವಾಗುವುದು. 15 ಅವನು ನಿನ್ನೊಡನೆ ಫರೋಹನ ಬಳಿಗೆ ಬರುವನು. ನೀನು ಹೇಳಬೇಕಾದದ್ದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಫರೋಹನೊಡನೆ ಸರಿಯಾಗಿ ಮಾತಾಡುವನು. 16 ಆರೋನನು ಜನರೊಂದಿಗೂ ನಿನ್ನ ಪರವಾಗಿಯೂ ಮಾತಾಡುವನು. ನೀನು ಮಹಾರಾಜನಂತೆ ಇರುವೆ; ಅವನು ನಿನಗೆ ಅಧಿಕೃತ ಮಾತುಗಾರನಂತೆ ಇರುವನು.[a] 17 ಆದ್ದರಿಂದ ಹೋಗು. ನಿನ್ನ ಊರುಗೋಲನ್ನೂ ತೆಗೆದುಕೊಂಡು ಹೋಗು. ಯಾಕೆಂದರೆ ಅದರಿಂದಲೇ ನೀನು ಅದ್ಭುತಕಾರ್ಯಗಳನ್ನು ಮಾಡುವೆ” ಎಂದು ಹೇಳಿದನು.

1 ಪೇತ್ರನು 2:1-10

ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ

ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ. ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.

ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
    ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)

ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:

“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
    ಮೂಲೆಗಲ್ಲಾಯಿತು.”(B)

ನಂಬದಿರುವ ಜನರಿಗೆ ಆತನು:

“ಜನರನ್ನು ಮುಗ್ಗರಿಸುವ ಕಲ್ಲೂ
    ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)

ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.

ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.

10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
    ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
    ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International