Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
ಶೆಮಾಯನಿಗೆ ದೇವರ ಸಂದೇಶ
24 (ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು.) ನೀನು ನೆಹೆಲಾಮ್ಯನಾದ ಶೆಮಾಯನಿಗೆ ಕೂಡ ಒಂದು ಸಂದೇಶವನ್ನು ಕೊಡು. 25 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: “ಶೆಮಾಯನೇ, ಜೆರುಸಲೇಮಿನಲ್ಲಿರುವ ಎಲ್ಲಾ ಜನರಿಗೆ ನೀನು ಪತ್ರವನ್ನು ಕಳುಹಿಸಿದೆ. ನೀನು ಮಾಸೇಯನ ಮಗನಾಗಿರುವ ಯಾಜಕನಾದ ಚೆಫನ್ಯನಿಗೂ ಮತ್ತು ಎಲ್ಲಾ ಯಾಜಕರಿಗೂ ಪತ್ರಗಳನ್ನು ಕಳುಹಿಸಿದೆ. ಆ ಪತ್ರಗಳನ್ನು ಯೆಹೋವನ ಆದೇಶದ ಪ್ರಕಾರ ಕಳುಹಿಸದೆ, ನಿನ್ನ ಹೆಸರಿನಿಂದ ಕಳುಹಿಸಿದೆ. 26 ಶೆಮಾಯನೇ, ನೀನು ಚೆಫನ್ಯನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿರುವೆ: ‘ಚೆಫನ್ಯನೇ, ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿದ್ದಾನೆ. ನೀನು ಯೆಹೋವನ ಆಲಯದ ಮೇಲ್ವಿಚಾರಕನಾಗಿರುವೆ. ಹುಚ್ಚನಂತೆ ವರ್ತಿಸುವ ಮತ್ತು ಪ್ರವಾದಿಯಂತೆ ನಟಿಸುವ ವ್ಯಕ್ತಿಯನ್ನು ನೀನು ಬಂಧಿಸಬೇಕು, ಅವನಿಗೆ ಕೋಳಹಾಕಿ ಕೊರಳಿಗೆ ಕಬ್ಬಿಣದ ಕಂಠಪಟ್ಟಿಯನ್ನು ಹಾಕಬೇಕು. 27 ಈಗ ಯೆರೆಮೀಯನು ಪ್ರವಾದಿಯಂತೆ ನಟಿಸುತ್ತಿದ್ದಾನೆ. ನೀನು ಅವನನ್ನು ಏಕೆ ಬಂಧಿಸಲಿಲ್ಲ? 28 ಯೆರೆಮೀಯನು ಬಾಬಿಲೋನಿನಲ್ಲಿದ್ದ ನಮಗೆ ಈ ಸಂದೇಶವನ್ನು ಕಳುಹಿಸಿದ್ದಾನೆ: ಬಾಬಿಲೋನಿನಲ್ಲಿರುವ ನೀವು ಅಲ್ಲಿ ಬಹಳ ಕಾಲದವರೆಗೆ ಇರುವಿರಿ. ಆದ್ದರಿಂದ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ನೆಲೆಸಿರಿ; ತೋಟಗಳನ್ನು ಬೆಳೆಸಿರಿ; ಮತ್ತು ನೀವು ಬೆಳೆದದ್ದನ್ನು ಆಹಾರವನ್ನಾಗಿ ಬಳಸಿರಿ.’”
29 ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು. 30 ಆಗ ಯೆರೆಮೀಯನಿಗೆ ಯೆಹೋವನ ಸಂದೇಶವು ಬಂದಿತು. 31 “ಯೆರೆಮೀಯನೇ, ಬಾಬಿಲೋನಿನಲ್ಲಿರುವ ಎಲ್ಲಾ ಬಂಧಿಗಳಿಗೆ ಈ ಸಂದೇಶವನ್ನು ಕಳುಹಿಸು, ‘ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಹೀಗೆನ್ನುವನು: ಶೆಮಾಯನು ನಿಮಗೆ ಪ್ರವಾದನೆ ಮಾಡಿದ್ದಾನೆ. ಆದರೆ ನಾನು ಅವನನ್ನು ಕಳುಹಿಸಲಿಲ್ಲ. ನೀವು ಸುಳ್ಳನ್ನು ನಂಬುವಂತೆ ಅವನು ಮಾಡಿದ್ದಾನೆ. 32 ಆದ್ದರಿಂದ ಅವನನ್ನು ನಾನು ತಕ್ಷಣ ದಂಡಿಸುತ್ತೇನೆ. ನಾನು ಅವನ ಕುಟುಂಬವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ನಾನು ನನ್ನ ಜನರಿಗಾಗಿ ಮಾಡುವ ಒಳ್ಳೆಯವುಗಳಲ್ಲಿ ಅವನು ಪಾಲು ಹೊಂದುವುದಿಲ್ಲ.’” ಇದು ಯೆಹೋವನ ನುಡಿ. “‘ಶೆಮಾಯನು, ಜನರನ್ನು ಯೆಹೋವನಾದ ನನ್ನ ವಿರುದ್ಧ ತಿರುಗುವಂತೆ ಮಾಡಿದ್ದರಿಂದ ನಾನು ಅವನನ್ನು ದಂಡಿಸುವೆನು.’”
ಬೆತ್ಸಾಯಿದದಲ್ಲಿ ಕುರುಡನಿಗೆ ದೃಷ್ಟಿದಾನ
22 ಯೇಸು ಮತ್ತು ಆತನ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವು ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23 ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು.
24 ಆ ಕುರುಡನು ತಲೆಯೆತ್ತಿ ನೋಡಿ, “ಹೌದು, ನನಗೆ ಜನರು ಕಾಣುತ್ತಾರೆ. ಅವರು ಮರಗಳಂತೆ ಕಂಡರೂ ನಡೆದಾಡುತ್ತಿದ್ದಾರೆ” ಎಂದು ಹೇಳಿದನು.
25 ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು.
Kannada Holy Bible: Easy-to-Read Version. All rights reserved. © 1997 Bible League International