Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
12 ಆಗ ಯೆರೆಮೀಯನು ಯೆಹೂದದ ಸಕಲ ಸರದಾರರಿಗೂ ಸಮಸ್ತ ಜನರಿಗೂ ಹೀಗೆ ಹೇಳಿದನು: “ಈ ಆಲಯದ ಬಗ್ಗೆ ಮತ್ತು ಈ ನಗರದ ಬಗ್ಗೆ ಹೀಗೆ ಹೇಳಲು ಯೆಹೋವನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ನೀವು ಕೇಳಿದ ಪ್ರತಿಯೊಂದು ವಿಷಯವೂ ಯೆಹೋವನಿಂದಲೇ ಬಂದದ್ದು. 13 ನೀವು ನಿಮ್ಮ ನಡತೆಯನ್ನು ಬದಲಾಯಿಸಿಕೊಂಡು, ಸತ್ಕಾರ್ಯಗಳನ್ನು ಮಾಡಲಾರಂಭಿಸಬೇಕು. ನೀವು ನಿಮ್ಮ ದೇವರಾದ ಯೆಹೋವನ ಆಜ್ಞಾಪಾಲನೆ ಮಾಡಬೇಕು. ಆಗ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ ನಿಮಗೆ ಕೇಡುಮಾಡುವುದಿಲ್ಲ. 14 ನಾನಂತೂ ನಿಮ್ಮ ಅಧಿನದಲ್ಲಿದ್ದೇನೆ. ನಿಮಗೆ ಒಳ್ಳೆಯದಾಗಿಯೂ ನ್ಯಾಯವಾಗಿಯೂ ತೋರಿದ್ದನ್ನು ಮಾಡಿರಿ. 15 ಆದರೆ ನೀವು ನನ್ನನ್ನು ಕೊಂದರೆ ಒಬ್ಬ ನಿರಪರಾಧಿಯನ್ನು ಕೊಂದದೋಷಕ್ಕೆ ಗುರಿಯಾಗುವಿರೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿರಿ. ನೀವು ಈ ನಗರವನ್ನೂ ಇದರ ಪ್ರತಿಯೊಬ್ಬ ನಿವಾಸಿಯನ್ನೂ ಸಹ ದೋಷಿಗಳನ್ನಾಗಿ ಮಾಡುವಿರಿ. ನಿಜವಾಗಿಯೂ, ಯೆಹೋವನು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾನೆ. ನೀವು ಕೇಳಿದ ಸಂದೇಶವು ನಿಜವಾಗಿಯೂ ಯೆಹೋವನಿಂದ ಬಂದದ್ದು.”
16 ಆಗ ಸರದಾರರು ಮತ್ತು ಸಮಸ್ತ ಜನರು ಒಬ್ಬರಿಗೊಬ್ಬರು ಮಾತನಾಡಿ ಯಾಜಕರಿಗೂ ಪ್ರವಾದಿಗಳಿಗೂ, “ಯೆರೆಮೀಯನನ್ನು ಕೊಲ್ಲಕೂಡದು. ಯೆರೆಮೀಯನು ನಮಗೆ ಹೇಳಿದ ಸಂಗತಿಗಳು ನಮ್ಮ ದೇವರಾದ ಯೆಹೋವನಿಂದ ಬಂದವುಗಳಾಗಿವೆ” ಎಂದು ಹೇಳಿದರು.
17 ಆಗ ಹಿರಿಯ ನಾಯಕರಲ್ಲಿ ಕೆಲವರು ಎದ್ದುನಿಂತು ಎಲ್ಲಾ ಜನರನ್ನುದ್ದೇಶಿಸಿ 18 ಹೀಗೆ ಹೇಳಿದರು, “ಪ್ರವಾದಿಯಾದ ಮೀಕಾಯನು ಮೋರೆಷೆತ್ ನಗರದವನಾಗಿದ್ದನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಕಾಲದಲ್ಲಿ ಮೀಕಾಯನು ಪ್ರವಾದಿಯಾಗಿದ್ದನು. ಯೆಹೂದದ ಸಮಸ್ತ ಜನರಿಗೆ ಮೀಕಾಯನು ಹೀಗೆ ಹೇಳಿದನು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
‘ಚೀಯೋನ್ ನಗರವು
ನೇಗಿಲುಹೊಡೆದ ಹೊಲವಾಗುವುದು.
ಜೆರುಸಲೇಮ್ ನಗರವು ಕಲ್ಲಿನ ದಿಬ್ಬವಾಗುವುದು.
ಪವಿತ್ರ ಆಲಯವಿದ್ದ ಪರ್ವತವು ಮರಗಿಡಗಳಿಂದ ಮುಚ್ಚಿಹೋಗುವುದು.’(A)
19 “ಹಿಜ್ಕೀಯನು ಯೆಹೂದದ ರಾಜನಾಗಿದ್ದನು. ಹಿಜ್ಕೀಯನು ಮೀಕಾಯನ ಕೊಲೆ ಮಾಡಲಿಲ್ಲ. ಯೆಹೂದದ ಯಾರೂ ಮೀಕಾಯನನ್ನು ಕೊಲೆಮಾಡಲಿಲ್ಲ. ಹಿಜ್ಕೀಯನು ಯೆಹೋವನನ್ನು ಗೌರವಿಸುತ್ತಿದ್ದನೆಂಬುದು ನಿಮಗೆ ಗೊತ್ತು. ಅವನು ಯೆಹೋವನನ್ನು ಸಂತೋಷಪಡಿಸಲು ಬಯಸಿದನು. ಯೆಹೂದಕ್ಕೆ ಕೇಡನ್ನು ತರುವೆನೆಂದು ಯೆಹೋವನು ಹೇಳಿದ್ದನು. ಆದರೆ ಹಿಜ್ಕೀಯನು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ ಕೇಡನ್ನು ಬರಮಾಡಲಿಲ್ಲ. ನಾವು ಯೆರೆಮೀಯನನ್ನು ಕೊಂದರೆ ಅನೇಕ ಕಷ್ಟಗಳನ್ನು ತಂದುಕೊಳ್ಳುವೆವು. ಆ ಕಷ್ಟಗಳಿಗೆ ನಮ್ಮ ತಪ್ಪೇ ಕಾರಣವಾಗುವುದು.”
20 ಮೊದಲು ಯೆಹೋವನ ಸಂದೇಶವನ್ನು ಪ್ರವಾದಿಸುವ ಇನ್ನೊಬ್ಬ ಮನುಷ್ಯನಿದ್ದನು. ಅವನ ಹೆಸರು ಊರೀಯ. ಅವನು ಶಮಾಯನ ಮಗ. ಊರೀಯನು ಕಿರ್ಯತ್‌ಯಾರೀಮ್ ಎಂಬ ಊರಿನವನು. ಈ ನಗರದ ಬಗ್ಗೆ ಮತ್ತು ಪ್ರದೇಶದ ಬಗ್ಗೆ ಯೆರೆಮೀಯನು ಪ್ರವಾದಿಸಿದ್ದನ್ನೇ ಊರೀಯನು ಪ್ರವಾದಿಸಿದ್ದನು. 21 ರಾಜನಾದ ಯೆಹೋಯಾಕೀಮನೂ ಅವನ ಸೇನೆಯ ಅಧಿಕಾರಿಗಳೂ ಯೆಹೂದದ ನಾಯಕರೂ ಊರೀಯನ ಪ್ರವಾದನೆಯನ್ನು ಕೇಳಿದರು. ಅವರಿಗೆ ಕೋಪಬಂದಿತು. ರಾಜನಾದ ಯೆಹೋಯಾಕೀಮನು ಊರೀಯನನ್ನು ಕೊಲ್ಲಬಯಸಿದನು. ಆದರೆ ಯೆಹೋಯಾಕೀಮನು ತನ್ನನ್ನು ಕೊಲ್ಲಬಯಸುತ್ತಾನೆಂದು ಊರೀಯನು ಕೇಳಿದನು. ಊರೀಯನು ಭಯಪಟ್ಟು ತಪ್ಪಿಸಿಕೊಂಡು ಈಜಿಪ್ಟ್ ದೇಶಕ್ಕೆ ಹೋದನು. 22 ಆದರೆ ರಾಜನಾದ ಯೆಹೋಯಾಕೀಮನು ಎಲ್ನಾತಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನು ಈಜಿಪ್ಟಿಗೆ ಕಳುಹಿಸಿದನು. ಎಲ್ನಾತಾನನು ಅಕ್ಬೋರನ ಮಗ. 23 ಅವರು ಊರೀಯನನ್ನು ಈಜಿಪ್ಟಿನಿಂದ ತಂದರು. ಅವರು ಊರೀಯನನ್ನು ರಾಜನಾದ ಯೆಹೋಯಾಕೀಮನ ಹತ್ತಿರ ತೆಗೆದುಕೊಂಡು ಹೋದರು. ಯೆಹೋಯಾಕೀಮನು ಕತ್ತಿಯಿಂದ ಊರೀಯನ ಕೊಲೆಮಾಡಬೇಕೆಂದು ಆಜ್ಞಾಪಿಸಿದನು. ಊರೀಯನ ದೇಹವನ್ನು ಬಡವರ ಸ್ಮಶಾನದಲ್ಲಿ ಎಸೆಯಲಾಯಿತು.
24 ಶಾಫಾನನ ಮಗನಾದ ಅಹೀಕಾಮನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಅಹೀಕಾಮನು ಯೆರೆಮೀಯನಿಗೆ ಬೆಂಬಲ ಕೊಟ್ಟನು; ಯಾಜಕರು ಮತ್ತು ಪ್ರವಾದಿಗಳು ಅವನನ್ನು ಕೊಲ್ಲದಂತೆ ಕಾಪಾಡಿದರು.
11 ಲೇವಿಕುಲದ ಯಾಜಕತ್ವದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ಜನರಿಗೆ ಕೊಡಲಾಯಿತು. ಆದರೆ ಆ ಯಾಜಕತ್ವದಿಂದ ಜನರನ್ನು ಆತ್ಮಿಕತೆಯಲ್ಲಿ ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೊಂದು ರೀತಿಯ ಯಾಜಕನು ಬರುವುದು ಅತ್ಯವಶ್ಯಕವಾಗಿತ್ತು. ಅಂದರೆ ಮೆಲ್ಕಿಜೆದೇಕನಂತಹ ಯಾಜಕನೇ ಹೊರತು ಆರೋನನಂತವನಲ್ಲ ಎಂಬುದು ಅದರ ಅರ್ಥ. 12 ಬೇರೊಬ್ಬ ಯಾಜಕನು ಬಂದರೆ, ಆಗ ಧರ್ಮಶಾಸ್ತ್ರವು ಬದಲಾಗಲೇಬೇಕು. 13 ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದವರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ. 14 ನಮ್ಮ ಪ್ರಭು (ಕ್ರಿಸ್ತನು) ಯೆಹೂದಕುಲದಿಂದ ಬಂದವನೆಂಬುದು ಸ್ಪಷ್ಟವಾಗಿದೆ. ಆ ಕುಲಕ್ಕೆ ಸೇರಿದ ಯಾಜಕರನ್ನು ಕುರಿತು ಮೋಶೆಯು ಏನನ್ನೂ ಹೇಳಲಿಲ್ಲ.
ಯೇಸು ಮೆಲ್ಕಿಜೆದೇಕನಂತಹ ಯಾಜಕನು
15 ಮೆಲ್ಕಿಜೆದೇಕನಂತಹ ಮತ್ತೊಬ್ಬ ಯಾಜಕನು (ಯೇಸು) ಬಂದಿರುವುದರಿಂದ ಇವು ಮತ್ತಷ್ಟು ಸ್ಪಷ್ಟವಾಗಿವೆ. 16 ಆತನು ಯಾಜಕನಾದದ್ದು ವಂಶಾನುಗತವಾಗಿ ಬಂದ ನಿಯಮಗಳ ಮತ್ತು ಶಾಸ್ತ್ರಗಳ ಪ್ರಕಾರವಲ್ಲ. ಆತನು ನಾಶವಾಗದ ತನ್ನ ಜೀವಶಕ್ತಿಯಿಂದ ಯಾಜಕನಾದನು. 17 ಪವಿತ್ರ ಗ್ರಂಥದಲ್ಲಿ ಆತನನ್ನು ಕುರಿತು ಹೀಗೆ ಹೇಳಿದೆ: “ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ ಯಾಜಕನಾಗಿರುವೆ.”(A)
18 ಹಳೆಯ ನಿಯಮವು ದುರ್ಬಲವೂ ನಿಷ್ಪ್ರಯೋಜಕವೂ ಆಗಿದ್ದರಿಂದ ರದ್ದಾಯಿತು. 19 ಮೋಶೆಯ ಧರ್ಮಶಾಸ್ತ್ರವು ಯಾವುದನ್ನೂ ಸಿದ್ಧಿಗೆ ತರಲಿಲ್ಲ. ಈಗ ನಮಗೆ ಉತ್ತಮವಾದ ಒಂದು ನಿರೀಕ್ಷೆಯನ್ನು ಕೊಡಲಾಗಿದೆ. ಈ ನಿರೀಕ್ಷೆಯು ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಬಲ್ಲದು.
20 ದೇವರು ಯೇಸುವನ್ನು ಪ್ರಧಾನಯಾಜಕನನ್ನಾಗಿ ಮಾಡಿದಾಗ, ಒಂದು ವಾಗ್ದಾನವನ್ನೂ ಮಾಡಿದನು. ಆದರೆ ಬೇರೆಯವರು ಯಾಜಕರಾದಾಗ ಆತನು ವಾಗ್ದಾನ ಮಾಡಲಿಲ್ಲ. 21 ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ:
“‘ನೀನು ಸದಾಕಾಲವೂ ಯಾಜಕನಾಗಿರುವೆ’
ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು.
ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.”(B)
22 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಶ್ರೇಷ್ಠವಾದ ಒಡಂಬಡಿಕೆಗೆ ಯೇಸುವೇ ಆಧಾರ ಎಂಬುದೇ ಇದರರ್ಥ.
Kannada Holy Bible: Easy-to-Read Version. All rights reserved. © 1997 Bible League International