Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 126

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
    ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
    “ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
    ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.

ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
    ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
ಅಳುತ್ತಾ ಬೀಜವನ್ನು ಬಿತ್ತುವವನು
    ಹರ್ಷದಿಂದ ಕೊಯ್ಯುವನು.
ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
    ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!

ಯೆರೆಮೀಯ 23:9-15

ಸುಳ್ಳುಪ್ರವಾದಿಗಳ ಬಗ್ಗೆ ನ್ಯಾಯನಿರ್ಣಯ

ಪ್ರವಾದಿಗಳಿಗೊಂದು ಸಂದೇಶ.
ನಾನು ಬಹಳ ದುಃಖಿತನಾಗಿದ್ದೇನೆ. ನನ್ನ ಹೃದಯ ಒಡೆದುಹೋಗಿದೆ.
    ನನ್ನ ಎಲುಬುಗಳೆಲ್ಲಾ ನಡುಗುತ್ತಿವೆ.
ನಾನು ಅಮಲೇರಿದವನಂತಿದ್ದೇನೆ.
    ಯೆಹೋವನೂ ಆತನ ಪರಿಶುದ್ಧ ನುಡಿಗಳೂ ಇದಕ್ಕೆ ಕಾರಣ.
10 ಯೆಹೂದ ದೇಶವು ವ್ಯಭಿಚಾರಿಗಳಿಂದ ತುಂಬಿಹೋಗಿದೆ.
    ಅವರು ಅನೇಕ ರೀತಿಯಲ್ಲಿ ಅಪನಂಬಿಗಸ್ತರಾಗಿದ್ದಾರೆ.
ಯೆಹೋವನು ನಾಡನ್ನು ಶಪಿಸಿದ್ದರಿಂದ
    ಅದು ಬರಡು ಭೂಮಿಯಾಯಿತು.
ಹುಲ್ಲುಗಾವಲಿನ ಸಸಿಗಳು ಒಣಗಿ ಸತ್ತುಹೋಗುತ್ತಲಿವೆ.
    ಹೊಲಗಳು ಮರುಭೂಮಿಯಂತಾಗಿವೆ.
ಪ್ರವಾದಿಗಳು ಸೆರೆ ಒಯ್ಯಲ್ಪಟ್ಟಿದ್ದಾರೆ.
    ಆ ಪ್ರವಾದಿಗಳು ತಮ್ಮ ಪ್ರಭಾವವನ್ನೂ ಶಕ್ತಿಯನ್ನೂ ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ.
11 “ಪ್ರವಾದಿಗಳೂ ಯಾಜಕರೂ ದುಷ್ಟರಾಗಿದ್ದಾರೆ.
    ಅವರು ನನ್ನ ಪವಿತ್ರಾಲಯದಲ್ಲಿಯೇ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಇದು ಯೆಹೋವನಿಂದ ಬಂದ ಸಂದೇಶ.
12 ಆದ್ದರಿಂದ ನಾನು ಅವರಿಗೆ ನನ್ನ ಸಂದೇಶಗಳನ್ನು ಇನ್ನು ಮೇಲೆ ಕೊಡುವುದಿಲ್ಲ.
    ಆಗ ಅವರು ಕತ್ತಲಲ್ಲಿ ನಡೆಯಬೇಕಾಗುವುದು.
ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ.
    ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು.
ನಾನು ಅವರಿಗೆ ಕೇಡನ್ನು ಬರಮಾಡಿ
    ಅವರನ್ನು ದಂಡಿಸುವೆನು.”
ಇದು ಯೆಹೋವನಿಂದ ಬಂದ ಸಂದೇಶ.

13 “ಸಮಾರ್ಯದ ಪ್ರವಾದಿಗಳು ಕೆಟ್ಟದ್ದಾಗಿ ನಡೆದುಕೊಂಡದ್ದನ್ನು ನಾನು ನೋಡಿದ್ದೇನೆ.
ಅವರು ಬಾಳ್ ದೇವತೆಗೋಸ್ಕರ ಆವೇಶದಿಂದ ಪ್ರವಾದಿಸಿದ್ದನ್ನು ನಾನು ಕಂಡಿದ್ದೇನೆ.
    ಆ ಪ್ರವಾದಿಗಳು ಇಸ್ರೇಲಿನ ಜನರನ್ನು ಯೆಹೋವನಿಂದ ದೂರ ತೆಗೆದುಕೊಂಡು ಹೋಗಿದ್ದಾರೆ.
14 ಯೆಹೂದದ ಪ್ರವಾದಿಗಳು ಜೆರುಸಲೇಮಿನಲ್ಲಿ
    ಭಯಂಕರ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಈ ಪ್ರವಾದಿಗಳು ವ್ಯಭಿಚಾರ ಮಾಡುತ್ತಾರೆ.
    ಅವರು ಸುಳ್ಳುಗಳನ್ನು ಕೇಳಿ, ಆ ಸುಳ್ಳುಬೋಧನೆಗಳನ್ನು ಪಾಲಿಸುತ್ತಾರೆ.
ಅವರು ದುಷ್ಟರಿಗೆ ಅವರ ದುಷ್ಟತನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ.
    ಆದ್ದರಿಂದ ಜನರು ಪಾಪಮಾಡುವುದನ್ನು ನಿಲ್ಲಿಸಲಿಲ್ಲ.
ಅವರೆಲ್ಲರು ನನಗೆ ಸೊದೋಮ್ ನಗರದಂತೆ ಇದ್ದಾರೆ.
    ಜೆರುಸಲೇಮಿನ ಜನರು ಗೊಮೋರ ನಗರದಂತೆ ಇದ್ದಾರೆ.”
15 ಸರ್ವಶಕ್ತನಾದ ಯೆಹೋವನು ಪ್ರವಾದಿಗಳ ಬಗ್ಗೆ ಹೀಗೆನ್ನುತ್ತಾನೆ,
“ನಾನು ಆ ಪ್ರವಾದಿಗಳನ್ನು ದಂಡಿಸುವೆನು.
    ಆ ಶಿಕ್ಷೆಯು ವಿಷಪೂರಿತ ಆಹಾರದಂತೆಯೂ ನೀರಿನಂತೆಯೂ ಇರುವುದು.
ಪ್ರವಾದಿಗಳು ಒಂದು ಆಧ್ಯಾತ್ಮಿಕ ವ್ಯಾಧಿಯನ್ನು ಪ್ರಾರಂಭಿಸಿದರು.
    ಆ ವ್ಯಾಧಿಯು ಇಡೀ ದೇಶದಲ್ಲೆಲ್ಲ ಪ್ರಸರಿಸಿತು.
ಆದ್ದರಿಂದ ನಾನು ಆ ಪ್ರವಾದಿಗಳನ್ನು ಶಿಕ್ಷಿಸುತ್ತೇನೆ.
    ಆ ವ್ಯಾಧಿಯು ಆ ಪ್ರವಾದಿಗಳಿಂದ ಜೆರುಸಲೇಮಿಗೆ ಬಂದಿತು.”

ಇಬ್ರಿಯರಿಗೆ 7:1-10

ಯಾಜಕ ಮೆಲ್ಕಿಜೆದೇಕ

ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು. ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು.

ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ. ಮೆಲ್ಕಿಜೆದೇಕನ ತಂದೆತಾಯಿಗಳು ಯಾರೆಂಬುದಾಗಲಿ ಅವನು ಎಲ್ಲಿಂದ ಬಂದನೆಂಬುದಾಗಲಿ ಅವನು ಯಾವಾಗ ಹುಟ್ಟಿದನೆಂಬುದಾಗಲಿ ಅವನು ಯಾವಾಗ ಸತ್ತನೆಂಬುದಾಗಲಿ ಯಾರಿಗೂ ತಿಳಿದಿಲ್ಲ. ಅವನು ದೇವರ ಮಗನಂತೆ ಸದಾಕಾಲವೂ ಯಾಜಕನಾಗಿದ್ದಾನೆ.

ಮೆಲ್ಕಿಜೆದೇಕನು ಎಷ್ಟು ದೊಡ್ಡವನೆಂಬುದನ್ನು ಸ್ವಲ್ಪ ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು, ಯುದ್ಧದಲ್ಲಿ ತಾನು ಜಯಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. ಲೇವಿಯಕುಲದ ಜನರಲ್ಲಿ ಯಾಜಕರಾಗುವವರು ಯೆಹೂದ್ಯರಿಂದ ಹತ್ತನೆಯ ಒಂದು ಭಾಗವನ್ನು ಪಡೆಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಯಾಜಕರು ತಮ್ಮ ಸ್ವಂತ ಜನರಿಂದಲೇ (ಯೆಹೂದ್ಯರು) ಅದನ್ನು ಸಂಗ್ರಹಿಸುತ್ತಾರೆ ಮತ್ತು ಅವರ ಜನರು ಅಬ್ರಹಾಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು. ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.

ಯಾಜಕರು ಹತ್ತನೆಯ ಒಂದು ಭಾಗವನ್ನು ಪಡೆಯುತ್ತಾರೆ. ಆದರೆ ಅವರು ಸ್ವಲ್ಪಕಾಲ ಜೀವಿಸಿದ್ದು ನಂತರ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ಹತ್ತನೆಯ ಒಂದು ಭಾಗವನ್ನು ಪಡೆದ ಮೆಲ್ಕಿಜೆದೇಕನು ಜೀವಂತನಾಗಿಯೇ ಇರುತ್ತಾನೆಂದು ಪವಿತ್ರ ಗ್ರಂಥವು ಹೇಳುತ್ತದೆ. ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು. 10 ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International