Revised Common Lectionary (Complementary)
23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು
ಮತ್ತು ಅವನನ್ನು ಮೆಚ್ಚಿಕೊಳ್ಳುವನು.
24 ಅವನು ಎಡವಿದರೂ ಬೀಳುವುದಿಲ್ಲ;
ಯಾಕೆಂದರೆ ಯೆಹೋವನು ಅವನ ಕೈಹಿಡಿದುಕೊಂಡಿದ್ದಾನೆ.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ.
ನೀತಿವಂತರನ್ನು ದೇವರು ತೊರೆದುಬಿಟ್ಟದ್ದನ್ನಾಗಲಿ ಅವನ ಮಕ್ಕಳು ಆಹಾರಕ್ಕಾಗಿ ಬೇಡುವುದನ್ನಾಗಲಿ ನಾನೆಂದೂ ಕಾಣಲಿಲ್ಲ.
26 ನೀತಿವಂತನು ಬೇರೆಯವರಿಗೆ ಉದಾರವಾಗಿ ಕೊಡುವನು.
ಅವನ ಮಕ್ಕಳು ಆಶೀರ್ವಾದ ಹೊಂದುವರು.
27 ನೀನು ಕೆಟ್ಟದ್ದನ್ನು ಮಾಡದೆ
ಒಳ್ಳೆಯದನ್ನೇ ಮಾಡಿದರೆ ಸದಾಕಾಲ ಬದುಕುವೆ.
28 ಯೆಹೋವನು ನ್ಯಾಯವನ್ನು ಪ್ರೀತಿಸುವನು.
ಆತನು ತನ್ನ ಭಕ್ತರನ್ನು ತೊರೆದುಬಿಡದೆ
ಅವರನ್ನು ಯಾವಾಗಲೂ ಕಾಪಾಡುವನು.
ದುಷ್ಟರನ್ನಾದರೋ ಆತನು ನಾಶಮಾಡುವನು.
29 ದೇವರು ವಾಗ್ದಾನ ಮಾಡಿದ ಭೂಮಿಯನ್ನು
ನೀತಿವಂತರು ಪಡೆದುಕೊಂಡು ಅಲ್ಲಿ ಸದಾಕಾಲ ವಾಸಿಸುವರು.
30 ನೀತಿವಂತನು ಒಳ್ಳೆಯ ಬುದ್ಧಿವಾದ ಹೇಳುವನು.
ಅವನ ತೀರ್ಮಾನಗಳು ನ್ಯಾಯಬದ್ಧವಾಗಿರುತ್ತವೆ.
31 ಯೆಹೋವನ ಉಪದೇಶವು ನೀತಿವಂತನ ಹೃದಯದಲ್ಲಿರುತ್ತದೆ.
ಅವನು ನೀತಿಮಾರ್ಗದಲ್ಲಿ ನಡೆಯವನು.
32 ಕೆಡುಕರಾದರೋ ನೀತಿವಂತರಿಗೆ
ಕೇಡುಮಾಡಲು ಹೊಂಚುಹಾಕುವರು.
33 ಆದರೆ ಯೆಹೋವನು ನೀತಿವಂತರನ್ನು ತೊರೆದುಬಿಡುವುದಿಲ್ಲ.
ನೀತಿವಂತರಿಗೆ ಅಪರಾಧಿಗಳೆಂದು ತೀರ್ಪಾಗಲು ಆತನು ಬಿಡುವುದಿಲ್ಲ.
34 ಯೆಹೋವನನ್ನೇ ನಿರೀಕ್ಷಿಸಿಕೊಂಡು ಆತನ ಮಾರ್ಗವನ್ನು ಅನುಸರಿಸಿರಿ.
ಆಗ ಆತನು ನಿಮ್ಮನ್ನು ಜಯಶಾಲಿಗಳನ್ನಾಗಿ ಮಾಡುವನು;
ದೇವರು ವಾಗ್ದಾನ ಮಾಡಿದ ಭೂಮಿಯನ್ನು ನೀವು ಪಡೆದುಕೊಳ್ಳುವಿರಿ.
35 ಮಹಾದುಷ್ಟನನ್ನು ನಾನು ನೋಡಿದ್ದೇನೆ.
ಅವನು ಮಹಾವೃಕ್ಷದಂತೆ ಬಲಿಷ್ಠನಾಗಿದ್ದನು.
36 ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು.
ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
37 ಪವಿತ್ರರನ್ನೂ ಯಥಾರ್ಥರನ್ನೂ ಗಮನಿಸು.
ಶಾಂತಿಪ್ರಿಯರು ಅನೇಕ ಸಂತಾನಗಳನ್ನು ಹೊಂದಿಕೊಳ್ಳುವರು.
38 ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರು ಸಂಪೂರ್ಣವಾಗಿ ನಾಶವಾಗುವರು.
ಅವರ ಮಕ್ಕಳೂ ನಾಶವಾಗುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.
ಸಮುವೇಲನು ಇಸ್ರೇಲರಿಗೆ ರಾಜನ ಕುರಿತು ಹೇಳಿದ ಮಾತುಗಳು
12 ಸಮುವೇಲನು ಇಸ್ರೇಲರೆಲ್ಲರಿಗೆ, “ನೀವು ನನ್ನಿಂದ ಅಪೇಕ್ಷಿಸಿದ ಎಲ್ಲವನ್ನೂ ನಾನು ಮಾಡಿರುತ್ತೇನೆ. ನಾನು ನಿಮಗಾಗಿ ಒಬ್ಬ ರಾಜನನ್ನು ನೇಮಿಸಿದ್ದೇನೆ. 2 ಈಗ ನಿಮ್ಮನ್ನು ಮುನ್ನಡೆಸಲು ಒಬ್ಬ ರಾಜನಿದ್ದಾನೆ. ನಾನು ಮುದುಕನಾಗಿರುವೆ ಮತ್ತು ನನ್ನ ತಲೆ ನರೆತುಹೋಗಿದೆ. ನನ್ನ ಗಂಡುಮಕ್ಕಳು ನಿಮ್ಮೊಂದಿಗಿದ್ದಾರೆ. ನಾನು ಚಿಕ್ಕಂದಿನಿಂದಲೇ ನಿಮ್ಮ ನಾಯಕನಾಗಿದ್ದೆ. 3 ನಾನು ಇಲ್ಲಿದ್ದೇನೆ. ನಾನು ಯಾವ ತಪ್ಪುಗಳನ್ನಾದರೂ ಮಾಡಿದ್ದರೆ, ನೀವು ಯೆಹೋವನಿಗೆ ಮತ್ತು ಆತನು ಆರಿಸಿರುವ ರಾಜನಿಗೆ ಅವುಗಳನ್ನು ಹೇಳಲೇಬೇಕು. ನಾನು ಬೇರೊಬ್ಬರ ಹಸುವನ್ನಾಗಲಿ ಕತ್ತೆಯನ್ನಾಗಲಿ ಕದ್ದಿರುವೆನೇ? ನಾನು ಯಾರನ್ನಾದರೂ ನೋಯಿಸಿರುವೆನೇ? ವಂಚಿಸಿರುವೆನೇ? ನಾನು ತಪ್ಪುಮಾಡಲು ಯಾರಿಂದಲಾದರೂ ಹಣವನ್ನಾಗಲೀ ಪಾದರಕ್ಷೆಗಳನ್ನಾಗಲೀ ತೆಗೆದುಕೊಂಡಿರುವೆನೇ? ನಾನು ಈ ಕಾರ್ಯಗಳನ್ನು ಮಾಡಿರುವುದಾದರೆ ತಿಳಿಸಿ, ಅವುಗಳನ್ನು ಸರಿಪಡಿಸುತ್ತೇನೆ” ಎಂದು ಹೇಳಿದನು.
4 ಇಸ್ರೇಲರು, “ಇಲ್ಲ, ನೀನು ನಮಗೆ ಕೆಟ್ಟದ್ದೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಎಂದೂ ವಂಚಿಸಿಲ್ಲ; ನಮ್ಮಿಂದ ಏನನ್ನೂ ತೆಗೆದುಕೊಂಡಿಲ್ಲ” ಎಂದು ಉತ್ತರಿಸಿದರು.
5 ಸಮುವೇಲನು ಇಸ್ರೇಲರಿಗೆ, “ನಿಮ್ಮ ಮಾತುಗಳಿಗೆಲ್ಲ ಯೆಹೋವನೇ ಸಾಕ್ಷಿ. ಯೆಹೋವನಿಂದ ಆಯ್ಕೆಯಾದ ರಾಜನೂ ಈ ದಿನ ಸಾಕ್ಷಿಯಾಗಿದ್ದಾನೆ. ನೀವು ನನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲವೆನ್ನುವುದಕ್ಕೆ ಈ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದನು. ಜನರು, “ಹೌದು, ಯೆಹೋವನೇ ಸಾಕ್ಷಿ” ಎಂದು ಉತ್ತರಿಸಿದರು.
6 ಆಗ ಸಮುವೇಲನು ಜನರಿಗೆ, “ಯೆಹೋವನೇ ಸಾಕ್ಷಿ. ಯೆಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಆತನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 7 ಇಲ್ಲಿ ನಿಂತುಕೊಂಡು ಕೇಳಿರಿ. ಯೆಹೋವನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತಿಳಿಸುತ್ತೇನೆ.
8 “ಯಾಕೋಬನು ಈಜಿಪ್ಟಿಗೆ ಹೋದನು. ತರುವಾಯ, ಈಜಿಪ್ಟಿನವರು ಅವನ ವಂಶದವರಿಗೆ ಜೀವನವನ್ನು ಕಠಿಣಗೊಳಿಸಿದರು. ಆದ್ದರಿಂದ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯೆಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದು ಇಲ್ಲಿ ನೆಲೆಗೊಳಿಸಿದರು.
9 “ಆದರೆ ನಿಮ್ಮ ಪೂರ್ವಿಕರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟದ್ದರಿಂದ ಆತನು ಅವರನ್ನು ಸೀಸೆರನ ಗುಲಾಮರಾಗಲು ಬಿಟ್ಟುಬಿಟ್ಟನು. ಸೀಸೆರನು ಹಾಚೋರಿನ ಸೈನ್ಯಾಧಿಪತಿ. ನಂತರ ಯೆಹೋವನು ಅವರನ್ನು ಫಿಲಿಷ್ಟಿಯರ ಮತ್ತು ಮೋವಾಬ್ ರಾಜನ ಗುಲಾಮರಾಗುವಂತೆ ಬಿಟ್ಟುಬಿಟ್ಟನು. ಅವರೆಲ್ಲರು ನಿಮ್ಮ ವಂಶದವರ ವಿರುದ್ಧ ಹೋರಾಡಿದರು. 10 ಆದರೆ ನಿಮ್ಮ ಪೂರ್ವಿಕರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟು, ‘ನಾವು ಯೆಹೋವನಾದ ನಿನ್ನನ್ನು ಬಿಟ್ಟು ಸುಳ್ಳುದೇವರಾದ ಬಾಳನ ಮತ್ತು ಸುಳ್ಳುದೇವತೆಯಾದ ಅಷ್ಟೋರೆತಳ ಸೇವೆ ಮಾಡಿ ಪಾಪಮಾಡಿದ್ದೇವೆ. ಆದರೆ ಈಗ ನಮ್ಮನ್ನು ಶತ್ರುಗಳಿಂದ ರಕ್ಷಿಸು; ಆಗ ನಾವು ನಿನ್ನ ಸೇವೆಮಾಡುತ್ತೇವೆ’ ಎಂದು ಹೇಳಿದರು.
11 “ಆದ್ದರಿಂದ ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ ಮತ್ತು ಸಮುವೇಲ ಎಂಬವರನ್ನು ಕಳುಹಿಸಿದನು. ನಿಮ್ಮನ್ನು ಸುತ್ತುವರಿದಿದ್ದ ಶತ್ರುಗಳಿಂದ ಯೆಹೋವನು ರಕ್ಷಿಸಿದನು. ನೀವು ಸುರಕ್ಷಿತವಾಗಿ ವಾಸಿಸಿದಿರಿ. 12 ಆದರೆ ಅಮ್ಮೋನಿಯರ ರಾಜನಾದ ನಾಹಾಷನು ನಿಮ್ಮ ವಿರುದ್ಧ ಹೋರಾಡಲು ಬರುತ್ತಿರುವುದನ್ನು ಕಂಡು ನೀವು, ‘ನಮ್ಮನ್ನಾಳಲು ನಮಗೆ ಒಬ್ಬ ರಾಜ ಬೇಕು’ ಎಂದು ಕೇಳಿದಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ರಾಜನಾಗಿದ್ದರೂ ನೀವು ಹೀಗೆ ಕೇಳಿದಿರಿ. 13 ಇಗೋ, ನೀವು ಆಸೆಪಟ್ಟು ಆರಿಸಿದ ರಾಜನು ಇಲ್ಲಿರುವನು. ಯೆಹೋವನು ಈ ರಾಜನನ್ನು ನಿಮಗೆ ನೇಮಿಸಿದ್ದಾನೆ. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ನಿರಂತರವಾಗಿ ರಕ್ಷಿಸುತ್ತಾನೆ. ಆದರೆ ನೀವು ಈ ಕಾರ್ಯಗಳನ್ನು ಮಾಡಿದರೆ ಮಾತ್ರ ದೇವರು ನಿಮ್ಮನ್ನು ರಕ್ಷಿಸುತ್ತಾನೆ: ನೀವು ಯೆಹೋವನನ್ನು ಗೌರವಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನ ಆಜ್ಞೆಗಳನ್ನು ವಿರೋಧಿಸಬಾರದು. ನಿಮ್ಮ ದೇವರಾದ ಯೆಹೋವನ ಮಾರ್ಗವನ್ನು ನೀವು ಮತ್ತು ನಿಮ್ಮನ್ನು ಆಳುವ ರಾಜನು ಅನುಸರಿಸಬೇಕು. ನೀವು ಈ ಕಾರ್ಯಗಳನ್ನು ಮಾಡಿದಾಗ ದೇವರು ನಿಮ್ಮನ್ನು ರಕ್ಷಿಸುತ್ತಾನೆ. 15 ಆದರೆ ನೀವು ಯೆಹೋವನಿಗೆ ವಿಧೇಯರಾಗಿ ನಡೆಯದಿದ್ದರೆ ಮತ್ತು ಆತನ ಆಜ್ಞೆಗಳನ್ನು ವಿರೋಧಿಸಿದರೆ, ಆತನು ನಿಮ್ಮ ಪೂರ್ವಿಕರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವನು.
16 “ಈಗ ಯೆಹೋವನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಮಹತ್ಕಾರ್ಯಗಳನ್ನು ನೋಡುವುದಕ್ಕಾಗಿ ಅಲುಗಾಡದೆ ನಿಂತುಕೊಳ್ಳಿ. 17 ಈಗ ಗೋಧಿಯ ಸುಗ್ಗಿಕಾಲ. ನಾನು ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ. ಆತನು ಗುಡುಗನ್ನು ಮತ್ತು ಮಳೆಯನ್ನು ಕಳುಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. ರಾಜನು ಬೇಕೆಂದು ನೀವು ಕೇಳಿದ್ದು ಯೆಹೋವನಿಗೆ ವಿರುದ್ಧವಾಗಿ ನೀವು ಮಾಡಿದ ಎಂತಹ ಕೆಟ್ಟಕಾರ್ಯವಾಗಿದೆ ಎಂಬದನ್ನು ನಿಮಗೇ ತಿಳಿಯುತ್ತದೆ” ಎಂದು ಹೇಳಿದನು.
18 ಸಮುವೇಲನು ಯೆಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯೆಹೋವನು ಗುಡುಗು ಮತ್ತು ಮಳೆಗಳನ್ನು ಕಳುಹಿಸಿದನು. ಜನರು ಯೆಹೋವನ ಬಗ್ಗೆ ಮತ್ತು ಸಮುವೇಲನ ಬಗ್ಗೆ ಬಹಳ ಭಯಗೊಂಡರು. 19 ಜನರೆಲ್ಲಾ ಸಮುವೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯೆಹೋವನಲ್ಲಿ ಪ್ರಾರ್ಥಿಸು. ನಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲ ಪಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು ಕೇಳಿಕೊಂಡಿದ್ದು ನಮ್ಮ ಪಾಪಗಳೊಂದಿಗೆ ಮತ್ತೊಂದು ಪಾಪವನ್ನು ಮಾಡಿದಂತಾಯಿತು” ಎಂದು ಹೇಳಿದರು.
20 ಸಮುವೇಲನು, “ಭಯಪಡಬೇಡಿ. ಅದೇನೋ ನಿಜ. ನೀವು ಆ ಕೆಟ್ಟಕಾರ್ಯಗಳನ್ನೆಲ್ಲಾ ಮಾಡಿದಿರಿ. ಆದರೆ ಯೆಹೋವನ ಮಾರ್ಗದಲ್ಲಿ ನಡೆಯುವುದನ್ನು ನಿಲ್ಲಿಸದಿರಿ. ಯೆಹೋವನ ಸೇವೆಯನ್ನು ಪೂರ್ಣಹೃದಯದಿಂದ ಮಾಡಿರಿ. 21 ವಿಗ್ರಹಗಳು ಕೇವಲ ಪ್ರತಿಮೆಗಳಷ್ಟೇ. ಅವು ನಿಮಗೆ ಸಹಾಯ ಮಾಡಲಾರವು. ಆದ್ದರಿಂದ ಅವುಗಳನ್ನು ಪೂಜಿಸಬೇಡಿ. ವಿಗ್ರಹಗಳು ನಿಮಗೆ ಸಹಾಯ ಮಾಡಲಾರವು ಮತ್ತು ರಕ್ಷಿಸಲಾರವು. ಅವುಗಳಿಂದ ಪ್ರಯೋಜನವೇನೂ ಇಲ್ಲ.
22 “ಆದರೆ ಯೆಹೋವನು ತನ್ನ ಜನರನ್ನು ಕೈಬಿಡುವುದಿಲ್ಲ. ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನರನ್ನಾಗಿ ಮಾಡಿಕೊಳ್ಳಲು ಇಷ್ಟಪಟ್ಟನು. ಆದ್ದರಿಂದ ಆತನು ತನ್ನ ಮಹಾ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ತ್ಯಜಿಸುವುದಿಲ್ಲ. 23 ನಾನು ನಿಮಗಾಗಿ ಪ್ರಾರ್ಥಿಸದಿದ್ದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವನಾಗುತ್ತೇನೆ. ನಾನು ನಿಮಗೆ ಒಳ್ಳೆಯದೂ ಯೋಗ್ಯವೂ ಆಗಿರುವ ಮಾರ್ಗವನ್ನು ಉಪದೇಶಿಸುತ್ತೇನೆ. 24 ಆದರೆ ನೀವು ಯೆಹೋವನನ್ನು ಗೌರವಿಸಬೇಕು. ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವನ ಸೇವೆಯನ್ನು ನಿಜವಾಗಿಯೂ ಮಾಡಬೇಕು. ಆತನು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೆನಸಿಕೊಳ್ಳಿರಿ. 25 ಆದರೆ ನೀವು ಮೊಂಡರಾಗಿ ಕೆಟ್ಟಕಾರ್ಯಗಳನ್ನು ಮಾಡಿದ್ದಾದರೆ ಯೆಹೋವನು ನಿಮ್ಮನ್ನು ಮತ್ತು ನಿಮ್ಮ ರಾಜನನ್ನು ನಾಶಪಡಿಸುತ್ತಾನೆ” ಎಂದು ಹೇಳಿದನು.
ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು
13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.
2 ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) 3 ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. 4 ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. 5 ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.
6 ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.
7 ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.
8 ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.
ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.
9 ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.
10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.
12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.
Kannada Holy Bible: Easy-to-Read Version. All rights reserved. © 1997 Bible League International