Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:23-40

23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು
    ಮತ್ತು ಅವನನ್ನು ಮೆಚ್ಚಿಕೊಳ್ಳುವನು.
24 ಅವನು ಎಡವಿದರೂ ಬೀಳುವುದಿಲ್ಲ;
    ಯಾಕೆಂದರೆ ಯೆಹೋವನು ಅವನ ಕೈಹಿಡಿದುಕೊಂಡಿದ್ದಾನೆ.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ.
    ನೀತಿವಂತರನ್ನು ದೇವರು ತೊರೆದುಬಿಟ್ಟದ್ದನ್ನಾಗಲಿ ಅವನ ಮಕ್ಕಳು ಆಹಾರಕ್ಕಾಗಿ ಬೇಡುವುದನ್ನಾಗಲಿ ನಾನೆಂದೂ ಕಾಣಲಿಲ್ಲ.
26 ನೀತಿವಂತನು ಬೇರೆಯವರಿಗೆ ಉದಾರವಾಗಿ ಕೊಡುವನು.
    ಅವನ ಮಕ್ಕಳು ಆಶೀರ್ವಾದ ಹೊಂದುವರು.
27 ನೀನು ಕೆಟ್ಟದ್ದನ್ನು ಮಾಡದೆ
    ಒಳ್ಳೆಯದನ್ನೇ ಮಾಡಿದರೆ ಸದಾಕಾಲ ಬದುಕುವೆ.
28 ಯೆಹೋವನು ನ್ಯಾಯವನ್ನು ಪ್ರೀತಿಸುವನು.
    ಆತನು ತನ್ನ ಭಕ್ತರನ್ನು ತೊರೆದುಬಿಡದೆ
ಅವರನ್ನು ಯಾವಾಗಲೂ ಕಾಪಾಡುವನು.
    ದುಷ್ಟರನ್ನಾದರೋ ಆತನು ನಾಶಮಾಡುವನು.
29 ದೇವರು ವಾಗ್ದಾನ ಮಾಡಿದ ಭೂಮಿಯನ್ನು
    ನೀತಿವಂತರು ಪಡೆದುಕೊಂಡು ಅಲ್ಲಿ ಸದಾಕಾಲ ವಾಸಿಸುವರು.
30 ನೀತಿವಂತನು ಒಳ್ಳೆಯ ಬುದ್ಧಿವಾದ ಹೇಳುವನು.
    ಅವನ ತೀರ್ಮಾನಗಳು ನ್ಯಾಯಬದ್ಧವಾಗಿರುತ್ತವೆ.
31 ಯೆಹೋವನ ಉಪದೇಶವು ನೀತಿವಂತನ ಹೃದಯದಲ್ಲಿರುತ್ತದೆ.
    ಅವನು ನೀತಿಮಾರ್ಗದಲ್ಲಿ ನಡೆಯವನು.

32 ಕೆಡುಕರಾದರೋ ನೀತಿವಂತರಿಗೆ
    ಕೇಡುಮಾಡಲು ಹೊಂಚುಹಾಕುವರು.
33 ಆದರೆ ಯೆಹೋವನು ನೀತಿವಂತರನ್ನು ತೊರೆದುಬಿಡುವುದಿಲ್ಲ.
    ನೀತಿವಂತರಿಗೆ ಅಪರಾಧಿಗಳೆಂದು ತೀರ್ಪಾಗಲು ಆತನು ಬಿಡುವುದಿಲ್ಲ.
34 ಯೆಹೋವನನ್ನೇ ನಿರೀಕ್ಷಿಸಿಕೊಂಡು ಆತನ ಮಾರ್ಗವನ್ನು ಅನುಸರಿಸಿರಿ.
    ಆಗ ಆತನು ನಿಮ್ಮನ್ನು ಜಯಶಾಲಿಗಳನ್ನಾಗಿ ಮಾಡುವನು;
    ದೇವರು ವಾಗ್ದಾನ ಮಾಡಿದ ಭೂಮಿಯನ್ನು ನೀವು ಪಡೆದುಕೊಳ್ಳುವಿರಿ.

35 ಮಹಾದುಷ್ಟನನ್ನು ನಾನು ನೋಡಿದ್ದೇನೆ.
    ಅವನು ಮಹಾವೃಕ್ಷದಂತೆ ಬಲಿಷ್ಠನಾಗಿದ್ದನು.
36 ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು.
    ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
37 ಪವಿತ್ರರನ್ನೂ ಯಥಾರ್ಥರನ್ನೂ ಗಮನಿಸು.
    ಶಾಂತಿಪ್ರಿಯರು ಅನೇಕ ಸಂತಾನಗಳನ್ನು ಹೊಂದಿಕೊಳ್ಳುವರು.
38 ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರು ಸಂಪೂರ್ಣವಾಗಿ ನಾಶವಾಗುವರು.
    ಅವರ ಮಕ್ಕಳೂ ನಾಶವಾಗುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
    ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
    ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.

1 ಸಮುವೇಲನು 10:17-25

ಸೌಲನು ರಾಜನೆಂದು ಸಮುವೇಲನ ಪ್ರಕಟನೆ

17 ಸಮುವೇಲನು ಇಸ್ರೇಲರನ್ನು ಮಿಚ್ಪೆಗೆ ಕರೆಸಿ, ಯೆಹೋವನ ಸನ್ನಿಧಿಯಲ್ಲಿ ಸಭೆಸೇರಿಸಿದನು. 18 ಸಮುವೇಲನು ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದೆನು. ನಾನು ಈಜಿಪ್ಟಿನವರ ಆಳ್ವಿಕೆಯಿಂದ ಮತ್ತು ನಿಮಗೆ ಹಾನಿಮಾಡಲು ಪ್ರಯತ್ನಿಸಿದ ಇತರ ರಾಜ್ಯಗಳಿಂದ ರಕ್ಷಿಸಿದೆನು’ ಎನ್ನುತ್ತಾನೆ. 19 ಆದರೆ ಇಂದು ನೀವು ನಿಮ್ಮ ದೇವರನ್ನು ತಿರಸ್ಕರಿಸಿರುವಿರಿ. ನಿಮ್ಮ ದೇವರು ನಿಮ್ಮನ್ನು ಕಷ್ಟಗಳಿಂದ ಮತ್ತು ಸಮಸ್ಯೆಗಳಿಂದ ರಕ್ಷಿಸುತ್ತಾನೆ. ಆದರೆ ನೀವು, ‘ಇಲ್ಲ, ನಮ್ಮನ್ನಾಳಲು ನಮಗೊಬ್ಬ ರಾಜನು ಬೇಕು’ ಎಂದು ಕೇಳಿದಿರಿ. ಈಗ ಬನ್ನಿ, ನೀವು, ನಿಮ್ಮ ಕುಲಗಳ ಮತ್ತು ಗೋತ್ರಗಳ ಸಮೇತವಾಗಿ ಯೆಹೋವನ ಸಮ್ಮುಖದಲ್ಲಿ ನಿಲ್ಲಿರಿ” ಎಂದು ಹೇಳಿದನು.

20 ಸಮುವೇಲನು ಇಸ್ರೇಲಿನ ಎಲ್ಲಾ ಕುಲದವರನ್ನು ಹತ್ತಿರಕ್ಕೆ ಕರೆದನು. ನಂತರ ಸಮುವೇಲನು ಹೊಸ ರಾಜನನ್ನು ಆರಿಸಲು ಚೀಟು ಹಾಕತೊಡಗಿದನು. ಮೊದಲನೆಯದಾಗಿ, ಬೆನ್ಯಾಮೀನ್ ಕುಲವು ಆರಿಸಲ್ಪಟ್ಟಿತು. 21 ಬೆನ್ಯಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಆರಿಸಿಕೊಳ್ಳುವುದಕ್ಕಾಗಿ ಮತ್ತೆ ಚೀಟು ಹಾಕಲಾಯಿತು. ಅದರಲ್ಲಿ ಮಟ್ರಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುವೇಲನು ಮಟ್ರಿಯ ಕುಟುಂಬದ ಪ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳುವುದಕ್ಕಾಗಿ ಚೀಟು ಹಾಕಿದನು. ಅದರಲ್ಲಿ ಕೀಷನ ಮಗನಾದ ಸೌಲನು ಆರಿಸಲ್ಪಟ್ಟನು.

ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ. 22 ಆಗ ಅವರು ಯೆಹೋವನನ್ನು, “ಸೌಲನು ಇಲ್ಲಿಗೆ ಬರುವನೋ?” ಎಂದು ಕೇಳಿದರು.

ಯೆಹೋವನು, “ಸೌಲನು ಸರಕುಗಳ ಹಿಂದೆ ಅಡಗಿಕೊಂಡಿದ್ದಾನೆ” ಎಂದು ಹೇಳಿದನು.

23 ಜನರು ಓಡಿಹೋಗಿ, ಸರಕುಗಳ ಹಿಂದೆ ಅಡಗಿಕೊಂಡಿದ್ದ ಸೌಲನನ್ನು ಹಿಡಿದುಕೊಂಡು ಬಂದರು. ಸೌಲನು ಜನರ ಮಧ್ಯದಲ್ಲಿ ನಿಂತುಕೊಂಡನು. ಸೌಲನು ಇತರ ಜನರಿಗಿಂತ ಎತ್ತರವಾಗಿದ್ದನು.

24 ಸಮುವೇಲನು ಜನರೆಲ್ಲರಿಗೆ, “ಯೆಹೋವನು ಆರಿಸಿಕೊಂಡಿರುವ ಮನುಷ್ಯನನ್ನು ನೋಡಿದಿರಾ! ಸರ್ವಜನರಲ್ಲಿಯೂ ಸೌಲನಂತಹ ಮನುಷ್ಯನು ಇನ್ನೊಬ್ಬನಿಲ್ಲ!” ಎಂದು ಹೇಳಿದನು.

ಆಗ ಜನರೆಲ್ಲ, “ರಾಜನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.

25 ಸಮುವೇಲನು ಜನರಿಗೆ ರಾಜನೀತಿಯ ನಿಯಮಗಳನ್ನು ವಿವರಿಸಿದನು. ಅವನು ಒಂದು ಪುಸ್ತಕದಲ್ಲಿ ಆ ನಿಯಮಗಳನ್ನು ಬರೆದನು. ಅವನು ಯೆಹೋವನ ಸನ್ನಿಧಿಯಲ್ಲಿ ಆ ಪುಸ್ತಕವನ್ನಿಟ್ಟನು. ಬಳಿಕ ಸಮುವೇಲನು ಜನರನ್ನು ಮನೆಗಳಿಗೆ ಹಿಂದಿರುಗಲು ಹೇಳಿದನು.

ಇಬ್ರಿಯರಿಗೆ 6:13-20

13 ದೇವರು ಅಬ್ರಹಾಮನಿಗೆ ಒಂದು ವಾಗ್ದಾನ ಮಾಡಿದನು. ದೇವರಿಗಿಂತ ದೊಡ್ಡವನಿಲ್ಲ. ಆದ್ದರಿಂದ, ದೇವರು ತನ್ನ ಮೇಲೆಯೇ ಆಣೆಯಿಟ್ಟು ತನ್ನ ಮಾತಿನಂತೆಯೇ ಮಾಡಿದನು. 14 ಆತನು ಅವನಿಗೆ, “ನಾನು ನಿಜವಾಗಿಯೂ ನಿನ್ನನ್ನು ಆಶೀರ್ವದಿಸುತ್ತೇನೆ. ಅನೇಕಾನೇಕ ಸಂತತಿಗಳನ್ನು ನಿನಗೆ ದಯಪಾಲಿಸುವೆನು”(A) ಎಂದು ಹೇಳಿದನು. 15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.

16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ. 17 ಹಾಗೆಯೇ ದೇವರು ತನ್ನ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವ ಜನರಿಗೆ ತನ್ನ ಸಂಕಲ್ಪವು ಸ್ಥಿರವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ಆಣೆಯಿಟ್ಟು ನಿಶ್ಚಯಪಡಿಸಿದನು. 18 ದೇವರ ವಾಗ್ದಾನ ಮತ್ತು ಆಣೆ ಅಚಲವಾದ ಎರಡು ಆಧಾರಗಳಾಗಿವೆ. ಇವುಗಳ ವಿಷಯದಲ್ಲಿ ನಮಗೆಂದಿಗೂ ಮೋಸವಾಗುವುದಿಲ್ಲ.

ಇದರಿಂದಾಗಿ, ದೇವರ ರಕ್ಷಣೆಗಾಗಿ ಓಡಿ ಬಂದಿರುವ ನಾವು ನಮ್ಮ ನಿರೀಕ್ಷೆಯಲ್ಲಿ ಸ್ಥಿರವಾಗಿರಲು ಬಲವಾದ ಪ್ರೋತ್ಸಾಹ ಉಂಟಾಯಿತು. 19 ಈ ನಿರೀಕ್ಷೆಯು ನಮ್ಮ ಆತ್ಮಗಳನ್ನು ಅಪಾಯದಲ್ಲಿ ಕೊಚ್ಚಿಕೊಂಡು ಹೋಗದಂತೆ ಕಾಪಾಡುವ ಬಲವಾದ ಸ್ಥಿರವಾದ ಲಂಗರಿನಂತಿದೆ. ಅದು ಸ್ವರ್ಗದಾಲಯದ ತೆರೆಯ ಮರೆಯಲ್ಲಿರುವ ಮಹಾ ಪವಿತ್ರಸ್ಥಳದ ಒಳಕ್ಕೆ ಪ್ರವೇಶಿಸುತ್ತದೆ. 20 ಯೇಸು ಈಗಾಗಲೇ ಅಲ್ಲಿಗೆ ಪ್ರವೇಶಿಸಿ, ಅನುಸರಿಸುವುದಕ್ಕಾಗಿ ಮಾರ್ಗವನ್ನು ತೋರಿದನು. ಯೇಸು ಮೆಲ್ಕಿಜೆದೇಕನಂತೆ ಸದಾಕಾಲಕ್ಕೂ ಇರುವ ಪ್ರಧಾನಯಾಜಕನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International