Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:23-40

23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು
    ಮತ್ತು ಅವನನ್ನು ಮೆಚ್ಚಿಕೊಳ್ಳುವನು.
24 ಅವನು ಎಡವಿದರೂ ಬೀಳುವುದಿಲ್ಲ;
    ಯಾಕೆಂದರೆ ಯೆಹೋವನು ಅವನ ಕೈಹಿಡಿದುಕೊಂಡಿದ್ದಾನೆ.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ.
    ನೀತಿವಂತರನ್ನು ದೇವರು ತೊರೆದುಬಿಟ್ಟದ್ದನ್ನಾಗಲಿ ಅವನ ಮಕ್ಕಳು ಆಹಾರಕ್ಕಾಗಿ ಬೇಡುವುದನ್ನಾಗಲಿ ನಾನೆಂದೂ ಕಾಣಲಿಲ್ಲ.
26 ನೀತಿವಂತನು ಬೇರೆಯವರಿಗೆ ಉದಾರವಾಗಿ ಕೊಡುವನು.
    ಅವನ ಮಕ್ಕಳು ಆಶೀರ್ವಾದ ಹೊಂದುವರು.
27 ನೀನು ಕೆಟ್ಟದ್ದನ್ನು ಮಾಡದೆ
    ಒಳ್ಳೆಯದನ್ನೇ ಮಾಡಿದರೆ ಸದಾಕಾಲ ಬದುಕುವೆ.
28 ಯೆಹೋವನು ನ್ಯಾಯವನ್ನು ಪ್ರೀತಿಸುವನು.
    ಆತನು ತನ್ನ ಭಕ್ತರನ್ನು ತೊರೆದುಬಿಡದೆ
ಅವರನ್ನು ಯಾವಾಗಲೂ ಕಾಪಾಡುವನು.
    ದುಷ್ಟರನ್ನಾದರೋ ಆತನು ನಾಶಮಾಡುವನು.
29 ದೇವರು ವಾಗ್ದಾನ ಮಾಡಿದ ಭೂಮಿಯನ್ನು
    ನೀತಿವಂತರು ಪಡೆದುಕೊಂಡು ಅಲ್ಲಿ ಸದಾಕಾಲ ವಾಸಿಸುವರು.
30 ನೀತಿವಂತನು ಒಳ್ಳೆಯ ಬುದ್ಧಿವಾದ ಹೇಳುವನು.
    ಅವನ ತೀರ್ಮಾನಗಳು ನ್ಯಾಯಬದ್ಧವಾಗಿರುತ್ತವೆ.
31 ಯೆಹೋವನ ಉಪದೇಶವು ನೀತಿವಂತನ ಹೃದಯದಲ್ಲಿರುತ್ತದೆ.
    ಅವನು ನೀತಿಮಾರ್ಗದಲ್ಲಿ ನಡೆಯವನು.

32 ಕೆಡುಕರಾದರೋ ನೀತಿವಂತರಿಗೆ
    ಕೇಡುಮಾಡಲು ಹೊಂಚುಹಾಕುವರು.
33 ಆದರೆ ಯೆಹೋವನು ನೀತಿವಂತರನ್ನು ತೊರೆದುಬಿಡುವುದಿಲ್ಲ.
    ನೀತಿವಂತರಿಗೆ ಅಪರಾಧಿಗಳೆಂದು ತೀರ್ಪಾಗಲು ಆತನು ಬಿಡುವುದಿಲ್ಲ.
34 ಯೆಹೋವನನ್ನೇ ನಿರೀಕ್ಷಿಸಿಕೊಂಡು ಆತನ ಮಾರ್ಗವನ್ನು ಅನುಸರಿಸಿರಿ.
    ಆಗ ಆತನು ನಿಮ್ಮನ್ನು ಜಯಶಾಲಿಗಳನ್ನಾಗಿ ಮಾಡುವನು;
    ದೇವರು ವಾಗ್ದಾನ ಮಾಡಿದ ಭೂಮಿಯನ್ನು ನೀವು ಪಡೆದುಕೊಳ್ಳುವಿರಿ.

35 ಮಹಾದುಷ್ಟನನ್ನು ನಾನು ನೋಡಿದ್ದೇನೆ.
    ಅವನು ಮಹಾವೃಕ್ಷದಂತೆ ಬಲಿಷ್ಠನಾಗಿದ್ದನು.
36 ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು.
    ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
37 ಪವಿತ್ರರನ್ನೂ ಯಥಾರ್ಥರನ್ನೂ ಗಮನಿಸು.
    ಶಾಂತಿಪ್ರಿಯರು ಅನೇಕ ಸಂತಾನಗಳನ್ನು ಹೊಂದಿಕೊಳ್ಳುವರು.
38 ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರು ಸಂಪೂರ್ಣವಾಗಿ ನಾಶವಾಗುವರು.
    ಅವರ ಮಕ್ಕಳೂ ನಾಶವಾಗುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
    ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
    ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.

1 ಸಮುವೇಲನು 8:1-18

ಇಸ್ರೇಲರು ತಮಗೊಬ್ಬ ರಾಜನನ್ನು ಕೇಳಿಕೊಳ್ಳುವರು

ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರೇಲರಿಗೆ ನ್ಯಾಯಾಧೀಶರನ್ನಾಗಿ ಮಾಡಿದನು. ಅವನ ಮೊದಲನೆಯ ಮಗ ಯೋವೇಲ್, ಎರಡನೆಯ ಮಗ ಅಬೀಯ. ಯೋವೇಲನು ಮತ್ತು ಅಬೀಯನು ಬೇರ್ಷೆಬದಲ್ಲಿ ನ್ಯಾಯಾಧೀಶರಾಗಿದ್ದರು. ಆದರೆ ಸಮುವೇಲನ ಮಕ್ಕಳು ಅವನಂತೆ ನಡೆದುಕೊಳ್ಳಲಿಲ್ಲ. ಅವರು ಲಂಚವನ್ನು ಪಡೆದು ನ್ಯಾಯಾಲಯದಲ್ಲಿ ಅನ್ಯಾಯದ ತೀರ್ಪುಗಳು ಮಾಡುತ್ತಿದ್ದರು ಮತ್ತು ಜನರನ್ನು ವಂಚಿಸುತ್ತಿದ್ದರು. ಆದ್ದರಿಂದ ಇಸ್ರೇಲರ ಹಿರಿಯರೆಲ್ಲ ಒಟ್ಟುಗೂಡಿದರು. ಅವರು ಸಮುವೇಲನನ್ನು ಭೇಟಿಮಾಡಲು ರಾಮಕ್ಕೆ ಹೋದರು. ಹಿರಿಯರು ಸಮುವೇಲನಿಗೆ, “ನೀನು ಮುದುಕನಾಗಿರುವೆ ಮತ್ತು ನಿನ್ನ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿಲ್ಲ, ಅವರು ನಿನ್ನಂತಲ್ಲ. ಈಗ, ಬೇರೆ ದೇಶಗಳಂತೆ ಒಬ್ಬ ರಾಜನನ್ನು ನಮ್ಮನ್ನಾಳಲು ನೇಮಿಸು” ಎಂದು ಹೇಳಿದರು.

ಹೀಗೆ ಹಿರಿಯರೆಲ್ಲರು ತಮ್ಮನ್ನು ಮುನ್ನಡೆಸಲು ರಾಜನೊಬ್ಬನು ಬೇಕೆಂದರು. ಸಮುವೇಲನಿಗೆ ಇದು ಸರಿಯೆನಿಸಲಿಲ್ಲ. ಆದ್ದರಿಂದ ಅವನು ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಅವನಿಗೆ, “ಜನರು ನಿನಗೆ ಹೇಳಿದಂತೆ ಮಾಡು ಅವರು ನಿನ್ನನ್ನು ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ತಿರಸ್ಕರಿಸಿದ್ದಾರೆ! ಅವರಿಗೆ ನಾನು ರಾಜನಾಗಿರುವುದು ಬೇಕಿಲ್ಲ! ಅವರು ಯಾವಾಗಲೂ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ. ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ಆದರೆ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳ ಸೇವೆ ಮಾಡಿದರು. ಅವರು ನಿನಗೂ ಹೀಗೆಯೇ ಮಾಡುತ್ತಿದ್ದಾರೆ. ಆದ್ದರಿಂದ ಜನರ ಮಾತಿಗೆ ಕಿವಿಗೊಟ್ಟು ಅವರು ಹೇಳಿದಂತೆ ಮಾಡು. ಆದರೆ ಅವರಿಗೆ ಎಚ್ಚರಿಕೆಕೊಡು. ರಾಜನಾದವನು ಜನರಿಗೆ ಏನು ಮಾಡುತ್ತಾನೆ ಎಂಬುದನ್ನು ಅವರಿಗೆ ತಿಳಿಸಿ ಹೇಳು! ರಾಜನಾದವನು ಜನರನ್ನು ಹೇಗೆ ಆಳುತ್ತಾನೆಂಬುದನ್ನೂ ಅವರಿಗೆ ತಿಳಿಸಿಕೊಡು” ಎಂದು ಹೇಳಿದನು.

10 ಆ ಜನರು ರಾಜನೊಬ್ಬನನ್ನು ಕೇಳಿಕೊಂಡರು. ಆದ್ದರಿಂದ ಸಮುವೇಲನು ಅವರಿಗೆ ಯೆಹೋವನು ಹೇಳಿದ್ದನ್ನೆಲ್ಲ ತಿಳಿಸಿದನು. 11 ಸಮುವೇಲನು, “ನೀವು ನಿಮ್ಮನ್ನು ಆಳಲು ರಾಜನು ಬೇಕೆಂದರೆ, ಅವನು ಬಲವಂತದಿಂದ ಹೀಗೆಲ್ಲ ಮಾಡುತ್ತಾನೆ: ಅವನು ನಿಮ್ಮ ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಸೇವಕರನ್ನಾಗಿಯೂ ಸೈನಿಕರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಸೈನ್ಯದಲ್ಲಿಯೂ ಅಶ್ವಸೈನ್ಯದಲ್ಲಿಯೂ ಸೇರಿ ಹೋರಾಡಬೇಕಾಗುತ್ತದೆ. ನಿನ್ನ ಮಕ್ಕಳು ರಾಜನ ರಥದ ಮುಂದೆ ಓಡುವ ಬೆಂಗಾವಲಿನವರಾಗಬೇಕಾಗುತ್ತದೆ.

12 “ರಾಜನು ನಿಮ್ಮ ಮಕ್ಕಳನ್ನು ಯೋಧರನ್ನಾಗಿ ಮಾಡಿಕೊಳ್ಳುವನು. ಅವರಲ್ಲಿ ಕೆಲವರು ಒಂದು ಸಾವಿರ ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. ಇನ್ನು ಕೆಲವರು ಐವತ್ತು ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು.

“ತನ್ನ ಭೂಮಿಯನ್ನು ಉಳಲು ಮತ್ತು ಪೈರನ್ನು ಕೊಯ್ಯಲು ರಾಜನು ನಿಮ್ಮ ಮಕ್ಕಳನ್ನು ತೆಗೆದುಕೊಳ್ಳುವನು; ಯುದ್ಧದ ಆಯುಧಗಳನ್ನು ತಯಾರಿಸಲೂ ತನ್ನ ರಥಕ್ಕೆ ಬೇಕಾದ ಸಾಮಾಗ್ರಿಗಳನ್ನು ತಯಾರಿಸಲೂ ಅವನು ಅವರನ್ನು ಬಳಸಿಕೊಳ್ಳುವನು.

13 “ರಾಜನು ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ತನಗಾಗಿ ಸುಗಂಧದ್ರವ್ಯಗಳನ್ನು ತಯಾರಿಸಲೂ ಅಡಿಗೆ ಮಾಡಲೂ ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.

14 “ನಿಮಗೆ ಸೇರಿದ ಉತ್ತಮ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಆಲಿವ್ ತೋಪುಗಳನ್ನೂ ರಾಜನು ಕಿತ್ತುಕೊಂಡು ತನ್ನ ಅಧಿಕಾರಿಗಳಿಗೆ ಕೊಡುತ್ತಾನೆ. 15 ನೀವು ಬೆಳೆದ ಧಾನ್ಯಗಳಲ್ಲಿ ಮತ್ತು ದ್ರಾಕ್ಷಿಗಳಲ್ಲಿ ಅವನು ಹತ್ತನೆ ಒಂದು ಭಾಗವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುತ್ತಾನೆ.

16 “ರಾಜನು, ನಿಮ್ಮ ಸೇವಕಸೇವಕಿಯರನ್ನು ತೆಗೆದುಕೊಳ್ಳುವನು; ಶ್ರೇಷ್ಠವಾದ ಎತ್ತುಗಳನ್ನೂ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕಾಗಿ ಬಳಸಿಕೊಳ್ಳುವನು. 17 ನಿಮ್ಮ ಕುರಿಹಿಂಡುಗಳಲ್ಲಿ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುವನು.

“ಆಗ ನೀವು ರಾಜನಿಗೆ ಸೇವಕರಾಗುವಿರಿ; 18 ರಾಜನು ಬೇಕೆಂದು ಕೇಳಿಕೊಂಡದ್ದಕ್ಕಾಗಿ ಗೋಳಾಡುವಿರಿ. ಆದರೆ ಆಗ ಯೆಹೋವನು ನಿಮಗೆ ಉತ್ತರಿಸುವುದಿಲ್ಲ” ಎಂದು ಹೇಳಿದನು.

ಇಬ್ರಿಯರಿಗೆ 6:1-12

ಆದ್ದರಿಂದ ಕ್ರಿಸ್ತನನ್ನು ಕುರಿತ ಆರಂಭದ ಪಾಠಗಳನ್ನು ನಾವು ಮುಗಿಸಿದವರಾಗಿರಬೇಕು. ನಾವು ಆರಂಭಿಸಿದ ಪಾಠಗಳಿಗೆ ಮತ್ತೆ ಹೋಗಬಾರದು. ನಮ್ಮ ಮೊದಲಿನ ದುಷ್ಕೃತ್ಯಗಳನ್ನು ತೊರೆದುಬಿಟ್ಟು ದೇವರಲ್ಲಿ ನಂಬಿಕೆಯನ್ನಿಟ್ಟು ಕ್ರಿಸ್ತನಲ್ಲಿ ನಮ್ಮ ಜೀವನವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ನಮಗೆ ದೀಕ್ಷಾಸ್ನಾನ, ಹಸ್ತಾರ್ಪಣ, ಸತ್ತವರ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಇವುಗಳನ್ನು ಕುರಿತು ಬೋಧಿಸಲಾಯಿತು. ಆದರೆ ಈಗ ನಾವು ಪೂರ್ಣ ತಿಳುವಳಿಕೆಗೆ ಹೋಗುವುದು ಅಗತ್ಯವಾಗಿದೆ. ದೇವರ ಚಿತ್ತವಾದರೆ ಹೀಗೆ ಮುಂದಕ್ಕೆ ಸಾಗುತ್ತಾ ಹೋಗುವೆವು.

4-6 ಕ್ರಿಸ್ತನ ಮಾರ್ಗವನ್ನು ಜನರು ಬಿಟ್ಟುಹೋದ ನಂತರ, ನೀವು ಅವರ ಜೀವನವನ್ನು ಮತ್ತೆ ಪರಿವರ್ತಿಸಲು ಸಾಧ್ಯವೇ? ನಾನು ಸತ್ಯವನ್ನು ತಿಳಿದುಕೊಂಡ ಜನರನ್ನು ಕುರಿತು ಮಾತಾಡುತ್ತಿದ್ದೇನೆ. ಅವರು ದೇವರ ವರಗಳನ್ನು ಪಡೆದವರೂ ಪವಿತ್ರಾತ್ಮನಲ್ಲಿ ಪಾಲುಗಾರರೂ ಆಗಿದ್ದಾರೆ. ದೇವರು ಹೇಳಿದ ಸಂಗತಿಗಳನ್ನು ಅವರು ಕೇಳಿದವರೂ ದೇವರ ಹೊಸಲೋಕದ ಮಹಾಶಕ್ತಿಗಳನ್ನು ನೋಡಿದವರೂ ಆಗಿದ್ದಾರೆ. ಅವುಗಳೆಲ್ಲ ಉತ್ತಮವಾದವುಗಳೆಂಬುದನ್ನು ಅವರು ಕಲಿತುಕೊಂಡಿದ್ದಾರೆ. ಆದರೂ ಅವರು ಕ್ರಿಸ್ತನ ಮಾರ್ಗವನ್ನು ಬಿಟ್ಟುಹೋದರು. ಅವರ ಜೀವಿತವನ್ನು ಮತ್ತೆ ಪರಿವರ್ತಿಸಿ ಕ್ರಿಸ್ತನ ಬಳಿಗೆ ಬರಮಾಡಲು ಸಾಧ್ಯವಿಲ್ಲ. ಏಕೆಂದರೆ ಕ್ರಿಸ್ತನನ್ನು ಬಿಟ್ಟುಹೋದ ಅವರು ಕ್ರಿಸ್ತನನ್ನು ಮತ್ತೆ ಶಿಲುಬೆಗೇರಿಸಿ ಮೊಳೆಗಳನ್ನು ಹೊಡೆಯುವವರೂ ಜನರೆಲ್ಲರ ಮುಂದೆ ಕ್ರಿಸ್ತನಿಗೆ ಅವಮಾನ ಮಾಡುವವರೂ ಆಗಿದ್ದಾರೆ.

ಆ ಜನರು ತನ್ನ ಮೇಲೆ ಪದೇಪದೇ ಸುರಿಯುವ ಮಳೆಯನ್ನು ಹೀರಿಕೊಳ್ಳುವ ಭೂಮಿಯಂತಿದ್ದಾರೆ. ಅದು ಜನರಿಗೆ ಆಹಾರವನ್ನು ಕೊಡಲೆಂದು ರೈತನು ಅದರಲ್ಲಿ ಸಸಿಯನ್ನು ನೆಟ್ಟು ಬೆಳೆಸುತ್ತಾನೆ. ಅದು ಜನರಿಗೆ ಉಪಯುಕ್ತವಾದ ಬೆಳೆಗಳನ್ನು ಬೆಳೆಸಿದರೆ, ಅದಕ್ಕೆ ದೇವರಿಂದ ಆಶೀರ್ವಾದ ದೊರೆಯುತ್ತದೆ. ಆದರೆ ಅದು ಮುಳ್ಳುಗಿಡಗಳನ್ನೂ ಕಳೆಯನ್ನೂ ಬೆಳೆಸಿದರೆ ನಿಷ್ಪ್ರಯೋಜಕವಾಗಿ ದೇವರ ಶಾಪಕ್ಕೆ ಗುರಿಯಾಗುತ್ತದೆ. ಆ ಭೂಮಿಯನ್ನು ಬೆಂಕಿಯಿಂದ ಸುಟ್ಟು ನಾಶಮಾಡಲಾಗುವುದು.

ಪ್ರಿಯ ಸ್ನೇಹಿತರೇ, ನಾವು ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದರೂ ನಿಮ್ಮಿಂದ ಇದಕ್ಕಿಂತಲೂ ಉತ್ತಮವಾದ ಕಾರ್ಯಗಳನ್ನು ಅಪೇಕ್ಷಿಸುತ್ತೇವೆ. ರಕ್ಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ನೀವು ಮಾಡುತ್ತೀರೆಂದು ನಾವು ದೃಢವಾಗಿ ನಂಬಿದ್ದೇವೆ. 10 ದೇವರು ನ್ಯಾಯವಂತನಾಗಿದ್ದಾನೆ. ನೀವು ಮಾಡಿದ ಉಪಕಾರವನ್ನು ಮತ್ತು ದೇವಜನರಿಗೆ ಸಹಾಯ ಮಾಡಿದ್ದರ ಮೂಲಕ ಮತ್ತು ಸಹಾಯ ಮಾಡುತ್ತಲೇ ಇರುವುದರ ಮೂಲಕ ನೀವು ಆತನಿಗೆ ತೋರಿದ ಪ್ರೀತಿಯನ್ನು ಆತನು ಮರೆತುಬಿಡುವುದಿಲ್ಲ. 11 ನಿಮ್ಮಲ್ಲಿ ಪ್ರತಿಯೊಬ್ಬರು ತಮ್ಮ ಇಡೀ ಜೀವನದಲ್ಲಿ ಇದೇ ಆಸಕ್ತಿಯುಳ್ಳವರಾಗಿ ನಿಮ್ಮ ನಿರೀಕ್ಷೆಯನ್ನು ದೃಢಪಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. 12 ನೀವು ಸೋಮಾರಿಗಳಾಗಿರಬೇಕೆಂಬುದು ನಮ್ಮ ಅಪೇಕ್ಷೆಯಲ್ಲ. ದೇವರ ವಾಗ್ದಾನದ ಫಲಗಳನ್ನು ಪಡೆಯುವ ಜನರಂತೆ ನೀವಿರಬೇಕೆಂಬುದು ನಮ್ಮ ಅಪೇಕ್ಷೆ. ಆ ಜನರಿಗೆ ನಂಬಿಕೆ ಮತ್ತು ತಾಳ್ಮೆಯಿದ್ದುದರಿಂದ ಅವರು ದೇವರ ವಾಗ್ದಾನದಂತೆ ಫಲವನ್ನು ಪಡೆದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International