Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 91:9-16

ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
    ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
    ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
    ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
    ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
    ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
    ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
    ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
    ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”

ಯೆಶಾಯ 47:10-15

10 ನೀನು ದುಷ್ಕೃತ್ಯಗಳನ್ನು ಮಾಡುತ್ತಿರುವೆ, ಆದರೂ ನೀನು ಸುರಕ್ಷಿತಳಾಗಿದ್ದೇನೆ ಎಂದುಕೊಂಡಿರುವೆ.
    ‘ನಾನು ಮಾಡಿದ ದುಷ್ಕೃತ್ಯಗಳನ್ನು ಯಾರೂ ನೋಡುವದಿಲ್ಲ’ ಎಂದು ನೀನು ಭಾವಿಸಿಕೊಂಡಿರುವೆ.
    ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ಕಾಪಾಡುತ್ತವೆ ಎಂದು ತಿಳಿದುಕೊಂಡಿರುವೆ.
‘ನಾನೇ ಮಹಾವ್ಯಕ್ತಿ, ನನ್ನಂಥ ಮಹಾವ್ಯಕ್ತಿ ಬೇರೆ ಯಾರೂ ಇಲ್ಲ’ ಎಂದು ನೀನು ಅಂದುಕೊಳ್ಳುವೆ.

11 “ಆದರೆ ವಿಪತ್ತು ನಿನಗೆ ಪ್ರಾಪ್ತವಾಗುವದು.
    ಅವು ಯಾವಾಗ ಸಂಭವಿಸುತ್ತದೋ ನಿನಗೆ ತಿಳಿಯದು.
    ಆದರೆ ವಿಪತ್ತು ಸಂಭವಿಸುವದು.
    ನೀನು ಏನೇ ಮಾಡಿದರೂ ಆ ವಿಪತ್ತನ್ನು ತಡೆಯಲಾಗದು.
12 ಮಾಟಮಂತ್ರಗಳನ್ನು ಕಲಿತುಕೊಳ್ಳುವುದರಲ್ಲೇ
    ನಿನ್ನ ಜೀವಮಾನವನ್ನು ಕಳೆದಿರುವೆ.
ಸರಿ, ತಂತ್ರಮಂತ್ರಗಳನ್ನು ಮಾಡಲು ಪ್ರಾರಂಭಿಸು.
    ಒಂದುವೇಳೆ ಅವು ನಿನಗೆ ಸಹಾಯ ಮಾಡಬಹುದು.
    ಒಂದುವೇಳೆ ಕೆಲವರನ್ನು ನೀನು ಭಯಪಡಿಸಬಹುದು.
13 ನಿನಗೆ ಅನೇಕಾನೇಕ ಸಲಹೆಗಾರರಿದ್ದಾರೆ.
    ಅವರು ನಿನಗೆ ಕೊಡುವ ಸಲಹೆಗಳಿಂದ ನೀನು ಬೇಸರಗೊಂಡಿರುವಿಯಾ?
ಹಾಗಾದರೆ ನಿನ್ನಲ್ಲಿರುವ ಖಗೋಳಶಾಸ್ತ್ರಜ್ಞರನ್ನು ಕರೆಯಿಸು.
    ತಿಂಗಳು ಯಾವಾಗ ಪ್ರಾರಂಭವಾಗುತ್ತದೆಯೆಂದು ಅವರು ಹೇಳಬಲ್ಲರು.
    ನಿನ್ನ ಸಂಕಟಗಳು ಯಾವಾಗ ಪ್ರಾಪ್ತವಾಗುತ್ತವೆಯೆಂದು ಅವರು ನಿನಗೆ ತಿಳಿಸಬಲ್ಲರು.
14 ಆದರೆ ಆ ಮನುಷ್ಯರಿಗೆ ತಮ್ಮನ್ನೇ ರಕ್ಷಿಸಲು ಅಸಾಧ್ಯವಾಗುವದು.
    ಅವರು ಹುಲ್ಲಿನಂತೆ ಸುಟ್ಟುಹೋಗುವರು.
    ರೊಟ್ಟಿಸುಡಲು ಕೆಂಡಗಳು ಕಾಣಿಸದಂತೆಯೂ ಚಳಿ ಕಾಯಿಸಿಕೊಳ್ಳಲು ಬೆಂಕಿ ಇರದಂತೆಯೂ ಅವರು ಕ್ಷಣಕಾಲದಲ್ಲಿ ಸುಟ್ಟುಹೋಗುವರು.
15 ನೀನು ಕಷ್ಟಪಟ್ಟು ಗಳಿಸಿದ ಸಂಪತ್ತಿಗೆಲ್ಲಾ ಹಾಗೆಯೇ ಆಗುವದು.
    ನಿನ್ನ ಜೀವಮಾನ ಕಾಲವೆಲ್ಲಾ ವ್ಯವಹಾರ ನಡಿಸಿದ್ದ ಜನರೆಲ್ಲಾ ನಿನ್ನನ್ನು ತೊರೆದುಬಿಡುವರು.
ಪ್ರತಿಯೊಬ್ಬನು ತನ್ನ ಸ್ವಂತದಾರಿ ಹಿಡಿಯುವನು.
    ಆಗ ನಿನ್ನನ್ನು ರಕ್ಷಿಸಲು ಯಾರೂ ಇರುವದಿಲ್ಲ.”

ಲೂಕ 22:24-30

ಸೇವಕರಂತಿರಿ

24 ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25 ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27 ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!

28 “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International