Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 91:9-16

ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
    ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
    ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
    ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
    ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
    ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
    ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
    ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
    ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”

ಯೆಶಾಯ 47:1-9

ಬಾಬಿಲೋನಿಗೆ ದೇವರ ಸಂದೇಶ

47 “ಕನ್ನಿಕೆಯೇ, ಬಾಬಿಲೋನಿನ ಕುಮಾರಿಯೇ
    ಕೆಳಕ್ಕಿಳಿದು ಧೂಳಿನ ಮೇಲೆ ಕುಳಿತಿಕೊ.
ಕಸ್ದೀಯರ ಕುಮಾರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೊ!
    ಈಗ ನೀನು ಯಜಮಾನಿಯಲ್ಲ.
ನೀನು ಕೋಮಲವಾದ ತರುಣಿ ಎಂದು ಜನರು ನಿನ್ನ ಬಗ್ಗೆ ಹೇಳುವದಿಲ್ಲ.
ಈಗ ನೀನು ದಾಸಿಯಾಗಿ ಕೆಲಸ ಮಾಡಬೇಕು.
    ನಿನ್ನ ಮನೋಹರವಾದ ಉಡುಪನ್ನು ತೆಗೆದುಹಾಕು.
ಬೀಸುವ ಕಲ್ಲನ್ನು ತೆಗೆದುಕೊಂಡು
    ಧಾನ್ಯವನ್ನು ಬೀಸು.
ಜನರು ನಿನ್ನ ತೊಡೆಗಳನ್ನು ನೋಡುವ ತನಕ
    ನಿನ್ನ ಉಡುಪನ್ನು ಎತ್ತಿ ಹೊಳೆಯನ್ನು ದಾಟು.
    ನಿನ್ನ ದೇಶವನ್ನು ಬಿಟ್ಟುಹೋಗು.
ಪುರುಷರು ನಿನ್ನ ಶರೀರವನ್ನು ನೋಡಿ
    ನಿನ್ನೊಂದಿಗೆ ಸಂಭೋಗಿಸುವರು.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನೀನು ಶಿಕ್ಷಿಸಲ್ಪಡುವೆ.
    ಯಾರೂ ನಿನಗೆ ಸಹಾಯಮಾಡಲು ಬರುವದಿಲ್ಲ.

“‘ದೇವರು ನಮ್ಮನ್ನು ರಕ್ಷಿಸುವನು.
    ಆತನ ಹೆಸರು ಸರ್ವಶಕ್ತನಾದ ಯೆಹೋವನು; ಇಸ್ರೇಲರ ಪರಿಶುದ್ಧನೆಂಬುದೇ ಆತನ ಹೆಸರು’
ಎಂದು ನನ್ನ ಜನರು ಹೇಳುವರು.”

“ಆದ್ದರಿಂದ ಬಾಬಿಲೋನೇ, ಅಲ್ಲಿ ಸುಮ್ಮನೆ ಕುಳಿತಿರು.
ಕಸ್ದೀಯರ ಕುಮಾರಿಯೇ ಕತ್ತಲೆಯೊಳಗೆ ಹೋಗಿ ಇರು,
    ಯಾಕೆಂದರೆ ನೀನು ‘ಜನಾಂಗಗಳ ರಾಣಿ’ ಎಂದು ಇನ್ನು ಮುಂದೆ ಕರೆಯಲ್ಪಡುವದಿಲ್ಲ.

“ನನ್ನ ಜನರ ಮೇಲೆ ನಾನು ಸಿಟ್ಟಿಗೆದ್ದಿದ್ದೆನು.
    ಅವರು ನನಗೆ ಸೇರಿದವರಾಗಿದ್ದಾರೆ.
    ಆದರೆ ನಾನು ಅವರ ಮೇಲೆ ಸಿಟ್ಟಾದೆನು.
ಆದ್ದರಿಂದ ನಾನು ಅವರನ್ನು ತಳ್ಳಿಬಿಟ್ಟೆನು.
    ಅವರನ್ನು ನಿನಗೆ ಕೊಟ್ಟೆನು;
ನೀನು ಅವರನ್ನು ಶಿಕ್ಷಿಸಿದೆ.
    ಅವರ ಮೇಲೆ ಕರುಣೆ ತೋರಿಸಲಿಲ್ಲ.
ವೃದ್ಧರೂ ಕಷ್ಟದ ಕೆಲಸ ಮಾಡುವಂತೆ ಮಾಡಿದೆ.
‘ನಾನು ನಿತ್ಯಕಾಲಕ್ಕೂ ವಾಸಿಸುತ್ತೇನೆ.
    ನಾನು ಯಾವಾಗಲೂ ರಾಣಿಯಾಗಿಯೇ ಇರುವೆನು’ ಎಂದು ನೀನು ಹೇಳುವೆ.
ಅವರಿಗೆ ನೀನು ಮಾಡಿದ ದುಷ್ಟಕ್ರಿಯೆಗಳನ್ನು ನೀನು ಗಮನಿಸಲೇ ಇಲ್ಲ.
    ಅದರ ಪರಿಣಾಮವನ್ನು ನೀನು ಆಲೋಚಿಸಲೇ ಇಲ್ಲ.
ಆದ್ದರಿಂದ ‘ಕೋಮಲ ಸ್ತ್ರೀಯೇ,’ ನನ್ನ ಮಾತನ್ನು ಕೇಳು.
ಸುರಕ್ಷಿತಳಾಗಿರುವೆ ಎಂದು ನೆನಸಿಕೊಂಡು ಹೀಗೆ ನಿನ್ನೊಳಗೆ,
    ‘ನಾನೇ ಮಹಾವ್ಯಕ್ತಿ. ನನ್ನಂಥ ಮಹಾವ್ಯಕ್ತಿ ಯಾರೂ ಇಲ್ಲ.
    ನಾನೆಂದಿಗೂ ವಿಧವೆಯಾಗುವದಿಲ್ಲ. ಯಾವಾಗಲೂ ನನಗೆ ಮಕ್ಕಳಿರುವರು’ ಎಂದುಕೊಳ್ಳುವೆ.
ಒಂದೇ ದಿನದೊಳಗೆ, ಒಂದೇ ಕ್ಷಣದಲ್ಲಿ ನಿನಗೆ ಎರಡು ಸಂಗತಿಗಳು ಸಂಭವಿಸುತ್ತವೆ.
    ನೀನು ನಿನ್ನ ಮಕ್ಕಳನ್ನು ಕಳೆದುಕೊಳ್ಳುವೆ, ಆ ಬಳಿಕ ನೀನು ನಿನ್ನ ಗಂಡನನ್ನು ಕಳಕೊಳ್ಳುವೆ.
    ಹೌದು, ಈ ವಿಷಯಗಳು ನಿನಗೆ ಖಂಡಿತವಾಗಿ ಸಂಭವಿಸುವವು. ನಿನ್ನಲ್ಲಿರುವ ಎಲ್ಲಾ ಮಾಟಮಂತ್ರಗಳು ನಿನ್ನನ್ನು ಕಾಪಾಡಲಾರವು.

ಪ್ರಕಟನೆ 17

ಮೃಗದ ಮೇಲಿದ್ದ ಸ್ತ್ರೀ

17 ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿದನು. ಏಳು ಪಾತ್ರೆಗಳನ್ನು ಹೊಂದಿದ್ದವರಲ್ಲಿ ಇವನೂ ಒಬ್ಬನಾಗಿದ್ದನು. ಆ ದೇವದೂತನು, “ಬಾ, ಪ್ರಸಿದ್ಧಳಾದ ವೇಶ್ಯಾಸ್ತ್ರೀಗೆ ನೀಡುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಬಹಳ ನೀರುಗಳ ಮೇಲೆ ಕುಳಿತುಕೊಂಡಿರುವವಳು ಅವಳೇ. ಲೋಕದ ರಾಜರುಗಳು ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು. ಲೋಕದ ಜನರು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ಹೇಳಿದನು.

ಬಳಿಕ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರಳುಗಾಡಿಗೆ ಹೋದನು. ಅಲ್ಲಿ ಒಬ್ಬ ಸ್ತ್ರೀಯು ಕೆಂಪು ಮೃಗದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ಬರೆದಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರ ವರ್ಣದ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದಳು. ಅವಳು ತಾನು ತೊಟ್ಟಿದ್ದ ಚಿನ್ನ, ರತ್ನ, ಮುತ್ತು, ಮುಂತಾದವುಗಳಿಂದ ಪ್ರಕಾಶಿಸುತ್ತಿದ್ದಳು. ಅವಳು ತನ್ನ ಕೈಯಲ್ಲಿ ಚಿನ್ನದ ಬಟ್ಟಲನ್ನು ಹಿಡಿದಿದ್ದಳು. ಆ ಬಟ್ಟಲು ಅಸಹ್ಯವಾದವುಗಳಿಂದ ಮತ್ತು ಅವಳ ಲೈಂಗಿಕ ಪಾಪಗಳ ಅಶುದ್ಧತೆಯಿಂದ ತುಂಬಿಹೋಗಿತ್ತು. ಅವಳ ಹಣೆಯ ಮೇಲೆ ಒಂದು ಬರಹವನ್ನು ಬರೆದಿತ್ತು. ಆ ಬರಹಕ್ಕೆ ಗೂಢಾರ್ಥವಿತ್ತು. ಅಲ್ಲಿ ಬರೆದಿದ್ದುದು ಹೀಗಿತ್ತು:

ಬಾಬಿಲೋನ್ ಎಂಬ ಮಹಾನಗರಿಯು

ಭೂಮಿಯಲ್ಲಿರುವ ಕೆಟ್ಟಕಾರ್ಯಗಳಿಗೆ

ಮತ್ತು ಜಾರಸ್ತ್ರೀಯರಿಗೆ ತಾಯಿ.

ಆ ಸ್ತ್ರೀಯು ಕುಡಿದು ಮತ್ತಳಾಗಿರುವುದನ್ನು ನಾನು ನೋಡಿದೆನು. ಅವಳು ದೇವರ ಪರಿಶುದ್ಧ ಜನರ ರಕ್ತವನ್ನು ಕುಡಿದು ಮತ್ತಳಾಗಿದ್ದಳು. ಯೇಸುವಿನಲ್ಲಿ ತಮಗಿರುವ ನಂಬಿಕೆಯ ಕುರಿತಾಗಿ ತಿಳಿಸಿದ ಜನರ ರಕ್ತವನ್ನು ಅವಳು ಕುಡಿದು ಮತ್ತಳಾಗಿದ್ದಳು.

ಆ ಸ್ತ್ರೀಯನ್ನು ನಾನು ನೋಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆಗ ದೇವದೂತನು ನನಗೆ, “ನೀನೇಕೆ ಆಶ್ಚರ್ಯಗೊಂಡೆ? ಈ ಸ್ತ್ರೀಯ ಗೂಢಾರ್ಥವನ್ನು ಮತ್ತು ಈಕೆ ಸವಾರಿ ಮಾಡುತ್ತಿರುವ ಏಳು ತಲೆಗಳನ್ನು ಮತ್ತು ಹತ್ತು ಕೊಂಬುಗಳನ್ನು ಹೊಂದಿರುವ ಮೃಗದ ಗೂಢಾರ್ಥವನ್ನು ನಾನು ನಿನಗೆ ಹೇಳುತ್ತೇನೆ. ನೀನು ನೋಡಿದ ಆ ಮೃಗವು ಒಂದು ಕಾಲದಲ್ಲಿ ಜೀವಿಸಿತ್ತು. ಆದರೆ ಈಗ ಆ ಮೃಗವು ಜೀವಂತವಾಗಿಲ್ಲ. ಆದರೆ ಆ ಮೃಗವು ತಳವಿಲ್ಲದ ಕೂಪದಿಂದ ಜೀವಂತವಾಗಿ ಮೇಲೆದ್ದುಬಂದು ನಾಶವಾಗು ವುದು. ಲೋಕದಲ್ಲಿ ಜೀವಿಸುತ್ತಿರುವ ಜನರು ಆ ಮೃಗವನ್ನು ನೋಡಿ, ಅದು ಒಂದು ಕಾಲದಲ್ಲಿ ಜೀವಂತವಾಗಿತ್ತು, ಈಗ ಇಲ್ಲ, ಆದರೆ ಮತ್ತೆ ಬರುವುದು ಎಂಬುದನ್ನು ತಿಳಿದು ಅವರು ಆಶ್ಚರ್ಯಪಡುವರು. ಲೋಕವು ಸೃಷ್ಟಿಯಾದಂದಿನಿಂದ ಜೀವಬಾಧ್ಯರ ಪುಸ್ತಕದಲ್ಲಿ ಈ ಜನರ ಹೆಸರುಗಳನ್ನು ಬರೆದೇ ಇಲ್ಲ.

“ಇದನ್ನು ಅರ್ಥಮಾಡಿಕೊಳ್ಳಲು ನಿನಗೆ ಬುದ್ಧಿ ಬೇಕು. ಆ ಮೃಗದ ಏಳು ತಲೆಗಳೇ ಆ ಸ್ತ್ರೀಯು ಕುಳಿತುಕೊಳ್ಳುವ ಏಳು ಬೆಟ್ಟಗಳಾಗಿವೆ. ಅವು ಏಳು ಮಂದಿ ರಾಜರುಗಳೂ ಆಗಿವೆ. 10 ಐದು ಮಂದಿ ರಾಜರುಗಳು ಈಗಾಗಲೇ ಸತ್ತಿದ್ದಾರೆ. ಒಬ್ಬ ರಾಜನು ಮಾತ್ರ ಈಗ ಜೀವಿಸಿದ್ದಾನೆ. ಕೊನೆಯ ರಾಜನು ಬರುತ್ತಾನೆ. ಅವನು ಬಂದು ಸ್ವಲ್ಪಕಾಲ ಮಾತ್ರ ಇರುತ್ತಾನೆ. 11 ಒಂದುಕಾಲದಲ್ಲಿ ಜೀವಿಸಿದ್ದು, ಆದರೆ ಈಗ ಜೀವಿಸಿಲ್ಲದ ಈ ಮೃಗವು ಎಂಟನೆಯ ರಾಜ. ಈ ಎಂಟನೆಯ ರಾಜನೂ ಮೊದಲ ಏಳು ರಾಜರುಗಳ ಗುಂಪಿಗೆ ಸೇರಿದವನು. ಅವನೂ ನಾಶವಾಗುತ್ತಾನೆ.

12 “ನೀನು ನೋಡಿದ ಹತ್ತು ಕೊಂಬುಗಳೇ ಹತ್ತು ರಾಜರುಗಳಾಗಿವೆ. ಈ ಹತ್ತು ರಾಜರುಗಳು ಇನ್ನೂ ತಮ್ಮ ರಾಜ್ಯವನ್ನು ಪಡೆದಿಲ್ಲ. ಆದರೆ ಅವರು ಆಳುವ ಅಧಿಕಾರವನ್ನು ಮೃಗದ ಸಂಗಡ ಒಂದು ಗಂಟೆ ಪಡೆಯುತ್ತಾರೆ. 13 ಈ ಹತ್ತು ರಾಜರುಗಳೆಲ್ಲರೂ ಒಂದೇ ಉದ್ದೇಶವುಳ್ಳವರಾಗಿದ್ದಾರೆ. ಅವರು ತಮ್ಮ ಶಕ್ತಿಯನ್ನು ಮತ್ತು ಅಧಿಕಾರವನ್ನು ಮೃಗಕ್ಕೆ ಕೊಡುತ್ತಾರೆ. 14 ಅವರು ಕುರಿಮರಿಯಾದಾತನ ವಿರುದ್ಧ ಯುದ್ಧಗಳನ್ನು ಮಾಡುತ್ತಾರೆ. ಆದರೆ ಕುರಿಮರಿಯಾದಾತನು ಪ್ರಭುಗಳ ಪ್ರಭುವಾದ್ದರಿಂದ ಮತ್ತು ರಾಜಾಧಿರಾಜನಾದ್ದರಿಂದ ಅವರನ್ನು ಸೋಲಿಸುತ್ತಾನೆ. ಆತನೊಂದಿಗೆ, ತಾನು ಕರೆದಿರುವ ಜನರು, ಆಯ್ಕೆಮಾಡಿಕೊಂಡಿರುವ ಜನರು ಮತ್ತು ತನ್ನ ನಂಬಿಗಸ್ತ ಹಿಂಬಾಲಕರು ಇದ್ದರು” ಎಂದನು.

15 ನಂತರ ದೇವದೂತನು ನನಗೆ ಹೀಗೆ ಹೇಳಿದನು: “ಆ ವೇಶ್ಯೆಯು ಕುಳಿತುಕೊಳ್ಳುವ ನೀರುಗಳನ್ನು ನೀನು ನೋಡಿದೆ. ಈ ನೀರುಗಳು ಈ ಲೋಕದ ಅನೇಕ ಜನರನ್ನೂ ವಿವಿಧ ಜನಾಂಗಗಳನ್ನೂ ಪ್ರಜೆಗಳನ್ನೂ ಭಾಷೆಗಳನ್ನೂ ಸೂಚಿಸು ತ್ತವೆ. 16 ನೀನು ನೋಡಿದ ಆ ಮೃಗ ಮತ್ತು ಅದರ ಹತ್ತು ಕೊಂಬುಗಳು (ರಾಜರುಗಳು) ಆ ವೇಶ್ಯೆಯನ್ನು ದ್ವೇಷಿಸುತ್ತವೆ. ಅವಳಲ್ಲಿರುವುದನ್ನೆಲ್ಲ ಅವರು ಕಿತ್ತುಕೊಂಡು, ಅವಳನ್ನು ನಗ್ನಾವಸ್ಥೆಯಲ್ಲಿ ಬಿಡುತ್ತಾರೆ. ಅವರು ಅವಳ ದೇಹವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. 17 ತನ್ನ ಕಾರ್ಯವನ್ನು ಮಾಡಬೇಕೆಂಬ ಬಯಕೆಯನ್ನು ದೇವರು ಆ ಹತ್ತು ರಾಜರುಗಳಲ್ಲಿ ಉಂಟುಮಾಡಿದ್ದರಿಂದ ಅವರು ಆಳಲು ತಮಗಿದ್ದ ಅಧಿಕಾರವನ್ನು ಮೃಗಕ್ಕೆ ಕೊಡಲು ಸಮ್ಮತಿಸಿದರು. ದೇವರು ಹೇಳಿದ್ದೆಲ್ಲ ಸಂಪೂರ್ಣವಾಗಿ ನೆರವೇರುವ ತನಕ ಅವರು ಆಳುತ್ತಾರೆ. 18 ನೀನು ನೋಡಿದ ಸ್ತ್ರೀಯು ಲೋಕದ ರಾಜರುಗಳನ್ನು ಆಳುವ ಮಹಾನಗರಿಯಾಗಿದ್ದಾಳೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International