Revised Common Lectionary (Complementary)
9 ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”
17 ಅಬ್ರಾಮನು ಕೆದೊರ್ಲಗೋಮರನನ್ನೂ ಮತ್ತು ಅವನೊಡನಿದ್ದ ರಾಜರುಗಳನ್ನೂ ಸೋಲಿಸಿದ ಮೇಲೆ ತನ್ನ ಮನೆಗೆ ಹಿಂತಿರುಗಿದನು. ಆಗ ಸೊದೋಮಿನ ರಾಜನು ಅಬ್ರಾಮನನ್ನು ಭೇಟಿಯಾಗಲು ಶಾವೆ ಕಣಿವೆಗೆ ಹೋದನು. (ಈಗ ಇದಕ್ಕೆ ರಾಜನ ಕಣಿವೆ ಎಂದು ಕರೆಯುತ್ತಾರೆ.)
ಮೆಲ್ಕೀಚೆದೆಕನು
18 ಸಾಲೇಮಿನ ರಾಜನಾದ ಮೆಲ್ಕೀಚೆದೆಕನು ಸಹ ಅಬ್ರಾಮನನ್ನು ಭೇಟಿಯಾಗಲು ಹೋದನು. ಮಹೋನ್ನತನಾದ ದೇವರ ಯಾಜಕನಾಗಿದ್ದ ಅವನು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಬಂದು, 19 ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:
“ಅಬ್ರಾಮನೇ, ಮಹೋನ್ನತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದಾತನು ಆತನೇ.
20 ನಿನ್ನ ಶತ್ರುಗಳನ್ನು ಸೋಲಿಸಲು
ನಿನಗೆ ಸಹಾಯ ಮಾಡಿದ ಮಹೋನ್ನತನಾದ ದೇವರಿಗೆ ಕೊಂಡಾಟವಾಗಲಿ.”
ಅಬ್ರಾಮನು ಯುದ್ಧದಿಂದ ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು. 21 ಬಳಿಕ ಸೊದೋಮಿನ ರಾಜನು ಅಬ್ರಾಮನಿಗೆ, “ಈ ವಸ್ತುಗಳನ್ನೆಲ್ಲ ನೀನೇ ಇಟ್ಟುಕೊ. ಶತ್ರುಗಳು ವಶಪಡಿಸಿಕೊಂಡಿರುವ ನನ್ನ ಜನರನ್ನು ಮಾತ್ರ ನನಗೆ ಕೊಡು” ಎಂದು ಹೇಳಿದನು.
22 ಆದರೆ ಅಬ್ರಾಮನು ಅವನಿಗೆ, “ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಮಹೋನ್ನತನಾಗಿರುವ ದೇವರಾದ ಯೆಹೋವನಿಗೆ ಪ್ರಮಾಣಮಾಡಿ ಹೇಳುವುದೇನೆಂದರೆ, 23 ನಿನ್ನದಾಗಿರುವ ಯಾವುದನ್ನೂ ನಾನು ಇಟ್ಟುಕೊಳ್ಳುವುದಿಲ್ಲ; ಅದು ದಾರವಾಗಿದ್ದರೂ, ಪಾದರಕ್ಷೆಯ ಬಾರಾಗಿದ್ದರೂ, ನಾನಿಟ್ಟುಕೊಳ್ಳುವುದಿಲ್ಲ. ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದೆ’ ಎಂದು ನೀನು ಹೇಳಿಕೊಳ್ಳುವುದು ನನಗೆ ಬೇಕಾಗಿಲ್ಲ. 24 ನನ್ನ ಯೌವನಸ್ಥರು ತಿಂದ ಆಹಾರದ ಹೊರತು ಬೇರೆ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ. ಆದರೆ ಬೇರೆ ಜನರಿಗೆ ಅವರ ಪಾಲನ್ನು ಕೊಡು. ನಾವು ಯುದ್ಧದಲ್ಲಿ ಗೆದ್ದುತಂದ ವಸ್ತುಗಳನ್ನು ತೆಗೆದುಕೊ; ಆನೇರ್, ಎಷ್ಕೋಲ ಮತ್ತು ಮಮ್ರೆಯರಿಗೆ ಅವರ ಪಾಲನ್ನು ಕೊಡು. ಈ ಜನರು ಯುದ್ಧದಲ್ಲಿ ನನಗೆ ಸಹಾಯ ಮಾಡಿದರು” ಎಂದು ಹೇಳಿದನು.
7 ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. 8 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ 9 ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.”(A)
10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:
“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.”(B)
11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:
“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.”(C)
12 ಯೆಶಾಯನು ಹೀಗೆ ಹೇಳಿದ್ದಾನೆ:
“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.”(D)
13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.
Kannada Holy Bible: Easy-to-Read Version. All rights reserved. © 1997 Bible League International