Revised Common Lectionary (Complementary)
ರಚನೆಗಾರ: ದಾವೀದ.
26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
2 ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
3 ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
4 ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
ನಾನು ಕಪಟಿಗಳ ಜೊತೆ ಸೇರುವವನಲ್ಲ.
5 ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
6 ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
7 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
8 ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
ನನಗೆ ಎಷ್ಟೋ ಪ್ರಿಯವಾಗಿವೆ.
9 ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.
17 ಆದರೆ ಚೀಯೋನ್ ಬೆಟ್ಟದಲ್ಲಿ ಅಳಿದುಳಿದವರು ಇರುವರು.
ಅವರು ನನ್ನ ವಿಶೇಷ ಜನರಾಗಿರುವರು.
ಯಾಕೋಬನ ಜನರು ತಮಗೆ ಸೇರಿರುವದನ್ನು
ಹಿಂದಕ್ಕೆ ಪಡೆದುಕೊಳ್ಳುವರು.
18 ಯಾಕೋಬನ ಸಂತತಿಯವರು ಬೆಂಕಿಯಂತಿರುವರು.
ಯೋಸೇಫನ ಜನಾಂಗವು ಬೆಂಕಿಯ ನಾಲಗೆಗಳಂತೆ ಇರುವರು.
ಆದರೆ ಏಸಾವಿನ ಜನಾಂಗ ಸುಟ್ಟ ಬೂದಿಯಂತಿರುವರು.
ಯೆಹೂದದ ಜನರು ಎದೋಮನನ್ನು ಸುಟ್ಟುಹಾಕುವರು.
ಯೆಹೂದದ ಜನರು ಎದೋಮನನ್ನು ನಾಶಮಾಡುವರು.
ಆಗ ಏಸಾವಿನ ಜನರಲ್ಲಿ ಯಾರೂ ಉಳಿಯುವದಿಲ್ಲ.”
ಯಾಕೆಂದರೆ ಇದು ದೇವರಾದ ಯೆಹೋವನ ಮಾತು.
19 ಆಗ ನೆಗೆವಿನ ಜನರು ಏಸಾವಿನ ಪರ್ವತಗಳಲ್ಲಿ ವಾಸಿಸುವರು.
ಬೆಟ್ಟದ ಕೆಳಗೆ ವಾಸಿಸುವವರು ಫಿಲಿಷ್ಟಿಯರ ದೇಶವನ್ನು ಆಕ್ರಮಿಸುವರು.
ಎಫ್ರಾಯೀಮ್ ಮತ್ತು ಸಮಾರ್ಯದ ಜನರು ಜೀವಿಸುವರು.
ಗಿಲ್ಯಾದ್ ಪ್ರಾಂತ್ಯವು ಬೆನ್ಯಾಮೀನರಿಗೆ ಸೇರುವದು.
20 ಸೆರೆ ಒಯ್ಯಲ್ಪಟ್ಟ ಇಸ್ರೇಲರು ಚಾರೆಪ್ತದವರೆಗೆ ಕಾನಾನ್ ದೇಶವನ್ನು ವಶಪಡಿಸಿಕೊಳ್ಳುವರು.
ಸೆಫಾರದಿನಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ನೆಗೆವಿನ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
21 ವಿಜಯಿಗಳು ಚೀಯೋನ್ ಬೆಟ್ಟವನ್ನೇರಿ
ಏಸಾವಿನ ಪರ್ವತಗಳಲ್ಲಿ ವಾಸಿಸುವ ಜನರನ್ನಾಳುವರು.
ಆಗ ಸಾಮ್ರಾಜ್ಯವು ಯೆಹೋವನಿಗೆ ಸೇರುವುದು.
ಐಶ್ವರ್ಯವಂತನು ಮತ್ತು ಲಾಜರನು
19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.
25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.
27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.
29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.
30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.
31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International