Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 26

ರಚನೆಗಾರ: ದಾವೀದ.

26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
    ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
    ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
    ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
    ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
    ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.

ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
    ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
    ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
    ನನಗೆ ಎಷ್ಟೋ ಪ್ರಿಯವಾಗಿವೆ.

ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
    ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
    ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
    ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
    ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.

ಒಬದ್ಯ 10-16

10 ನೀನು ನಾಚಿಕೆಯಿಂದ ಮುಚ್ಚಲ್ಪಡುವೆ, ನಿರಂತರಕ್ಕೂ ನಾಶವಾಗುವೆ.
    ಯಾಕೆಂದರೆ ನೀನು ನಿನ್ನ ಸಹೋದರನಾದ ಯಾಕೋಬನೊಂದಿಗೆ ಕ್ರೂರವಾಗಿ ನಡೆದುಕೊಂಡೆ.
11 ನೀನು ಇಸ್ರೇಲರ ವೈರಿಯೊಂದಿಗೆ ಸೇರಿಕೊಂಡೆ.
    ಅನ್ಯರು ಇಸ್ರೇಲಿನ ಐಶ್ವರ್ಯವನ್ನು ಎತ್ತಿಕೊಂಡು ಹೋದರು.
ಪರದೇಶಿಗಳು ಇಸ್ರೇಲ್ ಪಟ್ಟಣದ ಬಾಗಿಲನ್ನು ಪ್ರವೇಶಿಸಿದರು.
    ಆ ಪರದೇಶಿಗಳು ಜೆರುಸಲೇಮಿನ ಯಾವ ಭಾಗ ತಮಗೆ ದೊರಕಬೇಕೆಂದು ಚೀಟುಹಾಕಿದರು.
    ಆಗ ನೀನು ನಿನ್ನ ಪಾಲನ್ನು ತೆಗೆದುಕೊಳ್ಳಲು ಅವರೊಂದಿಗಿದ್ದೆ.
12 ನಿನ್ನ ಸಹೋದರನ ಸಂಕಟದಲ್ಲಿ ನೀನು ಹರ್ಷಿಸಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
ಯೆಹೂದವನ್ನು ನಾಶಮಾಡುವಾಗ ನೀನು ಸಂತೋಷಪಟ್ಟೆ.
    ನೀನು ಹಾಗೆ ಮಾಡಬಾರದಾಗಿತ್ತು.
ನೀನು ಅವರ ಸಂಕಟ ಕಾಲದಲ್ಲಿ ಕೊಚ್ಚಿಕೊಂಡೆ.
    ನೀನು ಹಾಗೆ ಮಾಡಬಾರದಾಗಿತ್ತು.
13 ನನ್ನ ಜನರ ನಗರದ ಬಾಗಿಲನ್ನು ನೀನು ಪ್ರವೇಶಿಸಿ ಅವರ ತೊಂದರೆಗಳನ್ನು ನೋಡಿ ನೀನು ಹಾಸ್ಯ ಮಾಡಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
ಅವರು ಸಂಕಟಪಡುತ್ತಿರುವಾಗ ನೀನು ಅವರ ಐಶ್ವರ್ಯವನ್ನು ಸೂರೆಮಾಡಿದೆ.
    ನೀನು ಹಾಗೆ ಮಾಡಬಾರದಿತ್ತು.
14 ದಾರಿಯ ಚೌಕದಲ್ಲಿ ನೀನು ನಿಂತುಕೊಂಡು ತಪ್ಪಿಸಿಕೊಂಡು ಹೋಗುವವರನ್ನು ಸಾಯಿಸಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
    ತಪ್ಪಿಸಿಕೊಂಡು ಹೋದವರನ್ನು ನೀನು ಸೆರೆಹಿಡಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
15 ಎಲ್ಲಾ ಜನಾಂಗಗಳವರಿಗೆ
    ಯೆಹೋವನ ದಿನವು ಬೇಗನೇ ಬರುವದು.
ನೀನು ಬೇರೆಯವರಿಗೆ ಮಾಡಿದ ದುಷ್ಕೃತ್ಯಗಳನ್ನು ಅವರು ನಿನ್ನ ಮೇಲೆಯೇ ನಡೆಸುವರು.
    ಅದೇ ದುಷ್ಕೃತ್ಯಗಳು ನಿನ್ನ ತಲೆ ಮೇಲೆ ಬೀಳುವವು.
16 ಯಾಕೆಂದರೆ ನನ್ನ ಪರಿಶುದ್ಧ ಪರ್ವತದಲ್ಲಿ ರಕ್ತವನ್ನು ಸುರಿಸಿದೆ.
    ನೀನು ಹುಟ್ಟಲೇ ಇಲ್ಲ ಎಂಬುದಾಗಿ ಅನಿಸುವದು.
ಆದ್ದರಿಂದ ಇತರ ಜನಾಂಗಗಳು ನಿನ್ನ ರಕ್ತವನ್ನು ಸುರಿಸುತ್ತವೆ.
    ನೀನು ಕೊನೆಗೊಳ್ಳುವೆ.

ಪ್ರಕಟನೆ 8:1-5

ಏಳನೆಯ ಮುದ್ರೆ

ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.

ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International