Revised Common Lectionary (Complementary)
ರಚನೆಗಾರ: ದಾವೀದ.
26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
2 ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
3 ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
4 ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
ನಾನು ಕಪಟಿಗಳ ಜೊತೆ ಸೇರುವವನಲ್ಲ.
5 ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
6 ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
7 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
8 ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
ನನಗೆ ಎಷ್ಟೋ ಪ್ರಿಯವಾಗಿವೆ.
9 ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.
ಎದೋಮ್ ಶಿಕ್ಷಿಸಲ್ಪಡುವದು
1 ಒಬದ್ಯನಿಗೆ ಆದ ದೈವದರ್ಶನ. ನನ್ನ ಒಡೆಯನಾದ ಯೆಹೋವನು ಎದೋಮಿನ ಬಗ್ಗೆ ಹೀಗೆ ಹೇಳುತ್ತಾನೆ:
ದೇವರಾದ ಯೆಹೋವನಿಂದ ನಾವು ಒಂದು ಸುದ್ಧಿ ಕೇಳಿದೆವು.
ಒಬ್ಬ ಸಂದೇಶದೂತನು ಜನಾಂಗಗಳ ಕಡೆಗೆ ಕಳುಹಿಸಲ್ಪಟ್ಟನು.
ಅವನು ಹೇಳಿದ್ದೇನೆಂದರೆ, “ಬನ್ನಿ, ನಾವು ಎದೋಮಿಗೆ ವಿರುದ್ಧವಾಗಿ ಯುದ್ಧಮಾಡೋಣ.”
ಯೆಹೋವನು ಎದೋಮಿನೊಂದಿಗೆ ಮಾತನಾಡುತ್ತಾನೆ
2 “ಎದೋಮೇ, ನಿನ್ನನ್ನು ನಾನು ಅತ್ಯಂತ ಚಿಕ್ಕದಾದ ಜನಾಂಗವನ್ನಾಗಿ ಮಾಡುವೆನು.
ಎಲ್ಲರೂ ನಿನ್ನನ್ನು ಹೆಚ್ಚಾಗಿ ಹಗೆ ಮಾಡುವರು.
3 ನಿನ್ನ ಹೆಚ್ಚಳಿಕೆಯು ನಿನ್ನನ್ನು ಮರುಳುಗೊಳಿಸಿತು.
ನೀನು ಎತ್ತರವಾದ ಬೆಟ್ಟದಂಚಿನ ಗುಹೆಗಳಲ್ಲಿ ವಾಸಿಸುವೆ.
ನಿನ್ನ ಮನೆಯು ಪರ್ವತಗಳಲ್ಲಿದೆ.
ಆದ್ದರಿಂದ ನೀನು ನಿನ್ನಲ್ಲಿ ಹೇಳಿಕೊಳ್ಳುವದೇನೆಂದರೆ,
‘ಯಾರೂ ನನ್ನನ್ನು ಕೆಳಗೆ ಭೂಮಿಯ ಮೇಲೆ ಇಳಿಸಲಾರರು.’”
ಎದೋಮನು ಅದೋಗತಿಗೆ ಸೇರುವನು
4 ದೇವರಾದ ಯೆಹೋವನು ಹೀಗೆ ಹೇಳುತ್ತಾನೆ:
“ನೀನು ಹದ್ದಿನಂತೆ ಉನ್ನತದಲ್ಲಿ ಹಾರಾಡಿದರೂ,
ನಕ್ಷತ್ರಗಳಲ್ಲಿ ಗೂಡುಕಟ್ಟಿದರೂ ಸಹ
ಅಲ್ಲಿಂದಲೂ ನಾನು ನಿನ್ನನ್ನು ಕೆಳಕ್ಕೆ ತರುವೆನು.
5 ನೀನು ಸಂಪೂರ್ಣವಾಗಿ ನಾಶವಾಗುವೆ.
ಕಳ್ಳರು ನಿನ್ನ ಬಳಿಗೆ ಬರುವರು,
ದರೋಡೆಗಾರರು ರಾತ್ರಿವೇಳೆ ಬರುವರು.
ಅವರು ತಮಗೆ ಇಷ್ಟಬಂದದ್ದನ್ನೆಲ್ಲಾ ದೋಚುವರು.
ನಿನ್ನ ತೋಟದಲ್ಲಿ ಕೆಲಸಗಾರರು ದ್ರಾಕ್ಷೆಯನ್ನು ಕೊಯ್ಯುವಾಗ
ಕೆಲವೊಂದನ್ನು ಬಿಟ್ಟುಬಿಡುವರು.
6 ಆದರೆ ವೈರಿಯು ಏಸಾವಿನ ಗುಪ್ತನಿಧಿಗಾಗಿ ಹುಡುಕುವರು;
ಅವರು ಎಲ್ಲವನ್ನು ಕಂಡುಹಿಡಿಯುವರು.
7 ನಿನ್ನ ಸ್ನೇಹಿತರಂತಿದ್ದ ಜನರೆಲ್ಲರೂ ಸೇರಿ
ನಿನ್ನನ್ನು ನಿನ್ನ ದೇಶದಿಂದ ಹೊರಗಟ್ಟುವರು.
ನಿನ್ನೊಡನೆ ಸಮಾಧಾನದಲ್ಲಿದ್ದ ಜನರು
ನಿನ್ನನ್ನು ಮೋಸಪಡಿಸಿ ಸೋಲಿಸುವರು.
ನಿನ್ನೊಂದಿಗೆ ಯುದ್ಧದಲ್ಲಿ ಹೋರಾಡಿದವನು
ನಿನ್ನನ್ನು ಉರುಲಿನಲ್ಲಿ ಸಿಕ್ಕಿಸುವನು.
‘ಆದರೆ ಅದು ಅವನಿಗೆ ತಿಳಿಯುವುದೇ ಇಲ್ಲ’” ಎಂದು ಅನ್ನುವರು.
8 ಯೆಹೋವನು ಹೇಳುವುದೇನೆಂದರೆ, “ಆ ದಿವಸದಲ್ಲಿ
ಎದೋಮಿನಲ್ಲಿರುವ ಬುದ್ಧಿವಂತರನ್ನು ನಾಶಮಾಡುವೆನು.
ಏಸಾವಿನ ಪರ್ವತದಲ್ಲಿರುವ ಜಾಣರನ್ನು ನಾನು ನಾಶಮಾಡುವೆನು.
9 ತೇಮಾನನೇ, ನಿನ್ನ ಯುದ್ಧವೀರರು ಭಯಪಡುವರು.
ಏಸಾವಿನ ಪರ್ವತದಲ್ಲಿರುವ ಪ್ರತಿಯೊಬ್ಬನು ನಾಶವಾಗುವನು.
ಎಷ್ಟೋ ಮಂದಿ ಹತರಾಗುವರು.
ಜನರ ಮಹಾಸಮೂಹ
9 ಬಳಿಕ ನಾನು ನೋಡಿದಾಗ, ಜನರ ಮಹಾಸಮೂಹವನ್ನು ಕಂಡೆನು. ಅವರು ಎಣಿಸಲಾಗದಷ್ಟು ಅಸಂಖ್ಯಾತರಾಗಿದ್ದರು. ಅವರಲ್ಲಿ ಸಕಲ ಜನಾಂಗ, ಕುಲ, ಪ್ರಜೆಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೇಸು) ಮುಂದೆ ನಿಂತಿದ್ದರು. ಅವರೆಲ್ಲರೂ ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡು ಖರ್ಜೂರದ ಗರಿಗಳನ್ನು ತಮ್ಮ ಕೈಗಳಲ್ಲಿ ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು. 11 ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರ ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದೂತರೆಲ್ಲಾ ನಿಂತಿದ್ದರು. ದೇವದೂತರು ಸಿಂಹಾಸನದ ಮುಂದೆ ಮೊಣಕಾಲೂರಿ ದೇವರನ್ನು ಆರಾಧಿಸಿದರು. 12 ಅವರು, “ಆಮೆನ್! ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್!” ಎಂದರು.
13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.
14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.
ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[a] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International