Revised Common Lectionary (Complementary)
112 ಯೆಹೋವನಿಗೆ ಸ್ತೋತ್ರವಾಗಲಿ!
ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
2 ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
3 ಅವನ ಕುಟುಂಬದವರು ಐಶ್ವರ್ಯವಂತರಾಗುವರು.
ಅವನ ನೀತಿಯು ಶಾಶ್ವತವಾಗಿರುವುದು.
4 ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
5 ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
6 ಅವನೆಂದಿಗೂ ಬೀಳುವುದಿಲ್ಲ.
ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
7 ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
8 ಅವನ ಮನಸ್ಸು ದೃಢವಾಗಿರುವುದರಿಂದ
ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
9 ಅವನು ಬಡವರಿಗೆ ಉದಾರವಾಗಿ ಕೊಡುವನು.
ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
ಅವರ ದುರಾಶೆಯು ಈಡೇರದು.
ಇಬ್ಬರು ಕೆಟ್ಟ ಸಹೋದರಿಯರು: ಇಸ್ರೇಲ್ ಮತ್ತು ಯೆಹೂದ
6 ಯೆಹೂದ ಪ್ರದೇಶವನ್ನು ಯೋಷೀಯನು ಆಳುತ್ತಿದ್ದಾಗ ಯೆಹೋವನು ನನ್ನೊಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್[a] ಎಂಬಾಕೆಯು ಮಾಡಿದ ದುಷ್ಕೃತ್ಯಗಳನ್ನು ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಬೆಟ್ಟದ ಮೇಲೆಯೂ ಸೊಂಪಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು. 7 ‘ಈ ದುಷ್ಕೃತ್ಯಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆಯೂ ಇಸ್ರೇಲ್ ನನ್ನಲ್ಲಿಗೆ ಬರಬಹುದು’ ಎಂದು ನಾನು ಭಾವಿಸಿದ್ದೆ. ಆದರೆ ಅವಳು ನನ್ನಲ್ಲಿಗೆ ಬರಲಿಲ್ಲ. ಇಸ್ರೇಲಿನ ವಂಚಕಿ ಸಹೋದರಿಯಾದ ಯೆಹೂದ ಎಂಬಾಕೆಯು ಮಾಡಿದ್ದನ್ನು ನೋಡಿದಳು. 8 ಇಸ್ರೇಲ್ ಎಂಬಾಕೆಯು ನನಗೆ ವಿಶ್ವಾಸದ್ರೋಹ ಮಾಡಿದ್ದಳು. ನಾನು ಏಕೆ ಹೊರಗೆ ಹಾಕಿದೆ ಎಂಬುದು ಅವಳಿಗೆ ಗೊತ್ತಿತ್ತು. ಅವಳ ಜಾರತನ ಎಂಬ ಪಾಪದ ಬಗ್ಗೆ ನನಗೆ ತಿಳಿದಿದೆ ಎಂದು ಇಸ್ರೇಲಳಿಗೆ ಗೊತ್ತಾಗಿತ್ತು. ಆದರೆ ಅದರಿಂದ ಅವಳ ವಂಚಕಳಾದ ಸೋದರಿಗೆ ಭಯವಾಗಲಿಲ್ಲ. ಯೆಹೂದ ಭಯಪಡಲಿಲ್ಲ. ಆಕೆಯು ಸಹ ವೇಶ್ಯೆಯರಂತೆ ವರ್ತಿಸಿದಳು. 9 ತನ್ನ ನಡತೆಯ ಬಗ್ಗೆ ಆಕೆ ಯೋಚಿಸಲಿಲ್ಲ. ಅವಳು ತನ್ನ ದೇಶವನ್ನು ‘ಅಶುದ್ಧ’ಗೊಳಿಸಿದಳು. ಕಲ್ಲಿನ ಮತ್ತು ಮರದ ವಿಗ್ರಹಗಳನ್ನು ಪೂಜಿಸಿ ಜಾರತನ ಎಂಬ ಪಾಪವನ್ನು ಮಾಡಿದಳು. 10 ಇಸ್ರೇಲಿಗೆ ಇಷ್ಟೆಲ್ಲಾ ದಂಡನೆ ಆದರೂ ಅವಳ ಸೋದರಿಯಾದ ಯೆಹೂದ ತುಂಬುಹೃದಯದಿಂದ ನನ್ನಲ್ಲಿಗೆ ಬರಲಿಲ್ಲ. ಅವಳು ನನ್ನಲ್ಲಿಗೆ ತಿರುಗಿ ಬರುವ ನಟನೆಯನ್ನು ಮಾತ್ರ ಮಾಡಿದಳು. ಇದು ಯೆಹೋವನಾದ ನನ್ನ ನುಡಿ” ಎಂದು ಹೇಳಿದನು.
11 ಯೆಹೋವನು ನನಗೆ, “ಇಸ್ರೇಲ್ ಎಂಬಾಕೆಯು ನನಗೆ ನಂಬಿಗಸ್ತಳಾಗಿ ನಡೆದುಕೊಳ್ಳಲಿಲ್ಲ. ಆದರೆ ಅವಳು ಯೆಹೂದ ಎಂಬಾಕೆಗಿಂತ ಒಳ್ಳೆಯವಳಾಗಿ ಕಂಡು ಬಂದಳು. 12 ಯೆರೆಮೀಯನೇ, ಹೋಗು. ಈ ಸಂದೇಶವನ್ನು ಉತ್ತರದಿಕ್ಕಿನಲ್ಲಿ ಸಾರು. ಯೆಹೋವನು ಹೀಗೆ ಹೇಳುತ್ತಾನೆ:
“‘ವಿಶ್ವಾಸದ್ರೋಹಿಗಳಾದ ಇಸ್ರೇಲಿನ ಜನರೇ, ಹಿಂತಿರುಗಿ ಬನ್ನಿ.’
‘ನಾನು ಕೋಪಮುಖದಿಂದ ನಿಮ್ಮನ್ನು ನೋಡುವುದನ್ನು ನಿಲ್ಲಿಸುವೆನು.
ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.’
ಇದು ಯೆಹೋವನ ನುಡಿ.
13 ‘ನೀವು ನಿಮ್ಮ ಪಾಪವನ್ನು ಅರಿತುಕೊಂಡರೆ ಸಾಕು.
ನೀವು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧ ತಿರುಗಿದಿರಿ,
ಅದೇ ನಿಮ್ಮ ಪಾಪ.
ನೀವು ಬೇರೆ ರಾಷ್ಟ್ರದವರ ವಿಗ್ರಹಗಳನ್ನು ಆರಾಧಿಸಿದಿರಿ.
ನೀವು ಪ್ರತಿಯೊಂದು ಹಸಿರು ಮರದ ಕೆಳಗೆ ವಿಗ್ರಹಗಳನ್ನು ಆರಾಧಿಸಿದಿರಿ.
ನೀವು ನನ್ನ ಆಜ್ಞೆಯನ್ನು ಪರಿಪಾಲಿಸಲಿಲ್ಲ’”
ಇದು ಯೆಹೋವನ ನುಡಿಯಾಗಿತ್ತು.
14 “ವಿಶ್ವಾಸದ್ರೋಹಿಗಳಾದ ಜನರೇ, ನನ್ನಲ್ಲಿಗೆ ಹಿಂತಿರುಗಿ ಬನ್ನಿ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಂದು ಕುಲದಿಂದ ಇಬ್ಬರನ್ನು ಆರಿಸಿ ಚೀಯೋನಿಗೆ ಕರೆದು ತರುವೆನು.
ಲೈಂಗಿಕ ಪಾಪದ ಕುರಿತು ಯೇಸುವಿನ ಉಪದೇಶ
27 “‘ವ್ಯಭಿಚಾರ ಮಾಡಬೇಡಿರಿ’(A) ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. 28 ಆದರೆ ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ, ಅವನು ಆಗಲೇ ತನ್ನ ಮನಸ್ಸಿನಲ್ಲಿ ಅವಳೊಂದಿಗೆ ವ್ಯಭಿಚಾರವನ್ನು ಮಾಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 29 ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. 30 ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.
ವಿವಾಹ ವಿಚ್ಛೇದನ ಕುರಿತು ಯೇಸುವಿನ ಉಪದೇಶ
(ಮತ್ತಾಯ 19:9; ಮಾರ್ಕ 10:11-12; ಲೂಕ 16:18)
31 “‘ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿರುವವನು, ಅವಳಿಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ’(B) ಎಂದು ಹೇಳಲ್ಪಟ್ಟಿದೆ. 32 ಆದರೆ ನಾನು ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟುಬಿಡುವವನೇ ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ. ಹೆಂಡತಿಯು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವಳನ್ನು ಗಂಡನು ಬಿಟ್ಟುಬಿಡಬಹುದು. ವಿವಾಹ ವಿಚ್ಛೇದನ ಹೊಂದಿದವಳನ್ನು ಮದುವೆಯಾಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.
ಆಣೆ ಇಡುವುದರ ಕುರಿತು ಯೇಸುವಿನ ಉಪದೇಶ
33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’[a] ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ಹೇಳುವುದೇನೆಂದರೆ, ಆಣೆ ಇಡಲೇಬೇಡಿ. ಪರಲೋಕದ ಮೇಲೂ ಆಣೆ ಇಡಬೇಡಿ, ಏಕೆಂದರೆ ಪರಲೋಕವು ದೇವರ ಸಿಂಹಾಸನ. 35 ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ. 36 ನಿಮ್ಮ ತಲೆಯ ಮೇಲೂ ಆಣೆ ಇಡಬೇಡಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು.
Kannada Holy Bible: Easy-to-Read Version. All rights reserved. © 1997 Bible League International