Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 112

112 ಯೆಹೋವನಿಗೆ ಸ್ತೋತ್ರವಾಗಲಿ!
    ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
    ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
    ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
ಅವನ ಕುಟುಂಬದವರು ಐಶ್ವರ್ಯವಂತರಾಗುವರು.
    ಅವನ ನೀತಿಯು ಶಾಶ್ವತವಾಗಿರುವುದು.
ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
    ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
    ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
ಅವನೆಂದಿಗೂ ಬೀಳುವುದಿಲ್ಲ.
    ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
    ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
ಅವನ ಮನಸ್ಸು ದೃಢವಾಗಿರುವುದರಿಂದ
    ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
ಅವನು ಬಡವರಿಗೆ ಉದಾರವಾಗಿ ಕೊಡುವನು.
    ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
    ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
    ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
    ಅವರ ದುರಾಶೆಯು ಈಡೇರದು.

ಧರ್ಮೋಪದೇಶಕಾಂಡ 22:13-30

ಮದುವೆಗೆ ಸಂಬಂಧಿಸಿದ ಕಟ್ಟಳೆಗಳು

13 “ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೆಯಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದು ಆಮೇಲೆ ಆಕೆಯನ್ನು ಇಷ್ಟಪಡದೆ, 14 ‘ನಾನು ಈಕೆಯನ್ನು ಮದುವೆಯಾದಾಗ ಈಕೆಯು ಕನ್ಯೆಯಲ್ಲವೆಂದು ನನಗೆ ತಿಳಿದುಬಂತು’ ಎಂದು ಜನರಿಗೆ ಸುಳ್ಳು ಹೇಳಿ ಆಕೆಯ ಮೇಲೆ ಸುಳ್ಳು ಅಪರಾಧ ಹೊರಿಸಿದರೆ, 15 ಹುಡುಗಿಯ ತಂದೆತಾಯಿಗಳು ಊರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳೆಂದು ರುಜುವಾತುಪಡಿಸಬೇಕು. 16 ಹುಡುಗಿಯ ತಂದೆಯು ಹಿರಿಯರಿಗೆ, ‘ನನ್ನ ಮಗಳನ್ನು ಇವನಿಗೆ ಹೆಂಡತಿಯನ್ನಾಗಿ ಕೊಟ್ಟೆನು. ಆದರೆ ಈಗ ಅವನು ಆಕೆಯನ್ನು ದ್ವೇಷಿಸಿ ಬೇಡವೆನ್ನುತ್ತಾನೆ. 17 ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ. “ಆಕೆಯಲ್ಲಿ ಕನ್ನಿಕೆಯ ಗುರುತು ಇರಲಿಲ್ಲ” ಎಂದು ಹೇಳುತ್ತಿದ್ದಾನೆ, ಆದರೆ ನನ್ನ ಮಗಳು ಮದುವೆಗಿಂತ ಮುಂಚೆ ಪುರುಷ ಸಂಪರ್ಕ ಮಾಡಲಿಲ್ಲವೆಂಬುದಕ್ಕೆ ಇದೇ ಗುರುತು’ ಎಂದು ಹೇಳಿ ರಕ್ತದ ಕಲೆಗಳಿರುವ ಬಟ್ಟೆಯನ್ನು ತೋರಿಸಬೇಕು. 18 ಆಗ ಊರಿನ ಹಿರಿಯರು ಆ ಮನುಷ್ಯನಿಗೆ ಶಿಕ್ಷೆ ವಿಧಿಸಬೇಕು. 19 ಹಿರಿಯರು ಅವನಿಂದ ನಲವತ್ತು ತೊಲೆ ಬೆಳ್ಳಿಯನ್ನು ಹುಡುಗಿಯ ತಂದೆಗೆ ಕೊಡಿಸಬೇಕು. ಯಾಕೆಂದರೆ ಒಬ್ಬ ಇಸ್ರೇಲಿನ ಹುಡುಗಿಗೆ ಅವನು ಅವಮಾನಪಡಿಸಿದ ಕಾರಣ ಆ ಹುಡುಗಿಯು ಅವನ ಹೆಂಡತಿಯಾಗಿಯೇ ಬಾಳಬೇಕು. ಅವನು ಆಕೆಯನ್ನು ಎಂದಿಗೂ ವಿವಾಹವಿಚ್ಛೇದನೆ ಮಾಡಬಾರದು.

20 “ಆದರೆ ಹುಡುಗಿಯ ಗಂಡನು ಆಕೆಯ ಬಗ್ಗೆ ಹೇಳಿದ್ದು ಸತ್ಯವಾಗಿದ್ದರೆ, ಹುಡುಗಿಯ ತಂದೆತಾಯಂದಿರ ಬಳಿ ಆಕೆಯು ಪುರುಷ ಸಂಪರ್ಕವಿಲ್ಲದವಳಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲದಿದ್ದಲ್ಲಿ 21 ಊರಹಿರಿಯರು ಆ ಹುಡುಗಿಯನ್ನು ಆಕೆಯ ತಂದೆಯ ಮನೆಬಾಗಿಲಿಗೆ ತರಬೇಕು. ಅಲ್ಲಿ ಊರಜನರು ಆಕೆಯನ್ನು ಕಲ್ಲೆಸೆದು ಸಾಯಿಸಬೇಕು. ಯಾಕೆಂದರೆ ಆಕೆಯು ಇಸ್ರೇಲಿನಲ್ಲಿ ನಾಚಿಕೆಕರವಾದ ಕೃತ್ಯವನ್ನು ನಡೆಸಿದ್ದಾಳೆ; ತನ್ನ ತಂದೆಯ ಮನೆಯಲ್ಲಿದ್ದುಕೊಂಡು ವೇಶ್ಯಾವೃತ್ತಿ ನಡಿಸಿದ್ದಾಳೆ. ಅಂಥಾ ಪಾಪವನ್ನು ನೀವು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.

ಲೈಂಗಿಕ ಪಾಪಕೃತ್ಯಗಳು

22 “ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನ ಹೆಂಡತಿಯ ಜೊತೆಗೆ ಲೈಂಗಿಕ ಸಂಬಂಧವನ್ನಿಟ್ಟಿದ್ದರೆ ಅವರಿಬ್ಬರನ್ನೂ ಸಾಯಿಸಬೇಕು. ಆ ಕೆಡುಕನ್ನು ನೀವು ಇಸ್ರೇಲಿನಿಂದ ತೆಗೆದುಹಾಕಬೇಕು.

23 “ಒಬ್ಬನು ಇನ್ನೊಬ್ಬನಿಗೆ ನಿಶ್ಚಿತಾರ್ಥವಾದ ಕನ್ನಿಕೆಯೊಬ್ಬಳನ್ನು ಸಂಧಿಸಿ ಅವಳನ್ನು ಕೂಡಿದರೆ, 24 ನಗರದ ಬಾಗಿಲಿನ ಬಳಿಯಿರುವ ಸಾರ್ವಜನಿಕ ಸ್ಥಳಕ್ಕೆ ನೀವು ಅವರಿಬ್ಬರನ್ನು ಕರೆದುಕೊಂಡು ಬಂದು ಅವರಿಬ್ಬರನ್ನೂ ಕಲ್ಲೆಸೆದು ಕೊಲ್ಲಬೇಕು. ನೀವು ಆ ಪುರುಷನನ್ನು ಕೊಲ್ಲಬೇಕು. ಏಕೆಂದರೆ ಅವನು ಮತ್ತೊಬ್ಬನ ಹೆಂಡತಿಯನ್ನು ಲೈಂಗಿಕವಾಗಿ ಹಿಂಸಿಸಿದನು. ನೀವು ಆ ಸ್ತ್ರೀಯನ್ನು ಕೊಲ್ಲಬೇಕು; ಯಾಕೆಂದರೆ ಆಕೆಯು ನಗರದಲ್ಲಿದ್ದರೂ ಸಹಾಯಕ್ಕಾಗಿ ಕೂಗಿಕೊಳ್ಳಲಿಲ್ಲ. ಆ ಕೆಡುಕನ್ನು ನೀವು ನಿಮ್ಮ ಜನರಿಂದ ತೆಗೆದುಹಾಕಬೇಕು.

25 “ಆದರೆ ಒಬ್ಬನು ಮತ್ತೊಬ್ಬನಿಗೆ ನಿಶ್ಚಿತಾರ್ಥವಾಗಿರುವ ಕನ್ನಿಕೆಯೊಬ್ಬಳನ್ನು ಹೊಲದಲ್ಲಿ ಕಂಡು ಆಕೆಯನ್ನು ಬಲಾತ್ಕಾರವಾಗಿ ಕೂಡಿದರೆ, ಅವನನ್ನು ಮಾತ್ರ ಕೊಲ್ಲಬೇಕು. 26 ಆ ಹುಡುಗಿಗೆ ನೀವು ಏನನ್ನೂ ಮಾಡಬಾರದು. ಆಕೆ ಶಿಕ್ಷೆಗೆ ಅರ್ಹಳಾಗುವಂಥ ಕಾರ್ಯವೇನೂ ಮಾಡಲಿಲ್ಲ. ಒಬ್ಬನು ತನ್ನ ಸ್ನೇಹಿತನ ಮೇಲೆ ಆಕ್ರಮಣ ಮಾಡಿ ಕೊಂದಂತೆಯಷ್ಟೇ. 27 ಆ ಮನುಷ್ಯನು ನಿಶ್ಚಿತಾರ್ಥವಾದ ಹುಡುಗಿಯನ್ನು ಹೊಲದಲ್ಲಿ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಬಿದ್ದನು. ಆಕೆಯು ಸಹಾಯಕ್ಕಾಗಿ ಕೂಗಿಕೊಂಡಾಗ ಸಹಾಯ ಮಾಡಲು ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಆಕೆಯು ಶಿಕ್ಷಿಸಲ್ಪಡಬಾರದು.

28 “ಒಬ್ಬನು ನಿಶ್ಚಿತಾರ್ಥವಾಗಿಲ್ಲದ ಒಬ್ಬ ಕನ್ನಿಕೆಯನ್ನು ಕಂಡು ಆಕೆಯನ್ನು ಬಲಾತ್ಕಾರದಿಂದ ಕೂಡುವುದನ್ನು ಬೇರೆಯವರು ಕಂಡರೆ 29 ಅವನು ಹುಡುಗಿಯ ತಂದೆಗೆ ಇಪ್ಪತ್ತು ತೊಲೆ ಬೆಳ್ಳಿಯನ್ನು ಕೊಟ್ಟು ಆಕೆಯನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. ಅವನು ಆಕೆಯನ್ನು ಮದುವೆಗಿಂತ ಮುಂಚೆ ಕೂಡಿದ್ದರಿಂದ ಅವನು ಆಕೆಯನ್ನು ಎಂದಿಗೂ ಬಿಟ್ಟುಬಿಡಬಾರದು.

30 “ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಕೂಡಿ ತಂದೆಗೆ ಅವಮಾನ ಮಾಡಬಾರದು.”

1 ಕೊರಿಂಥದವರಿಗೆ 7:1-9

ಮದುವೆ ಕುರಿತು ಬೋಧನೆ

ನೀವು ಬರೆದು ಕೇಳಿರುವ ಸಂಗತಿಗಳ ಬಗ್ಗೆ ಈಗ ನಾನು ಚರ್ಚಿಸುತ್ತೇನೆ. ಪುರುಷನು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದೇ ಸರಿ. ಆದರೆ ಲೈಂಗಿಕ ಪಾಪ ಅಪಾಯಕರವಾದದ್ದು. ಆದ್ದರಿಂದ ಪ್ರತಿಯೊಬ್ಬ ಪುರುಷನಿಗೂ ಸ್ವಂತ ಹೆಂಡತಿ ಇದ್ದರೆ ಮತ್ತು ಪ್ರತಿಯೊಬ್ಬ ಸ್ತ್ರೀಗೂ ಸ್ವಂತ ಗಂಡನು ಇದ್ದರೆ ಒಳ್ಳೆಯದು. ಗಂಡನು ತನ್ನ ಹೆಂಡತಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಮತ್ತು ಹೆಂಡತಿಯು ತನ್ನ ಗಂಡನಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಆಕೆಯ ಗಂಡನಿಗೆ ಆಕೆಯ ದೇಹದ ಮೇಲೆ ಅಧಿಕಾರವಿದೆ. ಅದೇರೀತಿ, ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಅವನ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರವಿದೆ. ಆದ್ದರಿಂದ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಅವರು ತಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ವಿನಿಯೋಗಿಸುವುದಕ್ಕಾಗಿ ಸ್ವಲ್ಪಕಾಲ ಲೈಂಗಿಕ ಸಂಬಂಧದಿಂದ ದೂರವಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿಯಿರಬೇಕು. ಬಳಿಕ ಮತ್ತೆ ಒಂದಾಗಬೇಕು, ಇಲ್ಲವಾದರೆ ನಿಮ್ಮ ಬಲಹೀನತೆಯನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋಧಿಸಬಹುದು. ಸ್ವಲ್ಪಕಾಲ ಅಗಲಿ ದೂರವಿರುವುದಕ್ಕೆ ಅನುಮತಿ ಕೊಡಲು ನಾನು ಇದನ್ನು ಹೇಳುತ್ತಿದ್ದೇನೆ. ಇದು ಆಜ್ಞೆಯಲ್ಲ. ಎಲ್ಲಾ ಜನರು ನಮ್ಮಂತೆ ಇರಬೇಕೆಂದು ನಮ್ಮ ಅಭಿಲಾಷೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ತನ್ನದೇ ಆದ ವರವನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿಗೆ ಒಂದು ವರವಿದ್ದರೆ ಮತ್ತೊಬ್ಬನಿಗೆ ಇನ್ನೊಂದು ವರವಿದೆ.

ವಿವಾಹವಾಗಿಲ್ಲದ ಜನರಿಗೆ ಮತ್ತು ವಿಧವೆಯರಿಗೆ ನಾನು ಹೇಳುವುದೇನೆಂದರೆ: ಅವರು ನನ್ನಂತೆ ಒಬ್ಬಂಟಿಗರಾಗಿ ಇರುವುದೇ ಅವರಿಗೆ ಒಳ್ಳೆಯದು. ಆದರೆ ಅವರು ತಮ್ಮ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದಿದ್ದರೆ, ಅವರು ಮದುವೆಯಾಗಬೇಕು. ಲೈಂಗಿಕ ಆಸೆಯಿಂದ ಬೆಂದು ಹೋಗುವುದಕ್ಕಿಂತಲೂ ಮದುವೆ ಮಾಡಿಕೊಳ್ಳುವುದೇ ಉತ್ತಮವಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International