Revised Common Lectionary (Complementary)
ರಚನೆಗಾರ: ದಾವೀದ.
8 ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.
2 ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.
3 ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
4 ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?
5 ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
6 ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
7 ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
8 ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
ದೊರೆತನ ಮಾಡುವರು.
9 ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.
ಅಬ್ರಹಾಮನು ಅಬೀಮೆಲೆಕನೊಡನೆ ಮಾಡಿಕೊಂಡ ಒಪ್ಪಂದ
22 ಆಮೇಲೆ ಅಬೀಮೆಲೆಕನು ಮತ್ತು ಫೀಕೋಲನು ಅಬ್ರಹಾಮನೊಡನೆ ಮಾತಾಡಿದರು. ಫೀಕೋಲನು ಅಬೀಮೆಲೆಕನ ಸೈನ್ಯಾಧಿಕಾರಿಯಾಗಿದ್ದನು. ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಮಾಡುವ ಪ್ರತಿಯೊಂದರಲ್ಲೂ ದೇವರು ನಿನ್ನೊಡನೆ ಇದ್ದಾನೆ. 23 ಆದ್ದರಿಂದ ನೀನು ನನ್ನೊಡನೆ ಮತ್ತು ನನ್ನ ಮಕ್ಕಳೊಡನೆ ನ್ಯಾಯವಾಗಿ ನಡೆದುಕೊಳ್ಳುವುದಾಗಿ ದೇವರ ಮೇಲೆ ಪ್ರಮಾಣಮಾಡು. ನನಗೂ ಮತ್ತು ನೀನು ವಾಸಿಸುತ್ತಿರುವ ಈ ನಾಡಿಗೂ ದಯೆತೋರುವುದಾಗಿ ನೀನು ಪ್ರಮಾಣಮಾಡು. ನಾನು ನಿನಗೆ ದಯೆತೋರಿದಂತೆ ನೀನೂ ನನಗೆ ದಯೆತೋರುವುದಾಗಿ ಪ್ರಮಾಣಮಾಡು” ಎಂದು ಹೇಳಿದನು.
24 ಅದಕ್ಕೆ ಅಬ್ರಹಾಮನು, “ನೀನು ನನ್ನನ್ನು ನೋಡಿಕೊಂಡಂತೆ ನಾನೂ ನಿನ್ನನ್ನು ನೋಡಿಕೊಳ್ಳುವೆನು” ಎಂದು ಪ್ರಮಾಣಮಾಡಿದನು. 25 ಆಮೇಲೆ ಅಬ್ರಹಾಮನು ಅಬೀಮೆಲೆಕನಿಗೆ, “ನಿನ್ನ ಸೇವಕರು ನೀರಿದ್ದ ಒಂದು ಬಾವಿಯನ್ನು ವಶಪಡಿಸಿಕೊಂಡಿದ್ದಾರೆ” ಎಂದು ದೂರು ಹೇಳಿದನು.
26 ಅದಕ್ಕೆ ಅಬೀಮೆಲೆಕನು, “ಅದನ್ನು ಯಾರು ಮಾಡಿದರೋ ನನಗೆ ಗೊತ್ತಿಲ್ಲ. ಇಂದಿನವರೆಗೂ ನೀನು ಇದನ್ನು ನನಗೆ ಹೇಳಲೇ ಇಲ್ಲ” ಎಂದು ಹೇಳಿದನು.
27 ಆಗ ಅಬ್ರಹಾಮನು ಮತ್ತು ಅಬೀಮೆಲೆಕನು ಒಂದು ಒಪ್ಪಂದವನ್ನು ಮಾಡಿಕೊಂಡರು. ಅಬ್ರಹಾಮನು ಅವನಿಗೆ ಕೆಲವು ದನಕುರಿಗಳನ್ನು ಒಪ್ಪಂದದ ಗುರುತಾಗಿ ಕೊಟ್ಟನು; 28 ಅಲ್ಲದೆ ಅಬ್ರಹಾಮನು ಮಂದೆಯ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕಿಸಿದನು.
29 ಅಬೀಮೆಲೆಕನು ಅಬ್ರಹಾಮನಿಗೆ, “ಈ ಏಳು ಕುರಿಗಳನ್ನು ಇಲ್ಲಿ ಇರಿಸಿರುವುದೇಕೆ?” ಎಂದು ಕೇಳಿದನು.
30 ಅಬ್ರಹಾಮನು “ಆ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಕುರಿಗಳನ್ನು ನನ್ನಿಂದ ಸ್ವೀಕರಿಸಿಕೊಳ್ಳಬೇಕು” ಎಂದು ಉತ್ತರಿಸಿದನು.
31 ಅವರು ಆ ಸ್ಥಳದಲ್ಲಿ ಒಪ್ಪಂದ ಮಾಡಿಕೊಂಡಿದ್ದರಿಂದ ಆ ಬಾವಿಗೆ ಬೇರ್ಷೆಬ ಎಂದು ಹೆಸರಾಯಿತು.
32 ಬೇರ್ಷೆಬದಲ್ಲಿ ಒಪ್ಪಂದವನ್ನು ಮಾಡಿಕೊಂಡ ಮೇಲೆ ಅಬೀಮೆಲೆಕನು ಮತ್ತು ಅವನ ಸೈನ್ಯಾಧಿಕಾರಿಯು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
33 ಅಬ್ರಹಾಮನು ಬೇರ್ಷೆಬದಲ್ಲಿ ವಿಶೇಷವಾದ ಒಂದು ಮರವನ್ನು ನೆಟ್ಟನು. ಆ ಸ್ಥಳದಲ್ಲಿ ಅವನು ಸದಾಕಾಲ ಜೀವಿಸುವ ದೇವರಾದ ಯೆಹೋವನಿಗೆ ಪ್ರಾರ್ಥಿಸಿದನು. 34 ಅವನು ಬಹುಕಾಲದವರೆಗೆ ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದನು.
ಪವಿತ್ರಾತ್ಮನಿಗೆ ಅಧೀನವಾದ ಜೀವಿತ
8 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. 2 ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. 3 ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. 4 ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.
5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. 6 ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. 7 ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. 8 ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.
9 ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International