Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 8

ರಚನೆಗಾರ: ದಾವೀದ.

ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
    ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.

ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
    ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.

ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
    ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
    ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
    ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?

ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
    ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
    ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
    ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
    ದೊರೆತನ ಮಾಡುವರು.
ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.

ಆದಿಕಾಂಡ 20

ಅಬ್ರಹಾಮನು ಗೆರಾರಿಗೆ ಹೋದದ್ದು

20 ಅಬ್ರಹಾಮನು ಅಲ್ಲಿಂದ ಹೊರಟು ನೆಗೆವ್‌ಗೆ ಪ್ರಯಾಣಮಾಡಿ ಕಾದೇಶಿಗೂ ಶೂರಿಗೂ ನಡುವೆ ಇದ್ದ ಗೆರಾರ್ ನಗರದಲ್ಲಿ ನೆಲೆಸಿದನು. ಅಬ್ರಹಾಮನು ಗೆರಾರಿನಲ್ಲಿದ್ದಾಗ ಸಾರಳು ತನಗೆ ತಂಗಿಯಾಗಬೇಕೆಂದು ಹೇಳಿಕೊಂಡನು. ಗೆರಾರಿನ ರಾಜನಾಗಿದ್ದ ಅಬೀಮೆಲೆಕನು ಇದನ್ನು ಕೇಳಿ ಸಾರಳನ್ನು ಪಡೆದುಕೊಳ್ಳಲು ಬಯಸಿದನು. ಬಳಿಕ ಅವನು ಕೆಲವು ಸೇವಕರನ್ನು ಕಳುಹಿಸಿ ಆಕೆಯನ್ನು ಕರೆಯಿಸಿಕೊಂಡನು. ಆದರೆ ಅಂದು ರಾತ್ರಿ ದೇವರು ಅಬೀಮೆಲೆಕನೊಡನೆ ಕನಸಿನಲ್ಲಿ ಮಾತಾಡಿ, “ನೀನು ಸಾಯುವೆ. ನೀನು ತೆಗೆದುಕೊಂಡಿರುವ ಆ ಸ್ತ್ರೀಗೆ ಮದುವೆಯಾಗಿದೆ” ಎಂದು ಹೇಳಿದನು.

ಅಬೀಮೆಲೆಕನು ಇನ್ನೂ ಸಾರಳೊಡನೆ ಮಲಗಿಕೊಂಡಿರಲಿಲ್ಲ. ಆದ್ದರಿಂದ ಅಬೀಮೆಲೆಕನು, “ಸ್ವಾಮಿ, ನಾನು ತಪ್ಪಿತಸ್ಥನಲ್ಲ. ಒಬ್ಬ ನಿರಪರಾಧಿಯನ್ನು ನೀನು ಕೊಲ್ಲುವೆಯಾ? ‘ಈಕೆ ನನಗೆ ತಂಗಿಯಾಗಬೇಕು’ ಎಂದು ಅಬ್ರಹಾಮನೇ ಹೇಳಿದನು. ಅಲ್ಲದೆ ಈಕೆಯೂ ‘ಅವನು ನನ್ನ ಸಹೋದರ’ ಎಂದು ಹೇಳಿದಳು. ನಾನು ನಿರಪರಾಧಿ. ನಾನು ಮಾಡಲಿದ್ದ ತಪ್ಪು ನನಗೆ ತಿಳಿದಿರಲಿಲ್ಲ” ಎಂದು ಹೇಳಿದನು.

ಆಗ ದೇವರು ಅಬೀಮೆಲೆಕನಿಗೆ ಕನಸಿನಲ್ಲಿ, “ಹೌದು, ನೀನು ನಿರಪರಾಧಿಯೆಂದು ನನಗೆ ಗೊತ್ತಿದೆ. ನೀನು ಮಾಡಲಿದ್ದ ತಪ್ಪು ನಿನಗೆ ತಿಳಿದಿರಲಿಲ್ಲವೆಂದೂ ನನಗೆ ಗೊತ್ತಿದೆ. ಆದ್ದರಿಂದಲೇ ನಾನು ನಿನ್ನನ್ನು ಕಾಪಾಡಿದೆ. ನನಗೆ ವಿರೋಧವಾಗಿ ಪಾಪಮಾಡಲು ನಾನು ನಿನಗೆ ಅವಕಾಶ ಕೊಡಲಿಲ್ಲ. ಆದ್ದರಿಂದ ಅಬ್ರಹಾಮನಿಗೆ ಅವನ ಹೆಂಡತಿಯನ್ನು ಒಪ್ಪಿಸಿಬಿಡು. ಅಬ್ರಹಾಮನು ಪ್ರವಾದಿಯಾಗಿರುವುದರಿಂದ ನಿನಗೋಸ್ಕರ ಪ್ರಾರ್ಥಿಸುವನು, ಆಗ ನೀನು ಬದುಕಿಕೊಳ್ಳುವೆ. ನೀನು ಸಾರಳನ್ನು ಅಬ್ರಹಾಮನಿಗೆ ಹಿಂತಿರುಗಿಸದಿದ್ದರೆ, ನೀನೂ ನಿನ್ನ ಇಡೀ ಕುಟುಂಬದವರೂ ಸಾಯುವಿರೆಂದು ನಾನು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.

ಆದ್ದರಿಂದ ಮರುದಿನ ಮುಂಜಾನೆ, ಅಬೀಮೆಲೆಕನು ತನ್ನ ಸೇವಕರನ್ನೆಲ್ಲ ಕರೆಸಿ ತನ್ನ ಕನಸನ್ನು ತಿಳಿಸಿದನು. ಅವರಿಗೆಲ್ಲಾ ತುಂಬ ಭಯವಾಯಿತು. ಆಮೇಲೆ ಅಬೀಮೆಲೆಕನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಹೀಗೇಕೆ ಮಾಡಿದೆ? ನಿನಗೆ ವಿರೋಧವಾಗಿ ನಾನೇನು ಮಾಡಿದೆ? ಆಕೆ ತಂಗಿಯಾಗಬೇಕೆಂದು ನೀನೇಕೆ ಸುಳ್ಳು ಹೇಳಿದೆ? ನೀನು ನನ್ನ ರಾಜ್ಯಕ್ಕೆ ಕೇಡನ್ನು ಬರಮಾಡಿರುವೆ. ನೀನು ಹೀಗೆ ಮಾಡಬಾರದಿತ್ತು. 10 ನೀನು ಭಯಪಟ್ಟಿದ್ದೇಕೆ? ನನಗೆ ಹೀಗೆ ಮಾಡಿದ್ದೇಕೆ?” ಎಂದು ಕೇಳಿದನು.

11 ಅಬ್ರಹಾಮನು ಅವನಿಗೆ, “ನನಗೆ ಹೆದರಿಕೆಯಾಗಿತ್ತು. ಈ ಸ್ಥಳದವರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದು ನಾನು ಭಾವಿಸಿಕೊಂಡೆ. ಯಾರಾದರೂ ನನ್ನನ್ನು ಕೊಂದು ಸಾರಳನ್ನು ತೆಗೆದುಕೊಳ್ಳಬಹುದೆಂದು ಯೋಚಿಸಿದೆ. 12 ಆಕೆ ನನ್ನ ಹೆಂಡತಿಯೇನೋ ನಿಜ, ಆದರೆ ಆಕೆ ನನಗೆ ತಂಗಿಯೂ ಆಗಬೇಕು. ಆಕೆ ನನ್ನ ತಂದೆಯ ಮಗಳು; ನನ್ನ ತಾಯಿಯ ಮಗಳಲ್ಲ. 13 ದೇವರು ನನ್ನನ್ನು ತಂದೆಯ ಮನೆಯಿಂದ ಹೊರಡಿಸಿ ಪರಸ್ಥಳಗಳಲ್ಲಿ ಸಂಚರಿಸುವಂತೆ ಮಾಡಿದ್ದರಿಂದ ನಾನು ಸಾರಳಿಗೆ, ‘ನಿನ್ನಿಂದ ನನಗೆ ಒಂದು ಉಪಕಾರವಾಗಬೇಕು. ಅದೇನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ ಹೇಳಬೇಕು ಎಂದು ಆಕೆಗೆ ತಿಳಿಸಿದೆನು’” ಎಂದನು.

14 ಆಗ ನಡೆದ ಸಂಗತಿಯನ್ನೆಲ್ಲ ಅರ್ಥಮಾಡಿಕೊಂಡು ಸಾರಳನ್ನು ಅಬ್ರಹಾಮನಿಗೆ ಒಪ್ಪಿಸಿದನು; ಅಲ್ಲದೆ ಕುರಿಗಳನ್ನೂ ದನಗಳನ್ನೂ ಸೇವಕಸೇವಕಿಯರನ್ನೂ ಕೊಟ್ಟನು. 15 ಅಬೀಮೆಲೆಕನು ಅಬ್ರಹಾಮನಿಗೆ, “ಇಗೋ, ಇದು ನನ್ನ ದೇಶ. ನಿನಗೆ ಇಷ್ಟವಾದ ಸ್ಥಳದಲ್ಲಿ ವಾಸಮಾಡು” ಎಂದು ಹೇಳಿದನು.

16 ಅಬೀಮೆಲೆಕನು ಸಾರಳಿಗೆ, “ನಾನು ನಿನ್ನ ಅಣ್ಣನಾದ ಅಬ್ರಹಾಮನಿಗೆ ಒಂದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಕೊಡುವೆ. ನಡೆದ ಈ ಘಟನೆಗಳಿಗೆ ಇದು ಪ್ರಾಯಶ್ಚಿತ್ತವಾಗಿದೆ. ನೀನು ನಿಷ್ಕಳಂಕಳೆಂದು ಇದು ಪ್ರತಿಯೊಬ್ಬರಿಗೂ ಸಾಕ್ಷಿಯಾಗಿರಲಿ” ಎಂದು ಹೇಳಿದನು.

17-18 ದೇವರು ಅಬೀಮೆಲೆಕನ ಕುಟುಂಬದಲ್ಲಿರುವ ಎಲ್ಲ ಸ್ತ್ರೀಯರನ್ನು ಬಂಜೆಯರನ್ನಾಗಿ ಮಾಡಿದ್ದನು. ಅಬ್ರಹಾಮನ ಹೆಂಡತಿಯಾದ ಸಾರಳನ್ನು ಅಬೀಮೆಲೆಕನು ಕರೆಸಿಕೊಂಡಿದ್ದೇ ಅದಕ್ಕೆ ಕಾರಣ. ಅಬ್ರಹಾಮನು ದೇವರಲ್ಲಿ ಪ್ರಾರ್ಥಿಸಿದಾಗ ದೇವರು ಅಬೀಮೆಲೆಕನನ್ನೂ ಅವನ ಹೆಂಡತಿಯನ್ನೂ ಸೇವಕಿಯರನ್ನೂ ಗುಣಪಡಿಸಿದ್ದರಿಂದ ಅವರಿಗೆ ಮಕ್ಕಳಾದರು.

ಗಲಾತ್ಯದವರಿಗೆ 3:23-29

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.

26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International