Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 5

ರಚನೆಗಾರ: ದಾವೀದ.

ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
    ನನ್ನ ಆಲೋಚನೆಗಳಿಗೆ ಗಮನಕೊಡು.
ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
    ನನ್ನ ಪ್ರಾರ್ಥನೆಯನ್ನು ಆಲೈಸು.
ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
    ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.

ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
    ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
    ದುಷ್ಟರನ್ನು ನೀನು ದ್ವೇಷಿಸುವೆ.
ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
    ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.

ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
    ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
    ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
    ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
    ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
    ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
    ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
    ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
    ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.

ಜೆಕರ್ಯ 10

ಯೆಹೋವನ ವಾಗ್ದಾನಗಳು

10 ವಸಂತ ಕಾಲದಲ್ಲಿ ಮಳೆಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳೆ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.

ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.

ಯೆಹೋವನು ಹೇಳುವುದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಕೋಪಿಸಿರುವೆನು. ಆ ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರನ್ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮಂದೆಯಾಗಿದ್ದಾರೆ. ಹೇಗೆ ಸಿಪಾಯಿಯು ತನ್ನ ಯುದ್ಧದ ಕುದುರೆಯನ್ನು ಪರಾಂಬರಿತ್ತಾನೋ ಹಾಗೆ ಸರ್ವಶಕ್ತನಾದ ಯೆಹೋವನು ತನ್ನ ಮಂದೆಯನ್ನು ನಿಜವಾಗಿಯೂ ಪರಾಂಬರಿಸುತ್ತಾನೆ.

“ಮೂಲೇ ಕಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲು ಮತ್ತು ಮುನ್ನುಗ್ಗುವ ಸೈನ್ಯ, ಇವೆಲ್ಲವು ಒಟ್ಟಾಗಿ ಯೆಹೂದಿಂದ ಬರುವದು. ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡೆದು ಯೆಹೋವನು ಅವರೊಂದಿಗಿರುವದರಿಂದ ಅವರು ಅಶ್ವಾರೂಢನಾಗಿರುವ ಶತ್ರುಸೈನ್ಯವನ್ನು ಸದೆಬಡಿಯುವರು. ಯೆಹೂದ ವಂಶವನ್ನು ನಾನು ಬಲಗೊಳಿಸುವೆನು. ಯೋಸೇಫನ ವಂಶದವರಿಗೆ ಜಯವಾಗುವಂತೆ ಮಾಡುವೆನು. ನಾನು ಅವರನ್ನು ಹಿಂದಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರುವೆನು. ಅವರನ್ನು ಸಂತೈಸುವೆನು. ನಾನು ಎಂದಿಗೂ ಅವರನ್ನು ತೊರೆಯಲಿಲ್ಲವೆಂಬಂತೆ ಇರುವುದು. ನಾನು ಅವರ ದೇವರಾದ ಯೆಹೋವನು. ನಾನೇ ಅವರಿಗೆ ಸಹಾಯ ಮಾಡುವೆನು. ಕುಡಿದು ಮತ್ತರಾದ ಸೈನಿಕರು ಸಂತೋಷಪಡುವಂತೆ ಎಫ್ರಾಯೀಮ್ಯರು ಸಂತಸದಿಂದಿರುವರು. ಮಕ್ಕಳೂ ಆನಂದದಿಂದ ನಲಿದಾಡುವರು. ಅವರೆಲ್ಲರೂ ಯೆಹೋವನ ಜೊತೆಯಲ್ಲಿ ಸಂತೋಷದಿಂದಿರುವರು.

“ನಾನು ಸಿಳ್ಳು ಹೊಡೆದು ಎಲ್ಲರನ್ನು ಒಟ್ಟುಗೂಡಿಸುವೆನು. ನಾನು ನಿಜವಾಗಿಯೂ ಅವರನ್ನು ರಕ್ಷಿಸುವೆನು. ಜನರು ಕಿಕ್ಕಿರಿದು ತುಂಬಿಹೋಗುವರು. ಹೌದು, ನಾನು ನನ್ನ ಜನರನ್ನು ಎಲ್ಲಾ ರಾಜ್ಯಗಳಿಗೆ ಚದರಿಸಿಬಿಟ್ಟಿರುತ್ತೇನೆ. ಆದರೆ ಆ ಬಹುದೂರದ ರಾಜ್ಯಗಳಲ್ಲಿ ಅವರು ನನ್ನನ್ನು ನೆನಪು ಮಾಡುವರು. ಅವರೂ ಅವರ ಮಕ್ಕಳೂ ಉಳಿಯುವರು ಮತ್ತು ಅವರು ಹಿಂತಿರುಗಿ ಬರುವರು. 10 ನಾನು ಅವರನ್ನು ಈಜಿಪ್ಟ್‌ನಿಂದ ಮತ್ತು ಅಶ್ಯೂರದಿಂದ ಹಿಂದಕ್ಕೆ ತರುವೆನು. ಅವರನ್ನು ಗಿಲ್ಯಾದಿಗೆ ಕರೆದುಕೊಂಡು ಬರುವೆನು. ಅಲ್ಲಿ ಅವರಿಗೆ ಸ್ಥಳ ಸಾಲದು. ಆದ್ದರಿಂದ ಅವರು ಪಕ್ಕದ ಲೆಬನೋನ್ ಪ್ರಾಂತ್ಯದಲ್ಲಿ ವಾಸಿಸುವಂತೆ ಮಾಡುವೆನು.” 11 ಇದು ಹಿಂದಿನ ಕಾಲದಲ್ಲಿ ದೇವರು ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದಂತೆ ಇರುವದು. ಆತನು ಸಮುದ್ರದ ತೆರೆಗಳನ್ನು ಬಡಿದು ಅದು ಇಬ್ಭಾಗವಾಗುವಂತೆ ಮಾಡಿದನು. ಜನರು ಸಂಕಟದ ಸಮುದ್ರದ ಮಧ್ಯದಲ್ಲಿ ದಾಟಿಹೋದರು. ಯೆಹೋವನು ಹೊಳೆಗಳನ್ನು ಬತ್ತಿಸಿಬಿಡುವನು. ಆತನು ಅಶ್ಯೂರ್ಯದ ಜಂಬವನ್ನೂ ಈಜಿಪ್ಟಿನ ಬಲವನ್ನೂ ಮುರಿಯುವನು. 12 ಯೆಹೋವನು ತನ್ನ ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವನು. ಅವರು ಆತನ ನಾಮದ ಘನತೆಗೋಸ್ಕರ ಜೀವಿಸುವರು. ಇದು ಯೆಹೋವನ ನುಡಿ.

ಮತ್ತಾಯ 18:6-9

ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ

(ಮಾರ್ಕ 9:42-48; ಲೂಕ 17:1-2)

“ದೀನತೆಯಿಂದ ನನ್ನನ್ನು ಹಿಂಬಾಲಿಸುವವರಲ್ಲಿ ಯಾರನ್ನಾದರೂ ಪಾಪಕ್ಕೆ ನಡೆಸುವವನಿಗೆ ಬಹಳ ಕೇಡಾಗುವುದು. ಅವನು ತನ್ನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಆಳವಾದ ಸಮುದ್ರದಲ್ಲಿ ಮುಳುಗುವುದೇ ಉತ್ತಮ. ಜನರನ್ನು ಪಾಪಕ್ಕೆ ನಡೆಸುವ ಸಂಗತಿಗಳ ನಿಮಿತ್ತ ನಾನು ಈ ಲೋಕದ ವಿಷಯದಲ್ಲಿ ದುಃಖಪಡುತ್ತೇನೆ. ಅವು ಯಾವಾಗಲೂ ಇರುತ್ತವೆ. ಆದರೆ ಅವುಗಳಿಗೆ ಕಾರಣವಾಗುವ ವ್ಯಕ್ತಿಗೆ ಬಹಳ ಕೇಡಾಗುವುದು.

“ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಎಸೆದುಬಿಡು. ಕೈಯನ್ನಾಗಲಿ ಕಾಲನ್ನಾಗಲಿ ಕಳೆದುಕೊಂಡು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ. ಎರಡು ಕೈ ಮತ್ತು ಎರಡು ಕಾಲುಳ್ಳವನಾಗಿದ್ದು ಶಾಶ್ವತವಾದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅದು ಎಷ್ಟೋ ಉತ್ತಮ. ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ನಡೆಸಿದರೆ, ಅದನ್ನು ಕಿತ್ತು ಎಸೆದುಬಿಡು. ಎರಡು ಕಣ್ಣುಳ್ಳವನಾಗಿದ್ದು ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International