Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 11:4-6

ಎಪ್ಪತ್ತು ಮಂದಿ ಹಿರಿಯರು

ಅವರ ಮಧ್ಯದಲ್ಲಿದ್ದ ಕಿರುಕುಳಕೊಡುವ ಪರದೇಶಸ್ಥರು ಬೇರೆ ರೀತಿಯ ಆಹಾರಕ್ಕಾಗಿ ಬಹಳವಾಗಿ ಆಶಿಸಿದರು. ಇಸ್ರೇಲರು ಸಹ ಮತ್ತೆ ಅಳಲು ಆರಂಭಿಸಿ, “ನಮಗೆ ಯಾರು ಮಾಂಸವನ್ನು ಕೊಡುತ್ತಾರೆ? ನಾವು ಈಜಿಪ್ಟಿನಲ್ಲಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜು, ಈರುಳ್ಳಿಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಆದರೆ ನಾವು ಈಗ ನಮ್ಮ ಬಲವನ್ನು ಕಳೆದುಕೊಂಡಿದ್ದೇವೆ. ಈ ಮನ್ನವನ್ನು ಬಿಟ್ಟು ನಮ್ಮಲ್ಲಿ ತಿನ್ನಲು ಬೇರೇನೂ ಇಲ್ಲ” ಎಂದರು.

ಅರಣ್ಯಕಾಂಡ 11:10-16

10 ಎಲ್ಲಾ ಕುಟುಂಬದವರೂ ತಮ್ಮತಮ್ಮ ಗುಡಾರದ ಬಾಗಿಲುಗಳಲ್ಲಿ ನಿಂತು ಗುಣಗುಟ್ಟುತ್ತಿರುವ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹು ಕೋಪಗೊಂಡನು. ಇದರಿಂದಾಗಿ ಮೋಶೆಗೆ ಬಹಳ ಬೇಸರವಾಯಿತು. 11 ಆಗ ಮೋಶೆ ಯೆಹೋವನಿಗೆ, “ನಿನ್ನ ಸೇವಕನಾದ ನನಗೆ ಯಾಕೆ ತೊಂದರೆಯನ್ನು ಉಂಟುಮಾಡಿದೆ? ನಾನು ನಿನಗೆ ಬೇಸರವನ್ನು ಉಂಟುಮಾಡಿದೆನೇ? ಈ ಜನರೆಲ್ಲರನ್ನು ಮುನ್ನಡೆಸಿಕೊಂಡು ಹೋಗುವ ಭಾರವನ್ನು ನೀನು ನನ್ನ ಮೇಲೆ ಯಾಕೆ ಹಾಕಿದೆ? 12 ನಾನು ಇವರಿಗೆ ಹೆತ್ತ ತಾಯಿಯೋ? ನಾನು ಅವರಿಗೆ ಜನ್ಮ ಕೊಡಲಿಲ್ಲವೆಂದು ನಿನಗೆ ಗೊತ್ತಿದೆ. ದಾದಿಯು ಮಗುವನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ನಾನು ನನ್ನ ಮಡಿಲಲ್ಲಿ ಇಟ್ಟು, ನೀನು ಅವರ ಪೂರ್ವಿಕರಿಗೆ ವಾಗ್ದಾನಮಾಡಿರುವ ದೇಶಕ್ಕೆ ಎತ್ತಿಕೊಂಡು ಹೋಗುವಂತೆ ನೀನು ನನಗೇಕೆ ಹೇಳುವೆ? 13 ಇವರು ನನ್ನ ಬಳಿಗೆ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳಿಕೊಳ್ಳುತ್ತಾರಲ್ಲಾ! ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು? 14 ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ನನಗೆ ಅಸಾಧ್ಯ. ಅದು ನನ್ನ ಶಕ್ತಿಗೆ ಮೀರಿದ ಕೆಲಸ. 15 ನೀನು ಹೀಗೆಯೇ ನನಗೆ ಮಾಡುವುದಾಗಿದ್ದರೆ ಅದಕ್ಕೆ ಬದಲಾಗಿ ನನ್ನನ್ನು ಕೊಂದುಬಿಡು ಎಂದು ಬೇಡಿಕೊಳ್ಳುತ್ತೇನೆ. ಆಗ ನಾನು ಈ ದುರವಸ್ಥೆಗಳಿಂದ ವಿಮುಕ್ತನಾಗುವೆನು” ಎಂದು ಹೇಳಿದನು.

16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಲ್ಲಿ ಹಿರಿಯರೆಂದೂ ಅಧಿಕಾರಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನಗುಡಾರದ ಬಾಗಿಲಿಗೆ ಕರೆದುತಂದು ಅಲ್ಲೇ ನಿನ್ನೊಡನೆ ನಿಲ್ಲಿಸಿಕೊ.

ಅರಣ್ಯಕಾಂಡ 11:24-29

24 ಮೋಶೆಯು ಹೊರಟುಹೋಗಿ, ಯೆಹೋವನು ಹೇಳಿದ್ದನ್ನು ಜನರಿಗೆ ತಿಳಿಸಿ, ಇಸ್ರೇಲರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಒಟ್ಟಾಗಿ ಸೇರಿಸಿದನು. ಅವರು ದೇವದರ್ಶನಗುಡಾರದ ಸುತ್ತಲೂ ನಿಲ್ಲುವಂತೆ ಆಜ್ಞಾಪಿಸಿದನು. 25 ಆಗ ಯೆಹೋವನು ಮೇಘದಲ್ಲಿ ಇಳಿದುಬಂದು ಮೋಶೆಯೊಡನೆ ಮಾತಾಡಿ ಅವನಲ್ಲಿದ್ದ ಆತ್ಮವನ್ನೇ[a] ಆ ಎಪ್ಪತ್ತು ಮಂದಿ ಹಿರಿಯರಿಗೆ ಕೊಟ್ಟನು. ಆತ್ಮಿಕ ವರಗಳು ಅವರಿಗೆ ಕೊಡಲ್ಪಟ್ಟಾಗ ಅವರು ಪ್ರವಾದಿಗಳಂತೆ ಪ್ರವಾದಿಸಿದರು. ಆದರೆ ಮತ್ತೆ ಅವರು ಹಾಗೆ ಪ್ರವಾದಿಸಲಿಲ್ಲ.

26 ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಗುಡಾರದ ಬಳಿಗೆ ಹೋಗಲಿಲ್ಲ. ಹಿರಿಯರ ಹೆಸರುಗಳಿದ್ದ ಪಟ್ಟಿಯಲ್ಲಿ ಅವರ ಹೆಸರುಗಳಿದ್ದವು. ಆದರೆ ಅವರು ಪಾಳೆಯದಲ್ಲೇ ಉಳಿದುಕೊಂಡರು. ಆದರೆ ಅವರಿಗೆ ಆತ್ಮಿಕ ವರಗಳು ಕೊಡಲ್ಪಟ್ಟಿದ್ದರಿಂದ ಅವರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸತೊಡಗಿದರು. 27 ಒಬ್ಬ ಯೌವನಸ್ಥನು ಮೋಶೆಯ ಬಳಿಗೆ ಓಡಿಹೋಗಿ, “ಎಲ್ದಾದ್ ಮತ್ತು ಮೇದಾದ್ ಎಂಬಿಬ್ಬರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸುತ್ತಿದ್ದಾರೆ” ಎಂದು ಹೇಳಿದನು.

28 ನೂನನ ಮಗನಾದ ಯೆಹೋಶುವನು ಮೋಶೆಗೆ, “ಸ್ವಾಮೀ, ನೀನು ಅವರನ್ನು ತಡೆಯಬೇಕು” ಎಂದನು. (ಯೆಹೋಶುವನು ಯೌವನಸ್ಥನಾಗಿದ್ದಾಗಿನಿಂದಲೂ ಮೋಶೆಯ ಸಹಾಯಕನಾಗಿದ್ದನು.)

29 ಆದರೆ ಮೋಶೆಯು, “ನೀನು ನನ್ನ ವಿಷಯದಲ್ಲಿ ಚಿಂತೆಪಡುತ್ತಿರುವುದೇಕೆ? ಯೆಹೋವನ ಜನರೆಲ್ಲರೂ ಪ್ರವಾದಿಗಳಾಗಿರಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲರ ಮೇಲೆ ಯೆಹೋವನು ತನ್ನ ಆತ್ಮನನ್ನು ಇರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಉತ್ತರಿಸಿದನು.

ಕೀರ್ತನೆಗಳು 19:7-14

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

ಯಾಕೋಬನು 5:13-20

ಪ್ರಾರ್ಥನೆಯ ಶಕ್ತಿ

13 ನಿಮ್ಮಲ್ಲಿ ತೊಂದರೆಗೆ ಒಳಗಾಗಿರುವವನು ಪ್ರಾರ್ಥಿಸಬೇಕು. ನಿಮ್ಮಲ್ಲಿ ಸಂತೋಷದಿಂದಿರುವವನು ಹಾಡಬೇಕು. 14 ನಿಮ್ಮಲ್ಲಿ ಕಾಯಿಲೆಯಾಗಿರುವವನು ಸಭಾಹಿರಿಯರನ್ನು ಕರೆಯಿಸಬೇಕು. ಹಿರಿಯರು ಅವನಿಗೆ ಎಣ್ಣೆಯನ್ನು ಹಚ್ಚಿ, ಪ್ರಭುವಿನ ಹೆಸರಿನಲ್ಲಿ ಅವನಿಗೋಸ್ಕರ ಪ್ರಾರ್ಥಿಸಬೇಕು. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಕಾಯಿಲೆಯಲ್ಲಿರುವವನನ್ನು ಗುಣಪಡಿಸುತ್ತದೆ. ಪ್ರಭುವು ಅವನನ್ನು ಗುಣಪಡಿಸುತ್ತಾನೆ. ಒಂದುವೇಳೆ, ಆ ವ್ಯಕ್ತಿಯು ಪಾಪ ಮಾಡಿದ್ದರೆ, ಪ್ರಭುವು ಅವನನ್ನು ಕ್ಷಮಿಸುತ್ತಾನೆ.

16 ನೀವು ಮಾಡಿದ ತಪ್ಪುಗಳನ್ನು ಒಬ್ಬರಿಗೊಬ್ಬರು ಯಾವಾಗಲೂ ಹೇಳಿಕೊಳ್ಳಿರಿ. ಬಳಿಕ ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ನೀವು ಹೀಗೆ ಮಾಡಿದರೆ, ದೇವರು ನಿಮ್ಮನ್ನು ಗುಣಪಡಿಸುವನು. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಲವಾಗಿದೆ. 17 ಎಲೀಯನು ಸಹ ನಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದನು. ಮಳೆ ಬಾರದಂತೆ ಅವನು ಪ್ರಾರ್ಥಿಸಿದಾಗ ಮೂರುವರೆ ವರ್ಷಗಳವರೆಗೆ ಆ ನಾಡಿನಲ್ಲಿ ಮಳೆಯೇ ಬೀಳಲಿಲ್ಲ! 18 ಬಳಿಕ ಎಲೀಯನು ಮಳೆ ಬರುವಂತೆ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿದು ಭೂಮಿಯಲ್ಲಿ ಮತ್ತೆ ಬೆಳೆಯು ಫಲಿಸಿತು.

ಆತ್ಮವನ್ನು ರಕ್ಷಿಸಿ

19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು. 20 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ನಡೆಸುವವನು ಆ ಪಾಪಿಯ ಆತ್ಮವನ್ನು ಮರಣದಿಂದ ಪಾರುಮಾಡಿದವನೂ ಅನೇಕ ಪಾಪಗಳಿಗೆ ಕ್ಷಮಾಪಣೆಯಾಗುವಂತೆ ಮಾಡಿದವನೂ ಆಗುತ್ತಾನೆ.

ಮಾರ್ಕ 9:38-50

ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ

(ಲೂಕ 9:49-50)

38 ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.

39 ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. 40 ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ. 41 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.

ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ

(ಮತ್ತಾಯ 18:6-9; ಲೂಕ 17:1-2)

42 “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು. 43 ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ. 44 [a] 45 ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು. 46 [b] 47 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು. 48 ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.

49 “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.

50 “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ[c] ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International