Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 19:7-14

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

ಧರ್ಮೋಪದೇಶಕಾಂಡ 27:1-10

ಜನರಿಗಾಗಿ ಕಲ್ಲಿನಿಂದ ಮಾಡಿದ ಸ್ಮಾರಕ ಕಲ್ಲುಗಳು

27 ಮೋಶೆ ಮತ್ತು ಸಮೂಹದ ಹಿರಿಯರು ಜನರೊಂದಿಗೆ ಮಾತನಾಡಿದರು. ಮೋಶೆಯು ಹೇಳಿದ್ದೇನೆಂದರೆ: “ನಾನು ಆಜ್ಞಾಪಿಸಿದ ಎಲ್ಲಾ ವಿಧಿಗಳನ್ನು ಅನುಸರಿಸಿರಿ. ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಪ್ರವೇಶಿಸುವಿರಿ. ಆ ದಿವಸ ದೊಡ್ಡ ದೊಡ್ಡ ಕಲ್ಲುಗಳನ್ನು ರಾಶಿ ಹಾಕಿ ಅದನ್ನು ಗಾರೆ ಮಾಡಿರಿ. ಅದರ ಮೇಲೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಬರೆಯಿರಿ. ನೀವು ನದಿಯನ್ನು ದಾಟಿದಾಗ ಈ ಕಾರ್ಯವನ್ನು ಮಾಡಬೇಕು. ಅನಂತರ, ಆತನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಸಮೃದ್ಧಿಯಾದ ದೇಶದೊಳಕ್ಕೆ ಹೋಗಿರಿ.

“ನೀವು ಆ ದೇಶದೊಳಗೆ ಪ್ರವೇಶ ಮಾಡಿದ ನಂತರ ನಾನು ಹೇಳಿದ್ದೆಲ್ಲವನ್ನು ನೀವು ಪರಿಪಾಲಿಸಬೇಕು. ಏಬಾಲ್ ಬೆಟ್ಟದ ಮೇಲೆ ಸ್ಮಾರಕ ಸ್ತಂಭವನ್ನು ನಿಲ್ಲಿಸಬೇಕು. ಅದಕ್ಕೆ ಗಾರೆ ಮಾಡಿ. ಮೇಲೆ ಅಲ್ಲಿಯೇ ಕಲ್ಲಿನಿಂದ ಒಂದು ಯಜ್ಞವೇದಿಕೆಯನ್ನು ಕಟ್ಟಿರಿ. ಆ ಕಲ್ಲುಗಳನ್ನು ಕೆತ್ತಲು ಕಬ್ಬಿಣದ ಸಾಧನಗಳನ್ನು ಉಪಯೋಗಿಸಬಾರದು. ಕಡಿದ ಕಲ್ಲುಗಳಿಂದ ಯಜ್ಞವೇದಿಕೆಯನ್ನು ಕಟ್ಟಬಾರದು. ಆ ಯಜ್ಞವೇದಿಕೆಯ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಿರಿ. ನೀವು ಅಲ್ಲಿ ಯಜ್ಞವನ್ನರ್ಪಿಸಿ ಸಮಾಧಾನಯಜ್ಞದ ಭೋಜನವನ್ನು ಮಾಡಬೇಕು. ಅಲ್ಲಿ ದೇವರ ಸನ್ನಿಧಾನದಲ್ಲಿ ಊಟ ಮಾಡಿ ಸಂತೋಷಪಡಿರಿ. ನೀವು ಆ ಕಲ್ಲುಗಳ ಮೇಲೆ ಈ ಉಪದೇಶಗಳನ್ನೆಲ್ಲ ಸ್ಪಷ್ಟವಾಗಿ ಓದಲು ಸುಲಭವಾದ ರೀತಿಯಲ್ಲಿ ಬರೆಯಬೇಕು.”

ಮೋಶೆಯೂ ಯಾಜಕರೂ ಇಸ್ರೇಲ್ ಸಮೂಹದವರೊಂದಿಗೆ ಮಾತನಾಡಿದರು. ಆಗ ಮೋಶೆಯು, “ಇಸ್ರೇಲರೇ, ಮೌನವಾಗಿ ನನ್ನ ಮಾತುಗಳನ್ನು ಕೇಳಿರಿ. ಈ ದಿನ ನೀವು ದೇವರಾದ ಯೆಹೋವನ ಸ್ವಕೀಯ ಪ್ರಜೆಯಾಗಿರುತ್ತೀರಿ. 10 ಆದ್ದರಿಂದ ಆತನು ಹೇಳಿದ್ದೆಲ್ಲವನ್ನೂ ಮಾಡಿರಿ. ನಾನು ಈ ಹೊತ್ತು ನಿಮಗೆ ಹೇಳುವಂಥ ಆತನ ಅಪ್ಪಣೆಗಳಿಗೂ ವಿಧಿನಿಯಮಗಳಿಗೂ ವಿಧೇಯರಾಗಿರಿ” ಎಂದು ಹೇಳಿದನು.

ಮತ್ತಾಯ 5:13-20

ನೀವು ಉಪ್ಪಿನಂತಿದ್ದೀರಿ, ಬೆಳಕಿನಂತಿದ್ದೀರಿ

(ಮಾರ್ಕ 9:50; ಲೂಕ 14:34-35)

13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಉಪ್ಪನ್ನಾಗಿ ಮಾಡಲು ಸಾಧ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೊರಗೆ ಬಿಸಾಡಿ ಅದರ ಮೇಲೆ ನಡೆದಾಡುವರು.

14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮರೆಯಾಗಿರಲಾರದು. 15 ಜನರು ದೀಪವನ್ನು ಪಾತ್ರೆಯ ಕೆಳಗೆ ಮುಚ್ಚಿಡುವುದಿಲ್ಲ. ಜನರು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಮನೆಯಲ್ಲಿರುವವರಿಗೆಲ್ಲಾ ಬೆಳಕು ಪ್ರಕಾಶಿಸುವುದು. 16 ಅದೇ ರೀತಿಯಲ್ಲಿ ನೀವು ಜನರಿಗೆ ಬೆಳಕಾಗಿರಬೇಕು. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.

ಪವಿತ್ರ ಗ್ರಂಥಕ್ಕೆ ಅಂತ್ಯವೇ ಇಲ್ಲ

17 “ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು. 18 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಆಕಾಶ ಮತ್ತು ಭೂಮಿ ಅಳಿದುಹೋಗುವವರೆಗೂ ಧರ್ಮಶಾಸ್ತ್ರದಿಂದ ಏನೂ ಅಳಿದುಹೋಗುವುದಿಲ್ಲ. ಎಲ್ಲಾ ನೆರವೇರುವ ತನಕ ಧರ್ಮಶಾಸ್ತ್ರದ ಒಂದು ಅಕ್ಷರವಾಗಲಿ ಅಥವಾ ಅದರ ಒಂದು ಚುಕ್ಕೆಯಾಗಲಿ ಅಳಿದುಹೋಗುವುದಿಲ್ಲ.

19 “ಮನುಷ್ಯನು ಪ್ರತಿ ಆಜ್ಞೆಗೂ, ಅಂದರೆ ಸಣ್ಣಸಣ್ಣ ಆಜ್ಞೆಗೂ ವಿಧೇಯನಾಗಿರಬೇಕು. ಒಬ್ಬನು ಯಾವ ಆಜ್ಞೆಗಾದರೂ ಅವಿಧೇಯನಾಗಿ ಜೀವಿಸುತ್ತಾ ಆ ಆಜ್ಞೆಗೆ ಬೇರೆಯವರೂ ಅವಿಧೇಯರಾಗಿರಬೇಕೆಂದು ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅತ್ಯಲ್ಪನಾಗಿರುವನು. ಆದರೆ ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ಜೀವಿಸುತ್ತಾ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ಬೇರೆಯವರಿಗೂ ಬೋಧಿಸುವವನು ಪರಲೋಕರಾಜ್ಯದಲ್ಲಿ ಪ್ರಮುಖನಾಗಿರುವನು. 20 ಧರ್ಮೋಪದೇಶಕರಿಗಿಂತಲೂ ಫರಿಸಾಯರಿಗಿಂತಲೂ ನೀವು ಉತ್ತಮವಾದದ್ದನ್ನು ಮಾಡಬೇಕು. ಇಲ್ಲವಾದರೆ ನೀವು ಪರಲೋಕರಾಜ್ಯವನ್ನು ಪ್ರವೇಶಿಸಲಾರಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International