Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 19:7-14

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

ಧರ್ಮೋಪದೇಶಕಾಂಡ 1:1-18

ಇಸ್ರೇಲರಿಗೆ ಮೋಶೆಯ ಸಂದೇಶ

ಇಸ್ರೇಲರಿಗೆ ಮೋಶೆಯು ಈ ಆಜ್ಞೆಗಳನ್ನು ಕೊಟ್ಟನು. ಆಗ ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ಅಡವಿಯಲ್ಲಿ ಪಾಳೆಯ ಮಾಡಿಕೊಂಡಿದ್ದರು. ಇದು ಸೂಫಿಗೆ ಎದುರಾಗಿ, ಪಾರಾನಿನ ಮರುಭೂಮಿಗೂ ತೋಫೆಲ್, ಲಾಬಾನ್, ಹಚೇರೋತ್ ಮತ್ತು ದೀಜಾಹಾಬ್ ಪಟ್ಟಣಗಳ ನಡುವೆ ಇತ್ತು.

ಹೋರೇಬ್ (ಸೀನಾಯಿ) ಬೆಟ್ಟದಿಂದ ಸೇಯೀರ್ ಬೆಟ್ಟದ ಮಾರ್ಗವಾಗಿ ಕಾದೇಶ್‌ಬರ್ನೇಯಕ್ಕೆ ತಲುಪಲು ಹನ್ನೊಂದು ದಿವಸದ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ಇಸ್ರೇಲರು ಈಜಿಪ್ಟನ್ನು ಬಿಟ್ಟು ಈ ಸ್ಥಳಕ್ಕೆ ಬರಲು ನಲವತ್ತು ವರ್ಷಗಳು ಹಿಡಿದವು. ನಲವತ್ತನೆ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಮೋಶೆಯು ಜನರೊಂದಿಗೆ ಮಾತಾಡಿ ಯೆಹೋವನು ಆಜ್ಞಾಪಿಸಿದ ಸಮಸ್ತ ವಿಷಯಗಳನ್ನು ತಿಳಿಸಿದನು. ಸೀಹೋನನನ್ನು ಮತ್ತು ಓಗನನ್ನು ದೇವರಾದ ಯೆಹೋವನು ಸೋಲಿಸಿದ ಬಳಿಕ ನಡೆದ ಸಂಗತಿಯಿದು. (ಸೀಹೋನನು ಅಮೋರಿಯರ ರಾಜನಾಗಿದ್ದನು. ಅವನು ಹೆಷ್ಬೋನಿನಲ್ಲಿ ವಾಸಿಸುತ್ತಿದ್ದನು. ಓಗನು ಬಾಷಾನಿನ ಅರಸನು. ಇವನು ಅಷ್ಟಾರೋತ್ ಮತ್ತು ಎದ್ರೈ ಎಂಬಲ್ಲಿ ವಾಸವಾಗಿದ್ದನು.) ಇಸ್ರೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಮೋವಾಬ್ಯರ ಸ್ಥಳದಲ್ಲಿ ಪಾಳೆಯ ಮಾಡಿಕೊಂಡಿದ್ದರು. ದೇವರು ತಿಳಿಸಿದ ಕಟ್ಟಳೆಗಳನ್ನು ಮೋಶೆಯು ವಿವರಿಸುತ್ತಾ ಹೀಗೆಂದನು:

“ನಮ್ಮ ದೇವರಾದ ಯೆಹೋವನು ಹೋರೇಬ್ ಬೆಟ್ಟದಲ್ಲಿ ನಮ್ಮೊಂದಿಗೆ ಮಾತಾಡಿದನು. ಆತನು ಹೇಳಿದ್ದೇನೆಂದರೆ: ‘ನೀವು ಈ ಪ್ರದೇಶಕ್ಕೆ ಬಂದು ಬಹಳ ಕಾಲವಾಯಿತು. ಅಮೋರಿಯರು ವಾಸಿಸುವ ಬೆಟ್ಟಪ್ರಾಂತ್ಯಗಳಿಗೆ ಹೋಗಿರಿ, ಅದರ ಸುತ್ತಲೂ ಇರುವ ಜೋರ್ಡನಿನ ಬಯಲು ಪ್ರದೇಶಕ್ಕೆ, ಬೆಟ್ಟಪ್ರದೇಶಕ್ಕೆ, ಪಶ್ಚಿಮದ ಇಳಕಲುಪ್ರದೇಶಕ್ಕೆ, ನೆಗೆವ್ ಮತ್ತು ಸಮುದ್ರ ಕರಾವಳಿ ಪ್ರದೇಶಗಳಿಗೆ ಹೋಗಿರಿ. ಕಾನಾನ್ ಮತ್ತು ಲೆಬನೋನ್ ಪ್ರದೇಶಗಳ ಮೂಲಕ ಯೂಫ್ರೇಟೀಸ್ ಮಹಾನದಿಯವರೆಗೂ ಹೋಗಿರಿ. ನಾನು ನಿಮಗೆ ಆ ಪ್ರಾಂತ್ಯವನ್ನೆಲ್ಲಾ ಕೊಡುವೆನು. ಅಲ್ಲಿಗೆ ಹೋಗಿ ಅದನ್ನು ತೆಗೆದುಕೊಳ್ಳಿರಿ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮತ್ತು ಅವರ ಸಂತತಿಯವರಿಗೆ ಆ ಪ್ರದೇಶವನ್ನು ಕೊಡುವೆನು ಎಂದು ನಾನು ವಾಗ್ದಾನ ಮಾಡಿದ್ದೇನೆ.’”

ಮೋಶೆಯಿಂದ ನಾಯಕರ ಆಯ್ಕೆ

“ಆ ಸಮಯದಲ್ಲಿ ನಾನು ನಿಮಗೆ, ‘ನಿಮ್ಮನ್ನು ಪರಾಂಬರಿಸಲು ನನಗೆ ಸಾಧ್ಯವಿಲ್ಲ’ ಎಂದು ಹೇಳಿದೆನು. 10 ಈಗ ನಿಮ್ಮ ಜನಸಂಖ್ಯೆಯು ಇನ್ನೂ ಅಧಿಕವಾಗಿರುತ್ತದೆ. ದೇವರಾದ ಯೆಹೋವನು ನಿಮ್ಮನ್ನು ವೃದ್ಧಿಪಡಿಸುತ್ತಿರುವುದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಇರುವಿರಿ. 11 ನಮ್ಮ ಪೂರ್ವಿಕರ ದೇವರಾದ ಯೆಹೋವನು ಈಗ ಇರುವುದಕ್ಕಿಂತ ಸಾವಿರಪಟ್ಟು ಅಧಿಕವಾಗಿ ನಿಮ್ಮ ಜನಸಂಖ್ಯೆಯನ್ನು ಹೆಚ್ಚಿಸಲಿ. ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮನ್ನು ಆಶೀರ್ವದಿಸಲಿ. 12 ಆದರೆ ನಾನೇ ಸ್ವತಃ ನಿಮ್ಮನ್ನು ಪರಾಂಬರಿಸುವುದಕ್ಕಾಗಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಲಿ ಸಾಧ್ಯವಾಗಲಿಲ್ಲ. 13 ಆಗ ನಾನು ನಿಮಗೆ ಹೇಳಿದ್ದೇನೆಂದರೆ: ‘ನಿಮ್ಮನಿಮ್ಮ ಕುಲಗಳಿಂದ ಯೋಗ್ಯರಾದವರನ್ನು ಆರಿಸಿರಿ. ಅವರನ್ನು ನಿಮ್ಮ ನಾಯಕರನ್ನಾಗಿ ನೇಮಿಸುವೆನು. ಅವರು ವಿವೇಕಿಗಳಾಗಿಯೂ ಅನುಭವಶಾಲಿಗಳಾಗಿಯೂ ಇರಬೇಕು’ ಎಂದು ಹೇಳಿದೆನು.

14 “ಆಗ ನೀವು, ‘ಇದು ಒಳ್ಳೆಯ ಆಲೋಚನೆ’ ಎಂದು ಹೇಳಿದಿರಿ.

15 “ಆದ್ದರಿಂದ, ನಿಮ್ಮ ಕುಲಗಳಿಂದ ನೀವು ಆರಿಸಿಕೊಂಡ ಬುದ್ಧಿವಂತರಾದ ಮತ್ತು ಅನುಭವಸ್ಥರಾದ ಜನರನ್ನು ನಾನು ನೇಮಿಸಿದೆನು. ಈ ರೀತಿಯಾಗಿ ಅವರನ್ನು ಸಾವಿರ ಜನರ ಮೇಲೆಯೂ, ನೂರು ಜನರ ಮೇಲೆಯೂ, ಐವತ್ತು ಜನರ ಮೇಲೆಯೂ ಮತ್ತು ಹತ್ತು ಜನರ ಮೇಲೆಯೂ ನಾಯಕರನ್ನಾಗಿ ನೇಮಿಸಿದೆನು. ಅಲ್ಲದೆ ನಿಮ್ಮನಿಮ್ಮ ಕುಲಗಳಿಗೆ ಪ್ರಧಾನರನ್ನೂ ನೇಮಿಸಿದೆನು.

16 “ನಿಮ್ಮ ನ್ಯಾಯಗಳನ್ನು ತೀರಿಸುವ, ಆ ನಾಯಕರುಗಳಿಗೆ ಹೇಳಿದ್ದೇನೆಂದರೆ: ‘ನಿಮ್ಮ ಅಧೀನದಲ್ಲಿರುವ ಜನರ ದೂರುಗಳನ್ನು ಚೆನ್ನಾಗಿ ಕೇಳಿಕೊಂಡು ಪಕ್ಷಪಾತವಿಲ್ಲದೆ ನ್ಯಾಯತೀರಿಸಬೇಕು. ಅವರಿಬ್ಬರೂ ಇಸ್ರೇಲರೇ ಆಗಿರಬಹುದು ಅಥವಾ ಒಬ್ಬನು ಇಸ್ರೇಲನೂ ಮತ್ತೊಬ್ಬನು ಪರದೇಶಿಯೂ ಆಗಿರಬಹುದು. ನೀವು ಪ್ರತಿಯೊಂದು ದೂರನ್ನು ನ್ಯಾಯವಾಗಿ ಬಗೆಹರಿಸಿ ತೀರ್ಪು ನೀಡಬೇಕು. 17 ನ್ಯಾಯತೀರಿಸುವಾಗ ಒಬ್ಬನು ಇನ್ನೊಬ್ಬನಿಗಿಂತ ವಿಶೇಷ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಲೆಕ್ಕಿಸದೆ ಇಬ್ಬರೂ ಸಮಾನರೆಂದು ಪರಿಗಣಿಸಿ ಸರಿಯಾದ ತೀರ್ಪು ಕೊಡಬೇಕು. ನೀವು ಯಾರಿಗೂ ಭಯಪಡಬೇಡಿರಿ. ಯಾಕೆಂದರೆ ನಿಮ್ಮ ತೀರ್ಪು ದೇವರಿಂದ ಬಂದ ತೀರ್ಪಾಗಿರುತ್ತದೆ. ನಿಮಗೆ ಬಗೆಹರಿಸಲು ಕಷ್ಟವಾಗುವ ದೂರುಗಳಿದ್ದಲ್ಲಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. ಅವುಗಳಿಗೆ ನಾನು ನ್ಯಾಯತೀರ್ಪು ನೀಡುವೆನು.’ 18 ಅದೇ ಸಮಯದಲ್ಲಿ, ನೀವು ಮಾಡತಕ್ಕ ಬೇರೆ ಎಲ್ಲಾ ಸಂಗತಿಗಳನ್ನೂ ನಾನು ನಿಮಗೆ ತಿಳಿಸಿದೆನು.

ಅಪೊಸ್ತಲರ ಕಾರ್ಯಗಳು 12:20-25

20 ಟೈರ್ ಮತ್ತು ಸಿದೋನ್ ಪಟ್ಟಣಗಳ ಜನರ ಮೇಲೆ ಹೆರೋದನು ಬಹು ಕೋಪಗೊಂಡಿದ್ದನು. ಆ ಜನರೆಲ್ಲರೂ ಹೆರೋದನನ್ನು ಭೇಟಿಯಾಗಲು ಒಟ್ಟಾಗಿ ಹೋದರು. ಅವರು ಬ್ಲಾಸ್ತನನ್ನು ತಮ್ಮ ಕಡೆಗೆ ಒಲಿಸಿಕೊಂಡರು. ಬ್ಲಾಸ್ತನು ರಾಜನ ವೈಯಕ್ತಿಕ ಸೇವಕನಾಗಿದ್ದನು. ಆ ಜನರು ತಮ್ಮೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಹೆರೋದನನ್ನು ಕೇಳಿಕೊಂಡರು. ಯಾಕೆಂದರೆ ಅವರ ನಾಡಿಗೆ ಹೆರೋದನ ನಾಡಿನಿಂದ ಆಹಾರವನ್ನು ತರಿಸಿಕೊಳ್ಳಬೇಕಾಗಿತ್ತು.

21 ಅವರನ್ನು ಸಂಧಿಸುವುದಕ್ಕಾಗಿ ಹೆರೋದನು ದಿನವೊಂದನ್ನು ಗೊತ್ತುಮಾಡಿದನು. ಅಂದು ಹೆರೋದನು ಸುಂದರವಾದ ರಾಜವಸ್ತ್ರವನ್ನು ಧರಿಸಿಕೊಂಡಿದ್ದನು. ಅವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಜನರಿಗೆ ಭಾಷಣ ಮಾಡಿದನು. 22 ಆ ಜನರು, “ಈ ಧ್ವನಿಯು ಮನುಷ್ಯನದಲ್ಲ, ದೇವರದೇ!” ಎಂದು ಕೂಗಿದರು. 23 ಹೆರೋದನು ಈ ಹೊಗಳಿಕೆಯನ್ನು ತಾನೇ ಸ್ವೀಕರಿಸಿಕೊಂಡನು. ದೇವರನ್ನು ಮಹಿಮೆಪಡಿಸಲಿಲ್ಲ. ಆದ್ದರಿಂದ ಆ ಕ್ಷಣವೇ, ಪ್ರಭುವಿನ ದೂತನೊಬ್ಬನು ಅವನಿಗೆ ಕಾಯಿಲೆಯನ್ನು ಬರಮಾಡಿದನು. ಅವನ ದೇಹದ ಒಳಭಾಗವನ್ನು ಹುಳಗಳು ತಿಂದುಹಾಕಿದ್ದರಿಂದ ಅವನು ಸತ್ತುಹೋದನು.

24 ದೇವರ ಸಂದೇಶವು ಹಬ್ಬುತ್ತಿತ್ತು ಮತ್ತು ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದ ವಿಶ್ವಾಸಿಗಳ ಸಮುದಾಯವು ದೊಡ್ಡದಾಗತೊಡಗಿತು.

25 ಬಾರ್ನಬ ಮತ್ತು ಸೌಲರು ಜೆರುಸಲೇಮಿನಲ್ಲಿ ತಮ್ಮ ಕಾರ್ಯವನ್ನು ಮುಗಿಸಿದ ಮೇಲೆ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಮಾರ್ಕನೆಂಬ ಯೋಹಾನನು ಅವರೊಂದಿಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International