Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 139:1-18

ಸ್ತುತಿಗೀತೆ. ರಚನೆಗಾರ: ದಾವೀದ.

139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
    ಸಂಪೂರ್ಣವಾಗಿ ತಿಳಿದುಕೊಂಡಿರುವೆ.
ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
    ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
    ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
    ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
ನೀನು ನನ್ನ ಸುತ್ತಲೂ ಆವರಿಸಿರುವೆ;
    ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
    ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ!
    ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ.
    ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ
    ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು.
    ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.

11 ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ,
    “ಹಗಲು ಹೋಗಿ ಕತ್ತಲಾಯಿತು,
    ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
12 ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ.
    ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
    ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
    ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.

15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
    ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
    ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
    ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
    ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.

ಯೆರೆಮೀಯ 1:4-10

ಯೆಹೋವನು ಯೆರೆಮೀಯನನ್ನು ಕರೆದನು

ಯೆರೆಮೀಯನಿಗೆ ಯೆಹೋವನ ಈ ಸಂದೇಶ ಬಂದಿತು:

“ನಾನು ನಿನ್ನನ್ನು ನಿನ್ನ ತಾಯಿಯ ಗರ್ಭದಲ್ಲಿ ರೂಪಿಸುವ ಮುಂಚೆಯೇ
    ನಿನ್ನನ್ನು ಬಲ್ಲವನಾಗಿದ್ದೆನು.
ನೀನು ಹುಟ್ಟುವದಕ್ಕಿಂತ ಮುಂಚೆಯೇ
    ನಾನು ನಿನ್ನನ್ನು ಒಂದು ವಿಶೇಷವಾದ ಕೆಲಸಕ್ಕೆ
    ಅಂದರೆ ಜನಾಂಗಗಳಿಗೆ ಪ್ರವಾದಿಯನ್ನಾಗಿ ಆರಿಸಿಕೊಂಡಿದ್ದೆನು.”

ಆಗ ಯೆರೆಮೀಯನೆಂಬ ನಾನು, “ಸರ್ವಶಕ್ತನಾದ ಯೆಹೋವನೇ, ಹೇಗೆ ಮಾತನಾಡಬೇಕೆಂಬುದೇ ನನಗೆ ತಿಳಿಯದು. ನಾನು ಕೇವಲ ಹುಡುಗನಷ್ಟೇ” ಎಂದು ಹೇಳಿದೆ.

ಆದರೆ ಯೆಹೋವನು ನನಗೆ,

“ನಾನು ಕೇವಲ ಹುಡುಗನೆಂದು ಹೇಳಬೇಡ,
    ನಾನು ಕಳುಹಿಸುವ ಸ್ಥಳಗಳಿಗೆ ನೀನು ಹೋಗಬೇಕು.
    ನಾನು ಹೇಳು ಅಂದದ್ದನ್ನೆಲ್ಲ ನೀನು ಹೇಳಬೇಕು.
ಯಾರಿಗೂ ನೀನು ಹೆದರಬೇಡ, ನಾನೇ ನಿನ್ನ ಜೊತೆ ಇದ್ದೇನೆ.
    ನಾನು ನಿನ್ನನ್ನು ಕಾಪಾಡುತ್ತೇನೆ.
ಈ ಮಾತನ್ನು ಯೆಹೋವನಾದ ನಾನೇ ಹೇಳುತ್ತಿದ್ದೇನೆ” ಎಂದನು.

ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ,

“ಯೆರೆಮೀಯನೇ, ಇಗೋ, ನಾನು ನನ್ನ ಮಾತುಗಳನ್ನು ನಿನ್ನ ಬಾಯಲ್ಲಿ ಇಡುತ್ತಿದ್ದೇನೆ.
10 ಕಿತ್ತುಹಾಕಲು, ಕೆಡವಲು, ನಾಶಪಡಿಸಲು, ಹಾಳುಮಾಡಲು,
    ಕಟ್ಟಲು, ನೆಡಲು, ಜನಾಂಗಗಳ ಮೇಲೂ ರಾಜ್ಯಗಳ ಮೇಲೂ
    ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.

ಯೋಹಾನ 8:21-38

ಯೆಹೂದ್ಯರ ಅಪನಂಬಿಕೆ

21 ಯೇಸು ಅವರಿಗೆ, “ನಾನು ನಿಮ್ಮನ್ನು ಬಿಟ್ಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ. ಆದರೆ ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.

22 ಆದ್ದರಿಂದ ಯೆಹೂದ್ಯರು, “ಯೇಸು ತನ್ನನ್ನು ತಾನೇ ಕೊಂದುಕೊಳ್ಳುವನೇ? ಅದಕ್ಕಾಗಿಯೇ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳಿದನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

23 ಅದಕ್ಕೆ ಯೇಸು, “ನೀವು ಕೆಳಗಿನವರಾಗಿದ್ದೀರಿ. ನಾನಾದರೋ ಮೇಲಿನವನು. ನೀವು ಈ ಲೋಕದವರಾಗಿದ್ದೀರಿ. ಆದರೆ ನಾನು ಈ ಲೋಕದವನಲ್ಲ. 24 ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆ. ಹೌದು, ನಾನೇ ಆತನೆಂಬುದನ್ನು ನೀವು ನಂಬದಿದ್ದರೆ ನಿಮ್ಮ ಪಾಪಗಳಲ್ಲಿಯೇ ನೀವು ಸಾಯುವಿರಿ” ಎಂದು ಹೇಳಿದನು.

25 ಯೆಹೂದ್ಯರು, “ಹಾಗಾದರೆ, ನೀನು ಯಾರು?” ಎಂದು ಕೇಳಿದರು.

ಯೇಸು, “ನಾನು ಯಾರೆಂದು ನಿಮಗೆ ಮೊದಲಿಂದ ತಿಳಿಸುತ್ತಾ ಬಂದೆನೋ, ಆತನೇ ನಾನು. 26 ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಅನೇಕ ಸಂಗತಿಗಳಿವೆ. ನಾನು ನಿಮಗೆ ತೀರ್ಪು ಮಾಡಬಲ್ಲೆನು. ಆದರೆ ನನ್ನನ್ನು ಕಳುಹಿಸಿದಾತನಿಂದ ನಾನು ಕೇಳಿದ ಸಂಗತಿಗಳನ್ನು ಮಾತ್ರ ಜನರಿಗೆ ಹೇಳುತ್ತೇನೆ. ಆತನು ಸತ್ಯವನ್ನೇ ತಿಳಿಸುತ್ತಾನೆ” ಎಂದು ಉತ್ತರಕೊಟ್ಟನು.

27 ಯೇಸು ಯಾರ ಬಗ್ಗೆ ಮಾತಾಡುತ್ತಿದ್ದಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲಿಲ್ಲ. ಯೇಸು ಅವರಿಗೆ ತಂದೆಯ (ದೇವರ) ಬಗ್ಗೆ ಹೇಳುತ್ತಿದ್ದನು. 28 ಆದ್ದರಿಂದ ಆತನು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೇರಿಸುವಿರಿ (ಕೊಲ್ಲುವಿರಿ). ನಾನೇ ಆತನೆಂಬುದು ಆಗ ನಿಮಗೆ ತಿಳಿಯುವುದು. ನಾನು ಈ ಕಾರ್ಯಗಳನ್ನು ನನ್ನ ಸ್ವಂತ ಅಧಿಕಾರದಿಂದ ಮಾಡುತ್ತಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ಅಲ್ಲದೆ, ತಂದೆಯು ನನಗೆ ಉಪದೇಶಿಸಿದ ಸಂಗತಿಗಳನ್ನು ಮಾತ್ರ ನಾನು ಹೇಳುತ್ತೇನೆಂಬುದೂ ನಿಮಗೆ ಅರಿವಾಗುವುದು. 29 ನನ್ನನ್ನು ಕಳುಹಿಸಿದಾತನು (ದೇವರು) ನನ್ನೊಂದಿಗೆ ಇದ್ದಾನೆ. ಆತನಿಗೆ ಮೆಚ್ಚಿಕೆಯಾದದ್ದನ್ನೇ ನಾನು ಯಾವಾಗಲೂ ಮಾಡುತ್ತೇನೆ. ಆದ್ದರಿಂದ ಆತನು ನನ್ನನ್ನು ಒಬ್ಬಂಟಿಗನಾಗಿ ಬಿಟ್ಟುಬಿಟ್ಟಿಲ್ಲ” ಎಂದು ಹೇಳಿದನು. 30 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಅನೇಕ ಜನರು ಆತನಲ್ಲಿ ನಂಬಿಕೆಯಿಟ್ಟರು.

ಪಾಪವಿಮೋಚನೆಯ ಬಗ್ಗೆ ಯೇಸುವಿನ ಉಪದೇಶ

31 ಆದ್ದರಿಂದ ಯೇಸು ತನ್ನಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ, “ನೀವು ನನ್ನ ಉಪದೇಶಕ್ಕೆ ವಿಧೇಯರಾಗಿದ್ದರೆ, ನೀವು ನಿಜವಾಗಿಯೂ ನನ್ನ ಹಿಂಬಾಲಕರಾಗಿದ್ದೀರಿ. 32 ನೀವು ಸತ್ಯವನ್ನು ತಿಳಿದುಕೊಳ್ಳುವಿರಿ. ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.

33 ಯೆಹೂದ್ಯರು, “ನಾವು ಅಬ್ರಹಾಮನ ಮಕ್ಕಳು. ನಾವೆಂದೂ ಯಾರ ಗುಲಾಮರೂ ಆಗಿರಲಿಲ್ಲ. ಹೀಗಿದ್ದರೂ, ನಮಗೆ ಬಿಡುಗಡೆ ಆಗುವುದೆಂದು ನೀನು ಹೇಳುವುದೇಕೆ?” ಎಂದು ಉತ್ತರಕೊಟ್ಟರು.

34 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪಾಪಮಾಡುವ ಪ್ರತಿಯೊಬ್ಬನೂ ಪಾಪಕ್ಕೆ ಗುಲಾಮನಾಗಿದ್ದಾನೆ. ಪಾಪವು ಅವನ ಯಜಮಾನನಾಗಿದೆ. 35 ಗುಲಾಮನು ಒಂದು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಮಗನು ಕುಟುಂಬಕ್ಕೆ ಶಾಶ್ವತವಾಗಿ ಸೇರಿದವನಾಗಿದ್ದಾನೆ. 36 ಆದ್ದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನೀವು ನಿಜವಾಗಿಯೂ ಬಿಡುಗಡೆಯಾಗಿರುವಿರಿ. 37 ನೀವು ಅಬ್ರಹಾಮನ ಮಕ್ಕಳೆಂದು ನನಗೆ ಗೊತ್ತಿದೆ. ಆದರೆ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ. ಏಕೆಂದರೆ ನನ್ನ ಉಪದೇಶವನ್ನು ಸ್ವೀಕರಿಸಿಕೊಳ್ಳಲು ನಿಮಗೆ ಇಷ್ಟವಿಲ್ಲ. 38 ನನ್ನ ತಂದೆಯು ನನಗೆ ತೋರಿಸಿರುವುದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ನೀವಾದರೋ ನಿಮ್ಮ ತಂದೆ ನಿಮಗೆ ಹೇಳಿದ ಸಂಗತಿಗಳನ್ನೇ ಮಾಡುತ್ತೀರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International