Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 139:1-18

ಸ್ತುತಿಗೀತೆ. ರಚನೆಗಾರ: ದಾವೀದ.

139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
    ಸಂಪೂರ್ಣವಾಗಿ ತಿಳಿದುಕೊಂಡಿರುವೆ.
ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
    ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
    ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
    ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
ನೀನು ನನ್ನ ಸುತ್ತಲೂ ಆವರಿಸಿರುವೆ;
    ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
    ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ!
    ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ.
    ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ
    ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು.
    ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.

11 ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ,
    “ಹಗಲು ಹೋಗಿ ಕತ್ತಲಾಯಿತು,
    ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
12 ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ.
    ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
    ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
    ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.

15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
    ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
    ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
    ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
    ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.

2 ರಾಜರುಗಳು 11:21-12:16

21 ಯೆಹೋವಾಷನು ರಾಜನಾದಾಗ ಅವನಿಗೆ ಏಳು ವರ್ಷ ವಯಸ್ಸಾಗಿತ್ತು.

ಯೆಹೋವಾಷನು ತನ್ನ ಆಳ್ವಿಕೆಯನ್ನು ಆರಂಭಿಸಿದನು

12 ಯೇಹುವು ಇಸ್ರೇಲಿನ ರಾಜನಾಗಿದ್ದ ಏಳನೆಯ ವರ್ಷದಲ್ಲಿ ಯೆಹೋವಾಷನು ಆಳಲಾರಂಭಿಸಿದನು. ಯೆಹೋವಾಷನು ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದ ಚಿಬ್ಯಳು ಯೆಹೋವಾಷನ ತಾಯಿ. ಯೆಹೋವಾಷನು ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಮಾಡಿದನು. ಯೆಹೋವಾಷನು ತನ್ನ ಜೀವಮಾನವೆಲ್ಲ ಯೆಹೋವನಿಗೆ ವಿಧೇಯನಾಗಿದ್ದನು. ಯಾಜಕನಾದ ಯೆಹೋಯಾದಾವನು ಉಪದೇಶಿಸಿದ್ದ ಕಾರ್ಯಗಳನ್ನೆಲ್ಲ ಯೆಹೋವಾಷನು ಮಾಡಿದನು. ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಇನ್ನೂ ಆ ಸ್ಥಳಗಳಲ್ಲಿ ಯಜ್ಞಗಳನ್ನು ಅರ್ಪಿಸುತ್ತಾರೆ ಮತ್ತು ಧೂಪಗಳನ್ನು ಸುಡುತ್ತಾರೆ.

ದೇವಾಲಯವನ್ನು ಸರಿಪಡಿಸಲು ಯೆಹೋವಾಷನ ಆಜ್ಞೆ

4-5 ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.

ಆದರೆ ಯಾಜಕರು ಸರಿಪಡಿಸಲಿಲ್ಲ. ಯೆಹೋವಾಷನು ರಾಜನಾದ ಇಪ್ಪತ್ತಮೂರನೆಯ ವರ್ಷದಲ್ಲಿ, ಯಾಜಕರಿನ್ನೂ ದೇವಾಲಯವನ್ನು ಸರಿಪಡಿಸಲಿಲ್ಲ. ಆದ್ದರಿಂದ ರಾಜನಾದ ಯೆಹೋವಾಷನು ಯಾಜಕನಾದ ಯೆಹೋಯಾದಾವ ಮತ್ತು ಇತರ ಯಾಜಕರನ್ನು ಕರೆಸಿ, “ನೀವು ಆಲಯವನ್ನು ಸರಿಪಡಿಸಲಿಲ್ಲವೇಕೆ? ನಿಮ್ಮಿಂದ ಸೇವೆ ಹೊಂದುವ ಜನರು ಕೊಡುವ ಹಣವನ್ನು ಉಪಯೋಗಿಸಬೇಡಿ. ಆಲಯವನ್ನು ಸರಿಪಡಿಸುವುದಕ್ಕಾಗಿ ಆ ಹಣವನ್ನು ಉಪಯೋಗಿಸಬೇಕು” ಎಂದು ಹೇಳಿದನು.

ಆಗ ಯಾಜಕರು ಅವನಿಗೆ, “ನಾವು ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಆಲಯವನ್ನು ಸರಿಪಡಿಸುವುದಕ್ಕೆ ಕೈ ಹಾಕುವುದಿಲ್ಲ” ಎಂದು ಹೇಳಿದರು. ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಅದರ ಮೇಲೆ ಒಂದು ರಂಧ್ರ ಮಾಡಿದನು. ನಂತರ ಯೆಹೋಯಾದಾವನು ಆ ಪೆಟ್ಟಿಗೆಯನ್ನು ಯಜ್ಞವೇದಿಕೆಯ ಬಲಗಡೆಯಲ್ಲಿ ಇಟ್ಟನು. ದೇವಾಲಯಕ್ಕೆ ಜನರು ಬರುವ ಬಾಗಿಲಿನಲ್ಲಿ ಈ ಪೆಟ್ಟಿಗೆಯಿತ್ತು. ಕೆಲವು ಮಂದಿ ಯಾಜಕರು ಆಲಯದ ಬಾಗಿಲಿನಲ್ಲಿ ರಕ್ಷಕರಾಗಿ ನಿಂತರು. ಆ ಯಾಜಕರು ಜನರು ಯೆಹೋವನಿಗೆಂದು ಕೊಡುವ ಆ ಹಣವನ್ನು ಪೆಟ್ಟಿಗೆಯಲ್ಲಿ ಹಾಕಿದರು.

10 ಜನರು ದೇವಾಲಯಕ್ಕೆ ಹೋದಾಗ ಆ ಪೆಟ್ಟಿಗೆಯಲ್ಲಿ ಹಣವನ್ನು ಹಾಕಲಾರಂಭಿಸಿದರು. ರಾಜನ ಕಾರ್ಯದರ್ಶಿಯಾಗಲಿ ಪ್ರಧಾನಯಾಜಕನಾಗಲಿ ನೋಡಿದಾಗ ಸಾಕಷ್ಟು ಹಣವು ತುಂಬಿದ್ದರೆ ಅದನ್ನು ಲೆಕ್ಕಹಾಕಿ ಚೀಲಗಳಲ್ಲಿ ತುಂಬಿಡುತ್ತಿದ್ದರು. 11 ನಂತರ ಅವರು ಆ ಹಣದಿಂದ ದೇವಾಲಯದ ಕೆಲಸಗಾರರಿಗೂ ಬಡಗಿಗಳಿಗೂ ಮತ್ತು ದೇವಾಲಯದ ಇತರ ಕೆಲಸಗಾರರಿಗೂ 12 ಕಲ್ಲುಕುಟಿಕರಿಗೂ ಶಿಲ್ಪಿಗಳಿಗೂ ಸಂಬಳ ಕೊಡುತ್ತಿದ್ದರು. ಅವರು ಆ ಹಣದಿಂದ ಮರವನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಂಡರು; ಯೆಹೋವನ ಆಲಯವನ್ನು ಸರಿಪಡಿಸಲು ಇತರ ಕೆಲಸಗಳಿಗೆ ಆ ಹಣವನ್ನು ಬಳಸುತ್ತಿದ್ದರು.

13-14 ಜನರು ದೇವಾಲಯಕ್ಕೆ ಹಣವನ್ನು ಕೊಟ್ಟರು. ಆದರೆ ಯಾಜಕರು ಆ ಹಣವನ್ನು ಬೆಳ್ಳಿಯ ಬಟ್ಟಲು, ಕತ್ತರಿ, ಬೋಗುಣಿ, ತುತ್ತೂರಿ ಅಥವಾ ಬೆಳ್ಳಿಬಂಗಾರಗಳ ಪಾತ್ರೆಗಳಿಗೆ ಉಪಯೋಗಿಸದೆ ಕೆಲಸಗಾರರ ವೇತನಕ್ಕೆ ಉಪಯೋಗಿಸಿದರು. ಆ ಕೆಲಸಗಾರರು ದೇವಾಲಯವನ್ನು ಸರಿಪಡಿಸಿದರು. 15 ಯಾರೂ ಆ ಹಣವನ್ನು ಲೆಕ್ಕಹಾಕಲಿಲ್ಲ. ಇಲ್ಲವೆ ಆ ಹಣವೇನಾಯಿತೆಂದು ಯಾವ ಕೆಲಸಗಾರನನ್ನೂ ಒತ್ತಾಯಿಸಿ ಕೇಳಲಿಲ್ಲ. ಏಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದರು!

16 ಜನರು ತಮ್ಮ ಅಪರಾಧ ಪ್ರಾಯಶ್ಚಿತ್ತ ಮತ್ತು ದೋಷಪರಿಹಾರದ ಸಮಯದಲ್ಲಿ ಹಣವನ್ನು ಕೊಟ್ಟರು. ಆದರೆ ಅಂತಹ ಹಣವನ್ನು ಕೆಲಸಗಾರರ ವೇತನಕ್ಕೆ ಉಪಯೋಗಿಸಲಿಲ್ಲ. ಆ ಹಣವು ಯಾಜಕರಿಗೆ ಸೇರಿದ್ದು.

ಯಾಕೋಬನು 5:1-6

ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು

ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.

ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International