Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
7 ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ!
ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
8 ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ.
ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
9 ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ
ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು.
ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.
11 ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ,
“ಹಗಲು ಹೋಗಿ ಕತ್ತಲಾಯಿತು,
ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
12 ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ.
ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
ನಾಮಾನನ ಸಮಸ್ಯೆ
5 ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.
2 ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು. 3 ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.
4 ನಾಮಾನನು ತನ್ನ ಒಡೆಯನಾದ ಅರಾಮ್ಯರ ರಾಜನ ಬಳಿಗೆ ಹೋದನು. ಇಸ್ರೇಲಿನ ಹುಡುಗಿಯು ಹೇಳಿದ ಸಂಗತಿಗಳನ್ನು, ನಾಮಾನನು ಅರಾಮ್ಯರ ರಾಜನಿಗೆ ಹೇಳಿದನು.
5 ಆಗ ಅರಾಮ್ಯರ ರಾಜನು, “ಈಗಲೇ ಹೋಗು, ನಾನು ಇಸ್ರೇಲಿನ ರಾಜನಿಗೆ ಪತ್ರವೊಂದನ್ನು ಕಳುಹಿಸುತ್ತೇನೆ” ಎಂದು ಹೇಳಿದನು.
ನಾಮಾನನು ಇಸ್ರೇಲಿಗೆ ಹೋದನು. ನಾಮಾನನು ಮುನ್ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಆರುಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ಹತ್ತು ಥಾನು ಬಟ್ಟೆಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಹೋದನು. 6 ನಾಮಾನನು ಅರಾಮ್ಯರ ರಾಜನಿಂದ ಇಸ್ರೇಲ್ ರಾಜನಿಗೆ ಪತ್ರವೊಂದನ್ನು ತೆಗೆದುಕೊಂಡು ಹೋದನು. ಆ ಪತ್ರದಲ್ಲಿ, “…ನನ್ನ ಸೇವಕನಾದ ನಾಮಾನನನ್ನು ನಿಮ್ಮ ಬಳಿಗೆ ನಾನು ಕಳುಹಿಸುತ್ತಿದ್ದೇನೆ. ಅವನ ಕುಷ್ಠರೋಗವನ್ನು ಗುಣಪಡಿಸಿ” ಎಂದು ಬರೆದಿತ್ತು.
7 ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.
8 ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”
9 ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು. 10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.
11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!
13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ” ಎಂದು ಹೇಳಿದರು.
14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.
8 ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. 9 ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.
ನೀವು ತೀರ್ಪುಗಾರರಲ್ಲ
11 ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ! 12 ದೇವರೊಬ್ಬನೇ ನಿಯಮಗಳನ್ನು ಮಾಡುವಾತನು. ಆತನೊಬ್ಬನೇ ನಿಜವಾದ ನ್ಯಾಯಾಧಿಪತಿ. ದೇವರೊಬ್ಬನೇ ರಕ್ಷಿಸಬಲ್ಲನು ಮತ್ತು ನಾಶಮಾಡಬಲ್ಲನು. ಆದ್ದರಿಂದ ಬೇರೊಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವುದು ನಿಮಗೆ ಯೋಗ್ಯವಾದುದಲ್ಲ.
ದೇವರೇ ನಿನ್ನ ಜೀವನದ ಬಗ್ಗೆ ಯೋಚಿಸಲಿ
13 ನಿಮ್ಮಲ್ಲಿ ಕೆಲವರು, “ಈ ಹೊತ್ತು ಅಥವಾ ನಾಳೆ ನಗರಕ್ಕೆ ಹೋಗುತ್ತೇವೆ. ಅಲ್ಲಿ ಒಂದು ವರ್ಷವಿದ್ದು ವ್ಯಾಪಾರಮಾಡಿ ಹಣ ಸಂಪಾದಿಸುತ್ತೇವೆ” ಎಂದು ಹೇಳುವಿರಿ. ಆಲಿಸಿರಿ! ಇದರ ಬಗ್ಗೆ ಯೋಚಿಸಿರಿ: 14 ನಾಳೆ ಏನಾಗುವುದೋ ನಿಮಗೆ ತಿಳಿಯದು! ನಿಮ್ಮ ಜೀವನವು ಹಬೆಯಂತಿದೆ. ನೀವು ಅದನ್ನು ಸ್ವಲ್ಪಕಾಲ ನೋಡುವಿರಿ. ನಂತರ ಅದು ಅದೃಶ್ಯವಾಗುವುದು. 15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.” 16 ಆದರೆ ನೀವೀಗ ಜಂಬಗಾರರಾಗಿ ಹೊಗಳಿಕೊಳ್ಳುತ್ತೀರಿ. ನಿಮ್ಮ ಹೊಗಳಿಕೆಯೆಲ್ಲವೂ ಕೆಟ್ಟದ್ದು. 17 ಒಳ್ಳೆಯದನ್ನು ಹೇಗೆ ಮಾಡಬೇಕೆಂದು ತಿಳಿದಿದ್ದರೂ ಒಳ್ಳೆಯದನ್ನು ಮಾಡದಿರುವವನು ಪಾಪವನ್ನು ಮಾಡುವವನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International