Revised Common Lectionary (Complementary)
ಜಿಫೆಂಬ ಸ್ಥಳದವರು ಸೌಲನ ಬಳಿಗೆ ಹೋಗಿ, “ದಾವೀದನು ನಮ್ಮಲ್ಲಿ ಅಡಗಿಕೊಂಡಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
54 ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸು!
ನಿನ್ನ ಮಹಾಶಕ್ತಿಯಿಂದ ನನ್ನ ನ್ಯಾಯವನ್ನು ಸ್ಥಾಪಿಸು.
2 ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನನ್ನ ಮಾತುಗಳನ್ನು ಕೇಳು.
3 ದೇವರ ಕುರಿತು ಆಲೋಚಿಸದ ಅನ್ಯರು ನನಗೆ ವಿರೋಧವಾಗಿ ತಿರುಗಿದ್ದಾರೆ.
ಆ ಬಲಾತ್ಕಾರಿಗಳು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
4 ಇಗೋ, ನನ್ನ ದೇವರೇ ನನಗೆ ಸಹಾಯಮಾಡುವನು.
ನನ್ನ ಒಡಯನೇ ನನಗೆ ಆಧಾರ ನೀಡುವನು.
5 ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು.
ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.
6 ದೇವರೇ, ನಾನು ನಿನಗೆ ಸ್ವಇಚ್ಛೆಯಿಂದ ಯಜ್ಞಗಳನ್ನು ಅರ್ಪಿಸುವೆನು.
ಯೆಹೋವನೇ, ನಿನ್ನ ಒಳ್ಳೆಯ ಹೆಸರನ್ನು ನಾನು ಕೊಂಡಾಡುವೆನು.
7 ಯಾಕೆಂದರೆ ನನ್ನೆಲ್ಲಾ ಆಪತ್ತುಗಳಿಂದ ರಕ್ಷಿಸಿದಾತನು ನೀನೇ.
ನನ್ನ ವೈರಿಗಳಿಗಾದ ಸೋಲನ್ನು ನಾನು ಕಣ್ಣಾರೆ ಕಂಡೆನು.
5 ನಂತರ ಅಶ್ಶೂರದ ರಾಜನು ಇಸ್ರೇಲಿನಲ್ಲೆಲ್ಲಾ ಸಂಚರಿಸಿ ಸಮಾರ್ಯಕ್ಕೆ ಬಂದನು. ಅವನು ಸಮಾರ್ಯವನ್ನು ಮೂರು ವರ್ಷ ಮುತ್ತಿಗೆ ಹಾಕಿದನು. 6 ಹೋಶೇಯನು ಇಸ್ರೇಲಿನ ರಾಜನಾಗಿದ್ದ ಒಂಭತ್ತನೆಯ ವರ್ಷದಲ್ಲಿ ಅಶ್ಶೂರದ ರಾಜನು ಸಮಾರ್ಯವನ್ನು ಸ್ವಾಧೀನಪಡಿಸಿಕೊಂಡನು. ಅಶ್ಶೂರದ ರಾಜನು ಇಸ್ರೇಲರನ್ನು ಸೆರೆಯಾಳುಗಳನ್ನಾಗಿ ಒಯ್ದು ಹಲಹು ಪ್ರಾಂತ್ಯದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ್ಯದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ಇರಿಸಿದನು.
7 ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ಪಾಪಗಳನ್ನು ಮಾಡಿದ್ದರಿಂದ ಇವೆಲ್ಲವೂ ಸಂಭವಿಸಿದವು. ಈಜಿಪ್ಟಿನ ರಾಜನಾದ ಫರೋಹನ ಆಳ್ವಿಕೆಯಿಂದ ಇಸ್ರೇಲರನ್ನು ತಪ್ಪಿಸಿ ಯೆಹೋವನು ಅವರನ್ನು ಈಜಿಪ್ಟ್ ದೇಶದಿಂದ ಹೊರತಂದಿದ್ದನು. ಆದರೆ ಇಸ್ರೇಲರು ಬೇರೆ ದೇವರುಗಳನ್ನು ಪೂಜಿಸಲು ಆರಂಭಿಸಿ 8 ಅನ್ಯರು ಮಾಡುವಂತಹ ಕಾರ್ಯಗಳನ್ನೇ ಮಾಡತೊಡಗಿದರು. ಇಸ್ರೇಲರು ಈಜಿಪ್ಟಿನಿಂದ ತಮ್ಮ ದೇಶಕ್ಕೆ ಬಂದಾಗ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತವಾಗಿ ಹೊರಗಟ್ಟಿದ್ದನು. ಆದರೆ ಇಸ್ರೇಲರು ತಮ್ಮನ್ನು ಆಳುವುದಕ್ಕಾಗಿ ದೇವರನ್ನು ತೊರೆದು ರಾಜರನ್ನು ಆರಿಸಿಕೊಂಡರು. 9 ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ರಹಸ್ಯವಾದ ಕೆಟ್ಟಕಾರ್ಯಗಳನ್ನು ಮಾಡಿದರು.
ಇಸ್ರೇಲರು ಚಿಕ್ಕ ಊರಿನಿಂದಿಡಿದು ದೊಡ್ಡ ನಗರದವರೆಗೂ ತಮ್ಮ ಎಲ್ಲಾ ನಗರಗಳಲ್ಲಿ ಉನ್ನತಸ್ಥಳಗಳನ್ನು ನಿರ್ಮಿಸಿದರು. 10 ಇಸ್ರೇಲರು ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಗಿಡಗಳ ಅಡಿಯಲ್ಲೂ ಸ್ಮಾರಕಕಲ್ಲುಗಳನ್ನು ಮತ್ತು ಅಶೇರ್ ವಿಗ್ರಹಕಲ್ಲುಗಳನ್ನು ನಿಲ್ಲಿಸಿದರು. 11 ಇಸ್ರೇಲರು ಪೂಜಾಸ್ಥಳಗಳಲ್ಲೆಲ್ಲಾ ಧೂಪವನ್ನು ಸುಡುತ್ತಿದ್ದರು. ಯೆಹೋವನು ಆ ದೇಶದಿಂದ ಬಲವಂತವಾಗಿ ಹೊರಗಟ್ಟಿದ ಆ ಮೊದಲಿನ ಜನಾಂಗಗಳಂತೆ ಇಸ್ರೇಲರು ಮಾಡಿದರು. ಇಸ್ರೇಲರು ಮಾಡಿದ ದುಷ್ಕೃತ್ಯಗಳಿಂದ ಯೆಹೋವನು ಕೋಪಗೊಂಡನು. 12 ಅವರು ವಿಗ್ರಹಗಳ ಸೇವೆಮಾಡಿದರು. ಯೆಹೋವನು ಇಸ್ರೇಲರಿಗೆ, “ನೀವು ವಿಗ್ರಹಗಳನ್ನು ಪೂಜಿಸಲೇಬಾರದು” ಎಂದು ಹೇಳಿದ್ದನು.
13 ಇಸ್ರೇಲ್ ಮತ್ತು ಯೆಹೂದಗಳನ್ನು ಎಚ್ಚರಿಸಲು ಯೆಹೋವನು ಪ್ರತಿಯೊಬ್ಬ ಪ್ರವಾದಿಯನ್ನು ಮತ್ತು ದೇವದರ್ಶಿಯನ್ನು ಬಳಸಿಕೊಂಡನು. ಯೆಹೋವನು, “ನಿಮ್ಮ ಕೆಟ್ಟಕಾರ್ಯಗಳಿಂದ ದೂರವಾಗಿ! ನನ್ನ ಆಜ್ಞೆಗಳಿಗೆ ಮತ್ತು ಧರ್ಮಶಾಸ್ತ್ರಗಳಿಗೆ ವಿಧೇಯತೆಯಿಂದಿರಿ. ನಿಮ್ಮ ಪೂರ್ವಿಕರಿಗೆ ನಾನು ನೀಡಿದ ಕಟ್ಟಳೆಗಳನ್ನೆಲ್ಲಾ ಅನುಸರಿಸಿ. ನಾನು ನನ್ನ ಸೇವಕರಾದ ಪ್ರವಾದಿಗಳ ಮೂಲಕ ಇವುಗಳನ್ನು ನೀಡಿದ್ದೇನೆ” ಎಂದು ಹೇಳಿದ್ದನು.
14 ಆದರೆ ಅವರು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ; ತಮ್ಮ ದೇವರಾದ ಯೆಹೋವನನ್ನು ನಂಬದೆಹೋದ ತಮ್ಮ ಪೂರ್ವಿಕರನ್ನೇ ಅನುಸರಿಸಿದರು. 15 ಯೆಹೋವನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮತ್ತು ಆತನ ನಿಯಮಗಳನ್ನು ಅವರು ಒಪ್ಪಲಿಲ್ಲ. ಅವರು ಯೆಹೋವನ ಎಚ್ಚರಿಕೆಗೆ ಗಮನವನ್ನೂ ನೀಡಲಿಲ್ಲ. ಅವರು ನಿರರ್ಥಕವಾದ ವಿಗ್ರಹಗಳನ್ನು ಅನುಸರಿಸಿ ನಿಷ್ಪ್ರಯೋಜಕರಾದರು, ಅವರು ತಮ್ಮ ಸುತ್ತಮುತ್ತಲಿನ ಜನಾಂಗಗಳನ್ನು ಅನುಸರಿಸಿದರು. ಯೆಹೋವನು ಇಸ್ರೇಲಿನ ಜನರಿಗೆ ಮಾಡಬಾರದೆಂದು ಎಚ್ಚರಿಸಿ ಹೇಳಿದ್ದನ್ನು ಈ ಜನಾಂಗಗಳು ಮಾಡಿದವು.
16 ಜನರು ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸುವುದನ್ನು ನಿಲ್ಲಿಸಿದರು. ಅವರು ಚಿನ್ನದ ಎರಡು ಬಸವನ ಮೂರ್ತಿಗಳನ್ನು ನಿರ್ಮಿಸಿದರು. ಅವರು ಅಶೇರ ಸ್ತಂಭಗಳನ್ನು ನಿರ್ಮಿಸಿದರು. ಅವರು ಪರಲೋಕದ ಎಲ್ಲಾ ನಕ್ಷತ್ರಗಳನ್ನು ಮತ್ತು ಬಾಳ್ ದೇವರನ್ನು ಪೂಜಿಸಿದರು. 17 ಅವರು ತಮ್ಮ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು. ಅವರು ಭವಿಷ್ಯವನ್ನು ತಿಳಿಯಲು ಮಾಂತ್ರಿಕ ವಿದ್ಯೆಯನ್ನು ಮತ್ತು ಕಣಿಹೇಳುವುದನ್ನು ಕಲಿತರು. ಯೆಹೋವನು ಕೆಟ್ಟದ್ದೆಂದು ಹೇಳಿದ್ದಕ್ಕೆ ತಮ್ಮನ್ನು ತಾವು ಮಾರಿಕೊಂಡು ಯೆಹೋವನಿಗೆ ಕೋಪವನ್ನು ಉಂಟುಮಾಡಿದರು. 18 ಆದ್ದರಿಂದ ಯೆಹೋವನು ಇಸ್ರೇಲಿನ ಬಗ್ಗೆ ಉಗ್ರಕೋಪಿಯಾಗಿ, ಅವರನ್ನು ತನ್ನ ದೃಷ್ಟಿಯಿಂದ ದೂರಮಾಡಿದನು. ಯೆಹೂದಕುಲದವರ ಹೊರತಾಗಿ ಇಸ್ರೇಲರಲ್ಲಿ ಯಾರೂ ಉಳಿಯಲಿಲ್ಲ!
29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!
33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.
35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.
ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ
(ಲೂಕ 13:34-35)
37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(A) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International