Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 54

ಜಿಫೆಂಬ ಸ್ಥಳದವರು ಸೌಲನ ಬಳಿಗೆ ಹೋಗಿ, “ದಾವೀದನು ನಮ್ಮಲ್ಲಿ ಅಡಗಿಕೊಂಡಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.

54 ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸು!
    ನಿನ್ನ ಮಹಾಶಕ್ತಿಯಿಂದ ನನ್ನ ನ್ಯಾಯವನ್ನು ಸ್ಥಾಪಿಸು.
ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮಾತುಗಳನ್ನು ಕೇಳು.
ದೇವರ ಕುರಿತು ಆಲೋಚಿಸದ ಅನ್ಯರು ನನಗೆ ವಿರೋಧವಾಗಿ ತಿರುಗಿದ್ದಾರೆ.
    ಆ ಬಲಾತ್ಕಾರಿಗಳು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.

ಇಗೋ, ನನ್ನ ದೇವರೇ ನನಗೆ ಸಹಾಯಮಾಡುವನು.
    ನನ್ನ ಒಡಯನೇ ನನಗೆ ಆಧಾರ ನೀಡುವನು.
ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು.
    ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.

ದೇವರೇ, ನಾನು ನಿನಗೆ ಸ್ವಇಚ್ಛೆಯಿಂದ ಯಜ್ಞಗಳನ್ನು ಅರ್ಪಿಸುವೆನು.
    ಯೆಹೋವನೇ, ನಿನ್ನ ಒಳ್ಳೆಯ ಹೆಸರನ್ನು ನಾನು ಕೊಂಡಾಡುವೆನು.
ಯಾಕೆಂದರೆ ನನ್ನೆಲ್ಲಾ ಆಪತ್ತುಗಳಿಂದ ರಕ್ಷಿಸಿದಾತನು ನೀನೇ.
    ನನ್ನ ವೈರಿಗಳಿಗಾದ ಸೋಲನ್ನು ನಾನು ಕಣ್ಣಾರೆ ಕಂಡೆನು.

1 ರಾಜರುಗಳು 22:24-40

24 ಆಗ ಪ್ರವಾದಿಯಾದ ಚಿದ್ಕೀಯನು ಮೀಕಾಯೆಹುವಿನ ಹತ್ತಿರಕ್ಕೆ ಹೋಗಿ ಅವನ ಮುಖದ ಮೇಲೆ ಹೊಡೆದು, “ಯೆಹೋವನ ಆತ್ಮವು ನನ್ನನ್ನು ಬಿಟ್ಟುಹೋಗಿದೆ ಎಂಬುದನ್ನೂ ಈಗ ನಿನ್ನ ಮೂಲಕ ಮಾತನಾಡುತ್ತಿದ್ದಾನೆ ಎಂಬುದನ್ನೂ ನೀನು ನಿಜವಾಗಿಯೂ ನಂಬುವೆಯಾ?” ಎಂದು ಕೇಳಿದನು.

25 ಮೀಕಾಯೆಹು, “ಕೇಡು ಬೇಗನೆ ಬರಲಿದೆ. ಆಗ ನೀನು ಹೋಗಿ ಒಂದು ಚಿಕ್ಕ ಕೊಠಡಿಯಲ್ಲಿ ಅಡಗಿಕೊಳ್ಳುವೆ. ನಾನು ಸತ್ಯವನ್ನೇ ನುಡಿದೆನೆಂದು ಆಗ ನಿನಗೆ ತಿಳಿಯುತ್ತದೆ!” ಎಂದನು.

26 ಆಗ ರಾಜನಾದ ಅಹಾಬನು ಮೀಕಾಯೆಹುವನ್ನು ಬಂಧಿಸುವಂತೆ ತನ್ನ ಅಧಿಕಾರಿಯೊಬ್ಬನಿಗೆ ಆಜ್ಞೆ ಮಾಡಿದನು. ರಾಜನಾದ ಅಹಾಬನು, “ಅವನನ್ನು ಬಂಧಿಸಿ, ನಗರಾಧಿಕಾರಿಯಾದ ಆಮೋನ ಮತ್ತು ರಾಜಪುತ್ರನಾದ ಯೋವಾಷನ ಬಳಿಗೆ ತೆಗೆದುಕೊಂಡು ಹೋಗಿ. 27 ಮೀಕಾಯೆಹುವನ್ನು ಸೆರೆಮನೆಯಲ್ಲಿಡಬೇಕೆಂದು ಅವರಿಗೆ ತಿಳಿಸಿ. ಅವನಿಗೆ ತಿನ್ನಲು ಸ್ವಲ್ಪ ರೊಟ್ಟಿ ಮತ್ತು ಕುಡಿಯಲು ಸ್ವಲ್ಪ ನೀರನ್ನು ಮಾತ್ರ ಕೊಡಿ. ನಾನು ಯುದ್ಧದಿಂದ ಮನೆಗೆ ಹಿಂದಿರುಗುವವರೆಗೆ ಅವನನ್ನು ಅಲ್ಲಿಯೇ ಇಡಿ” ಎಂದು ಹೇಳಿದನು.

28 ಮೀಕಾಯೆಹು ಗಟ್ಟಿಯಾದ ಧ್ವನಿಯಲ್ಲಿ, “ನಾನು ಏನು ಹೇಳುತ್ತೇನೆಂಬುದನ್ನು ಜನರೆಲ್ಲರೂ ಕೇಳಿರಿ! ರಾಜನಾದ ಅಹಾಬನೇ, ನೀನು ಈ ಹೋರಾಟದಿಂದ ಜೀವಸಹಿತ ಮನೆಗೆ ಬಂದರೆ, ಯೆಹೋವನು ನನ್ನ ಮೂಲಕ ಮಾತನಾಡಿಲ್ಲ” ಎಂದು ಹೇಳಿದನು.

29 ನಂತರ ರಾಜನಾದ ಅಹಾಬನು ಮತ್ತು ರಾಜನಾದ ಯೆಹೋಷಾಫಾಟನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋದರು. ಅದು ಗಿಲ್ಯಾದಿನ ಪ್ರದೇಶವೆಂಬಲ್ಲಿ ನಡೆಯಿತು. 30 ಅಹಾಬನು ಯೆಹೋಷಾಫಾಟನಿಗೆ, “ನಾವು ಹೋರಾಟಕ್ಕೆ ಸಿದ್ಧತೆಗಳನ್ನು ಮಾಡೋಣ. ನೋಡುವುದಕ್ಕೆ ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ನಾನು ಧರಿಸಿಕೊಳ್ಳುತ್ತೇನೆ. ಆದರೆ ನೀನು ರಾಜನಂತೆ ತೋರುವ ನಿನ್ನ ವಿಶೇಷ ವಸ್ತ್ರಗಳನ್ನು ಧರಿಸಿಕೊ” ಎಂದನು. ಇಸ್ರೇಲಿನ ರಾಜನು, ತಾನು ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ಧರಿಸಿಕೊಂಡು ಹೋರಾಟವನ್ನು ಆರಂಭಿಸಿದನು.

31 ಅರಾಮ್ಯರ ರಾಜನ ಬಳಿ ಮೂವತ್ತೆರಡು ರಥಬಲದ ಅಧಿಪತಿಗಳಿದ್ದರು. ಆ ರಾಜನು ಇಸ್ರೇಲಿನ ರಾಜನನ್ನು ಕಂಡು ಹಿಡಿಯುವಂತೆ ಈ ಮೂವತ್ತೆರಡು ರಥಬಲದ ಅಧಿಪತಿಗಳಿಗೆ ಆಜ್ಞಾಪಿಸಿದ್ದನು. ಅರಾಮ್ಯರ ರಾಜನು, ಇಸ್ರೇಲಿನ ರಾಜನನ್ನು ಕೊಂದುಹಾಕುವಂತೆ ಈ ಅಧಿಕಾರಿಗಳಿಗೆ ಆಜ್ಞಾಪಿಸಿದ್ದನು; 32 ಹೋರಾಟದ ಸಂದರ್ಭದಲ್ಲಿ ರಾಜನಾದ ಯೆಹೋಷಾಫಾಟನನ್ನು ಈ ಅಧಿಪತಿಗಳು ನೋಡಿದರು. ಆ ಅಧಿಕಾರಿಗಳು ಅವನನ್ನು ಇಸ್ರೇಲಿನ ರಾಜನೆಂದು ತಿಳಿದು ಅವನನ್ನು ಕೊಲ್ಲುವುದಕ್ಕೆ ಅವರು ಹೋದರು. ಯೆಹೋಷಾಫಾಟನು ಕೂಗಿಕೊಳ್ಳಲಾರಂಭಿಸಿದನು. 33 ಅವನು ರಾಜನಾದ ಅಹಾಬನಲ್ಲವೆಂಬುದನ್ನು ಆ ಅಧಿಕಾರಿಗಳು ತಿಳಿದು ಅವನನ್ನು ಕೊಲ್ಲಲಿಲ್ಲ.

34 ಆದರೆ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಒಂದು ಬಾಣವನ್ನು ಗಾಳಿಯಲ್ಲಿ ಹೊಡೆದನು. ಆದರೆ ಅವನ ಬಾಣವು ಇಸ್ರೇಲಿನ ರಾಜನಾದ ಅಹಾಬನಿಗೆ ಬಡಿಯಿತು. ಆ ಬಾಣವು ರಾಜನ ದೇಹದ ಕವಚದ ಸಣ್ಣ ಸಂಧಿಯಲ್ಲಿ ತಾಕಿತು. ರಾಜನಾದ ಅಹಾಬನು ತನ್ನ ರಥದ ಸಾರಥಿಗೆ, “ಒಂದು ಬಾಣವು ನನಗೆ ತಾಕಿತು! ರಥವನ್ನು ಈ ಪ್ರದೇಶದಿಂದ ಹೊರಗೆ ಓಡಿಸು. ನಾವು ಯುದ್ಧದಿಂದ ಹೊರಟುಹೋಗಬೇಕಾಗಿದೆ” ಎಂದು ಹೇಳಿದನು.

35 ಸೈನಿಕರು ಹೋರಾಡುತ್ತಲೇ ಇದ್ದರು. ರಾಜನಾದ ಅಹಾಬನು ರಥದಲ್ಲಿಯೇ ಇದ್ದನು. ಅವನು ರಥದ ಒಂದು ಪಕ್ಕಕ್ಕೆ ಒರಗಿಕೊಂಡು ನಿಂತಿದ್ದನು. ಅವನು ಅರಾಮ್ಯರ ಸೇನೆಯ ಕಡೆಗೆ ನೋಡುತ್ತಲೇ ಇದ್ದನು. ಅವನ ದೇಹದಿಂದ ಹರಿದ ರಕ್ತವು, ರಥದ ತಳದಲ್ಲಿ ಮಡುಗಟ್ಟಿತು. ಸಾಯಂಕಾಲವಾದ ಮೇಲೆ ರಾಜನು ಸತ್ತುಹೋದನು. 36 ಸೂರ್ಯನು ಮುಳುಗುತ್ತಿರಲು, ಇಸ್ರೇಲಿನ ಸೈನ್ಯದ ಪ್ರತಿಯೊಬ್ಬನು ತನ್ನ ಊರಿಗೂ ತನ್ನ ನಾಡಿಗೂ ಹೋಗಬೇಕು! ಎಂಬ ಕೂಗು ಸೈನ್ಯದಲ್ಲೆಲ್ಲಾ (ಪಾಳೆಯದಲ್ಲಿ) ಹಬ್ಬಿತು.

37 ರಾಜನಾದ ಅಹಾಬನು ಈ ರೀತಿಯಲ್ಲಿ ಸತ್ತುಹೋದನು. ಅವನ ದೇಹವನ್ನು ಕೆಲವು ಜನರು ಸಮಾರ್ಯಕ್ಕೆ ತೆಗೆದುಕೊಂಡು ಹೋದರು. ಅವರು ಅವನನ್ನು ಅಲ್ಲಿ ಸಮಾಧಿಮಾಡಿದರು. 38 ಆ ಜನರು ಅಹಾಬನ ರಥವನ್ನು ಸಮಾರ್ಯದ ಕೊಳದ ನೀರಿನಲ್ಲಿ ತೊಳೆದರು. ರಥದಲ್ಲಿದ್ದ ರಾಜನಾದ ಅಹಾಬನ ರಕ್ತವನ್ನು ನಾಯಿಗಳು ನೆಕ್ಕಿದವು. ದೇವದಾಸಿಯರು ಆ ಕೊಳದ ನೀರನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಯೆಹೋವನು ಹೇಳಿದ್ದ ರೀತಿಯಲ್ಲಿಯೇ ಈ ಸಂಗತಿಗಳು ಸಂಭವಿಸಿದವು.

39 ರಾಜನಾದ ಅಹಾಬನು ತನ್ನ ಆಳ್ವಿಕೆಯ ಕಾಲದಲ್ಲಿ ಮಾಡಿದ ಸಂಗತಿಗಳನ್ನೆಲ್ಲಾ “ಇಸ್ರೇಲಿನ ರಾಜರುಗಳ ಇತಿಹಾಸ” ಪುಸ್ತಕದಲ್ಲಿ ಬರೆದಿದ್ದಾರೆ. ರಾಜನು ತನ್ನ ಅರಮನೆಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬಳಸಿದ ದಂತದ ಕುರಿತಾಗಿಯೂ ಆ ಪುಸ್ತಕವು ತಿಳಿಸುತ್ತದೆ. ರಾಜನು ನಿರ್ಮಿಸಿದ ನಗರಗಳ ಬಗ್ಗೆಯೂ ಆ ಪುಸ್ತಕವು ತಿಳಿಸುತ್ತದೆ. 40 ಅಹಾಬನು ಸತ್ತಾಗ ಅವನನ್ನು ಅವನ ಪೂರ್ವಿಕರೊಡನೆ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಅಹಜ್ಯನು ರಾಜನಾದನು.

ರೋಮ್ನಗರದವರಿಗೆ 11:25-32

25 ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು. 26 ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ಸಿಯೋನಿನಿಂದ ರಕ್ಷಕನು ಬರುವನು:
    ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
27 ನಾನು ಆ ಜನರ ಪಾಪಗಳನ್ನು ಪರಿಹರಿಸುವಾಗ
    ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.”(A)

28 ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ. 29 ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ. 30 ಒಂದು ಕಾಲದಲ್ಲಿ ನೀವು ಆತನಿಗೆ ವಿಧೇಯರಾಗಿರಲಿಲ್ಲ. ಈಗಲಾದರೋ ನೀವು ಕರುಣೆಯನ್ನು ಹೊಂದಿಕೊಂಡಿರಿ. ಏಕೆಂದರೆ ಅವರು (ಯೆಹೂದ್ಯರು) ಆತನಿಗೆ ಅವಿಧೇಯರಾದರು. 31 ದೇವರು ನಿಮಗೆ ಕರುಣೆ ತೋರಿದ್ದರಿಂದ ಈಗ ಯೆಹೂದ್ಯರು ವಿಧೇಯರಾಗುವುದಿಲ್ಲ. ಆದರೆ ಅವರು ಸಹ ದೇವರಿಂದ ಕರುಣೆಯನ್ನು ಹೊಂದಿಕೊಳ್ಳಲೆಂದು ಹೀಗಾಯಿತು. 32 ಎಲ್ಲರೂ ದೇವರಿಗೆ ಅವಿಧೇಯರಾದರು. ದೇವರು ಎಲ್ಲರಿಗೂ ಕರುಣೆಯನ್ನು ತೋರಬೇಕೆಂದು ಎಲ್ಲರನ್ನೂ ಒಟ್ಟಾಗಿ ಅವಿಧೇಯತ್ವದಿಂದ ಬಂಧಿಸಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International