Revised Common Lectionary (Complementary)
ಜಿಫೆಂಬ ಸ್ಥಳದವರು ಸೌಲನ ಬಳಿಗೆ ಹೋಗಿ, “ದಾವೀದನು ನಮ್ಮಲ್ಲಿ ಅಡಗಿಕೊಂಡಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
54 ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸು!
ನಿನ್ನ ಮಹಾಶಕ್ತಿಯಿಂದ ನನ್ನ ನ್ಯಾಯವನ್ನು ಸ್ಥಾಪಿಸು.
2 ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನನ್ನ ಮಾತುಗಳನ್ನು ಕೇಳು.
3 ದೇವರ ಕುರಿತು ಆಲೋಚಿಸದ ಅನ್ಯರು ನನಗೆ ವಿರೋಧವಾಗಿ ತಿರುಗಿದ್ದಾರೆ.
ಆ ಬಲಾತ್ಕಾರಿಗಳು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
4 ಇಗೋ, ನನ್ನ ದೇವರೇ ನನಗೆ ಸಹಾಯಮಾಡುವನು.
ನನ್ನ ಒಡಯನೇ ನನಗೆ ಆಧಾರ ನೀಡುವನು.
5 ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು.
ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.
6 ದೇವರೇ, ನಾನು ನಿನಗೆ ಸ್ವಇಚ್ಛೆಯಿಂದ ಯಜ್ಞಗಳನ್ನು ಅರ್ಪಿಸುವೆನು.
ಯೆಹೋವನೇ, ನಿನ್ನ ಒಳ್ಳೆಯ ಹೆಸರನ್ನು ನಾನು ಕೊಂಡಾಡುವೆನು.
7 ಯಾಕೆಂದರೆ ನನ್ನೆಲ್ಲಾ ಆಪತ್ತುಗಳಿಂದ ರಕ್ಷಿಸಿದಾತನು ನೀನೇ.
ನನ್ನ ವೈರಿಗಳಿಗಾದ ಸೋಲನ್ನು ನಾನು ಕಣ್ಣಾರೆ ಕಂಡೆನು.
ಇಸ್ರೇಲರ ಜೊತೆ ಮಿದ್ಯಾನ್ಯರ ಯುದ್ಧ
6 ಇಸ್ರೇಲರು ಯೆಹೋವನಿಗೆ ವಿರೋಧವಾಗಿ ಮತ್ತೆ ದುಷ್ಕೃತ್ಯಗಳನ್ನೇ ಮಾಡಿದರು. ಆದ್ದರಿಂದ ಮಿದ್ಯಾನ್ಯರು ಇಸ್ರೇಲರ ಮೇಲೆ ಏಳುವರ್ಷ ಪ್ರಭುತ್ವ ನಡೆಸುವಂತೆ ಯೆಹೋವನು ಆಸ್ಪದ ಮಾಡಿದನು.
2 ಮಿದ್ಯಾನ್ಯರು ಬಹಳ ಬಲಶಾಲಿಗಳಾಗಿದ್ದು ಇಸ್ರೇಲರಿಗೆ ಕ್ರೂರಿಗಳಾಗಿದ್ದರು. ಆದ್ದರಿಂದ ಇಸ್ರೇಲರು ಅಡಗಿಕೊಳ್ಳುವುದಕ್ಕಾಗಿ ಬೆಟ್ಟಗಳಲ್ಲಿ ಸ್ಥಳಗಳನ್ನು ಮಾಡಿಕೊಂಡರು. ಕಂಡುಹಿಡಿಯಲಾಗದ ಸ್ಥಳಗಳಲ್ಲಿ ಅವರು ತಮ್ಮ ಆಹಾರವನ್ನು ಬಚ್ಚಿಡುತ್ತಿದ್ದರು. 3 ಪೂರ್ವದಿಂದ ಮಿದ್ಯಾನ್ಯರೂ ಅಮಾಲೇಕ್ಯರೂ ಯಾವಾಗಲೂ ಬಂದು ಇವರ ಬೆಳೆಗಳನ್ನು ನಾಶಪಡಿಸುತ್ತಿದ್ದರು. 4 ಅವರು ಈ ಪ್ರದೇಶದಲ್ಲಿ ಪಾಳೆಯಮಾಡಿಕೊಂಡು ಇಸ್ರೇಲರ ಬೆಳೆಗಳನ್ನು ನಾಶಪಡಿಸುತ್ತಿದ್ದರು. ಅವರು ಗಾಜಾ ನಗರದವರೆಗಿರುವ ಪ್ರದೇಶದಲ್ಲಿನ ಬೆಳೆಗಳನ್ನು ಹಾಳುಮಾಡಿದರು. ಅವರು ಇಸ್ರೇಲರ ಆಹಾರಕ್ಕಾಗಿ ಏನೂ ಉಳಿಸಲಿಲ್ಲ. ಅವರು ಕುರಿ, ದನ, ಕತ್ತೆಗಳನ್ನು ಸಹ ಉಳಿಸಲಿಲ್ಲ. 5 ಮಿದ್ಯಾನ್ಯರು ಬಂದು ಈ ಪ್ರದೇಶದಲ್ಲಿ ಪಾಳೆಯ ಮಾಡಿಕೊಂಡರು. ಅವರು ತಮ್ಮ ಸಂಗಡ ತಮ್ಮ ಕುಟುಂಬದವರನ್ನೂ ಪಶುಗಳನ್ನೂ ತಂದರು. ಅವರು ಮಿಡತೆಗಳ ಗುಂಪಿನಂತೆ ಅಸಂಖ್ಯರಾಗಿದ್ದರು. ಅವರು ಮತ್ತು ಅವರ ಒಂಟೆಗಳು ಅತಿದೊಡ್ಡ ಪ್ರಮಾಣದಲ್ಲಿದ್ದು ಎಣಿಸಲು ಸಾಧ್ಯವಿರಲಿಲ್ಲ. ಇವರೆಲ್ಲರೂ ಇಸ್ರೇಲರ ಪ್ರದೇಶಕ್ಕೆ ನುಗ್ಗಿ ಹಾಳುಮಾಡಿದರು. 6 ಇಸ್ರೇಲರು ಮಿದ್ಯಾನ್ಯರಿಂದಾಗಿ ತುಂಬ ಬಡವರಾಗಿ ಬಿಟ್ಟರು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು.
7 [a] ಮಿದ್ಯಾನ್ಯರು ಕೆಟ್ಟದ್ದನ್ನೆಲ್ಲಾ ಮಾಡಿದರು. ಅದಕ್ಕಾಗಿ ಇಸ್ರೇಲರು ಸಹಾಯಕೋರಿ ಯೆಹೋವನಲ್ಲಿ ಮೊರೆಯಿಟ್ಟರು. 8 ಆದ್ದರಿಂದ ಯೆಹೋವನು ಅವರ ಹತ್ತಿರಕ್ಕೆ ಒಬ್ಬ ಪ್ರವಾದಿಯನ್ನು ಕಳುಹಿಸಿದನು. ಆ ಪ್ರವಾದಿಯು ಇಸ್ರೇಲರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಅಲ್ಲಿಂದ ಹೊರಗೆ ತಂದೆನು. 9 ನಾನು ನಿಮ್ಮನ್ನು ಬಲಶಾಲಿಗಳಾದ ಈಜಿಪ್ಟಿನ ಜನರಿಂದ ರಕ್ಷಿಸಿದೆ. ತರುವಾಯ ಕಾನಾನ್ಯರು ನಿಮ್ಮನ್ನು ಪೀಡಿಸಿದರು. ಆಗ ಮತ್ತೊಮ್ಮೆ ನಾನು ನಿಮ್ಮನ್ನು ರಕ್ಷಿಸಿದೆ. ನಾನು ಅವರನ್ನು ಅವರ ಪ್ರದೇಶದಿಂದ ಓಡಿಸಿ ಅದನ್ನು ನಿಮಗೆ ಕೊಟ್ಟೆ’ 10 ಆಗ ನಾನು ನಿಮಗೆ, ‘ಯೆಹೋವನಾದ ನಾನೇ ನಿಮ್ಮ ದೇವರು! ಅಮೋರಿಯರ ಪ್ರದೇಶದಲ್ಲಿದ್ದರೂ ಅವರ ಸುಳ್ಳುದೇವರುಗಳನ್ನು ನೀವು ಪೂಜಿಸಕೂಡದು ಎಂದು ಹೇಳಿದ್ದೆ.’ ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ.”
ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ
2 ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. 2 ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. 3 ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. 4 ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. 5 ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.
Kannada Holy Bible: Easy-to-Read Version. All rights reserved. © 1997 Bible League International