Revised Common Lectionary (Complementary)
169 ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು.
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು.
170 ನನ್ನ ಪ್ರಾರ್ಥನೆಗೆ ಕಿವಿಗೊಡು.
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು.
171 ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ
ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ.
172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ.
ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.
173 ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ
ಕೈಚಾಚಿ ಸಹಾಯಮಾಡು.
174 ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ.
ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ.
175 ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು.
ನಿನ್ನ ನಿಯಮಗಳು ನನಗೆ ಸಹಾಯಮಾಡಲಿ.
176 ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ.
ನನಗೋಸ್ಕರ ಹುಡುಕುತ್ತಾ ಬಾ.
ನಿನ್ನ ಸೇವಕನಾದ ನಾನು
ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.
12 ಜೆರುಸಲೇಮಿಗೂ ಚೀಯೋನ್ ಪರ್ವತಕ್ಕೂ ಮಾಡಬೇಕೆಂದಿರುವ ಕಾರ್ಯಗಳನ್ನು ನನ್ನ ಒಡೆಯನು ಮಾಡಿ ತೀರಿಸುವನು. ಆ ಬಳಿಕ ಯೆಹೋವನು ಅಶ್ಶೂರವನ್ನು ಶಿಕ್ಷಿಸುವನು. ಅಶ್ಶೂರದ ಅರಸನು ಬಹಳವಾಗಿ ಉಬ್ಬಿಕೊಂಡಿರುತ್ತಾನೆ. ಅವನ ಗರ್ವವು ಅನೇಕ ದುಷ್ಕೃತ್ಯಗಳನ್ನು ನಡೆಸಿದೆ. ಅದಕ್ಕಾಗಿ ದೇವರು ಅವನನ್ನು ಶಿಕ್ಷಿಸುವನು.
13 ಅಶ್ಶೂರದ ಅರಸನು ಹೇಳುವುದೇನೆಂದರೆ, “ನಾನು ಜ್ಞಾನಿಯಾಗಿದ್ದೇನೆ, ನನ್ನ ಸ್ವಂತ ಜ್ಞಾನದಿಂದಲೂ ಸಾಮರ್ಥ್ಯದಿಂದಲೂ ನಾನು ಅನೇಕ ಮಹಾಕಾರ್ಯಗಳನ್ನು ನಡಿಸಿದ್ದೇನೆ. ಅನೇಕ ಜನಾಂಗಗಳನ್ನು ಸೋಲಿಸಿದ್ದೇನೆ; ಅವರ ಐಶ್ವರ್ಯಗಳನ್ನು ಸೂರೆಮಾಡಿದ್ದೇನೆ. ಅವರ ಜನರನ್ನು ನನ್ನ ಗುಲಾಮರನ್ನಾಗಿ ಮಾಡಿದ್ದೇನೆ. ನಾನು ಮಹಾ ವೀರನಾಗಿರುವೆ. 14 ಒಬ್ಬನು ಹಕ್ಕಿಯ ಗೂಡಿನಿಂದ ಮೊಟ್ಟೆಗಳನ್ನು ತೆಗೆಯುವಂತೆ ನಾನು ಅವರ ಐಶ್ವರ್ಯವನ್ನು ತೆಗೆದುಕೊಂಡಿರುವೆನು. ಹಕ್ಕಿಯು ತನ್ನ ಗೂಡಿಗೆ ಯಾವ ಭದ್ರತೆಯನ್ನೂ ಮಾಡದೆ ಆಹಾರಕ್ಕಾಗಿ ಹೋಗುವದು, ರೆಕ್ಕೆಯಾಡಿಸಿ, ಬಾಯಿದೆರೆದು, ಕಿಚುಗುಟ್ಟಿ ಮೊಟ್ಟೆಯನ್ನು ಶತ್ರುವಿನಿಂದ ರಕ್ಷಿಸಲು ಅದು ಗೂಡಿನಲ್ಲಿರದು, ಆದ್ದರಿಂದ ಅದರ ಮೊಟ್ಟೆಗಳು ತೆಗೆಯಲ್ಪಡುವವು. ಅದೇ ರೀತಿಯಲ್ಲಿ ನಾನು ಭೂಮಿಯ ಮೇಲಿನ ಜನರನ್ನು ಕೈದಿಗಳನ್ನಾಗಿ ಮಾಡುವಾಗ ನನ್ನನ್ನು ತಡೆಯುವವರು ಇಲ್ಲವೇ ಇಲ್ಲ.”
15 ಕೊಡಲಿಯು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಗರಗಸವು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಆದರೆ ಅಶ್ಶೂರವು ತಾನು ದೇವರಿಗಿಂತಲೂ ಶಕ್ತಿಶಾಲಿ, ಸಾಮರ್ಥ್ಯವುಳ್ಳವನು ಎಂದು ನೆನಸುತ್ತಾನೆ. ಬೆತ್ತವು, ತನ್ನನ್ನು ಎತ್ತಿಹಿಡಿದು ಬೇರೆಯವರನ್ನು ಶಿಕ್ಷಿಸುವವನಿಗಿಂತ ತಾನು ಬಲಿಷ್ಠನೂ ಪ್ರಮುಖನೂ ಎಂದು ಹೇಳುವಂತಿದೆ ಇದು. 16 ತಾನು ಮಹಾದೊಡ್ಡ ಜನವೆಂದು ಅಶ್ಶೂರವು ನೆನಸುತ್ತದೆ. ಆದರೆ ಸರ್ವಶಕ್ತನಾದ ಯೆಹೋವನು ಅಶ್ಶೂರದ ಮೇಲೆ ಭಯಂಕರವಾದ ವ್ಯಾಧಿಯನ್ನು ಬರಮಾಡುತ್ತಾನೆ. ಒಬ್ಬ ರೋಗಿ ತನ್ನ ಅಸ್ವಸ್ಥತೆಯಿಂದ ಹೇಗೆ ಕೃಶವಾಗುತ್ತಾನೋ ಹಾಗೆಯೇ ತನ್ನ ಶಕ್ತಿಯನ್ನೂ ಐಶ್ವರ್ಯವನ್ನೂ ಅಶ್ಶೂರವು ಕಳೆದುಕೊಂಡು ಬಲಹೀನನಾಗುವನು. ಅಶ್ಶೂರದ ಮಹಿಮಾಪ್ರಭಾವಗಳು ಇಲ್ಲದೆ ಹೋಗುವವು. ಬೆಂಕಿಯು ಸರ್ವವನ್ನು ಸುಟ್ಟು ನಾಶಮಾಡುವಂತೆ ಇರುವದು. 17 ಇಸ್ರೇಲಿನ ಬೆಳಕು ಬೆಂಕಿಯಂತಿದೆ. ಪರಿಶುದ್ಧನಾಗಿರುವಾತನು ಬೆಂಕಿಯ ಜ್ವಾಲೆಯಂತಿದ್ದಾನೆ. ಮೊದಲು ಹಣಜಿ ಕಸಕಡ್ಡಿಗಳನ್ನು ಸುಡುವ ಬೆಂಕಿಯಂತೆ ಆತನಿರುವನು. 18 ಆಮೇಲೆ ಆ ಬೆಂಕಿಯು ದೊಡ್ಡದೊಡ್ಡ ಮರಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಸುಟ್ಟುಹಾಕುವದು. ಕೊನೆಗೆ ಜನರನ್ನು ಮೊದಲುಗೊಂಡು ಪ್ರತಿಯೊಂದೂ ನಾಶವಾಗುವುದು. ದೇವರು ಅಶ್ಶೂರವನ್ನು ನಾಶಮಾಡುವಾಗ ಹಾಗೆಯೇ ಆಗುವದು. ಅಶ್ಶೂರವು ಗೆದ್ದಲುಹುಳ ತಿಂದ ಮರದ ದಿಮ್ಮಿಯಂತಿರುವದು. 19 ಆಗ ಅಡವಿಯಲ್ಲಿ, ಒಂದು ಮಗು ಎಣಿಸಲು ಸಾಧ್ಯವಾಗುವಷ್ಟು ಮರಗಳಿರುವವು.
20 ಆಗ ಯಾಕೋಬನ ಮನೆತನದವರು, ಇಸ್ರೇಲರಲ್ಲಿ ಅಳಿದುಳಿದವರು, ತಮ್ಮನ್ನು ಹೊಡೆಯುವವರನ್ನು ಆಧಾರಮಾಡಿಕೊಳ್ಳದೆ ಇಸ್ರೇಲಿನ ಅತೀ ಪರಿಶುದ್ಧನಾದ ಯೆಹೋವನನ್ನೇ ಆಧಾರಮಾಡಿಕೊಳ್ಳುವರು.
ಯೇಸುವೇ ಕ್ರಿಸ್ತನೋ?
25 ಬಳಿಕ, ಜೆರುಸಲೇಮಿನಲ್ಲಿ ವಾಸವಾಗಿದ್ದ ಕೆಲವರು, “ಅವರು ಕೊಲ್ಲಲು ಪ್ರಯತ್ನಿಸುತ್ತಿರುವುದು ಈ ವ್ಯಕ್ತಿಯನ್ನೇ 26 ಆದರೆ ಇವನು ಪ್ರತಿಯೊಬ್ಬರಿಗೂ ಕಾಣುವ ಮತ್ತು ಕೇಳುವ ಸ್ಥಳದಲ್ಲಿ ಉಪದೇಶಿಸುತ್ತಿದ್ದಾನೆ. ಅಲ್ಲದೆ ಉಪದೇಶ ಮಾಡದಂತೆ ಯಾರೂ ಅವನನ್ನು ತಡೆಯುತ್ತಿಲ್ಲ. ಒಂದುವೇಳೆ ಈತನೇ ಕ್ರಿಸ್ತನು ಎಂಬ ನಿರ್ಧಾರಕ್ಕೆ ನಾಯಕರುಗಳು ಬಂದಿರಬಹುದು. 27 ಆದರೆ ಈ ಮನುಷ್ಯನ ಮನೆಯು ಎಲ್ಲಿದೆ ಎಂಬುದು ನಮಗೆ ಗೊತ್ತಿದೆ. ಅಲ್ಲದೆ, ಕ್ರಿಸ್ತನು ಬಂದಾಗ, ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ” ಎಂದು ಮಾತಾಡಿಕೊಂಡರು.
28 ಯೇಸುವು ದೇವಾಲಯದಲ್ಲಿ ಇನ್ನೂ ಉಪದೇಶಿಸುತ್ತಾ, “ಹೌದು, ನಿಮಗೆ ನನ್ನ ಬಗ್ಗೆ ಗೊತ್ತಿದೆ, ನಾನು ಎಲ್ಲಿಂದ ಬಂದೆನೆಂಬುದೂ ನಿಮಗೆ ತಿಳಿದಿದೆ. ಆದರೆ ನಾನು ಬಂದಿರುವುದು ನನ್ನ ಸ್ವಂತ ಅಧಿಕಾರದಿಂದಲ್ಲ. ಸತ್ಯಸ್ವರೂಪನು ನನ್ನನ್ನು ಕಳುಹಿಸಿದ್ದಾನೆ. ನಿಮಗೆ ಆತನು ಗೊತ್ತಿಲ್ಲ. 29 ಆದರೆ ನಾನು ಆತನನ್ನು ಬಲ್ಲೆನು. ನಾನು ಆತನಿಂದಲೇ ಬಂದೆನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
30 ಇದನ್ನು ಕೇಳಿ ಜನರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸುವಿನ ಮೇಲೆ ಕೈಹಾಕಲು ಯಾರಿಗೂ ಸಾಧ್ಯವಿರಲಿಲ್ಲ, ಏಕೆಂದರೆ ಯೇಸುವನ್ನು ಕೊಲ್ಲಲು ಇನ್ನೂ ಸರಿಯಾದ ಸಮಯ ಬಂದಿರಲಿಲ್ಲ. 31 ಆದರೆ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅವರು, “ಕ್ರಿಸ್ತನು ಬರುತ್ತಾನೆಂದು ನಾವು ಎದುರು ನೋಡುತ್ತಿದ್ದೇವೆ. ಕ್ರಿಸ್ತನು ಬಂದಾಗ, ಈ ಮನುಷ್ಯನು (ಯೇಸು) ಮಾಡಿರುವುದಕ್ಕಿಂತಲೂ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೇ? ಇಲ್ಲ! ಆದ್ದರಿಂದ ಈತನೇ ಕ್ರಿಸ್ತನಿರಬೇಕು” ಎಂದರು.
ಯೇಸುವನ್ನು ಬಂಧಿಸಲು ಯೆಹೂದ್ಯರ ಪ್ರಯತ್ನ
32 ಯೇಸುವಿನ ಬಗ್ಗೆ ಜನರು ಹೇಳುತ್ತಿದ್ದ ಈ ಸಂಗತಿಗಳನ್ನು ಫರಿಸಾಯರು ಕೇಳಿದರು. ಆದ್ದರಿಂದ ಮಹಾಯಾಜಕರು ಮತ್ತು ಫರಿಸಾಯರು ಯೇಸುವನ್ನು ಬಂಧಿಸುವುದಕ್ಕಾಗಿ ದೇವಾಲಯದ ಸಿಪಾಯಿಗಳಲ್ಲಿ ಕೆಲವರನ್ನು ಕಳುಹಿಸಿದರು. 33 ಆಗ ಯೇಸು, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿರುತ್ತೇನೆ. ಬಳಿಕ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತೇನೆ. 34 ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.
35 ಯೆಹೂದ್ಯರು, “ಇವನನ್ನು ನಾವು ಕಂಡುಕೊಳ್ಳಲಾಗದಂತೆ ಇವನು ಎಲ್ಲಿಗೆ ಹೋಗುವನು? ನಮ್ಮವರು ವಾಸವಾಗಿರುವ ಗ್ರೀಕ್ ಜನರ ಪಟ್ಟಣಗಳಿಗೆ ಹೋಗಿ ಗ್ರೀಕರಿಗೆ ಉಪದೇಶಿಸುವನೇ? 36 ಇವನು (ಯೇಸು), ‘ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ’ ಎನ್ನುತ್ತಾನೆ. ಅಲ್ಲದೆ ಇವನು, ‘ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎನ್ನುತ್ತಾನೆ. ಇದರರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International