Revised Common Lectionary (Complementary)
169 ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು.
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು.
170 ನನ್ನ ಪ್ರಾರ್ಥನೆಗೆ ಕಿವಿಗೊಡು.
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು.
171 ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ
ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ.
172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ.
ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.
173 ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ
ಕೈಚಾಚಿ ಸಹಾಯಮಾಡು.
174 ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ.
ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ.
175 ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು.
ನಿನ್ನ ನಿಯಮಗಳು ನನಗೆ ಸಹಾಯಮಾಡಲಿ.
176 ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ.
ನನಗೋಸ್ಕರ ಹುಡುಕುತ್ತಾ ಬಾ.
ನಿನ್ನ ಸೇವಕನಾದ ನಾನು
ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.
11 ಬೇತೇಲಿನಲ್ಲಿ ಒಬ್ಬ ವಯಸ್ಸಾದ ಪ್ರವಾದಿಯು ನೆಲೆಸಿದ್ದನು. ಬೇತೇಲಿನಲ್ಲಿ ದೇವಮನುಷ್ಯನು ಮಾಡಿದ್ದನ್ನು ಅವನ ಮಕ್ಕಳು ಬಂದು ಅವನಿಗೆ ಹೇಳಿದರು. ದೇವಮನುಷ್ಯನು ರಾಜನಾದ ಯಾರೊಬ್ಬಾಮನಿಗೆ ಹೇಳಿದುದ್ದನ್ನು ಅವರು ತಮ್ಮ ತಂದೆಗೆ ಹೇಳಿದರು. 12 ಆ ವಯಸ್ಸಾದ ಪ್ರವಾದಿಯು, “ಅವನು ಬಿಟ್ಟುಹೋಗುವಾಗ ಯಾವ ರಸ್ತೆಯಲ್ಲಿ ಹೋದನು?” ಎಂದು ಕೇಳಿದನು. ಯೆಹೂದ ದೇಶದವನಾದ ದೇವಮನುಷ್ಯನು ಯಾವ ರಸ್ತೆಯಲ್ಲಿ ಹಿಂದಿರುಗಿ ಹೋದನೆಂಬುದನ್ನು ಅವನ ಮಕ್ಕಳು ತಂದೆಗೆ ತೋರಿಸಿದರು. 13 ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಲು ಮಕ್ಕಳಿಗೆ ಹೇಳಿದನು. ಅವರು ಕತ್ತೆಯ ಮೇಲೆ ತಡಿಯನ್ನು ಹಾಕಿದರು. ಆಗ ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ಹೋದನು.
14 ಆ ಪ್ರವಾದಿಯು ದೇವಮನುಷ್ಯನನ್ನು ಹಿಂಬಾಲಿಸಿ ಹೋಗಿ ಓಕ್ ಮರದ ಕೆಳಗೆ ಕುಳಿತಿದ್ದ ಅವನನ್ನು ಕಂಡು, “ನೀನು ಯೆಹೂದದಿಂದ ಬಂದ ದೇವಮನುಷ್ಯನೋ?” ಎಂದು ಕೇಳಿದನು.
ದೇವಮನುಷ್ಯನು, “ಹೌದು, ನಾನೇ” ಎಂದನು.
15 ವಯಸ್ಸಾದ ಪ್ರವಾದಿಯು, “ದಯವಿಟ್ಟು ಮನೆಗೆ ಬಂದು ನನ್ನೊಂದಿಗೆ ಊಟಮಾಡು” ಎಂದನು.
16 ಆದರೆ ದೇವಮನುಷ್ಯನು, “ನಾನು ನಿನ್ನ ಜೊತೆಯಲ್ಲಿ ಮನೆಗೆ ಬರಲು ಸಾಧ್ಯವಿಲ್ಲ. ನಾನು ಈ ಸ್ಥಳದಲ್ಲಿ ನಿನ್ನೊಂದಿಗೆ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. 17 ಯೆಹೋವನು ನನಗೆ, ‘ನೀನು ಆ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಕೂಡದು; ನೀನು ಅಲ್ಲಿಗೆ ಹೋದ ರಸ್ತೆಯಲ್ಲಿ ಮತ್ತೆ ಹಿಂದಿರುಗಬಾರದು’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಿಸಿದನು.
18 ಆಗ ಆ ಪ್ರವಾದಿಯು, “ಆದರೆ ನಾನೂ ನಿನ್ನಂತೆಯೇ ಒಬ್ಬ ಪ್ರವಾದಿ” ಎಂದು ಹೇಳಿದನು. ನಂತರ ವಯಸ್ಸಾದ ಪ್ರವಾದಿಯು ಅವನಿಗೆ “ಯೆಹೋವನಿಂದ ಒಬ್ಬ ದೇವದೂತನು ನನ್ನ ಬಳಿಗೆ ಬಂದಿದ್ದನು. ಆ ದೂತನು ನಿನ್ನನ್ನು ನನ್ನ ಮನೆಗೆ ಕರೆತರಲು ನಿನ್ನೊಂದಿಗೆ ಅನ್ನಪಾನಗಳನ್ನು ತೆಗೆದುಕೊಳ್ಳಲು ನನಗೆ ತಿಳಿಸಿದನು” ಎಂದು ಸುಳ್ಳು ಹೇಳಿದನು.
19 ಆದ್ದರಿಂದ ಆ ಪ್ರವಾದಿಯ ಮನೆಗೆ ದೇವಮನುಷ್ಯನು ಹೋಗಿ, ಅವನ ಸಂಗಡ ಅನ್ನಪಾನಗಳನ್ನು ತೆಗೆದುಕೊಂಡನು. 20 ಅವರು ಮೇಜಿನ ಮುಂದೆ ಕುಳಿತಿದ್ದಾಗ, ಯೆಹೋವನು ಆ ಪ್ರವಾದಿಯೊಂದಿಗೆ ಮಾತನಾಡಿದನು. 21 ಆ ಪ್ರವಾದಿಯು ಯೆಹೂದ ದೇಶದವನಾದ ದೇವಮನುಷ್ಯನಿಗೆ, “ಯೆಹೋವನು ಹೇಳುವುದೇನೆಂದರೆ, ನೀನು ಆತನಿಗೆ ವಿಧೇಯನಾಗಲಿಲ್ಲ. ಆತನ ಆಜ್ಞೆಯನ್ನು ನೀನು ಅನುಸರಿಸಲಿಲ್ಲ. 22 ಈ ಸ್ಥಳದಲ್ಲಿ ನೀನು ಅನ್ನಪಾನಗಳನ್ನು ತೆಗೆದುಕೊಳ್ಳಕೂಡದೆಂದು ಯೆಹೋವನು ನಿನಗೆ ಆಜ್ಞಾಪಿಸಿದ್ದನು. ಆದರೆ ನೀನು ಹಿಂದಿರುಗಿಬಂದು ಅನ್ನಪಾನಗಳನ್ನು ತೆಗೆದುಕೊಂಡೆ. ಆದ್ದರಿಂದ ನಿನ್ನ ವಂಶದ ಸ್ಮಶಾನದಲ್ಲಿ ನಿನ್ನ ದೇಹವನ್ನು ಸಮಾಧಿಮಾಡಲಾಗುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ” ಎಂದನು.
23 ದೇವಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡ ನಂತರ ಆ ಪ್ರವಾದಿಯು ಅವನಿಗಾಗಿ ಕತ್ತೆಯ ಮೇಲೆ ತಡಿಯನ್ನು ಹಾಕಿದನು. ದೇವಮನುಷ್ಯನು ಅಲ್ಲಿಂದ ಹೊರಟನು. 24 ಅವನು ತನ್ನ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಸಿಂಹವು ಅವನ ಮೇಲೆರಗಿ ಅವನನ್ನು ಕೊಂದುಹಾಕಿತು. ಪ್ರವಾದಿಯ ದೇಹವು ರಸ್ತೆಯ ಮೇಲೆ ಬಿದ್ದಿತ್ತು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ನಿಂತಿದ್ದವು. 25 ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವರು ಆ ದೇಹವನ್ನೂ ಮತ್ತು ಆ ದೇಹದ ಬಳಿ ನಿಂತಿದ್ದ ಸಿಂಹವನ್ನೂ ನೋಡಿದರು. ಆ ಜನರು ಪ್ರವಾದಿಯು ವಾಸಿಸುತ್ತಿದ್ದ ನಗರಕ್ಕೆ ಬಂದು, ಅವರು ರಸ್ತೆಯ ಮೇಲೆ ಕಂಡದ್ದನ್ನು ಹೇಳಿದರು.
ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ
3 ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. 2 ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. 3 ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. 4 ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.
5 ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. 6 ಇವು ದೇವರನ್ನು ಕೋಪಗೊಳಿಸುತ್ತವೆ. 7 ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.
8 ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. 9 ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.
Kannada Holy Bible: Easy-to-Read Version. All rights reserved. © 1997 Bible League International