Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:169-176

169 ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು.
170 ನನ್ನ ಪ್ರಾರ್ಥನೆಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು.
171 ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ
    ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ.
172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ.
    ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.
173 ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ
    ಕೈಚಾಚಿ ಸಹಾಯಮಾಡು.
174 ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ.
    ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ.
175 ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು.
    ನಿನ್ನ ನಿಯಮಗಳು ನನಗೆ ಸಹಾಯಮಾಡಲಿ.
176 ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ.
    ನನಗೋಸ್ಕರ ಹುಡುಕುತ್ತಾ ಬಾ.
ನಿನ್ನ ಸೇವಕನಾದ ನಾನು
    ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.

1 ರಾಜರುಗಳು 13:1-10

ಬೇತೇಲಿಗೆ ದೇವರ ಶಾಪ

13 ಯೆಹೂದ ದೇಶದವನಾದ ಒಬ್ಬ ದೇವಮನುಷ್ಯನು ಯೆಹೋವನ ಆಜ್ಞೆಯಂತೆ ಬೇತೇಲಿಗೆ ಬಂದನು. ಆಗ ಯಾರೊಬ್ಬಾಮನು ಧೂಪವನ್ನು ಅರ್ಪಿಸುತ್ತಾ, ಯಜ್ಞವೇದಿಕೆಯ ಹತ್ತಿರ ನಿಂತಿದ್ದನು. ಯಜ್ಞವೇದಿಕೆಯ ವಿರುದ್ಧ ಮಾತನಾಡುವಂತೆ ಆ ದೇವಮನುಷ್ಯನಿಗೆ ಯೆಹೋವನು ಆಜ್ಞಾಪಿಸಿದನು. ಆಗ ಅವನು ಹೇಳಿದ್ದೇನೆಂದರೆ:

“ಯಜ್ಞವೇದಿಕೆಯೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ: ‘ದಾವೀದನ ವಂಶದಲ್ಲಿ ಯೋಷೀಯನೆಂಬ ಮಗನು ಹುಟ್ಟುವನು. ಈಗ ಈ ಪೂಜಾಸ್ಥಳಗಳಲ್ಲಿ ಧೂಪಸುಡುತ್ತಿರುವ ಈ ಯಾಜಕರನ್ನು ಅವನು ಹಿಡಿದು ಅವರನ್ನು ನಿನ್ನ ಮೇಲೆಯೇ ಕೊಲ್ಲುವನು; ಈಗ ನಿನ್ನ ಮೇಲೆ ಧೂಪಸುಡುತ್ತಿರುವ ಯಾಜಕರನ್ನು ಅವನು ಹಿಡಿದು ಅವರ ಮೂಳೆಗಳನ್ನು ನಿನ್ನ ಮೇಲೆ ಸುಡುವನು.’”

ಇದಲ್ಲದೆ ದೇವಮನುಷ್ಯನು ಜನರಿಗೆ, “ಯೆಹೋವನು ಇದರ ಬಗ್ಗೆ ನನಗೆ ಹೇಳಿರುವ ಗುರುತೇನೆಂದರೆ, ‘ಯಜ್ಞವೇದಿಕೆಯು ಒಡೆದುಹೋಳಾಗುವುದು, ಬೂದಿಯು ನೆಲದ ಮೇಲೆ ಚೆಲ್ಲಿಹೋಗುವುದು’” ಎಂದನು.

ಬೇತೇಲಿನ ಯಜ್ಞವೇದಿಕೆಯನ್ನು ಕುರಿತು ದೇವಮನುಷ್ಯನು ಹೇಳಿದ ಸಂದೇಶವು ರಾಜನಾದ ಯಾರೊಬ್ಬಾಮನಿಗೆ ಕೇಳಿಸಿತು. ಅವನು ತನ್ನ ಕೈಯನ್ನು ಯಜ್ಞವೇದಿಕೆಯಿಂದ ಥಟ್ಟನೆ ತೆಗೆದು, ಆ ಮನುಷ್ಯನ ಕಡೆಗೆ ಗುರಿಮಾಡಿ, “ಆ ಮನುಷ್ಯನನ್ನು ಹಿಡಿಯಿರಿ!” ಎಂದು ಹೇಳಿದನು. ಆದರೆ ರಾಜನು ಇದನ್ನು ಹೇಳಿದಾಗ, ಅವನ ಕೈಗೆ ಲಕ್ವ ಹೊಡೆಯಿತು. ಅವನು ಅದನ್ನು ಚಲಿಸಲಾಗಲಿಲ್ಲ, ಯಜ್ಞವೇದಿಕೆಯೂ ಒಡೆದು ಚೂರಾಯಿತು. ಅದರ ಮೇಲಿನ ಬೂದಿಯು ನೆಲದ ಮೇಲೆ ಚೆಲ್ಲಿಹೋಯಿತು. ದೇವರೇ ಆಜ್ಞಾಪಿಸಿದನೆಂದು ದೇವಮನುಷ್ಯನು ಹೇಳಿದ ಸಂಗತಿಗಳಿಗೆ ಇದೇ ಗುರುತಾಗಿತ್ತು. ನಂತರ ರಾಜನಾದ ಯಾರೊಬ್ಬಾಮನು ದೇವಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನಲ್ಲಿ ನನಗಾಗಿ ಪ್ರಾರ್ಥಿಸು. ನನ್ನ ಕೈಯನ್ನು ಗುಣಪಡಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸು” ಎಂದನು.

ದೇವಮನುಷ್ಯನು ಯೆಹೋವನಿಗೆ ಪ್ರಾರ್ಥಿಸಿದನು. ಆಗ ರಾಜನ ಕೈ ಗುಣವಾಯಿತು. ಅದು ಮತ್ತೆ ಮೊದಲಿನಂತೆ ಆಯಿತು. ಆಗ ರಾಜನು ದೇವಮನುಷ್ಯನಿಗೆ, “ದಯವಿಟ್ಟು ನನ್ನೊಡನೆ ಮನೆಗೆ ಬಾ. ನನ್ನೊಡನೆ ಊಟಮಾಡು. ನಾನು ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೇನೆ” ಎಂದು ಹೇಳಿದನು.

ಆದರೆ ದೇವಮನುಷ್ಯನು ರಾಜನಿಗೆ, “ನಾನು ನಿನ್ನೊಡನೆ ಮನೆಗೆ ಬರುವುದಿಲ್ಲ! ನೀನು ನಿನ್ನ ಅರ್ಧರಾಜ್ಯವನ್ನು ಕೊಟ್ಟರೂ ನಾನು ಬರುವುದಿಲ್ಲ! ನಾನು ಈ ಸ್ಥಳದಲ್ಲಿ ಏನನ್ನೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. ನಾನು ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ. ನಾನು ಇಲ್ಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿ ಹೋಗಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. 10 ಆದ್ದರಿಂದ ಅವನು ಬೇರೆ ರಸ್ತೆಯಲ್ಲಿ ಹೋದನು. ಅವನು ಬೇತೇಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿಹೋಗಲಿಲ್ಲ.

ರೋಮ್ನಗರದವರಿಗೆ 3:9-20

ಎಲ್ಲಾ ಜನರು ಅಪರಾಧಿಗಳಾಗಿದ್ದಾರೆ

ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ. 10 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:

“ಪಾಪವಿಲ್ಲದ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!
11     ಅರ್ಥಮಾಡಿಕೊಳ್ಳುವ ಒಬ್ಬನೂ ಇಲ್ಲ.
ದೇವರೊಂದಿಗಿರಲು ನಿಜವಾಗಿ ಬಯಸುವ ಒಬ್ಬನೂ ಇಲ್ಲ.
12 ಎಲ್ಲಾ ಜನರು ದಾರಿ ತಪ್ಪಿದ್ದಾರೆ.
    ಎಲ್ಲಾ ಜನರು ಅಯೋಗ್ಯರಾಗಿದ್ದಾರೆ.
ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!”(A)

13 “ಜನರ ಬಾಯಿಗಳು ತೆರೆದ ಸಮಾಧಿಗಳಂತಿವೆ.
    ಅವರು ಸುಳ್ಳು ಹೇಳಲು ತಮ್ಮ ನಾಲಿಗೆಗಳನ್ನು ಬಳಸುತ್ತಾರೆ.”(B)

“ಅವರು ಹೇಳುವ ಸಂಗತಿಗಳು ವಿಷಪೂರಿತವಾದ ಹಾವುಗಳಂತಿವೆ.”(C)

14 “ಅವರ ಬಾಯಿಗಳಲ್ಲಿ ಶಾಪವೂ ಕಠೋರತೆಯೂ ತುಂಬಿವೆ.”(D)

15 “ಹಿಂಸಿಸಲು ಮತ್ತು ಕೊಲ್ಲಲು ಜನರು ಯಾವಾಗಲೂ ಸಿದ್ಧರಾಗಿದ್ದಾರೆ.
16     ಅವರು ಹೋದಲ್ಲೆಲ್ಲಾ ನಾಶನವನ್ನೂ ಸಂಕಟವನ್ನೂ ಬರಮಾಡುತ್ತಾರೆ.
17 ಜನರು ಶಾಂತಿಯ ಮಾರ್ಗವನ್ನು ತಿಳಿದಿಲ್ಲ.”(E)

18 “ಅವರಿಗೆ ದೇವರಲ್ಲಿ ಭಯವಾಗಲಿ ಗೌರವವಾಗಲಿ ಇಲ್ಲ.”(F)

19 ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ. 20 ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಯಾರಿಗೂ ಸಾಧ್ಯವಿಲ್ಲ. ಧರ್ಮಶಾಸ್ತ್ರವು ನಮ್ಮ ಪಾಪವನ್ನು ಮಾತ್ರ ತೋರ್ಪಡಿಸುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International