Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 116:1-9

116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
    ನಾನು ಆತನನ್ನು ಪ್ರೀತಿಸುತ್ತೇನೆ.
ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
    ಆತನು ನನಗೆ ಕಿವಿಗೊಡುತ್ತಾನೆ.
ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
    ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
    ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
ಆಗ ನಾನು ಯೆಹೋವನ ಹೆಸರು ಹೇಳಿ,
    “ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
ಯೆಹೋವನು ಒಳ್ಳೆಯವನೂ ಕೃಪಾಪೂರ್ಣನೂ ಆಗಿದ್ದಾನೆ.
    ನಮ್ಮ ದೇವರು ಕರುಣಾಮಯನಾಗಿದ್ದಾನೆ.
ಯೆಹೋವನು ಅಸಹಾಯಕರನ್ನು ಕಾಪಾಡುವನು.
    ನಾನು ಅಸಹಾಯಕನಾಗಿದ್ದಾಗ ಯೆಹೋವನು ನನ್ನನ್ನು ರಕ್ಷಿಸಿದನು.
ನನ್ನ ಆತ್ಮವೇ, ವಿಶ್ರಮಿಸಿಕೊ!
    ಯೆಹೋವನು ನಿನ್ನನ್ನು ಕಾಪಾಡುವನು.
ಯೆಹೋವನೇ, ನೀನು ನನ್ನ ಆತ್ಮವನ್ನು ಮರಣದಿಂದ ರಕ್ಷಿಸಿದೆ.
    ನೀನು ನನ್ನ ಕಣ್ಣೀರನ್ನು ನಿಲ್ಲಿಸಿದೆ;
    ಬೀಳದಂತೆ ನನ್ನನ್ನು ಕಾಪಾಡಿದೆ.
ಜೀವಿಸುವವರ ನಾಡಿನಲ್ಲಿ ನಾನು ಯೆಹೋವನ ಸೇವೆಯನ್ನು ಮುಂದುವರಿಸುವೆನು.

ಯೆಹೋಶುವನು 6:22-27

22 ಯೆಹೋಶುವನು ಆ ಇಬ್ಬರು ಗೂಢಚಾರರಿಗೆ, “ನೀವು ಪ್ರಮಾಣ ಮಾಡಿರುವುದರಿಂದ ಆ ವೇಶ್ಯೆಯ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬನ್ನಿ. ಅವಳ ಸಂಗಡ ಇರುವ ಎಲ್ಲಾ ಜನರನ್ನೂ ಕರೆದುಕೊಂಡು ಬನ್ನಿ” ಎಂದು ಹೇಳಿದನು.

23 ಆ ಇಬ್ಬರು, ರಾಹಾಬಳ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬಂದರು. ಅವಳ ತಂದೆ, ತಾಯಿ, ಸಹೋದರರು ಮತ್ತು ಅವಳ ಎಲ್ಲ ಕುಟುಂಬದವರನ್ನು ಮತ್ತು ಅವಳ ಸಂಗಡ ಅಲ್ಲಿ ಇದ್ದ ಬೇರೆ ಎಲ್ಲ ಜನರನ್ನು ಸಹ ಅವರು ಹೊರಗೆ ಕರೆದುಕೊಂಡು ಬಂದರು. ಅವರೆಲ್ಲರನ್ನು ಇಸ್ರೇಲಿನ ಜನರ ಪಾಳೆಯದ ಹೊರಗಡೆ ಒಂದು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿದರು.

24 ಬಳಿಕ ಇಸ್ರೇಲರು ಇಡೀ ನಗರವನ್ನು ಸುಟ್ಟು ಹಾಕಿದರು. ಅವರು ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ವಸ್ತುಗಳನ್ನು ಬಿಟ್ಟು ನಗರದಲ್ಲಿನ ಉಳಿದೆಲ್ಲವನ್ನು ಸುಟ್ಟು ಹಾಕಿದರು. ಅವರು ಆ ವಸ್ತುಗಳನ್ನು ಯೆಹೋವನಿಗಾಗಿ ಉಳಿಸಿದರು. 25 ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ ಅವಳ ಕುಟುಂಬವನ್ನೂ ಅವಳ ಸಂಗಡ ಇದ್ದ ಬೇರೆ ಜನರನ್ನೂ ಉಳಿಸಿದನು. ಯೆಹೋಶುವನು ಜೆರಿಕೊವಿಗೆ ಕಳಿಸಿಕೊಟ್ಟ ಗೂಢಚಾರರಿಗೆ ರಾಹಾಬಳು ಸಹಾಯ ಮಾಡಿದ್ದಕ್ಕಾಗಿ ಯೆಹೋಶುವನು ಅವರೆಲ್ಲರನ್ನು ಉಳಿಸಿದನು. ರಾಹಾಬಳು ಇಂದಿಗೂ ಸಹ ಇಸ್ರೇಲಿನ ಜನರೊಂದಿಗೆ ವಾಸವಾಗಿದ್ದಾಳೆ.

26 ಆ ಸಮಯದಲ್ಲಿ ಯೆಹೋಶುವನು, ಇಸ್ರೇಲಿನ ಜನರಿಂದ ಪ್ರಮಾಣಮಾಡಿಸಿ ಅವರಿಗೆ,

“ಈ ಜೆರಿಕೊ ಪಟ್ಟಣವನ್ನು ಪುನಃ ಕಟ್ಟಲು ಪ್ರಯತ್ನಿಸುವವನು
    ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಲಿ.
ಈ ನಗರಕ್ಕೆ ಅಡಿಗಲ್ಲನ್ನಿಡುವ ವ್ಯಕ್ತಿಯು
    ತನ್ನ ಹಿರಿಯ ಮಗನನ್ನು ಕಳೆದುಕೊಳ್ಳಲಿ;
ಹೆಬ್ಬಾಗಿಲನ್ನು ನಿಲ್ಲಿಸುವ ವ್ಯಕ್ತಿ
    ತನ್ನ ಕಿರಿಯ ಮಗನನ್ನು ಕಳೆದುಕೊಳ್ಳಲಿ”[a]

ಎಂದು ಹೇಳಿದನು.

27 ಯೆಹೋವನು ಯೆಹೋಶುವನ ಸಂಗಡ ಇದ್ದನು. ಯೆಹೋಶುವನು ದೇಶದಲ್ಲೆಲ್ಲಾ ಸುಪ್ರಸಿದ್ಧನಾದನು.

ಮತ್ತಾಯ 21:23-32

ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ

(ಮಾರ್ಕ 11:27-33; ಲೂಕ 20:1-8)

23 ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು.

24 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25 ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು.

ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26 ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು.

27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.

ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ

28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.

29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.

31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”

ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International