Revised Common Lectionary (Complementary)
116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
ನಾನು ಆತನನ್ನು ಪ್ರೀತಿಸುತ್ತೇನೆ.
2 ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
ಆತನು ನನಗೆ ಕಿವಿಗೊಡುತ್ತಾನೆ.
3 ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
4 ಆಗ ನಾನು ಯೆಹೋವನ ಹೆಸರು ಹೇಳಿ,
“ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
5 ಯೆಹೋವನು ಒಳ್ಳೆಯವನೂ ಕೃಪಾಪೂರ್ಣನೂ ಆಗಿದ್ದಾನೆ.
ನಮ್ಮ ದೇವರು ಕರುಣಾಮಯನಾಗಿದ್ದಾನೆ.
6 ಯೆಹೋವನು ಅಸಹಾಯಕರನ್ನು ಕಾಪಾಡುವನು.
ನಾನು ಅಸಹಾಯಕನಾಗಿದ್ದಾಗ ಯೆಹೋವನು ನನ್ನನ್ನು ರಕ್ಷಿಸಿದನು.
7 ನನ್ನ ಆತ್ಮವೇ, ವಿಶ್ರಮಿಸಿಕೊ!
ಯೆಹೋವನು ನಿನ್ನನ್ನು ಕಾಪಾಡುವನು.
8 ಯೆಹೋವನೇ, ನೀನು ನನ್ನ ಆತ್ಮವನ್ನು ಮರಣದಿಂದ ರಕ್ಷಿಸಿದೆ.
ನೀನು ನನ್ನ ಕಣ್ಣೀರನ್ನು ನಿಲ್ಲಿಸಿದೆ;
ಬೀಳದಂತೆ ನನ್ನನ್ನು ಕಾಪಾಡಿದೆ.
9 ಜೀವಿಸುವವರ ನಾಡಿನಲ್ಲಿ ನಾನು ಯೆಹೋವನ ಸೇವೆಯನ್ನು ಮುಂದುವರಿಸುವೆನು.
15 ರಾಹಾಬಳ ಮನೆಯನ್ನು ಊರಗೋಡೆಗೆ ಸೇರಿಸಿ ಕಟ್ಟಲಾಗಿತ್ತು, ಆದ್ದರಿಂದ ಅವರನ್ನು ಒಂದು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿದಳು. 16 ಆಕೆ ಅವರಿಗೆ, “ನೀವು ಪಶ್ಚಿಮದಿಕ್ಕಿನ ಕಡೆಗೆ ಹೋಗಿ ಬೆಟ್ಟಗಳಲ್ಲಿ ಅಡಗಿಕೊಳ್ಳಿರಿ; ಆಗ ರಾಜಭಟರು ನಿಮ್ಮನ್ನು ಕಂಡುಹಿಡಿಯಲಾರರು; ಅಲ್ಲಿ ಮೂರು ದಿನಗಳವರೆಗೆ ಅಡಗಿಕೊಂಡಿದ್ದು ರಾಜಭಟರು ಹಿಂದಿರುಗಿದ ಮೇಲೆ ನೀವು ನಿಮ್ಮ ಸ್ಥಳಕ್ಕೆ ಹೋಗಬಹುದು” ಎಂದು ಹೇಳಿದಳು.
17 ಅವರು ಅವಳಿಗೆ, “ನಾವು ನಿನಗೊಂದು ಪ್ರಮಾಣ ಮಾಡಿದ್ದೇವೆ; ಆದರೆ ನೀನು ಒಂದು ಕೆಲಸ ಮಾಡಬೇಕು. ಇಲ್ಲವಾದರೆ ನಾವು ನಮ್ಮ ಪ್ರಮಾಣಕ್ಕೆ ಹೊಣೆಗಾರರಾಗುವುದಿಲ್ಲ. 18 ನಮ್ಮನ್ನು ಇಳಿಸುವುದಕ್ಕಾಗಿ ನೀನು ಉಪಯೋಗಿಸಿದ ಈ ಕೆಂಪು ಹಗ್ಗವನ್ನು ನಾವು ಈ ದೇಶಕ್ಕೆ ಹಿಂತಿರುಗಿ ಬರುವಾಗ ನೀನು ಕಿಟಕಿಗೆ ಕಟ್ಟಿರಬೇಕು. ನಿನ್ನ ತಂದೆತಾಯಿಗಳು, ನಿನ್ನ ಸಹೋದರ ಸಹೋದರಿಯರು ಮತ್ತು ನಿನ್ನ ಕುಟುಂಬ ವರ್ಗದವರು ನಿನ್ನ ಸಂಗಡ ಈ ಮನೆಯಲ್ಲಿರಬೇಕು. 19 ಈ ಮನೆಯಲ್ಲಿರುವ ಪ್ರತಿಯೊಬ್ಬರನ್ನು ನಾವು ಕಾಪಾಡುತ್ತೇವೆ. ನಿನ್ನ ಮನೆಯಲ್ಲಿ ಯಾರಿಗಾದರೂ ಪೆಟ್ಟಾದರೆ ಅದಕ್ಕೆ ನಾವು ಹೊಣೆಗಾರರಾಗುವೆವು. ಆದರೆ ಯಾರಾದರೂ ನಿನ್ನ ಮನೆಯಿಂದ ಹೊರಗೆ ಹೋದಾಗ ಕೊಲ್ಲಲ್ಪಟ್ಟರೆ ಅದಕ್ಕೆ ನಾವು ಹೊಣೆಗಾರರಲ್ಲ; ಅದಕ್ಕೆ ಅವರೇ ಹೊಣೆಗಾರರು. 20 ನಾನು ನಿನಗೆ ಈ ಪ್ರಮಾಣವನ್ನು ಮಾಡಿದ್ದೇವೆ. ಆದರೆ ಇದನ್ನು ನೀನು ಯಾರಿಗೂ ಹೇಳಕೂಡದು; ಒಂದುವೇಳೆ ಹೇಳಿದರೆ, ನಾವು ಈ ಪ್ರಮಾಣದಿಂದ ಮುಕ್ತರಾಗುತ್ತೇವೆ” ಎಂದು ಹೇಳಿದರು.
21 ಅದಕ್ಕೆ ಅವಳು, “ಹಾಗೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಳು. ಆ ಜನರು ಅವಳ ಮನೆಯಿಂದ ಹೊರಟರು. ಆಗ ಆ ಹೆಂಗಸು ಆ ಕೆಂಪು ಹಗ್ಗವನ್ನು ಕಿಟಿಕಿಗೆ ಕಟ್ಟಿದಳು.
22 ಅವರು ಅವಳ ಮನೆಯಿಂದ ಹೋಗಿ ಬೆಟ್ಟಗಳಲ್ಲಿ ಅಡಗಿಕೊಂಡು ಮೂರು ದಿನಗಳವರೆಗೆ ಅಲ್ಲೇ ಇದ್ದರು. ರಾಜಭಟರು ದಾರಿಯಲ್ಲೆಲ್ಲಾ ಹುಡುಕಾಡಿ ಕಾಣದೆ ಮೂರು ದಿನಗಳ ತರುವಾಯ ಪಟ್ಟಣಕ್ಕೆ ಹಿಂದಿರುಗಿದರು. 23 ಆಗ ಇವರಿಬ್ಬರು ಬೆಟ್ಟದಿಂದಿಳಿದು ನದಿಯನ್ನು ದಾಟಿ ಯೆಹೋಶುವನ ಬಳಿಗೆ ಹೋಗಿ ತಾವು ತಿಳಿದುಕೊಂಡ ಎಲ್ಲವನ್ನು ತಿಳಿಸಿದರು. ಅವರು ಯೆಹೋಶುವನಿಗೆ, 24 “ಯೆಹೋವನು ನಿಜವಾಗಿಯೂ ಆ ದೇಶವನ್ನೆಲ್ಲಾ ನಮಗೆ ದಯಪಾಲಿಸಿದ್ದಾನೆ. ಆ ದೇಶದ ಎಲ್ಲ ಜನರು ನಮ್ಮಿಂದ ಭಯಗೊಂಡಿದ್ದಾರೆ” ಎಂದು ತಿಳಿಸಿದರು.
17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.
18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.
20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(A) ಅಬ್ರಹಾಮನನ್ನು “ದೇವರ ಸ್ನೇಹಿತ”(B) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.
25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]
26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.
Kannada Holy Bible: Easy-to-Read Version. All rights reserved. © 1997 Bible League International