Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 146

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

ಯೆಶಾಯ 30:27-33

27 ಇಗೋ, ಯೆಹೋವನ ನಾಮವು ಬಹುದೂರದಿಂದ ಬರುವದು. ಆತನ ಕೋಪವು ದಟ್ಟವಾದ ಹೊಗೆಯೊಂದಿಗೆ ಇರುವ ಬೆಂಕಿಯೋಪಾದಿಯಲ್ಲಿರುವದು. ಯೆಹೋವನ ಬಾಯಿ ಕೋಪದಿಂದಲೂ ನಾಲಿಗೆಯು ಸುಡುವ ಬೆಂಕಿಯಂತೆಯೂ ಇರುವದು. 28 ಆತನ ಶ್ವಾಸವು (ಆತ್ಮ) ಒಂದು ಮಹಾನದಿಯಂತಿರುವದು. ಅದರ ನೀರು ಕುತ್ತಿಗೆಯ ತನಕ ಏರುವದು. ಯೆಹೋವನು ಜನಾಂಗಗಳಿಗೆ ನ್ಯಾಯತೀರಿಸುವನು. ಅವುಗಳನ್ನು ಜರಡಿಯಿಂದ ಜಾಲಾಡಿಸುವನು. ಯೆಹೋವನು ಅವುಗಳನ್ನು ನಿಯಂತ್ರಿಸುವನು. ಅದು ಪ್ರಾಣಿಗಳನ್ನು ನಿಯಂತ್ರಿಸುವ ಬಾಯಿಯಲ್ಲಿ ಹಾಕುವ ಕಡಿವಾಣದಂತಿರುವದು.

29 ಆ ಸಮಯದಲ್ಲಿ ನೀವು ಹರ್ಷಗಾನ ಹಾಡುವಿರಿ. ಅದು ಹಬ್ಬದ ರಾತ್ರಿಯ ಸಮಯದಂತಿರುವದು. ದೇವರ ಪರ್ವತದಲ್ಲಿ ನಡೆಯುತ್ತಿರುವಾಗ ನೀವು ಅತ್ಯಂತ ಸಂತೋಷಪಡುವಿರಿ. ಇಸ್ರೇಲಿನ ಬಂಡೆಯಾಗಿರುವ ಯೆಹೋವನನ್ನು ಆರಾಧಿಸಲು ಹೋಗುವಾಗ ಕೊಳಲಿನ ಗಾನವನ್ನು ಕೇಳಿ ಸಂತೋಷಿಸುವಿರಿ.

30 ಯೆಹೋವನು ತನ್ನ ಮಹಾಸ್ವರವನ್ನು ಜನರು ಕೇಳುವಂತೆ ಮಾಡುವನು. ತನ್ನ ಸಾಮರ್ಥ್ಯದ ಬಾಹುವು ಕೋಪದಿಂದ ನಡುಗುವದನ್ನು ಜನರು ನೋಡುವಂತೆ ಮಾಡುವನು. ಆ ಬಾಹುವು ಎಲ್ಲವನ್ನು ಸುಡುವ ದೊಡ್ಡ ಅಗ್ನಿಯಂತಿರುವದು. ಯೆಹೋವನ ಶಕ್ತಿಯು ಆಲಿಕಲ್ಲಿನಿಂದಲೂ ಮಳೆಯಿಂದಲೂ ಕೂಡಿರುವ ಬಿರುಗಾಳಿಯಂತಿರುವುದು. 31 ಯೆಹೋವನ ಸ್ವರವನ್ನು ಕೇಳುವಾಗ ಅಶ್ಶೂರವು ನಡುಗುವದು. ಆತನು ಕೋಲಿನಿಂದ ಅಶ್ಶೂರವನ್ನು ಹೊಡೆಯುವನು. 32 ಅಶ್ಶೂರವನ್ನು ಆತನು ಹೊಡೆಯುವಾಗ ಹಾರ್ಪ್‌ವಾದ್ಯಗಳನ್ನು ಮತ್ತು ದಮ್ಮಡಿಗಳನ್ನು ಬಾರಿಸಿದಂತಾಗುವದು. ಯೆಹೋವನು ಅಶ್ಶೂರವನ್ನು ತನ್ನ ಮಹಾಶಕ್ತಿಯಿಂದ ಸೋಲಿಸುವನು.

33 ಬಹುಕಾಲದವರೆಗೆ ಅಗ್ನಿಕುಂಡ[a] ಸಿದ್ಧವಾಗಿತ್ತು. ಅದು ರಾಜನಿಗಾಗಿ ಸಿದ್ಧವಾಗಿದೆ. ಅದು ಆಳವಾಗಿಯೂ ಅಗಲವಾಗಿಯೂ ಮಾಡಲ್ಪಟ್ಟಿದೆ. ಅಲ್ಲಿ ಒಂದು ದೊಡ್ಡ ಕಟ್ಟಿಗೆಯ ರಾಶಿಯೂ ಬೆಂಕಿಯೂ ಇದೆ ಮತ್ತು ಯೆಹೋವನ ಬಾಯುಸಿರು ಗಂಧಕದ ಪ್ರವಾಹದಂತೆ ಬಂದು ಎಲ್ಲವನ್ನು ನಾಶಮಾಡುವದು.

ರೋಮ್ನಗರದವರಿಗೆ 2:1-11

ಯೆಹೂದ್ಯರು ಸಹ ಪಾಪಿಗಳು

“ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.

ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು.[a] ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International