Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 106:1-6

106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನ ಪ್ರೀತಿಯು ಶಾಶ್ವತವಾದದ್ದು!
ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
    ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
    ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.

ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
    ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
    ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
    ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.

ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
    ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!

ಕೀರ್ತನೆಗಳು 106:13-23

13 ಆದರೆ ಆತನ ಕಾರ್ಯಗಳನ್ನು ಅವರು ಬೇಗನೆ ಮರೆತುಬಿಟ್ಟರು;
    ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
14 ನಮ್ಮ ಪೂರ್ವಿಕರು ಮರಳುಗಾಡಿನಲ್ಲಿ
    ಆಶಾತುರರಾಗಿ ಆತನನ್ನು ಪರೀಕ್ಷಿಸಿದರು.
15 ಆತನು ಅವರ ಆಸೆಯನ್ನು ಪೂರೈಸಿದರೂ
    ಅವರಿಗೆ ಭಯಂಕರವಾದ ರೋಗವನ್ನು ಬರಮಾಡಿದನು.
16 ಅವರು ಮೋಶೆಯ ಮೇಲೆಯೂ
    ಯೆಹೋವನ ಪವಿತ್ರ ಯಾಜಕನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17 ಭೂಮಿಯು ಬಾಯ್ದೆರೆದು ಹೊಟ್ಟೆಕಿಚ್ಚುಪಟ್ಟ ದಾತಾನನನ್ನೂ
    ಅಬಿರಾಮನ ಪಂಗಡದವರನ್ನೂ ನುಂಗಿಬಿಟ್ಟಿತು.
18 ಬಳಿಕ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು;
    ಅಗ್ನಿಜ್ವಾಲೆಯು ಆ ದುಷ್ಟರನ್ನು ದಹಿಸಿಬಿಟ್ಟಿತು.
19 ಹೋರೇಬ್ ಬೆಟ್ಟದ ಬಳಿಯಲ್ಲಿ
    ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
20 ಹುಲ್ಲುತಿನ್ನುವ ಹೋರಿಯ ಮೂರ್ತಿಗಾಗಿ
    ಅವರು ಮಹಿಮಾಸ್ವರೂಪನಾದ ದೇವರನ್ನೇ ಬಿಟ್ಟುಕೊಟ್ಟರು!
21 ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು!
    ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
22 ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು.
    ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!

23 ಆತನು ಅವರನ್ನು ನಾಶಮಾಡಬೇಕೆಂದಿದ್ದನು.
    ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ
    ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.

ಕೀರ್ತನೆಗಳು 106:47-48

47 ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
    ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
    ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48 ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
    ಎಂದು ಜನರೆಲ್ಲರೂ ಹೇಳಲಿ.

ಧರ್ಮೋಪದೇಶಕಾಂಡ 4:21-40

21 “ನಿಮ್ಮ ದೆಸೆಯಿಂದ ಯೆಹೋವನು ನನ್ನ ಮೇಲೆ ಸಿಟ್ಟುಗೊಂಡನು. ಆ ಕಾರಣದಿಂದ ಕಾನಾನ್ ದೇಶವನ್ನು ನಾನು ಪ್ರವೇಶಿಸಬಾರದು ಎಂದು ನನಗೆ ಹೇಳಿರುತ್ತಾನೆ. ಜೋರ್ಡನ್ ನದಿಯಾಚೆ ನಿಮಗೆ ಕೊಡುವ ಆ ಉತ್ತಮ ದೇಶವನ್ನು ನಾನು ನೋಡುವುದಿಲ್ಲವೆಂದು ಪ್ರಮಾಣ ಮಾಡಿದ್ದಾನೆ. 22 ಆದ್ದರಿಂದ ನಾನು ಇದೇ ದೇಶದಲ್ಲಿ ಸಾಯುವೆನು. ಆದರೆ ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ಆ ಒಳ್ಳೆಯ ದೇಶವನ್ನು ವಶಪಡಿಸಿಕೊಂಡು ಅಲ್ಲಿ ವಾಸಿಸುವಿರಿ. 23 ನೀವು ಆ ದೇಶದಲ್ಲಿ ವಾಸಿಸುವಾಗ ನಿಮ್ಮ ದೇವರಾದ ಯೆಹೋವನೊಡನೆ ನೀವು ಮಾಡಿರುವ ಒಡಂಬಡಿಕೆಯನ್ನು ಮರೆಯಬೇಡಿರಿ. ನೀವು ಆತನ ಕಟ್ಟಳೆಗಳಿಗೆ ವಿಧೇಯರಾಗಿರಿ. ಯಾವ ವಿಗ್ರಹಗಳನ್ನಾಗಲಿ ಮಾಡಿಕೊಳ್ಳಬೇಡಿರಿ. 24 ನೀವು ಇತರ ದೇವರುಗಳನ್ನು ಪೂಜಿಸುವುದನ್ನು ಜೀವಸ್ವರೂಪನಾದ ಯೆಹೋವನು ದ್ವೇಷಿಸುವುದರಿಂದ ಬೆಂಕಿಯಂತೆ ಆತನು ನಿಮ್ಮನ್ನು ದಹಿಸಿ ಬಿಡುವನು.

25 “ನೀವು ಹೋಗುವ ದೇಶದಲ್ಲಿ ಬಹಳ ವರ್ಷ ಬಾಳಿದ ನಂತರ ನಿಮಗೆ ಮಕ್ಕಳೂ ಮೊಮ್ಮಕ್ಕಳೂ ಆಗುವರು. ಬಳಿಕ ನೀವು ನಿಮ್ಮ ಜೀವಿತಗಳನ್ನು ಹಾಳುಮಾಡಿಕೊಳ್ಳುವಿರಿ. ನೀವು ಎಲ್ಲಾ ಬಗೆಯ ವಿಗ್ರಹಗಳನ್ನು ಮಾಡಿಕೊಳ್ಳುವಿರಿ. ಅದು ದೇವರಿಗೆ ಬಹಳ ಕೋಪವನ್ನು ಉಂಟುಮಾಡುವುದು! 26 ಆದ್ದರಿಂದ ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಆಕಾಶವೂ ಭೂಮಿಯೂ ಇದಕ್ಕೆ ಸಾಕ್ಷಿ. ಆ ಕೆಟ್ಟ ಕೆಲಸವನ್ನು ನೀವು ಮಾಡಿದರೆ ನೀವು ಹಾಳಾಗಿ ಹೋಗುವಿರಿ. ನೀವೀಗ ಜೋರ್ಡನ್ ನದಿಯನ್ನು ದಾಟಿ ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಹೋಗುತ್ತೀರಿ. ಆದರೆ ನೀವು ಮೂರ್ತಿಗಳನ್ನು ಮಾಡಿಕೊಂಡರೆ ಅಲ್ಲಿ ಹೆಚ್ಚುಕಾಲ ಬಾಳುವುದಿಲ್ಲ. ನೀವು ಸಂಪೂರ್ಣವಾಗಿ ನಾಶವಾಗುವಿರಿ. 27 ಯೆಹೋವನು ನಿಮ್ಮನ್ನು ಅನ್ಯದೇಶಗಳಿಗೆ ಚದರಿಸಿಬಿಡುವನು. ಆತನು ನಿಮ್ಮನ್ನು ಚದರಿಸಿಬಿಡುವ ದೇಶಗಳವರ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಮಾತ್ರ ಜೀವಂತವಾಗಿ ಉಳಿದುಕೊಳ್ಳುವರು. 28 ಅಲ್ಲಿ, ಮನುಷ್ಯರು ಕೈಯಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಅವು ಮರಕಲ್ಲುಗಳಿಂದ ರೂಪಿಸಲ್ಪಟ್ಟಿವೆ. ಅವು ನೋಡಲಾರವು, ಕೇಳಲಾರವು, ತಿನ್ನಲಾರವು ಮತ್ತು ಮೂಸಿನೋಡಲಾರವು! 29 ಆಗ ನೀವು ನಿಮ್ಮ ದೇವರಾದ ಯೆಹೋವನನ್ನು ಹುಡುಕುವಿರಿ. ನೀವು ನಿಮ್ಮ ಹೃದಯ ಆತ್ಮಗಳಿಂದ ಹುಡುಕಿದಾಗ ಆತನು ನಿಮಗೆ ಸಿಗುವನು. 30 ನೀವು ಕಷ್ಟದಲ್ಲಿ ಬಿದ್ದಾಗ, ಅವೆಲ್ಲಾ ನಿಮಗೆ ಸಂಭವಿಸಿದಾಗ ನೀವು ನಿಮ್ಮ ದೇವರಾದ ಯೆಹೋವನ ಬಳಿಗೆ ಹಿಂದಿರುಗಿಬಂದು ಆತನಿಗೆ ವಿಧೇಯರಾಗುವಿರಿ. 31 ನಿಮ್ಮ ದೇವರಾದ ಯೆಹೋವನು ಕರುಣೆಯುಳ್ಳ ದೇವರಾಗಿದ್ದಾನೆ. ನಿಮ್ಮನ್ನು ಅಲ್ಲಿಯೇ ಇರಗೊಡಿಸುವುದಿಲ್ಲ; ನಿಮ್ಮನ್ನು ಸಂಪೂರ್ಣವಾಗಿ ನಾಶಪಡಿಸುವುದಿಲ್ಲ; ನಿಮ್ಮ ಪೂರ್ವಿಕರೊಂದಿಗೆ ಮಾಡಿದ ಒಡಂಬಡಿಕೆಯನ್ನು ಆತನು ಮರೆತುಬಿಡುವವನಲ್ಲ.

ದೇವರ ಅದ್ಭುತಕಾರ್ಯಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ

32 “ಇಂಥಾ ಅದ್ಭುತಕಾರ್ಯಗಳು ಹಿಂದೆ ಎಂದಾದರೂ ನಡೆದಿವೆಯೋ? ದೇವರು ಭೂಮಿಯ ಮೇಲೆ ಮಾನವನನ್ನು ನಿರ್ಮಿಸಿದ ಕಾಲದಿಂದಿಡಿದು ಇಂದಿನವರೆಗೂ ಲೋಕದ ಎಲ್ಲಾ ಕಡೆಗಳಲ್ಲಿ ನಡೆದಿರುವ ಸಂಗತಿಗಳನ್ನು ವೀಕ್ಷಿಸಿ ನೋಡಿರಿ. ಇದರಷ್ಟು ಮಹತ್ತಾದ ಯಾವುದನ್ನಾದರೂ ಎಂದಾದರೂ ಕೇಳಿರುವುದುಂಟೇ? 33 ಬೆಂಕಿಯ ಜ್ವಾಲೆಯೊಳಗಿಂದ ದೇವರು ಮಾತನಾಡಿದ್ದನ್ನು ನೀವು ಕೇಳಿದರೂ ಬದುಕಿದ್ದೀರಿ. ಬೇರೆ ಜನರಿಗೆ ಇಂಥಾ ಅನುಭವವಿದೆಯೋ? ಇಲ್ಲ. 34 ಬೇರೊಂದು ಜನಾಂಗದೊಳಗಿಂದ ಜನರನ್ನು ತನಗೋಸ್ಕರ ತೆಗೆದುಕೊಳ್ಳಲು ಬೇರೆ ಯಾವ ದೇವರಾದರೂ ಎಂದಾದರೂ ಪ್ರಯತ್ನಿಸಿದ್ದುಂಟೇ? ಇಲ್ಲ! ಆದರೆ ದೇವರಾದ ಯೆಹೋವನು ಇಂಥ ಮಹಾಕಾರ್ಯಗಳನ್ನು ಮಾಡುವುದನ್ನು ನೀವು ನೋಡಿದ್ದೀರಿ! ಆತನು ನಿಮಗೆ ತನ್ನ ಶಕ್ತಿಯನ್ನು, ಬಲವನ್ನು, ಅದ್ಭುತಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ತೋರಿಸಿದ್ದಾನೆ. ಆತನು ಈಜಿಪ್ಟಿನ ಮೇಲೆ ಬರಮಾಡಿದ ವಿಪತ್ತುಗಳನ್ನು ಮತ್ತು ಭಯಂಕರವಾದ ಘಟನೆಗಳನ್ನು ನೀವು ನೋಡಿದ್ದೀರಿ! 35 ಯೆಹೋವನು ನಿಮಗೆ ಇವುಗಳನ್ನು ತೋರಿಸಿದ್ದಾನೆ, ಯಾಕೆಂದರೆ ಆತನೇ ದೇವರೆಂದೂ ಆತನಲ್ಲದೆ ಬೇರೆ ಯಾವ ದೇವರಿಲ್ಲವೆಂದೂ ನೀವು ತಿಳಿದುಕೊಳ್ಳಬೇಕೆಂಬುದು ಆತನ ಉದ್ದೇಶವಾಗಿತ್ತು. 36 ಆಕಾಶದಿಂದ ಆತನ ಮಾತುಗಳನ್ನು ನೀವು ಕೇಳುವಂತೆ ಮಾಡಿದನು; ಭೂಮಿಯ ಮೇಲೆ ಒಂದು ದೊಡ್ಡ ಬೆಂಕಿಯನ್ನು ನೋಡುವಂತೆ ಮಾಡಿದನು; ಮತ್ತು ಅದರೊಳಗಿಂದ ನಿಮ್ಮೊಡನೆ ಮಾತನಾಡಿದನು. ನಿಮಗೆ ಪಾಠಗಳನ್ನು ಕಲಿಸುವುದಕ್ಕಾಗಿ ಇವೆಲ್ಲವನ್ನು ಮಾಡಿದನು.

37 “ದೇವರಾದ ಯೆಹೋವನು ನಿಮ್ಮ ಪೂರ್ವಿಕರನ್ನು ಪ್ರೀತಿಸಿದ್ದರಿಂದ ನಿಮ್ಮನ್ನು ಆರಿಸಿಕೊಂಡನು. ಆತನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಹೊರತಂದನು. 38 ನೀವು ಮುಂದುವರಿಯುತ್ತಿದ್ದಾಗ ನಿಮಗಿಂತಲೂ ಮಹತ್ತಾದ ಮತ್ತು ಬಲಿಷ್ಠವಾಗಿದ್ದ ಜನಾಂಗಗಳನ್ನು ಹೊರಡಿಸಿಬಿಟ್ಟನು. ಅವರ ದೇಶದೊಳಗೆ ಯೆಹೋವನು ನಿಮ್ಮನ್ನು ನಡಿಸಿದನು. ಅಲ್ಲಿ ನೀವು ವಾಸಿಸುವುದಕ್ಕಾಗಿ ಆ ದೇಶವನ್ನು ನಿಮಗೆ ಕೊಟ್ಟನು. ಈಗಲೂ ಆತನು ಹಾಗೆಯೇ ಮಾಡುತ್ತಿದ್ದಾನೆ.

39 “ಆದ್ದರಿಂದ ಈ ಹೊತ್ತು ನೀವೆಲ್ಲಾ ಯೆಹೋವನನ್ನು ದೇವರೆಂದು ಸ್ವೀಕರಿಸಬೇಕು. ಆತನು ಮೇಲಿರುವ ಆಕಾಶಕ್ಕೂ ಕೆಳಗಿರುವ ಭೂಮಿಗೂ ದೇವರಾಗಿದ್ದಾನೆ. ಆತನ ಹೊರತು ಬೇರೆ ದೇವರುಗಳಿಲ್ಲ. 40 ನಾನು ಈ ಹೊತ್ತು ಕೊಡಲಿರುವ ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀವು ಪರಿಪಾಲಿಸಬೇಕು. ಆಗ ನಿಮಗೂ ನಿಮ್ಮ ನಂತರ ಜೀವಿಸುವ ನಿಮ್ಮ ಮಕ್ಕಳಿಗೂ ಶುಭವಾಗುವುದು. ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಶಾಶ್ವತವಾಗಿ ಬಾಳುವಿರಿ!”

ಮಾರ್ಕ 7:9-23

ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ! 10 ‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’(A) ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’(B) ಎಂತಲೂ ಮೋಶೆಯು ಹೇಳಿದ್ದಾನೆ. 11 ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ, 12 ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ. 13 ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು.

14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 16 [a]

17 ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. 18 ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. 19 ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.)

20 ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International