Revised Common Lectionary (Complementary)
106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
2 ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3 ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4 ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5 ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6 ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
13 ಆದರೆ ಆತನ ಕಾರ್ಯಗಳನ್ನು ಅವರು ಬೇಗನೆ ಮರೆತುಬಿಟ್ಟರು;
ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
14 ನಮ್ಮ ಪೂರ್ವಿಕರು ಮರಳುಗಾಡಿನಲ್ಲಿ
ಆಶಾತುರರಾಗಿ ಆತನನ್ನು ಪರೀಕ್ಷಿಸಿದರು.
15 ಆತನು ಅವರ ಆಸೆಯನ್ನು ಪೂರೈಸಿದರೂ
ಅವರಿಗೆ ಭಯಂಕರವಾದ ರೋಗವನ್ನು ಬರಮಾಡಿದನು.
16 ಅವರು ಮೋಶೆಯ ಮೇಲೆಯೂ
ಯೆಹೋವನ ಪವಿತ್ರ ಯಾಜಕನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17 ಭೂಮಿಯು ಬಾಯ್ದೆರೆದು ಹೊಟ್ಟೆಕಿಚ್ಚುಪಟ್ಟ ದಾತಾನನನ್ನೂ
ಅಬಿರಾಮನ ಪಂಗಡದವರನ್ನೂ ನುಂಗಿಬಿಟ್ಟಿತು.
18 ಬಳಿಕ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು;
ಅಗ್ನಿಜ್ವಾಲೆಯು ಆ ದುಷ್ಟರನ್ನು ದಹಿಸಿಬಿಟ್ಟಿತು.
19 ಹೋರೇಬ್ ಬೆಟ್ಟದ ಬಳಿಯಲ್ಲಿ
ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
20 ಹುಲ್ಲುತಿನ್ನುವ ಹೋರಿಯ ಮೂರ್ತಿಗಾಗಿ
ಅವರು ಮಹಿಮಾಸ್ವರೂಪನಾದ ದೇವರನ್ನೇ ಬಿಟ್ಟುಕೊಟ್ಟರು!
21 ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು!
ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
22 ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು.
ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!
23 ಆತನು ಅವರನ್ನು ನಾಶಮಾಡಬೇಕೆಂದಿದ್ದನು.
ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ
ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.
47 ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48 ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
ಎಂದು ಜನರೆಲ್ಲರೂ ಹೇಳಲಿ.
9 ಆದರೆ ನೀವು ನೋಡಿದ್ದನ್ನು ನಿಮ್ಮ ಜೀವಮಾನವೆಲ್ಲಾ ಜಾಗ್ರತೆಯುಳ್ಳವರಾಗಿದ್ದು ಮರೆಯದೆ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸಬೇಕು. 10 ಸೀನಾಯಿ ಬೆಟ್ಟದ ಬಳಿಯಲ್ಲಿ ನೀನು ಯೆಹೋವನ ಸನ್ನಿಧಾನದಲ್ಲಿ ನಿಂತಿದ್ದನ್ನು ನೀವು ಜ್ಞಾಪಕ ಮಾಡಿಕೊಳ್ಳಿರಿ. ಆತನು ನನಗೆ ಹೇಳಿದ್ದೇನೆಂದರೆ: ‘ನಾನು ಹೇಳುವ ಮಾತುಗಳನ್ನು ಕೇಳುವಂತೆ ಜನರನ್ನೆಲ್ಲಾ ಒಟ್ಟುಗೂಡಿಸು. ನನ್ನ ಮಾತುಗಳನ್ನು ಕೇಳಿ ಅವರು ಜೀವಮಾನವೆಲ್ಲಾ ನನ್ನನ್ನು ಸನ್ಮಾನಿಸಲು ಮತ್ತು ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು ಮತ್ತು ಅವರ ಮಕ್ಕಳಿಗೂ ಕಲಿಸುವರು.’ 11 ಆಗ ನೀವು ಬೆಟ್ಟದ ಸಮೀಪಕ್ಕೆ ಬಂದು ನಿಂತುಕೊಂಡಿರಿ. ಆ ಪರ್ವತವು ಬೆಂಕಿಯಿಂದ ಪ್ರಜ್ವಲಿಸಿ ಆಕಾಶದ ತನಕ ಮುಟ್ಟಿತ್ತು. ಆಗ ಕಾರ್ಮೋಡವೂ ಕತ್ತಲೆಯೂ ಆವರಿಸಿತು. 12 ಆ ಬೆಂಕಿಯೊಳಗಿಂದ ಯೆಹೋವನು ಮಾತನಾಡಿದನು. ಅದು ಯಾರೋ ಮಾತಾಡಿದಂತಿತ್ತು, ಆದರೆ ನೀವು ಯಾರನ್ನೂ ಕಾಣಲಿಲ್ಲ. ನೀವು ಸ್ವರವನ್ನು ಮಾತ್ರ ಕೇಳಿದಿರಿ. 13 ಅಲ್ಲಿ ಆತನು ನಿಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಆತನು ಹತ್ತು ಆಜ್ಞೆಗಳನ್ನು ನಿಮಗೆ ಕೊಟ್ಟು ಅವುಗಳನ್ನು ಅನುಸರಿಸಲು ಆಜ್ಞಾಪಿಸಿದನು. ಆ ಹತ್ತು ಆಜ್ಞೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದನು. 14 ಅದೇ ಸಮಯದಲ್ಲಿ ದೇವರಾದ ಯೆಹೋವನು ನನಗೆ ಇತರ ವಿಧಿನಿಯಮಗಳನ್ನು ತಿಳಿಸಿ ನೀವು ವಾಗ್ದಾನ ಮಾಡಿದ ದೇಶದೊಳಗೆ ನೆಲೆಸಿದಾಗ ಆ ವಿಧಿನಿಯಮಗಳನ್ನು ಅನುಸರಿಸಲು ನಿಮಗೆ ತಿಳಿಸಲು ಹೇಳಿದನು.
ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರು
6 ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ. 7 ದೇವರ ಸತ್ಯಕ್ಕೆ ಹೊಂದಿಕೆಯಾಗದ ಕ್ಷುಲ್ಲಕ ಕಥೆಗಳನ್ನು ಜನರು ಹೇಳುತ್ತಾರೆ. ಆ ಕಥೆಗಳ ಬೋಧನೆಯನ್ನು ಅನುಸರಿಸಬೇಡ. ದೇವರಿಗೆ ನಿಜವಾದ ಸೇವೆ ಮಾಡಲು ನಿನಗೆ ನೀನೇ ಬೋಧಿಸಿಕೊ. 8 ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು. 9 ಈ ಸಂಗತಿಯು ನಂಬತಕ್ಕದ್ದೂ ಸರ್ವಾಂಗಿಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.
11 ಇವುಗಳನ್ನು ಆಜ್ಞಾಪಿಸು ಮತ್ತು ಬೋಧಿಸು. 12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.
13 ದೇವರ ವಾಕ್ಯವನ್ನು ಜನರಿಗೆ ಓದಿಹೇಳಿ ಅವರನ್ನು ಬಲಪಡಿಸು ಮತ್ತು ಅವರಿಗೆ ಬೋಧಿಸು. ನಾನು ಬರುವತನಕ ಈ ಕಾರ್ಯಗಳನ್ನು ಮಾಡುತ್ತಿರು. 14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು. 15 ಈ ಕಾರ್ಯಗಳನ್ನು ಮಾಡುತ್ತಲೇ ಇರು. ಈ ಕಾರ್ಯಗಳನ್ನು ಮಾಡಲು ನಿನ್ನ ಜೀವನವನ್ನು ಮುಡಿಪಾಗಿಡು. ಆಗ ನಿನ್ನ ಕಾರ್ಯವು ಅಭಿವೃದ್ಧಿಗೊಳ್ಳುತ್ತಿರುವುದನ್ನು ಜನರೆಲ್ಲರೂ ನೋಡುವರು. 16 ನಿನ್ನ ಜೀವನದಲ್ಲಿಯೂ ನಿನ್ನ ಬೋಧನೆಯಲ್ಲಿಯೂ ಎಚ್ಚರಿಕೆಯಿಂದಿರು. ಯೋಗ್ಯವಾದ ರೀತಿಯಲ್ಲಿ ಜೀವಿಸುತ್ತಾ ಬೋಧಿಸು. ಆಗ ನೀನು, ನಿನ್ನನ್ನೂ ನಿನ್ನ ಬೋಧನೆ ಕೇಳುವವರನ್ನೂ ರಕ್ಷಿಸುವೆ.
Kannada Holy Bible: Easy-to-Read Version. All rights reserved. © 1997 Bible League International