Revised Common Lectionary (Complementary)
ದೇವರ ಕಟ್ಟಳೆಗಳಿಗೆ ವಿಧೇಯರಾಗಬೇಕೆಂದು ಮೋಶೆಯು ಹೇಳಿದ್ದು
4 “ಇಸ್ರೇಲರೇ, ಈಗ ನಾನು ಉಪದೇಶಿಸಲಿರುವ ಕಟ್ಟಳೆಗಳಿಗೂ ಆಜ್ಞೆಗಳಿಗೂ ಕಿವಿಗೊಡಿರಿ. ನೀವು ಅವುಗಳಿಗೆ ವಿಧೇಯರಾದರೆ ಜೀವಿಸುವಿರಿ. ಆಗ ನೀವು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿರಿ. 2 ನಾನು ಕೊಡುವ ಆಜ್ಞೆಗಳಿಗೆ ನೀವು ಏನನ್ನೂ ಸೇರಿಸಬಾರದು; ಏನನ್ನೂ ತೆಗೆಯಬಾರದು. ನಾನು ನಿಮಗೆ ತಿಳಿಸುವ ದೇವರ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು.
6 ಆ ನಿಯಮಗಳನ್ನು ಪರಿಪೂರ್ಣವಾಗಿ ಅಭ್ಯಾಸಿಸಿರಿ, ‘ಆಗ ಅನ್ಯಜನರು ನಿಮ್ಮನ್ನು ನೋಡಿ ನೀವು ಜ್ಞಾನಿಗಳು’ ಎಂದು ತಿಳಿದುಕೊಳ್ಳುವರು. ಆ ದೇಶದ ಜನರು ನಿಮ್ಮ ವಿಧಿನಿಯಮಗಳನ್ನು ಕೇಳಿ, ‘ನಿಜವಾಗಿಯೂ ಈ ಮಹಾ ಜನಾಂಗದ ಜನರು ಬುದ್ಧಿಯುಳ್ಳವರು ಮತ್ತು ಜ್ಞಾನಿಗಳು’ ಎಂದು ಹೇಳುವರು
7 “ನಾವು ನಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸುವಾಗ ಆತನು ನಮ್ಮ ಹತ್ತಿರವೇ ಇದ್ದಾನೆ. ಯಾವ ದೇಶದವರಿಗೂ ಆತನಂಥ ದೇವರಿಲ್ಲ. 8 ನಾನು ನಿಮಗೆ ಈ ಹೊತ್ತು ಕೊಡುವ ಉಪದೇಶಗಳಿಗೆ ನ್ಯಾಯದಲ್ಲೂ ಒಳ್ಳೆಯದರಲ್ಲೂ ಸರಿಸಮಾನವಾದ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಬೇರೆ ಯಾವ ದೊಡ್ಡ ದೇಶವೂ ಹೊಂದಿಲ್ಲ! 9 ಆದರೆ ನೀವು ನೋಡಿದ್ದನ್ನು ನಿಮ್ಮ ಜೀವಮಾನವೆಲ್ಲಾ ಜಾಗ್ರತೆಯುಳ್ಳವರಾಗಿದ್ದು ಮರೆಯದೆ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸಬೇಕು.
ರಚನೆಗಾರ: ದಾವೀದ.
15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
2 ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
3 ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
4 ಅವನು ದೇವದೂಷಕರನ್ನು ತಿರಸ್ಕರಿಸುವವನೂ
ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
5 ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]
17 ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ. 18 ದೇವರು ಸತ್ಯವಾಕ್ಯದ ಮೂಲಕ ನಮಗೆ ಜೀವವನ್ನು ದಯಪಾಲಿಸಲು ತೀರ್ಮಾನಿಸಿದ್ದಾನೆ. ತನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳಲ್ಲಿಯೂ ನಾವು ಅತ್ಯಂತ ಮುಖ್ಯರಾಗಬೇಕೆಂಬುದೇ ಆತನ ಅಪೇಕ್ಷೆ.
ಕೇಳುವಿಕೆ ಮತ್ತು ವಿಧೇಯತೆ
19 ನನ್ನ ಸಹೋದರ ಸಹೋದರಿಯರೇ, ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಆಸಕ್ತರಾಗಿರಿ. ಸುಲಭವಾಗಿ ಕೋಪಗೊಳ್ಳದಿರಿ. 20 ಒಬ್ಬ ವ್ಯಕ್ತಿಯ ಕೋಪವು ದೇವರು ಅಪೇಕ್ಷಿಸಿದಂತೆ ಯೋಗ್ಯ ಜೀವನವನ್ನು ನಡೆಸಲು ಅವನಿಗೆ ಸಹಾಯಕವಾಗುವುದಿಲ್ಲ. 21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.
22 ದೇವರ ವಾಕ್ಯವನ್ನು ಕೇವಲ ಕೇಳುವವರಾಗಿರದೆ ಅದನ್ನು ಕಾರ್ಯರೂಪಕ್ಕೆ ತನ್ನಿರಿ. ಇಲ್ಲವಾದರೆ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. 23 ದೇವರ ವಾಕ್ಯವನ್ನು ಕೇಳಿಯೂ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡವನಂತಿರುವನು. 24 ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತುಬಿಡುತ್ತಾನೆ. 25 ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮವನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡುವವನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ. ಅವನು ಅದನ್ನು ಅಭ್ಯಾಸ ಮಾಡುತ್ತಲೇ ಇರುತ್ತಾನೆ. ಅವನು ದೇವರ ವಾಕ್ಯವನ್ನು ಕೇಳುತ್ತಾನೆ ಮತ್ತು ತಾನು ಕೇಳಿದ್ದನ್ನು ಮರೆತುಬಿಡುವುದಿಲ್ಲ. ಅವನು ದೇವರ ವಾಕ್ಯಕ್ಕೆ ವಿಧೇಯನಾಗಿರುತ್ತಾನೆ. ಆದ್ದರಿಂದಲೇ ಅವನು ಸಂತೋಷಭರಿತನಾಗಿರುತ್ತಾನೆ.
ದೇವರನ್ನು ಆರಾಧಿಸತಕ್ಕ ನಿಜವಾದ ಮಾರ್ಗ
26 ಸದ್ಭಕ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವವನು ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆಹೋದರೆ ಅವನು ತನ್ನನ್ನು ತಾನೇ ಮೋಸಗೊಳಿಸಿಕೊಂಡಂತಾಗುವುದು. ಅವನ “ಭಕ್ತಿ”ಗೆ ಬೆಲೆಯಿಲ್ಲ. 27 ದೇವರು ಒಪ್ಪಿಕೊಳ್ಳುವ ಭಕ್ತಿಯು ಹೀಗಿದೆ: ಕೊರತೆಯಲ್ಲಿರುವ ಅನಾಥರನ್ನೂ ವಿಧವೆಯರನ್ನೂ ನೋಡಿಕೊಳ್ಳುವುದು ಮತ್ತು ಲೋಕದ ಕೆಟ್ಟತನದಿಂದ ಪ್ರಭಾವಿತರಾಗದಂತೆ ಅದರಿಂದ ದೂರವಿರುವುದು. ದೇವರು ಇಂಥ ಭಕ್ತಿಯನ್ನು ಪರಿಶುದ್ಧವಾದದ್ದೆಂದೂ ಒಳಿತಾದದ್ದೆಂದೂ ಪರಿಗಣಿಸಿ ಸ್ವೀಕರಿಸಿಕೊಳ್ಳುವನು.
ದೇವರ ಧರ್ಮಶಾಸ್ತ್ರ ಮತ್ತು ಜನರ ಸ್ವನಿಯಮ
(ಮತ್ತಾಯ 15:1-20)
7 ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. 2 ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ[a] ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. 3 ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. 4 ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು.
5 ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು.
6 ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ:
‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ,
ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ.
7 ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ.
ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’(A)
8 ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು.
14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.
21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International