Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 15

ರಚನೆಗಾರ: ದಾವೀದ.

15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
    ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
    ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
    ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
ಅವನು ದೇವದೂಷಕರನ್ನು ತಿರಸ್ಕರಿಸುವವನೂ
    ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
    ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
    ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
    ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]

ವಿಮೋಚನಕಾಂಡ 34:8-28

ಕೂಡಲೆ ಮೋಶೆಯು ನೆಲದ ಮೇಲೆ ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದನು. ಮೋಶೆಯು, “ಯೆಹೋವನೇ, ನಿನ್ನ ದಯೆ ನನಗೆ ದೊರಕುವುದಾದರೆ, ದಯವಿಟ್ಟು ನಮ್ಮೊಂದಿಗೆ ಬಾ. ಇವರು ಅವಿಧೇಯರಾದ ಜನರೆಂದು ನಾನು ಬಲ್ಲೆನು. ಆದರೆ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನಿನ್ನ ಜನರನ್ನಾಗಿ ಸ್ಪೀಕರಿಸು” ಎಂದು ಬೇಡಿಕೊಂಡನು.

10 ಆಗ ಯೆಹೋವನು, “ನಾನು ನಿಮ್ಮೊಂದಿಗೆ ಈ ಒಡಂಬಡಿಕೆಯನ್ನು ಮಾಡುತ್ತಿದ್ದೇನೆ. ಭೂಲೋಕದಲ್ಲಿ ಎಲ್ಲಿಯೇ ಆಗಲಿ ಯಾವ ಜನಾಂಗದಲ್ಲಿಯೇ ಆಗಲಿ ಹಿಂದೆಂದೂ ನಡೆಯದಂತ ಮಹತ್ಕಾರ್ಯಗಳನ್ನು ಮಾಡುವೆನು. ಎಲ್ಲಾ ಜನರು ಮತ್ತು ನಿನ್ನೊಂದಿಗಿರುವ ಜನರು ಇವುಗಳನ್ನು ನೋಡಿ ಯೆಹೋವನಾದ ನಾನೇ ಮಹಾ ಮಹಿಮಸ್ವರೂಪನೆಂದು ತಿಳಿದುಕೊಳ್ಳುವರು. 11 ನಾನು ಈ ದಿನ ಕೊಡುವ ಆಜ್ಞೆಗಳಿಗೆ ವಿಧೇಯರಾಗಿರಿ. ನಿಮ್ಮ ವೈರಿಗಳಾದ ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಹೊರಗಟ್ಟುವೆನು. 12 ಎಚ್ಚರಿಕೆಯಾಗಿರಿ! ನೀವು ಹೋಗುತ್ತಿರುವ ದೇಶದಲ್ಲಿರುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ನೀವು ಆ ಜನರೊಂದಿಗೆ ಒಪ್ಪಂದ ಮಾಡಿಕೊಂಡರೆ, ಅದು ನಿಮಗೆ ಕೇಡನ್ನು ಬರಮಾಡುವುದು. 13 ಅವರ ವೇದಿಕೆಗಳನ್ನು ನಾಶಮಾಡಿರಿ. ಅವರು ಪೂಜಿಸುವ ಕಲ್ಲುಗಳನ್ನು ಒಡೆದು ಹಾಕಿರಿ. ಅವರ ವಿಗ್ರಹಗಳನ್ನು ಕಡಿದು ಹಾಕಿರಿ. 14 ಬೇರೆ ಯಾವ ದೇವರನ್ನೂ ಪೂಜಿಸಬೇಡಿರಿ. ನಾನೇ ಯೆಹೋವನು. ‘ಸ್ವಗೌರವವನ್ನು ಕಾಪಾಡಿಕೊಳ್ಳುವವನು’ ಎಂಬುದೇ ನನ್ನ ಹೆಸರು.

15 “ಎಚ್ಚರಿಕೆಯಾಗಿರಿ, ಆ ದೇಶದಲ್ಲಿ ವಾಸಿಸುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುವರು; ಅವರ ಯಜ್ಞಾರ್ಪಣೆಗಳನ್ನು ತಿನ್ನುವಿರಿ. 16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ.

17 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ.

18 “ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಿರಿ. ನಾನು ನಿಮಗೆ ಮೊದಲು ಆಜ್ಞಾಪಿಸಿದಂತೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಿರಿ. ನಾನು ಆರಿಸಿಕೊಂಡ ಅಬೀಬ್ ಮಾಸದಲ್ಲಿ ಇದನ್ನು ಮಾಡಿರಿ. ಯಾಕೆಂದರೆ ಆ ತಿಂಗಳಲ್ಲಿ ನೀವು ಈಜಿಪ್ಟಿನಿಂದ ಬಿಡುಗಡೆ ಹೊಂದಿದಿರಿ.

19 “ಸ್ತ್ರೀಯಲ್ಲಿ ಹುಟ್ಟಿದ ಮೊದಲಿನ ಮಗು ಯಾವಾಗಲೂ ನನಗೆ ಸೇರಿದ್ದು. ನಿಮ್ಮ ದನಕುರಿಗಳಲ್ಲಿ ಹುಟ್ಟಿದ ಮೊದಲ ಮರಿಗಳು ನನಗೆ ಸೇರಿದವುಗಳಾಗಿವೆ. 20 ಚೊಚ್ಚಲಾಗಿ ಹುಟ್ಟಿದ ಕತ್ತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಂದುಬಿಡಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಕೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಣಿಕೆಯಿಲ್ಲದೆ, ನನ್ನ ಸನ್ನಿಧಿಗೆ ಬರಕೂಡದು.

21 “ನೀವು ವಾರದಲ್ಲಿ ಆರುದಿನ ಕೆಲಸ ಮಾಡುವಿರಿ. ಆದರೆ ಏಳನೆಯ ದಿನದಲ್ಲಿ ನೀವು ವಿಶ್ರಮಿಸಿಕೊಳ್ಳಬೇಕು. ನೀವು ಬಿತ್ತುವ ಮತ್ತು ಕೊಯ್ಯುವ ಸಮಯದಲ್ಲಿಯೂ ವಿಶ್ರಮಿಸಿಕೊಳ್ಳಬೇಕು.

22 “ವಾರಗಳ ಹಬ್ಬವನ್ನು ಆಚರಿಸಿರಿ. ಈ ಹಬ್ಬಕ್ಕಾಗಿ ಗೋಧಿಬೆಳೆಯ ಪ್ರಥಮ ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ ಸುಗ್ಗಿಹಬ್ಬವನ್ನು ಆಚರಿಸಿರಿ.

23 “ವರ್ಷದಲ್ಲಿ ಮೂರುಸಲ ನಿಮ್ಮಲ್ಲಿರುವ ಗಂಡಸರೆಲ್ಲರೂ, ಇಸ್ರೇಲರ ದೇವರಾಗಿರುವ ಒಡೆಯನಾದ ಯೆಹೋವನ ಸನ್ನಿಧಿಯಲ್ಲಿ ಸೇರಬೇಕು.

24 “ನೀವು ದೇಶದೊಳಕ್ಕೆ ಹೋದಾಗ, ನಾನು ನಿಮ್ಮ ವೈರಿಗಳನ್ನು ಆ ದೇಶದಿಂದ ಹೊರಗಟ್ಟುವೆನು. ನಾನು ನಿಮ್ಮ ಮೇರೆಗಳನ್ನು ವಿಸ್ತರಿಸುವೆನು. ನಿಮಗೆ ಹೆಚ್ಚೆಚ್ಚಾಗಿ ಭೂಮಿ ದೊರೆಯುವುದು. ಪ್ರತಿ ವರ್ಷ ಮೂರುಸಲ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಿರಿ. ಆ ಸಮಯದಲ್ಲಿ ಯಾರೂ ನಿಮ್ಮಿಂದ ಭೂಮಿಯನ್ನು ಅಪಹರಿಸಲು ಪ್ರಯತ್ನಿಸುವುದಿಲ್ಲ.

25 “ನೀವು ಯಜ್ಞಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಬಾರದು;

“ಪಸ್ಕ ಭೋಜನದ ಮಾಂಸದಲ್ಲಿ ಏನನ್ನೂ ಮರುದಿನದ ಮುಂಜಾನೆಯವರೆಗೆ ಉಳಿಸಬಾರದು.

26 “ನೀವು ಕೊಯ್ಯುವ ಪ್ರಥಮವಾದ ಬೆಳೆಗಳನ್ನು ಯೆಹೋವನಿಗೆ ಕೊಡಿರಿ. ಅವುಗಳನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತನ್ನಿರಿ.

“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಎಂದಿಗೂ ಬೇಯಿಸಬಾರದು.”

27 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಹೇಳಿದ ಸಂಗತಿಗಳನ್ನೆಲ್ಲಾ ಬರೆ. ಆ ಸಂಗತಿಗಳು ನಾನು ನಿನ್ನೊಂದಿಗೆ ಮತ್ತು ಇಸ್ರೇಲರೊಂದಿಗೆ ಮಾಡಿದ ಒಡಂಬಡಿಕೆಯಾಗಿದೆ” ಎಂದು ಹೇಳಿದನು.

28 ಮೋಶೆಯು ಅಲ್ಲಿ ಯೆಹೋವನೊಂದಿಗೆ ಹಗಲಿರುಳು ನಲವತ್ತು ದಿನಗಳಿದ್ದನು. ಆ ದಿನಗಳಲ್ಲಿ ಅವನು ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸಲಿಲ್ಲ. ಮೋಶೆಯು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಿಗೆಗಳ ಮೇಲೆ ಬರೆದನು.

ಯೋಹಾನ 18:28-32

ಪಿಲಾತನ ಮುಂದೆ ಯೇಸು

(ಮತ್ತಾಯ 27:1-2,11-31; ಮಾರ್ಕ 15:1-20; ಲೂಕ 23:1-25)

28 ಬಳಿಕ ಯೆಹೂದ್ಯರು ಯೇಸುವನ್ನು ಕಾಯಫನ ಮನೆಯಿಂದ ರೋಮ್ ರಾಜ್ಯಪಾಲನ ಭವನಕ್ಕೆ ಕರೆದುಕೊಂಡು ಬಂದರು. ಆಗ ಮುಂಜಾನೆಯಾಗಿತ್ತು. ಯೆಹೂದ್ಯರು ಭವನದೊಳಗೆ ಹೋಗಲಿಲ್ಲ. ಅವರು ಪಸ್ಕಹಬ್ಬದ ಊಟಮಾಡ ಬೇಕೆಂದಿದ್ದ ಕಾರಣ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ. 29 ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.

30 ಯೆಹೂದ್ಯರು, “ಇವನು ಒಬ್ಬ ಕೆಟ್ಟ ಮನುಷ್ಯ. ಆದಕಾರಣ, ನಾವು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆವು” ಎಂದು ಉತ್ತರಕೊಟ್ಟರು.

31 ಪಿಲಾತನು ಯೆಹೂದ್ಯರಿಗೆ, “ಯೆಹೂದ್ಯರಾದ ನೀವೇ ಇವನನ್ನು ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ತೀರ್ಪುಮಾಡಿ” ಎಂದು ಹೇಳಿದನು.

ಯೆಹೂದ್ಯರು, “ಆದರೆ ಒಬ್ಬನಿಗೆ ಮರಣದಂಡನೆ ವಿಧಿಸಲು ನಿನ್ನ ಕಾನೂನು ನಮಗೆ ಅವಕಾಶ ಕೊಡುವುದಿಲ್ಲ” ಎಂದು ಉತ್ತರಕೊಟ್ಟರು. 32 (ತಾನು ಸಾಯುವ ರೀತಿಯ ಬಗ್ಗೆ ಯೇಸು ಹೇಳಿದ್ದ ಮಾತು ಹೀಗೆ ನಿಜವಾಯಿತು.)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International