Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಹೋಶುವನು 24:1-2

ಯೆಹೋಶುವನು ವಂದನೆಗಳನ್ನು ಹೇಳಿದನು

24 ಯೆಹೋಶುವನು ಶೆಕೆಮಿನಲ್ಲಿ ಇಸ್ರೇಲಿನ ಎಲ್ಲ ಕುಲದವರನ್ನು, ಹಿರಿಯ ನಾಯಕರನ್ನು, ಕುಲದ ಪ್ರಧಾನರನ್ನು, ನ್ಯಾಯಾಧೀಶರನ್ನು, ಮುಖಂಡರನ್ನು ಮತ್ತು ಇಸ್ರೇಲಿನ ಅಧಿಕಾರಿಗಳನ್ನು ಒಟ್ಟಾಗಿ ಸೇರಿಸಿದನು. ಈ ಜನರು ದೇವರ ಸನ್ನಿಧಿಯಲ್ಲಿ ನಿಂತರು.

ಆಗ ಯೆಹೋಶುವನು ಅವರೆಲ್ಲರಿಗೆ, “ಇಸ್ರೇಲಿನ ದೇವರಾದ ಯೆಹೋವನು ನಿಮಗೆ ಹೇಳುವುದನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ: ‘ಬಹಳ ಹಿಂದಿನ ಕಾಲದಲ್ಲಿ ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯ ದಡದಲ್ಲಿದ್ದರು, ನಾನು ಅಬ್ರಹಾಮ್ ಮತ್ತು ನಾಹೋರ್ ಎಂಬವರ ತಂದೆಯಾದ “ತೆರಹ” ಮೊದಲಾದ ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಆ ಸಮಯದಲ್ಲಿ ಅವರು ಬೇರೆ ದೇವರುಗಳನ್ನು ಪೂಜಿಸುತ್ತಿದ್ದರು.

ಯೆಹೋಶುವನು 24:14-18

14 ತರುವಾಯ ಯೆಹೋಶುವನು ಜನರಿಗೆ, “ಈಗ ನೀವು ಯೆಹೋವನ ಮಾತುಗಳನ್ನು ಕೇಳಿದ್ದೀರಿ. ನೀವು ಆತನಲ್ಲಿ ಭಯಭಕ್ತಿಯಿಂದಿರಬೇಕು. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಪೂಜಿಸುತ್ತಿದ್ದ ಸುಳ್ಳುದೇವರುಗಳನ್ನು ಎಸೆದುಬಿಡಿ. ಈಗ ನೀವು ಯೆಹೋವನ ಸೇವೆಯನ್ನು ಮಾತ್ರ ಮಾಡಬೇಕು.

15 “ನೀವು ಯೆಹೋವನ ಸೇವೆಮಾಡಲು ಇಷ್ಟಪಡದಿದ್ದರೆ ಯಾರ ಸೇವೆಯನ್ನು ಮಾಡಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆ ಇದ್ದಾಗ ಪೂಜಿಸುತ್ತಿದ್ದ ದೇವರುಗಳ ಸೇವೆಮಾಡುವಿರೋ ಅಥವಾ ಈ ಪ್ರದೇಶದಲ್ಲಿದ್ದ ಅಮೋರಿಯರ ದೇವತೆಗಳ ಸೇವೆಮಾಡುವಿರೋ ಎಂಬುದನ್ನು ನೀವು ಇಂದು ನಿರ್ಧರಿಸಬೇಕು. ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಸೇವಿಸುತ್ತೇವೆ” ಅಂದನು.

16 ಅದಕ್ಕೆ ಜನರು, “ನಾವು ಯೆಹೋವನನ್ನು ಅನುಸರಿಸುವುದನ್ನು ಎಂದಿಗೂ ನಿಲ್ಲಿಸುವದಿಲ್ಲ. ನಾವು ಬೇರೆ ದೇವರುಗಳ ಸೇವೆಯನ್ನು ಎಂದಿಗೂ ಮಾಡುವುದಿಲ್ಲ. 17 ನಮ್ಮ ಜನರನ್ನು ಈಜಿಪ್ಟಿನಿಂದ ಹೊರತಂದವನು ನಮ್ಮ ದೇವರಾದ ಯೆಹೋವನೆಂದು ನಮಗೆ ಗೊತ್ತು. ನಾವು ಈಜಿಪ್ಟಿನಲ್ಲಿ ಗುಲಾಮರಾಗಿದ್ದೆವು; ಆದರೆ ಯೆಹೋವನು ಅಲ್ಲಿ ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿ ನಮ್ಮನ್ನು ಅಲ್ಲಿಂದ ಬಿಡಿಸಿಕೊಂಡು ಬಂದನು. ನಾವು ಬೇರೆ ದೇಶಗಳಲ್ಲಿ ಪ್ರವಾಸ ಮಾಡಿಕೊಂಡು ಬರುವಾಗ ನಮ್ಮನ್ನು ರಕ್ಷಿಸಿದನು. 18 ಆ ದೇಶಗಳ ಜನರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದನು. ಈಗ ನಾವಿರುವ ಸ್ಥಳದಲ್ಲಿ ಮುಂಚೆ ವಾಸಮಾಡಿಕೊಂಡಿದ್ದ ಅಮೋರಿಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ. ಅದಕ್ಕಾಗಿ ನಾವು ಯೆಹೋವನ ಸೇವೆಯನ್ನು ಮುಂದುವರಿಸುತ್ತೇವೆ; ಏಕೆಂದರೆ ಆತನು ನಮ್ಮ ದೇವರು” ಎಂದು ಉತ್ತರಕೊಟ್ಟರು.

ಕೀರ್ತನೆಗಳು 34:15-22

15 ಯೆಹೋವನು ನೀತಿವಂತರನ್ನು ಕಾಪಾಡುವನು.
    ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
    ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.

17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
    ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
    ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
    ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
    ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
    ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
    ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.

ಎಫೆಸದವರಿಗೆ 6:10-20

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ

10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

ಯೋಹಾನ 6:56-69

56 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ.

57 “ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು. 58 ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು.

59 ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಿಸುತ್ತಿದ್ದಾಗ ಈ ಸಂಗತಿಗಳನ್ನೆಲ್ಲಾ ಹೇಳಿದನು.

ನಿತ್ಯಜೀವದ ನುಡಿಗಳು

60 ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು.

61 ತನ್ನ ಶಿಷ್ಯರು ಆಕ್ಷೇಪಿಸುತ್ತಿರುವುದನ್ನು ತಿಳಿದಿದ್ದ ಯೇಸು, “ಈ ಉಪದೇಶದಿಂದ ನಿಮಗೆ ಬೇಸರವಾಯಿತೇ? 62 ಹಾಗಾದರೆ ಮನುಷ್ಯಕುಮಾರನು ತಾನು ಬಿಟ್ಟುಬಂದ ಸ್ಥಳಕ್ಕೆ ಮರಳಿಹೋಗುವುದನ್ನು ನೀವು ನೋಡುವಾಗ ಬೇಸರಪಡುವಿರಾ? 63 ಒಬ್ಬನಿಗೆ ಜೀವವನ್ನು ಕೊಡುವಂಥದ್ದು ದೈಹಿಕ ಸಂಗತಿಗಳಲ್ಲ. ಜೀವವನ್ನು ಕೊಡುವಂಥದ್ದು ದೇವರಾತ್ಮ. ನಾನು ನಿಮಗೆ ಹೇಳಿದ ಸಂಗತಿಗಳು ಆತ್ಮಿಕ ಸಂಗತಿಗಳಾಗಿವೆ. ಆದ್ದರಿಂದ ಈ ಸಂಗತಿಗಳೇ ಜೀವವನ್ನು ಕೊಡುತ್ತವೆ. 64 ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ನಂಬಿಲ್ಲದವರು ಯಾರೆಂದೂ ತನಗೆ ದ್ರೋಹ ಮಾಡುವವನು ಯಾರೆಂದೂ ಯೇಸುವಿಗೆ ಮೊದಲಿಂದಲೂ ತಿಳಿದಿತ್ತು.) 65 ಇದಲ್ಲದೆ ಯೇಸು, “ತಂದೆಯ ಅನುಮತಿ ಇಲ್ಲದೆ ಯಾವನೂ ನನ್ನ ಬಳಿಗೆ ಬರಲಾರನು ಎಂದು ನಾನು ನಿಮಗೆ ಹೇಳಿದ್ದಕ್ಕೆ ಅದೇ ಕಾರಣ” ಎಂದನು.

66 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತನ ಹಿಂಬಾಲಕರಲ್ಲಿ ಅನೇಕರು ಆತನನ್ನು ತೊರೆದುಬಿಟ್ಟರು. ಅವರು ಆತನನ್ನು ಹಿಂಬಾಲಿಸಲಿಲ್ಲ.

67 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ನನ್ನನ್ನು ಬಿಟ್ಟುಹೋಗಬೇಕೆಂದಿರುವಿರಾ?” ಎಂದು ಕೇಳಿದನು.

68 ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನಾವೆಲ್ಲಿಗೆ ಹೋಗೋಣ? ನಿತ್ಯಜೀವವನ್ನು ಕೊಡುವ ಸಂಗತಿಗಳು ನಿನ್ನಲ್ಲಿವೆ. 69 ನಾವು ನಿನ್ನಲ್ಲಿ ನಂಬಿಕೆ ಇಡುತ್ತೇವೆ. ನೀನು ದೇವರಿಂದ ಬಂದ ಪರಿಶುದ್ಧನೆಂದು ನಮಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International