Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 34:15-22

15 ಯೆಹೋವನು ನೀತಿವಂತರನ್ನು ಕಾಪಾಡುವನು.
    ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
    ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.

17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
    ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
    ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
    ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
    ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
    ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
    ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.

ಯೆಹೋಶುವನು 22:1-9

ಮೂರು ಕುಲದವರು ತಮ್ಮ ಮನೆಗಳಿಗೆ ಹೋದರು

22 ತರುವಾಯ ಯೆಹೋಶುವನು ರೂಬೇನ್ಯರನ್ನು, ಗಾದ್ಯರನ್ನು ಮತ್ತು ಮನಸ್ಸೆಕುಲದ ಅರ್ಧಜನರನ್ನು ಒಟ್ಟಿಗೆ ಸೇರಿಸಿದನು. ಯೆಹೋಶುವನು ಅವರಿಗೆ, “ಯೆಹೋವನ ಸೇವಕನಾಗಿದ್ದ ಮೋಶೆಯು ಮಾಡಬೇಕೆಂದು ನಿಮಗೆ ಹೇಳಿದ್ದನ್ನೆಲ್ಲಾ ನೀವು ಮಾಡಿದಿರಿ; ಮತ್ತು ನನ್ನ ಆಜ್ಞೆಗಳನ್ನೆಲ್ಲ ನೀವು ಪಾಲಿಸಿದಿರಿ. ಈವರೆಗೆ ನೀವು ಇಸ್ರೇಲಿನ ಉಳಿದ ಜನರಿಗೆಲ್ಲ ಬೆಂಬಲ ಕೊಟ್ಟಿದ್ದೀರಿ. ನಿಮ್ಮ ದೇವರಾದ ಯೆಹೋವನು ಕೊಟ್ಟ ಎಲ್ಲ ಆಜ್ಞೆಗಳನ್ನು ನೀವು ಜಾಗರೂಕತೆಯಿಂದ ಪಾಲಿಸಿದ್ದೀರಿ. ನಿಮ್ಮ ದೇವರಾದ ಯೆಹೋವನು ಇಸ್ರೇಲರಿಗೆ ಶಾಂತಿಯನ್ನು ದಯಪಾಲಿಸುವುದಾಗಿ ವಾಗ್ದಾನ ಮಾಡಿದ್ದನು. ಈಗ ಯೆಹೋವನು ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದ್ದಾನೆ. ಆದ್ದರಿಂದ ಈಗ ನೀವು ನಿಮ್ಮ ಮನೆಗಳಿಗೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಜೋರ್ಡನ್ ನದಿಯ ಪೂರ್ವಕ್ಕೆ ಸ್ವಾಸ್ತ್ಯವನ್ನು ಕೊಟ್ಟಿದ್ದಾನೆ. ಈಗ ನೀವು ಆ ಪ್ರದೇಶದಲ್ಲಿರುವ ನಿಮ್ಮ ಮನೆಗಳಿಗೆ ಹೋಗಬಹುದು. ಆದರೆ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶವನ್ನು ಮತ್ತು ವಿಧಿಗಳನ್ನು ಪಾಲಿಸಬೇಕೆಂಬುದನ್ನು ಜ್ಞಾಪಕದಲ್ಲಿಡಿ. ನೀವು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನನ್ನು ಅನುಸರಿಸುತ್ತಾ ನಿಮ್ಮಿಂದ ಸಾಧ್ಯವಾದಷ್ಟು ಆತನ ಸೇವೆ ಮಾಡಬೇಕು” ಎಂದು ಹೇಳಿದನು.

ಯೆಹೋಶುವನು ಅವರನ್ನು ಆಶೀರ್ವದಿಸಿ ಬೀಳ್ಕೊಟ್ಟನು. ಅವರು ತಮ್ಮತಮ್ಮ ಮನೆಗಳಿಗೆ ಹೋದರು. ಮೋಶೆಯು ಮನಸ್ಸೆಕುಲದ ಅರ್ಧಜನರಿಗೆ ಬಾಷಾನ್ ಪ್ರದೇಶವನ್ನು ಕೊಟ್ಟಿದ್ದನು. ಯೆಹೋಶುವನು ಮನಸ್ಸೆಕುಲದ ಉಳಿದರ್ಧ ಜನರಿಗೆ ಜೋರ್ಡನ್ ನದಿಯ ಪಶ್ಚಿಮಕ್ಕೆ ಭೂಮಿಯನ್ನು ಕೊಟ್ಟನು. ಯೆಹೋಶುವನು ಅವರನ್ನು ಆಶೀರ್ವದಿಸಿ ಮನೆಗೆ ಕಳುಹಿಸಿದನು. ಅವನು, “ನೀವು ಬಹಳ ಶ್ರೀಮಂತರಾಗಿದ್ದೀರಿ, ನಿಮ್ಮಲ್ಲಿ ಬಹಳ ಪಶುಗಳಿವೆ; ನಿಮ್ಮಲ್ಲಿ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ರತ್ನಾಭರಣಗಳಿವೆ. ನಿಮ್ಮಲ್ಲಿ ಸುಂದರವಾದ ಅನೇಕ ಬಟ್ಟೆಗಳಿವೆ. ನೀವು ನಿಮ್ಮ ಶತ್ರುಗಳಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡಿದ್ದೀರಿ. ಈ ವಸ್ತುಗಳನ್ನು ನಿಮ್ಮ ಸಹೋದರರೊಂದಿಗೂ ಹಂಚಿಕೊಳ್ಳಿರಿ” ಅಂದನು.

ಆದ್ದರಿಂದ ರೂಬೇನ್ ಕುಲದವರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇಸ್ರೇಲಿನ ಬೇರೆ ಕುಲದ ಜನರನ್ನು ಬಿಟ್ಟು ಹೊರಟರು. ಅವರು ಕಾನಾನಿನ ಶೀಲೋವಿನಲ್ಲಿದ್ದರು. ಅವರು ಆ ಸ್ಥಳವನ್ನು ಬಿಟ್ಟು ಗಿಲ್ಯಾದ್‌ಗೆ ಹಿಂದಿರುಗಿ ಹೋದರು. ಮೋಶೆಯು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದ ತಮ್ಮ ಪ್ರದೇಶಕ್ಕೆ ಅವರು ಹೋದರು. ಅವರಿಗೆ ಈ ಪ್ರದೇಶವನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನು.

1 ಥೆಸಲೋನಿಕದವರಿಗೆ 5:1-11

ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ

ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.

ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.

ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International